ಚಿತ್ರ ಲೇಖನ :ವಿನೋದ ರಾ ಪಾಟೀಲ

ನವಣೆ ಅನ್ನ ಉಂಡವನು ಹೈವಾನನಾಗಿರುವನು’ ಎನ್ನುವುದು ಉತ್ತರ ಕರ್ನಾಟಕದ ಪ್ರಚಲಿತದ ಗಾದೆಮಾತು. ನವಣೆ ಬೆಳೆ ಇತ್ತೀಚಿನ ದಿನಗಳಲ್ಲಿ ಕಡಿಮೆಯಾಗುತ್ತಾ ಸಾಗಿದೆ. ಇಂದಿನ ವಾಣಿಜ್ಯ ಬೆಳೆಗಳಾದ ಕಬ್ಬು, ಮೆಕ್ಕೆಜೋಳ ತಂಬಾಕು ಈ ಬೆಳೆಯ ಕ್ಷೇತ್ರವನ್ನು ಆಕ್ರಮಿಸಿವೆ. ಇದನ್ನು ಆಶ್ರಯಿಸಿ ಬರುವ ಪಕ್ಷಿಗಳ ಸಂತತಿಯಲ್ಲೂ ಕಡಿಮೆಯಾಗಿವೆ. ಉತ್ತರ ಕರ್ನಾಟಕದ ಪ್ರಮುಖ ಹಬ್ಬವಾದ ಶೀಗೆ ಹುಣ್ಣಿಮೆಯ ಹುರಕ್ಕಿ ಹೋಳಿಗೆ ಹಾಗೂ ನವಣಿಯಿಂದ ಮಾಡಿದ ತಂಬಿಟ್ಟು, ರೊಟ್ಟಿಯ ಖಾದ್ಯ ಬಹಳ ಪ್ರಸಿದ್ದ. ಇಂತಹ ಮರೆಯಾಗುತ್ತಿರುವ ಸಿರಿಧಾನ್ಯಗಳನ್ನು ಮತ್ತೆ ಪ್ರಚಲಿತಕ್ಕೆ ತರುವ  ಕೆಲಸವನ್ನು  ಬೈಲಹೊಂಗಲ ತಾಲೂಕಿನ ಚಿಕ್ಕಬಾಗೇವಾಡಿಯ ರೈತ ಕಲ್ಲಪ್ಪ ಪಂಡಿತಪ್ಪ ನೇಗಿನಹಾಳ ಮಾಡುತ್ತಿದ್ದಾರೆ.

