ಕೃಷಿಗೆ ನೀರಿನ ಅವಶ್ಯಕತೆ ಎಷ್ಟಿದೆ? ಇದರ ಪೂರೈಕೆಗೆ ಯೋಜನೆಗಳು ಏನು? ಎಂಬ ಸ್ಪಷ್ಟ ಅರಿವು ಈಗ ಮರೆಯಾಗಿದೆ. ವೈಜ್ಞಾನಿಕತೆ ಮತ್ತು ಅಭಿವೃದ್ಧಿಯ ಹೆಸರಲ್ಲಿ ನೀರಾವರಿ ಯೋಜನೆಗಳು ವಿಸ್ತಾರವಾಗಿ ಬೆಳೆದವು. ಇಂದು ಭಾರತದಲ್ಲಿ ನೀರಾವರಿ ಯೋಜನೆಗಾಗಿಯೇ ಲಕ್ಷಾಂತರ ಎಕರೆ ಕಾಡು ಮುಳುಗಡೆಯಾಗಿದೆ. ಇನ್ನೂ ಆಗುತ್ತಿದೆ. ಇದರಿಂದ ಲಕ್ಷಾಂತರ ಜನರ ಬದುಕು, ಜೀವನ ಸಂಸ್ಕೃತಿ, ಸಂಪ್ರದಾಯಗಳು ನಾಶಗೊಂಡಿವೆ.
ಕೃಷಿ ಮಾಡಲು ಬೇಕಾಗಿರುವುದೇನು? ಇದು ಎಲ್ಲೆಲ್ಲಿಂದ ಸಿಗುತ್ತದೆ ? ನೈಸರ್ಗಿಕವಾಗಿ ನಾವು ಯಾವ ರೀತಿ ಪಡೆಯಬಹುದು? ಎಂಬ ಸ್ಪಷ್ಟತೆ ಬೇಕಾಗುತ್ತದೆ. ಈ ಜ್ಞಾನ ನಮ್ಮ ಪೂರ್ವಜರಿಗೆ ಇತ್ತು. ಈ ಕಾರಣಕ್ಕಾಗಿ ಕೃಷಿ ಮತ್ತು ಜನ-ಜಾನುವಾರುಗಳಿಗೆ ಕೆರೆ ಕಟ್ಟೆಗಳನ್ನು ಕಟ್ಟಿ ಕೊಂಡಿದ್ದರು. ಕೆರೆ ಕಟ್ಟೆಗಳು ಆ ಊರಿನ ಸಂಸ್ಕಾರ ಮತ್ತು ಸಂಸ್ಕೃತಿಯ ಪ್ರತೀಕವಾಗಿದ್ದವು. ಊರು ರಚನೆಗೆ ಮುನ್ನ ಕರೆ ಕಟ್ಟೆಗಳನ್ನು ಕಟ್ಟಿ ಊರಿಗೆ ನೀರಿನ ಮೂಲ ಕಲ್ಪಿಸಿಕೊಳ್ಳುತ್ತಿದ್ದರು.
ಭೂಮಂಡಲದ ಸಕಲ ಜೀವ-ಸಸ್ಯ ರಾಶಿಗಳಿಗೆ ನೀರೇ ಮೂಲಾಧಾರ. ಅನಾದಿ ಕಾಲದಿಂದ ನಾಗರಿಕತೆಗಳು ಬೆಳೆದಂತೆ ನೀರಿನ ಜೊತೆ ಮಾನವನ ನಿಕಟ ಸಂಬಂಧ ಬೆಳೆಯುತ್ತಲೇ ಬಂದಿದೆ. ಮಳೆ ಆಶ್ರಯದ ಕೃಷಿಗೆ ಮಳೆಯ ವೈಫಲ್ಯತೆ ಕಂಡಾಗ ಕೆರೆ ಕಟ್ಟೆಗಳ ಆಶ್ರಯವಾಗುತ್ತಿದ್ದವು. ನೀರಿದೆ ಎಂದು ಅವೈಜ್ಞಾನಿಕವಾಗಿ ಬೆಳೆ ಬೆಳೆಯಲು ನಮ್ಮ ಪೂರ್ವಿಕರು ಪ್ರಯತ್ನಿಸಲೇ ಇಲ್ಲ. ಸಾಂಪ್ರದಾಯಿಕ ಬೆಳೆಯ ಸೂತ್ರ ಅರಿತು ಬೇಸಾಯ ಮಾಡುತ್ತಿದ್ದರು ಈ ಕಾರಣಕ್ಕೆ ನಿಸರ್ಗ ಮತ್ತು ಜನ-ಜಾನುವಾರುಗಳ ಆರೋಗ್ಯ ಸ್ಥಿರವಾಗಿತ್ತು.
