ಡಾ.ಗಣೇಶಹೆಗಡೆ ನಿಲೇಸರ

ಹೈನುಗಾರಿಕೆಯೆಂದರೆ ಯಥೇಚ್ಛವಾಗಿ ಹಿಂಡಿ (ಪಶು ಆಹಾರ) ಖರೀದಿಸಿ ಹಸುಗಳಿಗೆ ನೀಡುವುದಲ್ಲ. ಬದಲು ಯಾವ ರೀತಿಯಲ್ಲಿ ಹಿಂಡಿಯ ಬಳಕೆ ಕಡಿಮೆಗೊಳಿಸಬಹುದು ಎಂಬುದು ಮುಖ್ಯ. ದುಬಾರಿಯಾದ ಹಿಂಡಿ/ದಾಣಿಯನ್ನು ಸಾಧ್ಯವಾದಷ್ಟು ಕಡಿಮೆ ಉಪಯೋಗಿಸಿ ಹೈನುಗಾರಿಕೆ ಕೈಗೊಳ್ಳುವಂತಾದರೆ ಆದಾಯ ಹೆಚ್ಚುತ್ತದೆ. ಬಹುತೇಕ ಹೈನುಗಾರರು ಹಿಂಡಿ ಖರೀದಿಸುವುದರಲ್ಲಿ ತೋರುವ ಉತ್ಸಾಹವನ್ನು ಮೇವು ಬೆಳೆಸಿಕೊಳ್ಳುವುದರಲ್ಲಿ ತೋರಿಸುವುದಿಲ್ಲ. ಉತ್ತಮ ದರ್ಜೆ ಒಣ ಮತ್ತು ಹಸಿರು ಮೇವನ್ನು ನೀಡುವುದರಿಂದ ದುಬಾರಿ ಹಿಂಡಿಯ ಅಗತ್ಯ  ಕಡಿಮೆಯಾಗುತ್ತದೆ.

ಹಸಿರು ಮೇವು: ಹೈನುರಾಸುಗಳಿಗೆ ಒಳ್ಳೆಯ ಗುಣಮಟ್ಟದ ಹಸಿರು ಮೇವು ಅಗತ್ಯ. ಇವುಗಳಲ್ಲಿ ರೈತ ತನ್ನ ಕೃಷಿಪದ್ಧತಿ ಮತ್ತು ಅನುಕೂಲ ನೋಡಿಕೊಂಡು ಎಷ್ಟು ಸಾಧ್ಯವೋ ಅಷ್ಟನ್ನು ತಾನೇ ಬೆಳೆದುಕೊಳ್ಳಬೇಕು. ಸುಮಾರು 10 ಲೀಟರ್ ಹಾಲು ಹಿಂಡುವ ಹಸುವಿಗೆ ದಿನಕ್ಕೆ 20-25 ಕಿಲೋ ಹಸಿರು ಹುಲ್ಲು ನೀಡಿದರೆ ಹಿಂಡಿಯ ಪ್ರಮಾಣವನ್ನು ತೀರಾ ಕನಿಷ್ಟ ಮಟ್ಟಕ್ಕೆ ಇಳಿಸಬಹುದು. ಈ  ಹಸಿರು ಮೇವಿನಲ್ಲಿ 4-5 ಕಿಲೋ ದ್ವಿದಳ ಹಸಿರು ಮೇವು ಇರಬೇಕು.

ಹಸಿರು ಮೇವಿನಲ್ಲಿ ಏಕದಳ ಏಕವಾಷರ್ಿಕ ಬೆಳೆಗಳಾದ ಮುಸುಕಿನ ಜೋಳ, ಆಫ್ರಿಕನ್ ಟಾಲ್ ಜೋಳ, ಸಜ್ಜೆ ಇತ್ಯಾದಿ, ಏಕದಳ ಬಹುವಾಷರ್ಿಕ ಬೆಳೆಗಳಾದ ಹೈಬ್ರಿಡ್ ನೇಪಿಯರ್, ಐ.ಜಿ.ಎಫ್.ಆರ್, ಎನ್ಬಿ 21, ಕೋ-3, ಗಿನಿ, ಪ್ಯಾರಾ, ರೋಡ್ಸ್, ಪ್ಯಾನಿಕ್  ಮುಂತಾದವು, ದ್ವಿದಳ ಏಕ ವಾಷರ್ಿಕ ಬೆಳೆಗಳಾದ ಅಲಸಂದೆ, ಅವರೆ, ಹುರುಳಿ, ಹೆಸರು ಇತ್ಯಾದಿ, ದ್ವಿದಳ ಬಹುವಾಷರ್ಿಕ ಬೆಳೆಗಳಾದ ಕುದುರೆ ಮಸಾಲೆ (ಲೂಸರ್ನ್), ಸ್ಟೈಲೋಸಾಂತಸ್, ವೆಲ್ವೆಟ್ ಬೀನ್, ಸಿರ್ಯಾಟ್ರೋ, ಗ್ಲೈಸೀನ್, ಡೆಸ್ಮೋಡಿಯಂ, ಹುಲ್ಲುಗಾವಲಿನ ಬೆಳೆಗಳಾದ ರೋಡ್ಸ್, ಅಂಜನ್, ಸ್ಪಿಯರ್ ಹುಲ್ಲು ಮುಖ್ಯವಾಗಿವೆ. ಬಹುತೇಕ ಈ ಎಲ್ಲ ಮೇವಿನ ಬೀಜ/ಕಟಿಂಗುಗಳು ಮೇವು ಸಂಶೋಧನಾ ಕೇಂದ್ರಗಳಲ್ಲಿ ದೊರೆಯುತ್ತವೆ. ಅಥವಾ ತಮ್ಮ ಹತ್ತಿರವಿರುವ ಪ್ರಗತಿಪರ ಹೈನುಗಾರರು ಬೆಳೆಸಿರುವ ಮೇವಿನ ತುಂಡುಗಳನ್ನು ಉಪಯೋಗಿಸಿಕೊಳ್ಳಬಹುದು.