ಊಬನವಣಿಯನ್ನು ಗುಬ್ಬಿ ತಿನ್ನುವುದಿಲ್ಲ

ಸಾವಯವ ಕೃಷಿಕರಾದ ಇವರು ತಮ್ಮ ಒಟ್ಟು ಜಮೀನಿನಲ್ಲಿ ಕಾಲುಭಾಗ ಸಿರಿಧಾನ್ಯಗಳನ್ನು ಪ್ರತಿ ವರ್ಷವೂ ಬೆಳೆಯುತ್ತಾರೆ.ಈಗಿನ ಓಟ್ಟು 11 ಏಕರೆಯಲ್ಲಿ 5 ಎಕರೆಯಲ್ಲಿ ದೇಶಿ ಜೋಳ ಬೆಳೆದರುವ ಇವರು  15 ಗುಂಟೆಯಲ್ಲಿ ಹೊಲವನ್ನು ಹದ ಮಾಡಿ ಬೀಜೋಪಚಾರ ಮಾಡಿ ನವಣಿಯ ಬೀಜವನ್ನು ಬಿತ್ತಿದ್ದಾರೆ. ಒಮ್ಮೆ ನೀರುಣಿಸಿರುವ ನವಣಿಗೆ ಯಾವುದೇ ರೋಗಭಾದೆಗಳಿಲ್ಲ. ಇತ್ತೀಚಿಗೆ ಸಿರಿಧಾನ್ಯ ಬೆಳೆಯುವ ಕ್ಷೇತ್ರ ಕಡಿಮೆಯಾದ್ದರಿಂದ ಯಾರು ಸಿರಿಧಾನ್ಯಗಳನ್ನು ಬೆಳೆಯುತ್ತಾರೋ ಆ ಬೆಳೆಗೆ ಪಕ್ಷಿಗಳ ಕಾಟ ಜಾಸ್ತಿ. ಎಲ್ಲ ಪ್ರಕಾರದ ಭೂಮಿಗೂ ಉತ್ತಮ ಇಳುವರಿ ನೀಡಬಲ್ಲ ಈ ಊಬನವಣಿಯನ್ನು ಗುಬ್ಬಿ ತಿನ್ನುವುದಿಲ್ಲ. ಕಾರಣ ಇದರಲ್ಲಿಯ ಊಬು ಕಣ್ಣಿಗೆ ಚುಚ್ಚುವದರಿಂದ ಇದರ ಸನಿಹ ಸುಳಿವುದಿಲ್ಲ. ಅಕ್ಟೋಬರ ಕೊನೆಯಲ್ಲಿ ಬಿತ್ತಿದ ಈ ಬೆಳೆಯು  3ರಿಂದ 4 ತಿಂಗಳಿಗೆ ಫಸಲು ನೀಡಬಲ್ಲದು. ಸೋಯಾ, ಶೇಂಗಾ ಬೆಳೆಗಳ ಮಿಶ್ರಬೆಳೆಯಾಗಿಯೂ ಬೆಳೆಯುತ್ತಾರೆ. ಹವಾಮಾನ ವೈಪರೀತ್ಯವನ್ನು ಸಮರ್ಥವಾಗಿ ಎದುರಿಸಿ ಪೌಷ್ಟಿಕ ಆಹಾರ ಕೊಡುವ ಜೊತೆಗೆ ಮೇವು, ಆರೋಗ್ಯ ಜೀವನೋಪಾದಿಯ ಭದ್ರತೆಗಳನ್ನು ಒದಗಿಸುವ  ತಾಕತ್ತು  ನವಣೆ ಬೆಳೆಗಿದೆ.

  ಕೊಯ್ಲು ಮತ್ತು ಇಳುವರಿ

  ನವಣಿಯನ್ನು ಕೋಯ್ಲು ಮಾಡುವುದು ಸುಲಭ. ತೆನೆಗಳನ್ನು ಗಟ್ಟಿಯಾಗಿ ಒಂದು ಚೀಲದಲ್ಲಿ ಕಟ್ಟಿ ಒಂದು ರಾತ್ರಿ ಇಡಬೇಕು. ಇದರಿಂದ ಅದರಲ್ಲಿಯ ಅರ್ಧ ಕಾಳು ಬಿಟ್ಟಿರುತ್ತವೆ,ಇನ್ನು ಊಳಿದ ಕಾಳುಗಳನ್ನು ಲಘುವಾಗಿ ಬಡಮನಿಯಲ್ಲಿ ಬಡೆದಾಗ  ಊದರಿದ ನವಣಿ ಎರಡನ್ನು ಸೇರಿಸಿ ಗಾಳಿಗೆ ತೂರಿದಾಗ ಶುದ್ಧ ನವಣಿ ಸಿಗುತ್ತದೆ ಎನ್ನುತ್ತಾರೆ ಕಲ್ಲಪ್ಪ ನೇಗಿನಹಾಳ. ಇನ್ನು ಒಂದು ವಿಧಾನದಲ್ಲಿ ಕಟಾವು ಮಾಡಿದ ಮೇಲೆ ಹಲಿಗೆಯಿಂದ ಬಡಿದರೆ ಕಾಳುಗಳು ಬೇರೆಯಾಗುತ್ತವೆ. ನವಣೆಯನ್ನು ಚಳಿಗಾಲ ಮತ್ತು ಮಳೆಗಾದಲ್ಲಿ ಹೆಚ್ಚಾಗಿ ಬಳಸುತ್ತಾರೆ.

