ಇತ್ತೀಚಿನ ದಿನಗಳಲ್ಲಿ ಬಯಲು ಪ್ರದೇಶದಲ್ಲಿ ಬಹಳ ಖ್ಯಾತಿ ಹೊಂದಿದ್ದ ಪ್ಲಾಸ್ಟಿಕ್ ಟಾರ್ಪಲ್ ಮುಚ್ಚಿಗೆ ವಿಧಾನ ಅಡಿಕೆ ಬೆಳೆಗೂ ವಿಸ್ತರಣೆಯಾಗಿದೆ.
ಬಯಲು ಪ್ರದೇಶದಲ್ಲಿ ಹನಿ ನೀರಾವರಿಯಲ್ಲಿ ಟೊಮ್ಯಾಟೊ ಸೇರಿದಂತೆ ಹಲವಾರು ತರಕಾರಿ ಬೆಳೆಗೆ ಕಳೆ ಮತ್ತು ಭೂಮಿಯ ತೇವಾಂಶ ನಿಯಂತ್ರಣ ಮಾಡಲು ಹೊದಿಕೆ ವ್ಯವಸ್ಥೆ ಮಾಡಿಕೊಂಡು ಉತ್ತಮ ಇಳುವರಿ ಪಡೆಯುತ್ತಿದ್ದರು.
ನಮ್ಮಲ್ಲಿ ಅತಿ ಮಳೆಯ ಜಾಗದಲ್ಲಿ ಅಡಿಕೆ ಮರಕ್ಕೆ ಮಾಡಿದ ಬೇಸಾಯ ತೊಳೆದು ಹೋಗದಂತೆ ತಡೆಯಲು ಮತ್ತು ಮಳೆಗಾಲದಲ್ಲಿ ಅಡಿಕೆ ಮರದ ಬುಡದಲ್ಲಿ ನೀರು ನಿಂತು ಅಡಿಕೆ ಕೊಳೆ ರೋಗ ಬರದಂತೆ ತಡೆಯಲು ಈ ಪ್ಲಾಸ್ಟಿಕ್ ಮೇಲು ಹೊದಿಕೆ (ಮಲ್ಚಿಂಗ್ ಪೇಪರ್) ಬಳಸಲು ಶುರು ಮಾಡಿದ್ದಾರೆ.
ಆದರೆ ಈ ಮೇಲು ಹೊದಿಕೆ ನಮ್ಮ ಕಡೆಯಲ್ಲಿ ಹೊಸದೇನೂ ಅಲ್ಲ…!! ಮಲೆನಾಡಿನ ಭಾಗದಲ್ಲಿ ಅಡಿಕೆ ಬೇಸಾಯ ಮುಗಿದ ನಂತರ ಹಸಿ ಸೊಪ್ಪನ್ನು ಅಡಿಕೆ ಮರದ ಬೇಸಾಯ ಮಾಡಿದ ಹೊಸ ಮಣ್ಣಿನ ಮೇಲೆ ದಪ್ಪ ವಾಗಿ ಮುಚ್ಚುವ ಕ್ರಮ ಲಗಾಯ್ತಿನಿಂದಲೂ ಇದೆ. ಇದರಿಂದಾಗಿ ಆ ಸೊಪ್ಪು ಬೇಸಿಗೆಯಲ್ಲಿ ಅಡಿಕೆ ಮರದ ಬುಡಕ್ಕೆ ತಂಪು ನೀಡಿ ಮಳೆಗಾಲದಲ್ಲಿ ಕರುಗುತ್ತಾ ಹೋಗಿ ಅಡಿಕೆ ಮರಕ್ಕೆ ಹೆಚ್ಚು ಸಾರಜನಕ ನೀಡುತ್ತದೆ.
ಈ ಸೊಪ್ಪಿನ ಅಡಿಯಲ್ಲಿ ಹೊಸದಾಗಿ ಹಾಕಿದ ಮಣ್ಣು ಹಂತ ಹಂತವಾಗಿ ಗಟ್ಟಿ ಯಾಗಿ ಮಳೆಗೆ ತೊಳದು ಹೋಗದೇ ಉಳಿಯಲು ಕಾರಣವಾಗಿ ನೈಸರ್ಗಿಕ ಹೊದಿಕೆಯಾಗಿದೆ.