ಋಗ್ವೇದ, ಅಥರ್ವಣ ವೇದಗಳಲ್ಲಿ ಕೆರೆಗಳ ಬಗ್ಗೆ ಉಲ್ಲೇಖವಿದೆ. ಧರ್ಮ ಸೂತ್ರ, ಪುರಾಣಗಳು, ಮಹಾಭಾರತ, ರಾಮಾಯಣ, ಅರ್ಥ ಶಾಸ್ತ್ರಗಳಲ್ಲಿ ನೀರಾವರಿಯ ಬಗ್ಗೆ ಉಲ್ಲೇಖಗಳಿವೆ. ಅಲ್ಲದೆ ಐತಿಹಾಸಿಕ ಶಾಸನಗಳಲ್ಲಿ ಕೆರೆ ಕಟ್ಟಿಸಿದ ಮತ್ತು ನೀರಾವರಿಯ ಬಗ್ಗೆ ಉಲ್ಲೇಖಗಳಿವೆ. ಜೊತೆಗೆ ಕೆರೆಗಳನ್ನು ಕಟ್ಟುವ ಕ್ರಮ, ಯಾವ ಸ್ಥಳ ಆಯ್ಕೆ ಮಾಡಿಕೊಳ್ಳ ಬೇಕು, ಕೆರೆ ನಿರ್ಮಾಣ ಕಾರ್ಯಕ್ಕೆ ಯಾವೆಲ್ಲ ಸಾಮಗ್ರಿಗಳನ್ನು ಬಳಸ ಬೇಕು ಎಂಬ ಮಾಹಿತಿ ದೊರೆಯುತ್ತವೆ. ಜೊತೆಗೆ ನಿಸರ್ಗವನ್ನು ಅಭ್ಯಸಿಸಿ ಅದಕ್ಕೆ ಅನುಗುಣವಾಗಿ ಕೆರೆಗಳನ್ನು ನಿರ್ಮಿಸಿ ವಾತಾವರಣವನ್ನು ಶ್ರೀಮಂತಗೊಳಿಸಿದ್ದರು.
