ಬೆಳಗಾವಿಯ ಗ್ರಾಮೀಣ ಹಿರಿಯರ ಬಾಯಲ್ಲಿ ಅನೇಕ ದೇಸಿ ಬೀಜಗಳ ಹೆಸರು ಪ್ರಜಲಿತದಲ್ಲಿವೆ.ಅದರಲ್ಲಿ ಕೆಲವು ನಶಿಸಿ ಹೋಗಿವೆ. ಇನ್ನೂ ಕೆಲವು ಇಂದಿಗೂ ತಮ್ಮ ಅಸ್ಮಿತೆ ಉಳಿಸಿಕೊಂಡಿವೆ. ಅದರಲ್ಲಿ ಖನಗಾಂವ ಸವತೆ, ಗಿರಿಯಾಲ ಸವತೆ, ಅವರಾದಿ ಬದನೆ,ಇವುಗಳು ತಮ್ಮ ಗುಣವಿಶೇಷತೆಯಿಂದ ಹೆಸರುವಾಸಿಯಾಗಿವೆ. ಇವುಗಳಿಂದ ಗುಣಮಟ್ಟದ ಆಹಾರ ದೊರೆಯುತ್ತಿದೆ. ಅವುಗಳಲ್ಲಿ ಈ ಮುಚ್ಚಂಡಿ ಸವತೆಯೂ ಒಂದಾಗಿದೆ.
ಈ ಸವತೆಯನ್ನು ಮಿಶ್ರಬೆಳೆಯಾಗಿ ಬೆಳೆದು ಯಶ ಕಂಡಿರುವ ಬೈಲಹೊಂಗಲ ತಾಲೂಕಿನ ತಿಗಡಿ ಗ್ರಾಮದ ಚಂದ್ರಕಾಂತ ವಿರುಪಾಕ್ಷಪ್ಪ ಕೋಟಗಿ ಅವರು ಕೃಷಿಯಲ್ಲಿ ಹಲವು ಪ್ರಯೋಗಗಳನ್ನು ಅಳವಡಿಸಿಕೊಂಡು ಯಶಸ್ವಿಯಾಗಿದ್ದಾರೆ.
ಭೂಮಿಯ ಹದ
ಇವರದ್ದು ಅವಿಭಕ್ತ ಕುಟುಂಬ. ೧೨ ಏಕರೆ ಜಮೀನು ಹೊಂದಿದ್ದಾರೆ. ಇದರಲ್ಲಿ ೭ ಏಕರೆ ಭೂಮಿಯಲ್ಲಿ ನೀರಾವರಿ ಬೇಸಾಯ ಮಾಡುತ್ತಾರೆ. ಮುಖ್ಯವಾಗಿ ನೀರಾವರಿಯಲ್ಲಿ ಕಬ್ಬು,ಸವತೆ,ಶೇಂಗಾ,ಜೋಳವನ್ನು ಬೆಳೆಯುತ್ತಾರೆ. ಒಣಬೇಸಾಯದಲ್ಲಿ ಸೋಯಾ,ಜೋಳವನ್ನು ಬೆಳೆಯುತ್ತಾರೆ. ಎರಡು ಬೋರ್ವೆಲ್ ಇದೆ. ಅದರಲ್ಲಿ ಈಗ ಒಂದು ಚಾಲ್ತಿಯಲ್ಲಿದೆ. ೧.೫ ಇಂಚು ನೀರನ್ನು ಯೋಜನಾಬದ್ದವಾಗಿ ಬಳಸುತ್ತಾರೆ.
ಈ ಬೋರ್ವೆಲ್ ನೀರು ೪ ಏಕರೆ ಕಬ್ಬಿನ ಬೆಳೆಗೆ ಹನಿ ನೀರಾವರಿ ಮೂಲಕ ನೀರುಣಿಸಲು ಸಾಕಾಗುತ್ತದೆ. ೪ ಭಾಗ ಮಾಡಿ ನೀರುಣಿಸಲಾಗುದರಿಂದ ಸದಾ ತೇವಾಂಶ ಇರುತ್ತದೆ.ಇನ್ನು ಕಬ್ಬಿನ ರವದಿಯನ್ನು ಸುಡದೆ ಭೂಮಿಯಲ್ಲಿ ಸಾವಯವ ಗೊಬ್ಬರವಾಗಿ ಮಾಡಿಕೊಂಡಿದ್ದಾರೆ. ಇದು ಕೂಡಾ ತೇವವನ್ನು ಕಾಪಾಡಲು ಸಹಾಯಕ.ಇನ್ನುಳಿದ ಜಮೀನಿನ ತಾಜ್ಯವನ್ನು ಹಾಗೂ ಬದುವಿನ ಮರಗಳ ಎಲೆಗಳನ್ನು ಹುಂಡಿಗಳಲ್ಲಿ ಸಂಗ್ರಹಿಸಿ ಗೊಬ್ಬರ ಮಾಡಿಕೊಂಡು ಬಳಸುತ್ತಾರೆ.