ಇದೀಗ ಬಂದಿರುವ ಪ್ಲಾಸ್ಟಿಕ್ ಹೊದಿಕೆ ಮಳೆಗಾಲದಲ್ಲಿ ಅಡಿಕೆ ಮರದ ಬುಡದ ಮಣ್ಣು ಸವಕಳಿ ಯಾಗದಂತೆ ತಡೆದರೂ ಅಡಿಕೆ ಮರದ ಮೇಲು ಬೇರಿಗೆ ಗಾಳಿ ಸಿಗದಂತಾಗುತ್ರದೆ.ಇದು ತಕ್ಷಣ ಕ್ಕೆ ದುಷ್ಪರಿಣಾಮವಾಗದಿದ್ದರೂ ಭವಿಷ್ಯದಲ್ಲಿ ಇದರಿಂದಾಗಿ ಅಡಿಕೆ ಮರಕ್ಕೆ ತೊಂದರೆ ಯಾಗುತ್ತದೆ. ಯಾಕೆಂದರೆ ಇದು ನಿಸರ್ಗ ಸಹಜ ಪರಿಕಲ್ಪನೆ ಅಲ್ಲ. ಆದರೆ ಹೆಚ್ಚು ಮಳೆ ಬೀಳುವ ಪ್ರದೇಶಗಳ ಅಡಿಕೆ ತೋಟಕ್ಕೆ ಇದನ್ನು ಮಳೆಗಾಲದಲ್ಲಿ ಮಾತ್ರ ಬಳಸಿದರೆ ಅಡಿಕೆ ಕೊಳೆ ರೋಗ ನಿಯಂತ್ರಣಕ್ಕೆ ಸಹಕಾರಿ.
ಇದನ್ನು ಬಳಸಿಯೇ ಕೊಳೆ ನಿಯಂತ್ರಣ ಮಾಡಲು ಸಾಧ್ಯ ಎಂಬುದೇನೂ ಇಲ್ಲ. ಹೆಚ್ಚು ಮಳೆ ಬೀಳುವ ಪ್ರದೇಶದ ಅಡಿಕೆ ತೋಟದ ಬಸಿಗಾಲುವೆ ಯನ್ನು ಹಲವು ಬಾರಿ ಕೀಸಿ ಕಪ್ಪಿನ ನೀರನ್ನು ಸಲೀಸಾಗಿ ಹೋಗುವ ಹಾಗೆ ಮಾಡಿದರೆ ಕೊಳೆ ನಿಯಂತ್ರಣ ವಾಗುತ್ತದೆ.
ಪ್ಲಾಸ್ಟಿಕ್ ಮಲ್ಚಿಂಗ್ ಪೇಪರ್ ನ್ನ ಮಳೆಗಾಲದ ನಂತರ ತೆಗದಿಟ್ಟರೆ ಅತ್ಯುತ್ತಮ. ಪ್ಲಾಸ್ಟಿಕ್ ಮಲ್ಚಿಂಗ್ ಪೇಪರ್ ಕೊಳ್ಳುವಾಗ ಉತ್ತಮ ಗುಣಮಟ್ಟದ ಹೆಚ್ಚು ಮೈಕ್ರಾನ್ ನ ಪ್ಲಾಸ್ಟಿಕ್ ಕೊಳ್ಳದಿದ್ದರೆ ತೋಟದ ತುಂಬೆಲ್ಲಾ ಪ್ಲಾಸ್ಟಿಕ್ ಪುಡಿ ತುಂಬುತ್ತದೆ.
ಬಯಲು ಪ್ರದೇಶದಲ್ಲಿ ಪ್ಲಾಸ್ಟಿಕ್ ಮಲ್ಚಿಂಗ್ ಗೆ ಹತ್ತು ಹಲವಾರು ಪ್ರಯೋಜನವಿರಬಹುದು..
ಆದರೆ ಮಲೆನಾಡಿನ ವಾತಾವರಣದಲ್ಲಿ ಈ ಪ್ಲಾಸ್ಟಿಕ್ ಮಲ್ಚಿಂಗ್ ಶೀಟ್ ನ್ನ ಹರಿದು ಹೋಗದಂತೆ ಸುರಕ್ಷಿತವಾಗಿ ನಿರ್ವಹಣೆ ಮಾಡುವುದು ಕಷ್ಟ.
ರೈತರು ಸುದೀರ್ಘ ಕಾಲದಿಂದಲೂ ಈ ಮಲ್ಚಿಂಗ್ ಪೇಪರ್ ಬಳಸುವ ರೈತರನ್ನ ಸಂಪರ್ಕಿಸಿ ಇದರ ಬಳಕೆಯ ಸಾಧಕ ಬಾದಕಗಳನ್ನ ವಿಚಾರ ಮಾಡಿ ನಂತರ ಇದಕ್ಕೆ ಬಂಡವಾಳ ಹೂಡುವುದು ಉತ್ತಮ.