ನಮ್ಮ ಪೂರ್ವಿಕರು ಕಟ್ಟಿದ ಕೆರೆಗಳ ಹಿಂದೆ ಸಾಮಾಜಿಕ, ಧಾರ್ಮಿಕ, ಆರ್ಥಿಕ ಸಂಬಂಧಗಳು ಇವೆ. ಬಯಲು ಸೀಮೆಯಲ್ಲಿ ನಿರ್ಮಿಸಿದ ಕೆರೆಗಳು ಹೆಚ್ಚು ನೀರನ್ನು ಸಂಗ್ರಹಿಸಿ, ಸಾವಿರಾರು ಎಕರೆ ಪ್ರದೇಶಕ್ಕೆ ನೀರುಣಿಸುವ ಸಾಮರ್ಥ್ಯ ಹೊಂದಿ ವಿಶಾಲವಾಗಿವೆ. ಮಲೆನಾಡಿನಲ್ಲಿ ನಿರ್ಮಿಸಿದ ಕೆರೆಗಳು ಕೇವಲ 15 ರಿಂದ 20 ಎಕರೆ ಹೆಚ್ಚೆಂದರೆ 30 ರಿಂದ 40 ಎಕರೆ ಪ್ರದೇಶಕ್ಕೆ ನೀರುಣಿಸುವ ಸಾಮರ್ಥ್ಯ ಹೊಂದಿವೆ. ನಾನು ಕೃಷಿ ಮಾಡುತ್ತಿರು ಮೂಗುತಿಹಳ್ಳಿಯಲ್ಲಿ 15-20 ಎಕರೆಗೊಂದು ಕೆರೆಯಂತೆ ಸಾಲು ಸಾಲಾಗಿ ನಿರ್ಮಿಸಿದ ಕೆರೆಗಳಿವೆ. ಅವುಗಳ ವಿನ್ಯಾಸ ಮತ್ತು ಅವುಗಳ ರಚನೆ ನೋಡಿದರೆ ನಮ್ಮ ಪೂರ್ವಿಕರ ಮೇಲೆ ಅಭಿಮಾನ ಮೂಡುತ್ತದೆ. ಮೇಲಿನ ಕೆರೆಯಿಂದ ಕೆಳಗಿನ ಕೆರೆಗೆ ಹರಿದು ಸಂಪರ್ಕ ಕಲ್ಪಿಸುವ ಮಣ್ಣು ಕಾಲುವೆಗಳ ರಚನೆ ಅದ್ಭುತವಾಗಿದೆ.
ಈ ನೀರಾವರಿ ವ್ಯವಸ್ಥೆಯನ್ನು ಈಗಿನ ಸರ್ಕಾರಿ ಜಲ ತಜ್ಞರು ಅಧ್ಯಯನ ಮಾಡಿ ವಿಕೇಂದ್ರಿಕೃತ ನೀರಾವರಿ ವ್ಯವಸ್ಥೆಗೆ ಮುಂದಾದರೆ ಪರಿಸರ ಉಳಿದೀತು.
ಮಳೆಯಲ್ಲಿ ಬಿದ್ದು ತಗ್ಗಿಗೆ ಓಡುವ ನೀರನ್ನು ಹಿಡಿದಿಡುವ ಕೆರೆಗಳು ನಿಸರ್ಗದ ಜಲ ಪಾತ್ರೆಗಳು. ಇಲ್ಲಿ ಸಂಗ್ರಹವಾಗುವ ನೀರು, ಭೂಮಿಗೆ ಇಂಗುವುದು. ಬಿಸಿಲಿಗೆ ಆವಿಯಾಗಿ ಭವಿಷ್ಯದ ಮಳೆಗೆ ಆಶ್ರಯವಾಗುತ್ತದೆ. ಒಂದು ಹಳ್ಳಿಗೆ ಒಂದು ಕೆರೆ ಸಮೃದ್ಧತೆ ತರಬಲ್ಲದು ಎಂದಾದರೆ ಸಾವಿರಾರು ಎಕರೆ ಕಾಡನ್ನು, ಸಾವಿರಾರು ಎಕರೆ ಅನ್ನ ಬೆಳೆಯುವ ಕೃಷಿಭೂಮಿಯನ್ನು ಮುಳುಗಡೆ ಮಾಡಿ ಲಕ್ಷಾಂತರ ಮರಗಳನ್ನು ,ಕೋಟ್ಯಾನುಕೋಟಿ ಹಸಿರು ಸಂಪತ್ತನ್ನು, ವನ್ಯಜೀವಿಗಳನ್ನು, ಸಾವಿರಾರು ಜನರನ್ನು ಒಕ್ಕಲೆಬ್ಬಿಸುವ, ಭೂಮಿಗೆ ಒತ್ತಡವೇರಿ ಅಸಮಾತೋಲಕ್ಕೆ ಕಾರಣವಾಗುವ, ಸಾವಿರಾರು ಕೋಟಿ ಹಣವನ್ನು ವೆಚ್ಚ ನಿರ್ಮಿಸುವ ಬೃಹತ್ ಅಣೆಕಟ್ಟುಗಳ ಅವಶ್ಯಕತೆ ಇದೆಯೇ?