ರೈತರು ಹೆಚ್ಚು ಗಮನ ನೀಡದ ವಿಷಯವೆಂದರೆ ಮೇವಿನ ಮರಗಳು ಮತ್ತು ಪೊದೆಗಳು. ಇವುಗಳಿಂದ ಕೂಡಾ ಉತ್ತಮ ಮೇವು ಪಡೆಯಬಹುದು. ಇವುಗಳಲ್ಲಿ ಸುಬಾಬುಲ್, ಅಕೇಶಿಯ, ನುಗ್ಗೆ, ಆಲ, ದಶರಥ್, ಅಗಸೆ, ಹಾಲವಾಣ, ಗ್ಲಿರಿಸೀಡಿಯ, ಕ್ಯಾಲಿಯಾಂಡ್ರಾ, ಅತ್ತಿ ಮತ್ತು ಇತರ ಅಡವಿ ಸೊಪ್ಪುಗಳನ್ನೂ ದಿನಕ್ಕೆ ಐದಾರು ಕಿಲೋಗಳಷ್ಟು ಉಪಯೋಗಿಸಬಹುದು. ಅಜéೋಲಾ ಕೂಡ ಉತ್ತಮ ಪಶು ಆಹಾರ.

ಒಣ ಮೇವು ಬೇಕೇ ಬೇಕು: ಮಲೆನಾಡಿನಲ್ಲಂತೂ ಭತ್ತದ ಹುಲ್ಲು ಬಹುತೇಕವಾಗಿ ಉಪಯೋಗಿಸಲ್ಪಡುವ ಒಣ ಮೇವು.  ಬೆಲೆ ದುಬಾರಿ. ಆದರೆ ಇದರಲ್ಲಿರುವ ಆಹಾರಾಂಶ ಅತ್ಯಲ್ಪ. ಬದಲಿಗೆ ಇದೇ ಭತ್ತದ ಹುಲ್ಲನ್ನೇ ಬಳಸಿ ಜಾನುವಾರುಗಳಿಗೆ ಹೆಚ್ಚಿನ ಪೋಷಕಾಂಶಗಳು ಸಿಗುವಂತೆ ಪರಿವರ್ತಿಸಬಹುದು. ಅದು ಹೇಗೆಂದರೆ, ಹುಲ್ಲನ್ನು ಒಂದೆರಡು ಇಂಚು ಕತ್ತರಿಸಿ ನೀಡಬಹುದು. ಕತ್ತರಿಸಿದ ಮೇವನ್ನು ಕೊಂಚ ನೀರಿನಲ್ಲಿ ಒದ್ದೆ ಮಾಡಿ ಕೊಡಬಹುದು. ಒಂದು ಕ್ವಿಂಟಲ್ ಕತ್ತರಿಸಿದ ಮೇವಿಗೆ 30 ಲೀಟರು ನೀರಿನಲ್ಲಿ ಒಂದು ಕಿಲೋ ಉಪ್ಪು, ಒಂದು ಕಿಲೋ ಖನಿಜ ಮಿಶ್ರಣ (ಇದು ಮಾರುಕಟ್ಟೆಯಲ್ಲಿ ಸಿಗುತ್ತದೆ) ಮತ್ತು ಎರಡು ಕಿಲೋ ಕಾಕಂಬಿ/ ಬೆಲ್ಲ ಸೇರಿಸಿ ಸಿಂಪಡಿಸಿ ಕೊಡಬಹುದು.

