ಮುಂಗಾರು ಮಳೆ ; ಸೆಪ್ಟೆಂಬರ್ ಸಂತಸ ತರಬಹುದೇ ?

0
ಲೇಖಕರು: ಆದರ್ಶ ಪಿ ಚೆರುಗಡ್

ದೀರ್ಘ ವ್ಯಾಪ್ತಿಯ ಹವಾಮಾನ ಮುನ್ಸೂಚನೆಗಳು: ಸೆಪ್ಟೆಂಬರ್ ಮೊದಲನೇ ವಾರದಲ್ಲಿ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಲಿದ್ದು(ಸೆಪ್ಟೆಂಬರ್ 1-4) ಇದರಿಂದಾಗಿ ಪಶ್ಚಿಮ ಮಾರುತಗಳು (Westerlies) ಬಲಗೊಳ್ಳಲಿವೆ.

ಮ್ಯಾಡೆನ್-ಜೂಲಿಯನ್ ಆಸಿಲೇಷನ್ (MJO) ಮತ್ತು ಮೊಂನ್ಸೂನ್ ಇಂಟ್ರಾ ಸೀಸನಲ್ ಆಸಿಲೇಷನ್(MISO) ಹಿಂದೂ ಮಹಾ ಸಾಗರಕ್ಕೆ ಮರಳಲಿದ್ದು ಇದು ಮುಂಗಾರು ಮಳೆಯನ್ನು ಚುರುಕುಗೊಳಿಸಲಿದೆ. ಇಷ್ಟು ದಿನ ಎಲ್ ನಿನೋ ಮತ್ತು MJO ನಿಗ್ರಹದಿಂದಾಗಿ(El Nino &MJO Suppression) ಮುಂಗಾರು ತೀವ್ರವಾಗಿ ಕುಂಠಿತಗೊಂಡಿತ್ತಾದರೂ ಹಿಂದೂ ಮಹಾ ಸಾಗರಕ್ಕೆ ಮರಳುತ್ತಿರುವ MJO & MISO ಸೆಪ್ಟೆಂಬರ್ ತಿಂಗಳಲ್ಲಿ ಸಾಮಾನ್ಯ ಮಳೆಯ ಸೂಚನೆಗಳನ್ನು ಕೊಡುತ್ತಿದ್ದು, ಕೃಷಿಕರಲ್ಲಿ ಆಶಾಕಿರಣ ಮೂಡಿಸಲಿದೆ.

ಆಗಸ್ಟ್ 30 ರಿಂದ ಮುಂಗಾರು ಮಳೆ ಚುರುಕುಗೊಳ್ಳುವ ಸಾಧ್ಯತೆಗಳಿದ್ದು, ಸೆಪ್ಟೆಂಬರ್ 5ರ ವರೆಗೆ ಕರಾವಳಿ ಮತ್ತು ಮಲೆನಾಡು ಪ್ರದೇಶಗಳಲ್ಲಿ ವ್ಯಾಪಾಕವಾಗಿ ಸಾಧಾರಣ ಮಳೆಯಾಗುವ ಸಾಧ್ಯತೆಗಳಿವೆ.

ಸೆಪ್ಟೆಂಬರ್ 5ರಿಂದ ಸೆಪ್ಟೆಂಬರ್ 21ವರೆಗೆ ಮುಂಗಾರು ಶಕ್ತಗೊಳ್ಳಲಿದ್ದು ಉತ್ತಮ ಮುಂಗಾರು ಮಳೆಯಾಗುವ ಲಕ್ಷಣಗಳಿವೆ. ಸೆಪ್ಟೆಂಬರ್ 12-14ರ ವೇಳೆ ದಕ್ಷಿಣ ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತವಾಗುವ ಸಾಧ್ಯತೆಗಳು ಸಹ ಇದೆ.

ಈ ವೇಳೆ ಕರಾವಳಿ, ಮಲೆನಾಡು ಪ್ರದೇಶಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಗಳಿವೆ. ಇದೇ ವೇಳೆ ಉತ್ತರ ಒಳನಾಡು ಪ್ರದೇಶಗಳಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆಗಳಿವೆ ಹಾಗೂ ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಸಾಮಾನ್ಯದಿಂದ-ಉತ್ತಮ ಮಳೆಯಾಗುವ ಸಾಧ್ಯತೆಗಳಿವೆ.

ಕರ್ನಾಟಕದಲ್ಲೆಡೆ ಸೆಪ್ಟೆಂಬರ್ ತಿಂಗಳಿನ 2ನೇ ಮತ್ತು 3ನೇ ವಾರ ಉತ್ತಮ ಮಳೆಯಾಗಲಿದ್ದು, ಆಣೆಕಟ್ಟುಗಳು ತುಂಬುವ ಸಾಧ್ಯತೆಗಳಿವೆ. ಒಟ್ಟಾರೆಯಾಗಿ ಸೆಪ್ಟೆಂಬರ್ ತಿಂಗಳಿನಲ್ಲಿ ಉತ್ತಮ ಮಳೆಯಾಗುವ ನಿರೀಕ್ಷೆಯಿದೆ.

ಸೆಪ್ಟೆಂಬರ್ ತಿಂಗಳಿನ ಕೊನೆಗೆ ಧನಾತ್ಮಕ ಹಿಂದೂ ಮಹಾಸಾಗರದ ದ್ವಿಧ್ರುವಿ (PIOD- Positive Indian Ocean Dipole) ಅರಬ್ಬೀ ಸಮುದ್ರಕ್ಕೆ ಮರಳಲಿದ್ದು ಇದು ಈಶಾನ್ಯ ಮಾನ್ಸೂನ್(ಹಿಂಗಾರು) ಮೇಲೆ ಧನಾತ್ಮಕ ಪರಿಣಾಮ ಬೀರಲಿದೆ.

LEAVE A REPLY

Please enter your comment!
Please enter your name here