ನಮ್ಮ ಪೂರ್ವಿಕರು ಮಾಡಿರುವ ಕೆರೆಗಳ ನಿರ್ಮಾಣದ ತಾಂತ್ರಿಕತೆಯನ್ನು ನಾವು ಅರ್ಥ ಮಾಡಿಕೊಳ್ಳ ಬೇಕಿತ್ತು. ಆದರೆ ನಾವು ಪಾಶ್ಚಿಮಾತ್ಯರ ಅನುಕರಣೆ ಮಾಡಲು ಮುಂದಾಗಿ ನಮ್ಮದೆಲ್ಲವನ್ನು ನಾಶ ಮಾಡಿಕೊಳ್ಳುತ್ತಿದ್ದೇವೆ. ದೇಶದಲ್ಲಿ ಇರುವ ಕೋಟ್ಯಾಂತರ ಕೆರೆಗಳನ್ನು ಸಂರಕ್ಷಿಸಿ ಕೃಷಿಗೆ ಅಣಿಗೊಳಿಸುವ ಬದಲು ಇಸ್ರೇಲ್ ಮಾದರಿ ಕೃಷಿಗೆ ಮುಂದಾಗಿ ಭೂಮಿಯ ಆಳವಾದ ಒಡಲಲ್ಲಿ ಇರುವ ಜಲ ಮೂಲಕ್ಕೆ ಲಗ್ಗೆ ಇಡುತ್ತಿದ್ದೇವೆ. ಇದು ನಮ್ಮ ಮತ್ತೊಂದು ದುರಂತ. ನಿಸರ್ಗಕ್ಕೆ ಪೂರಕವಾಗಿ ಹರಿಯುವ ನದಿ ಪಾತ್ರವನ್ನು ಬದಲಿಸಿ ನದಿ ಜೋಡಣೆಗೆ ಮುಂದಾಗಿರುವುದು ಮಗದೊಂದು ದುರಂತ.
ಇತ್ತೀಚೆಗೆ ಕೃಷಿ ಹೊಂಡಗಳ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ. ಇದಕ್ಕಾಗಿ ಕೋಟ್ಯಂತರ ಹಣ ಖರ್ಚು. ಜೊತೆಗೆ ಕೋಟ್ಯಂತರ ವ್ಯವಹಾರ. ಈ ಯೋಜನೆಯಲ್ಲಿ ಸಫಲತೆಗಿಂತ ವಿಫಲತೆಯೇ ಹೆಚ್ಚು. ಈ ಕಾರಣಕ್ಕೆ ಸರ್ಕಾರ ಊರಿಗೊಂದು ಕೆರೆ ಯೋಜನೆ ತಂದು, ಕೆರೆ ನಿರ್ಮಾಣ ಮಾಡ ಬೇಕು. ಇರುವ ಕೆರೆಗಳು ದುರಸ್ತಿ. ಕೆರೆಗೆ ಹರಿದು ಬರುವ ನೀರಿನ ದಾರಿಯನ್ನು ಸುಗಮಗೊಳಿಸಿದರೆ ಭೂಮಿಗೆ ಬಿದ್ದ ಮಳೆ ನೀರ ತಡೆಯಲು. ತಡೆದ ನೀರನ್ನು ಭೂಮಿಗೆ ಇಂಗಿಸಲು ಮುಂದಾದರೆ ಭವಿಷ್ಯತ್ತಿಗೆ ನಿಸರ್ಗ ಉಳಿದೀತು.
ಲೇಖಕರು: ಚಂದ್ರಶೇಖರ ನಾರಣಾಪುರ, ಕೃಷಿ ನಿವಾಸ. ಚಿಕ್ಕಮಗಳೂರು