ಮೇವಿನ ಮೌಲ್ಯವರ್ಧನೆ ಇನ್ನೂ ಮಾಡಬೇಕೆಂದರೆ, ಈ ಮಿಶ್ರಣಕ್ಕೆ ಎರಡು ಕಿಲೋ ಯೂರಿಯಾ ದ್ರಾವಣ ಸಿಂಪಡಿಸಬಹುದು. ಇದನ್ನು ಒಂದುಗಂಟೆಯ ಬಳಿಕ ನೇರವಾಗಿ ಜಾನುವಾರುಗಳಿಗೆ ನೀಡಬಹುದು. ಗೊಬ್ಬರವಾಗಿ ಬಳಕೆಯಾಗುವ ಯೂರಿಯಾ ಬಳಸಲು ಏನೂ ತೊಂದರೆಯಿಲ್ಲ. ಈ ಯೂರಿಯಾವನ್ನು ಜಾನುವಾರುಗಳ ಹೊಟ್ಟೆಯ ವಿಶೇಷ ರಚನೆಯಾದ ಮೆಲುಕು ಚೀಲದಲ್ಲಿರುವ ಸೂಕ್ಷ್ಮಾಣುಜೀವಿಗಳು ಬಳಸಿಕೊಳ್ಳುತ್ತವೆ. ಅವುಗಳ ಜೀರ್ಣಕ್ರಿಯೆಯಿಂದ ಯೂರಿಯಾ, ಪಶುವಿನ ಮೇವಿನಲ್ಲಿರುವ ಪಿಷ್ಟವನ್ನು ಬಳಸಿಕೊಂಡು ಕಡಿಮೆ ಖಚರ್ಿನಲ್ಲಿ ಜಾನುವಾರುಗಳ ದೇಹಕ್ಕೆ ಪ್ರೋಟೀನ್ ಒದಗಿಸುತ್ತದೆ.

ಒಣಮೇವು: ಒಣ ಮೇವನ್ನು ಖರೀದಿಸುವುದಿದ್ದರೆ  ರಾಗಿ, ಜೋಳದ ದಂಟು, ಇತರ ದ್ವಿದಳ ಧಾನ್ಯದ ಗಿಡಗಳನ್ನು ಉತ್ತಮ ಮೇವನ್ನಾಗಿ ಬಳಸಬಹುದು. ರೈತರು ತಮಗೆ ಸಮೀಪದಲ್ಲಿ ಯಾವ ಕೃಷಿಯ ಬೆಳೆ ತ್ಯಾಜ್ಯ ದೊರೆಯುತ್ತವೆಯೋ ಅವನ್ನೇ ಬಳಸಿದರೆ ಖರ್ಚು ಕಡಿಮೆ. ಮಲೆನಾಡಿನಲ್ಲಿ ಅಡಿಕೆ ಹಾಳೆ ಯಥೇಚ್ಛವಾಗಿ ದೊರೆಯುತ್ತದೆ. ಅದನ್ನು ಒಣಗಿಸಿ ಸಣ್ಣಗೆ ಕತ್ತರಿಸಿ ಅಥವಾ ಯಂತ್ರದ ಮೂಲಕ ಅವಲಕ್ಕಿಯ ರೂಪಕ್ಕೆ ತಂದು ಪುಡಿಮಾಡಿ ದಿನಕ್ಕೆ 5-6 ಕಿಲೋ ವರೆಗೆ ಉಪಯೋಗಿಸಬಹುದು. ಮಳೆಗಾಲದಲ್ಲಿ ಸುಮ್ಮನೇ ನೆಲಕ್ಕೆ ಬಿದ್ದು ಹಾಳಾಗುವ ಹಲಸನ್ನು ಒಣಗಿಸಿ ಸಂಗ್ರಹಿಸಿಟ್ಟುಕೊಂಡು ಬೇಕೆಂದಾಗ ಉಪಯೋಗಿಸಬಹುದು. ಅಥವಾ ಸೀಜನ್ನಿನಲ್ಲಿ ಹಲಸಿನ ಹಣ್ಣನ್ನು ಕೂಡಾ ನೇರವಾಗಿ ಹಸುಗಳಿಗೆ ಕೊಡಬಹುದು. ಕೋಕೋ ಸಿಪ್ಪೆ, ಸೊಪ್ಪು, ಸುಬಾಬುಲ್, ಗ್ಲಿರಿಸಿಡಿಯಾ, ಕ್ಯಾಲಿಯಾಂಡ್ರಾದಂತಹ ಮರಗಳು, ಅರಣ್ಯ ಪ್ರದೇಶದಲ್ಲಿ ಬಣಗಿ, ಕಣಗಲು, ಕಡಾಲು, ಸಳ್ಳೆ, ಮತ್ತಿ, ಅಕೇಶಿಯಾ, ಬೀಟೆ, ಹೊನ್ನೆಯಂತಹ ಅಡವಿಯ ಮರಗಳ ಸೊಪ್ಪು ಕೂಡ ಉತ್ತಮ ಮೇವು.

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ:ನಡಾ. ಗಣೇಶ ಎಂ. ಹೆಗಡೆ ನೀಲೇಸರ  : 94489 95595

LEAVE A REPLY

Please enter your comment!
Please enter your name here