
ಸಮಗ್ರ ಪದ್ಧತಿಯಲ್ಲಿ ಕೃಷಿ ಬೇಸಾಯ ಮಾಡಿ ಆರ್ಥಿಕ ಸ್ವಾವಲಂಬಿ ಹೊಂದುವ ದಿಕ್ಕಿನಲ್ಲಿ ಹೆಜ್ಜೆ ಹಾಕಿರುವ ಪದವೀಧರ ಯುವ ಪ್ರಗತಿಪರ ರೈತ ದಯಾನಂದ (27) ಕೃಷಿ ಕ್ಷೇತ್ರವನ್ನೇ ಉದ್ದಿಮೆಯನ್ನಾಗಿಸಿ ಯುವಸಮುದಾಯಕ್ಕೆ ಮಾದರಿಯಾಗಿದ್ದಾರೆ.

ಹುಣಸೂರು ತಾಲ್ಲೂಕು ಉಯಿಗೌಂಡನಹಳ್ಳಿ ಗ್ರಾಮದ ಪದವೀಧರ ಯುವ ಪ್ರಗತಿಪರ ರೈತ ದಯಾನಂದ, ತಂದೆಯೊಂದಿಗೆ ಬೇಸಾಯದಲ್ಲಿ ತೊಡಗಿ ಉದ್ದಿಮೆಯನ್ನಾಗಿ ಬೆಳೆಸುವ ಹಂಬಲ ಇವರ ಬತ್ತಳಿಕೆಯಲ್ಲಿ ಇತ್ತಾದರೂ ಅದೃಷ್ಠ ಇವರ ಪಾಲಿಗಿಲ್ಲದೆ ತಂದೆಯನ್ನು ಕಳೆದು ಕೊಂಡು ಕುಟುಂಬದ ಜವಾಬ್ದಾರಿ ಹೊತ್ತರು. ಕೃಷಿಯನ್ನೇ ನಂಬಿ ಹೊಸ ಬದುಕು ಕಟ್ಟಿಕೊಂಡು, ಆರಂಭದಲ್ಲಿ ಹಲವು ಸವಾಲು ಎದುರಿಸಿದರು. ಕೃಷಿಯನ್ನೇ ಉದ್ದಿಮೆಯನ್ನಾಗಿಸಿ ವರ್ಷದ ಎಲ್ಲಾ ತಿಂಗಳು ಆರ್ಥಿಕ ಚಟುವಟಿಕೆ ನಡೆಸುವ ಮಾದರಿ ಯುವ ಪ್ರಗತಿಪರ ರೈತರಾಗಿ ಹೊರ ಹೊಮ್ಮಿ ಸಾಧನೆ ಮಾಡಿದ್ದಾರೆ.
ಕುಟುಂಬದ 6 ಎಕರೆ 20 ಗುಂಟೆ ಭೂಮಿಯಲ್ಲಿ ಮೂರು ಕೊಳವೆ ಬಾವಿ ಇದ್ದು, ತೋಟಗಾರಿಕೆ, ಜೊತೆಗೆ ತರಕಾರಿ ಬೇಸಾಯ ಮಾಡುವ ಇವರು ನಷ್ಟ ಮುಕ್ತ ಬೇಸಾಯ ತಮ್ಮದಾಗಿಸಿಕೊಂಡಿದ್ದಾರೆ.6 ಎಕರೆ 20 ಗುಂಟೆಯಲ್ಲಿ 2 ಸಾವಿರ ಅಡಿಕೆ ಅದರ ಮಧ್ಯೆ 11 ಸಾವಿರ ಬಾಳೆ, 100 ತೆಂಗಿನ ಮರ ಹೊಂದಿದ್ದು, ಇದರೊಂದಿಗೆ 1 ಎಕರೆ 20 ಗುಂಟೆ ಖಾಲಿ ಭೂಮಿಯನ್ನು ತರಕಾರಿ ಬೇಸಾಯಕ್ಕೆ ಕಾದಿಟ್ಟು ರಾಸಾಯನಿಕ ಮುಕ್ತ ಬೇಸಾಯಕ್ಕೆ ಒತ್ತು ನೀಡಿ ವರ್ಷದ ಎಲ್ಲಾ ತಿಂಗಳು ತರಕಾರಿ ಬೆಳೆದು ಆರ್ಥಿಕ ಸಮತೋಲನ ಕಾದುಕೊಳ್ಳುವಲ್ಲಿ ಯಶ ಕಂಡಿದ್ದಾರೆ.