ಕಬ್ಬು ನಾಟಿ ಮಾಡುವ ಮೊದಲು ಕೊಟ್ಟಿಗೆ ಗೊಬ್ಬರ ಹಾಕುತ್ತಾರೆ.ಸಾಲಿನಿಂದ ಸಾಲಿಗೆ ೪ ಪೂಟ್ ಅಂತರವಿದೆ.ಸಸಿಯಿಂದ ಸಸಿಗೆ ೧.೫ ಪೂಟ್ ಅಂತರದಲ್ಲಿ ಕಬ್ಬಿನ ಸಸಿ ಹಚ್ಚುವದರಿಂದ ಇಳುವರಿಯಲ್ಲಿ ಏರಿಕೆ ಕಂಡುಕೊಂಡಿದ್ದಾರೆ. ಮೊದಲ ವರ್ಷ ೧೮೬ ಟನ್ ಇಳುವರಿ ಬಂದರೆ ಎರಡನೇಯ ವರ್ಷ ೧೫೦ ಟನ್ ಇಳುವರಿ ಬಂದಿದೆ.
ಅಂತರ ಬೇಸಾಯ
ಜಮೀನು ಕಪ್ಪು ಮಣ್ಣಿನಿಂದ ಕೂಡಿದೆ.ಹೀಗಾಗಿ ತರಕಾರಿ ಬೆಳೆಯಲು ಕೂಡಾ ಪ್ರಸಕ್ತವಾಗಿದೆ.ಕಬ್ಬಿನಲ್ಲಿ ಅಂತರಬೆಳೆಯಾಗಿ ಟೊಮ್ಯಾಟೋ,ಬೆಣಚು ಬೆಳೆದು ಮೊದಲ ವರ್ಷ ೧ ಲಕ್ಷ ಆದಾಯ ಪಡೆದಿದ್ದಾರೆ. ಮುಚ್ಚಂಡಿ ದೇಸಿ ಸವತೆಯನ್ನು ಬೆಳೆಯಲಾಗಿದೆ. ಇವುಗಳನ್ನು ಅಂತರ ಬೆಳೆಯಾಗಿ ಬೆಳೆಯುತ್ತಾರೆ. ಇದರಿಂದ ಆದಾಯದ ಜೊತೆಗೆ ಭೂಮಿಯ ತೇವಾಂಶ ಹಿಡಿದಿಟ್ಟುಕೊಳ್ಳುವಲ್ಲಿ ಸಹಾಯಕವಾಗಿದೆ.
ದೇಸಿ ಸವತೆಯ ಗುಣವಿಶೇಷತೆ
ಸವತೆ, ದೇಸಿ ತಳಿಯಾಗಿದೆ.ಇಲ್ಲಿಯ ಸಮೀಪದ ಮುಚ್ಚಂಡಿ ಉರಿನಿಂದ ಬೀಜನ್ನು ತರಲಾಗಿದೆ.ಏಕರೆಗೆ ೨೦೦ ಗ್ರಾಂ ಬೀಜ ಬೇಕಾಗುತ್ತದೆ, ಕಪ್ಪುಭೂಮಿಗೆ ಇದು ಯೋಗ್ಯ ತಳಿಯಾಗಿದೆ.ಒಂದು ತಿಂಗಳ ೧೦ ದಿನದಿಂದ ಇದು ಕೊಯ್ಲಿಗೆ ಬರುವುದು. ವಾರಕ್ಕೆ ೩ ಬಾರಿ ಕೊಯ್ಲು ಮಾಡುತ್ತಾರೆ.ಇನ್ನು ಎಲೆಚುಕ್ಕಿ ರೋಗದ ನಿಯಂತ್ರಣವನ್ನು ಆಕಳ ಗೋಮೂತ್ರ ಸಿಂಪಡಣೆ ಮಾಡಿ ಹತೋಟಿ ಮಾಡಲಾಗುತ್ತದೆ.ಈ ಸವತೆ ಚಿಕ್ಕದಾಗಿ ಉದ್ದವಾಗಿ ಬೆಳೆಯುವುದರಿಂದ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆಯಿದೆ. ಬೆಳಗಾವಿ ಮಾರುಕಟ್ಟೆಗೆ ಬುಟ್ಟಿಯಲ್ಲಿ ತುಂಬಿ ಮಾರಾಟ ಮಾಡುತ್ತಾರೆ.ಇನ್ನು ಸಾಯಂಕಾಲ ಸಮಯ ಸವತೆ ಬಳ್ಳಿಗೆ ಹೊಗೆಯನ್ನು ಹಾಕಲಾಗುತ್ತದೆ.ಇದರ ಪರಿಣಾಮ ಹೆಚ್ಚು ಹೂ ಬಿಡುವುದು ಹಾಗೂ ಬಿಟ್ಟ ಹೂಗಳೆಲ್ಲ ಫಲ ನೀಡುವವು ಎನ್ನುತ್ತಾರೆ.