ನವಣಿ ಹುಲ್ಲು ಜಾನುವಾರಗಳಿಗೆ ಉತ್ತಮ ಮೇವು. ಇದರಿಂದ ಹೈನುಗಾರಿಕೆಗೂ ಸಹಾಯವಾಗುತ್ತದೆ. ಸಣ್ಣ ಕಾಳು, ನುಣಪಾದ ಹೊರಮೈ ಇರುವದರಿಂದ ಕೀಟಗಳಿಗೆ ತತ್ತಿ ಇಡಲು ಆಗುವುದಿಲ್ಲ. ಹುಳು ಬಾಧೆ ಇಲ್ಲದಿರುವುದರಿಂದ ಇರುವುದರಿಂದ ದೀರ್ಘಕಾಲದವೆರೆಗೂ ಸಂಗ್ರಹಿಸಿ ಇಡಬಹುದು. 15 ಗುಂಟೆಯಲ್ಲಿ ಬೆಳೆದ ನವಣೆ,  1.5 ಕ್ವಿಂಟಾಲ್ ಇಳುವರಿ ಬಂದಿದೆ. ಪ್ರತಿ ಕ್ವಿಂಟಾಲಗೆ ಮಾರುಕಟ್ಟೆಯಲ್ಲಿ 3200 ರೂಪಾಯಿ ಧಾರಣಿ ಇದೆ.

ಕಡಿಮೆಯಾಗಲು ಕಾರಣ

ಒಂದು ಕಾಲದಲ್ಲಿ ಯಥೇಚ್ಚವಾಗಿ ಬೆಳೆಯುತ್ತಿದ್ದ ನವಣೆ ಕಡಿಮೆಯಾಗಲು ಹೈಬ್ರಿಡ್ ತಳಿಗಳ ಆಗಮನ ಹಾಗೂ ಹತ್ತಿ,ಸೋಯಾ,ಮುಸುಕಿನ ಜೋಳ ಮುಂತಾದ ವಾಣಿಜ್ಯಬೆಳೆಗಳಿಗೆ ಹೆಚ್ಚಿದ ಜನಪ್ರಿಯತೆ,ಮಿಶ್ರಬೆಳೆಯಾಗಿ ಬೆಳೆಯದೆ ಇರುವುದು,ಸಂಸ್ಕರಣೆ ಮಾಡಲು ಹೊಸ ಪ್ರಯೋಗಗಳ ಕೊರೆತೆಯಿಂದ ಬರುಬರುತ್ತ ಕಡಿಮೆಯಾಗುತ್ತಾ ಬಂದಿದೆ.

ಸಂತೆಗಳಲ್ಲಿ ಸಿರಿಧಾನ್ಯಗಳು

    ಕಲ್ಲಪ್ಪ ಅವರು ಕಿತ್ತೂರ ಧಾರವಾಡ, ಹಿರೇಬಾಗೇವಾಡಿ, ಬೆಳಗಾವಿ ಸಂತೆಗಳಲ್ಲಿ ಸ್ವತಃ ಮಾರಾಟ ಮಾಡುತ್ತಾರೆ. ಪ್ರತಿ ಶನಿವಾರ ಬೆಳಗಾವಿ ಸಂತೆಯಲ್ಲಿ ಇವರಿಗೆ ತಮ್ಮದೇ ಆದ ಗ್ರಾಹಕರಿದ್ದಾರೆ ಇದರಿಂದ ವ್ಯಾಪಾರ ಸುಲಭವಾಗಿದೆ. ಬಹಳಷ್ಟು ಸುಶಿಕ್ಷಿತ ಜನ, ಸಿರಿಧಾನ್ಯಗಳ ಮಹತ್ವ ಅರಿತವರು ಇವರಿದ್ದಲ್ಲಿಯೇ ಬಂದು ಖರೀದಿ ಮಾಡಿಕೊಂಡು ಹೊಗುತ್ತಾರೆ. ಇದರಿಂದ ಮಧ್ಯವರ್ತಿಗಳಿಗೆ ಇಲ್ಲಿ ಅವಕಾಶವಿಲ್ಲ.ಇವರನ್ನು ನೋಡಿ ಸುತ್ತಲಿನ ರೈತರು ನವಣೆಯ ಕೃಷಿಯನ್ನು ಬೆಳೆಯಲು ಪ್ರಾರಂಭಿಸಿದ್ದಾರೆ. ಊರಿನ ವಾತಾವರಣ ಮತ್ತು ಭೂಮಿ ಕೂಡಾ ನವಣಿ ಬೆಳೆಯಲು ಸೂಕ್ತವಾಗಿದೆ.