ತರಕಾರಿ: 1 ಎಕರೆ 20 ಗುಂಟೆ ವಿಸ್ತೀರ್ಣದಲ್ಲಿ ಏಪ್ರಿಲ್ ಮತ್ತು ಡಿಸೆಂಬರ್ ತಿಂಗಳಲ್ಲಿ ಸೌತೆಕಾಯಿ ಬೆಳೆದು ಕನಿಷ್ಠ ₹ 20 ರಿಂದ ₹ 23 ಸಾವಿರ ಟನ್ ಗೆ ಸೌತೆಕಾಯಿ ಮಾರಾಟ ಮಾಡುವರು. ಈ ಬೆಳೆಯಲ್ಲಿ ಖರ್ಚು ಕಳೆದ ₹ 2 ಲಕ್ಷ ಲಾಭ ಸಿಗಲಿದೆ ಎನ್ನುವರು. ಸೌತೆ ಬೆಳೆದ ಸ್ಥಳದಲ್ಲೇ ಟೊಮೆಟೋ ಬೆಳೆಯುವ ಇವರು, 2023 ರಲ್ಲಿ 12 ಲಕ್ಷ ಲಾಭ ಸಿಕ್ಕಿತ್ತು ಎನ್ನುವರು.
ತೋಟಗಾರಿಕೆ ಬೇಸಾಯದಲ್ಲಿ ಅಡಿಕೆ 1 ಸಾವಿರ ಮರ ಕಳೆದ ಸಾಲಿನಿಂದ ಫಸಲು ಬಿಡುತ್ತಿದ್ದು 6 ಟನ್ ಅಡಿಕೆ ₹3.50 ಲಕ್ಷಕ್ಕೆ ಮಾರಾಟವಾಗಿದೆ, ಎಳನೀರು ಮಾರಾಟ ಮಾಡುವ ಇವರು ವಾರ್ಷಿಕ 6 ರಿಂದ 7 ಬಾರಿ ಕಠಾವು ಮಾಡಿ ಕನಿಷ್ಠ ₹ 30 ಗೆ ಎಳನೀರು ಮಾರಾಟ ಮಾಡುತ್ತೇನೆ ಎನ್ನುವರು. ಇದರೊಂದಿಗೆ ಹೈನುಗಾರಿಕೆಯಲ್ಲೂ ಸೈ ಎನಿಸಿಕೊಂಡ ದಯಾನಂದ, ಎರಡು ರಾಸು ಸಾಕಾಣಿಕೆ ಮಾಡುತ್ತಿದ್ದಾರೆ. ಪ್ರತಿ ದಿನ 10 ಲೀ ಹಾಲು ಡೈರಿಗೆ ಹಾಕುತ್ತಿದ್ದಾರೆ.
ಜೇನುಸಾಕಾಣಿಕೆ: ತೋಟಗಾರಿಕೆಗೆ ಪೂರಕವಾದ ಜೇನು ಸಾಕಾಣಿಕೆಯಲ್ಲೂ ಮುಂಚೂಣಿಯಲ್ಲಿದ್ದು, ತೋಟಗಾರಿಕೆ ಇಲಾಖೆಯಿಂದ 5 ಪೆಟ್ಟಿಗೆ ಹಾಗೂ ಜೇನು ಹುಳು ಪಡೆದು ಸಾಕಣೆ ಮಾಡುತ್ತಿದ್ದಾರೆ. ಬಂಡವಾಳ ಕಡಿಮೆ, ಲಾಭ ಹೆಚ್ಚು ಎನ್ನುವ ಇವರು, ಈ ತನಕ 2 ಕೊಯ್ಲು ಮಾಡಿದ್ದಾರೆ. ಜೇನು ಸಾಕಾಣಿಕೆ ಪ್ರತಿಯೊಂದು ತೋಟದಲ್ಲಿ ಸಾಕಾಣಿಕೆ ಮಾಡುವುದರಿಂದ ಪರಾಗಸ್ಪರ್ಶ ಉತ್ತಮವಾಗಿ ನಡೆದು ತೋಟಗಾರಿಕೆ ಬೆಳೆಯಲ್ಲಿ ಇಳುವರಿ ವೃದ್ಧಿಯಾಗಲಿದೆ ಎನ್ನುವರು.
