ಆಯುರ್ವೇದದಲ್ಲಿ ನವಣಿ

   ಶರೀರದ ಯಾವುದೇ ಭಾಗಕ್ಕೆ ಪೆಟ್ಟು ಬಿದ್ದಾಗ ನವಣಿ ಅನ್ನ ಮತ್ತು ತುಪ್ಪ ಸೇರಿಸಿ ಊಟ ಮಾಡಿದರೆ ನೋವಿನ ತೀವ್ರತೆ ಕಡಿಮೆಯಾಗುವುದು. ಸಂಸ್ಕ್ರತದಲ್ಲಿ ಪ್ರಿಯಾಂಗು ಎಂದು ಕರಯಲ್ಪಡುವ ಇದು ನೋವು ನಿವಾರಕವಾಗಿ  ಬಳಕೆಯಾಗುವುದು.  ಪ್ರೋಟಿನ್ 11 ಲಿಪಿಡ್ 4 ಕಾರ್ಬೊಹೈಡ್ರೇಟ್ 70 ರಷ್ಟು ಪ್ರಮಾಣ ಹೊಂದಿದೆ.  ನಾರಿನಾಂಶ ಜಾಸ್ತಿ ಹೊಂದಿರುವದರಿಂದ ಮಲಬದ್ಧತೆ ತಡೆಯುವುದು.ಇನ್ನು ಮಧುಮೇಹಿಗಳಗೆ ವರದಾನವಾಗಿದೆ. ಸಿರೋಟಿನ ಅಂಶ ಮನಸ್ಸನ್ನು ಶಾಂತಯಿಡಲು ಸಹಕಾರಿ.ಎನ್ನುತ್ತಾರೆ ಆಯುರ್ವೇದ ವೈದ್ಯರಾದ ಡಾ.ಶಿವಾನಂದ ಕಳಸಣ್ಣವರ.

ನವಣೆ, ಕಡಿಮೆ ನೀರು ಬಳಸಿ ಬೆಳೆಯುವ ಬೆಳೆ. ಹಾಗೆಯೇ ಕುಸ್ತಿ ಪಟುಗಳ ನೆಚ್ಚಿನ ಆಹಾರ ಇದಾಗಿದ್ದು ಕಬ್ಬು ಗೋವಿನ ಜೋಳ ಬಂದಾಗಿಂದ ಈ ಬೆಳೆ ಬೆಳೆಯುವರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಇಳಿಮುಖವಾಗಿದೆ. ನಿತ್ಯ ನವಣಿ ಅನ್ನ ಊಣ್ಣುವರಿಗೆ ಬೊಜ್ಜು ಮೈ ಬರುವುದಿಲ್ಲ  ಎನ್ನುತ್ತಾರೆ. ಗ್ರಾಮದ  ಹಿರಿಯ ರೈತ ನಿಂಗನಗೌಡ.ಮು ಪಾಟೀಲ. ಪ್ರತಿ ವರ್ಷವೂ ಒಂದಿಲ್ಲೊಂದು ಸಿರಿಧಾನ್ಯಗಳನ್ನು ಬಿತ್ತನೆ ಮಾಡಿ ಇತರ ರೈತರಿಗೂ ಇದರ ಮಹತ್ವ ಹೇಳಿ ಉಳಿಸುವ ಪ್ರಯತ್ನ ಮಾಡುತ್ತರುವ ಕಲ್ಲಪ್ಪ ಅವರು ಈ ಸಾಧನೆ ಹಿಂದೆ ತಮ್ಮ ಕುಟುಂಬದ ಸಹಾಯವಿದೆ ಎಂದು ಹೇಳಲು ಮರೆಯುವುದಿಲ್ಲ.

ಹೆಚ್ಚಿನ ಮಾಹಿತಿಗೆ: 9980634062

LEAVE A REPLY

Please enter your comment!
Please enter your name here