ನುರಿತ ವಿಸ್ತರಣಾ ಕಾರ್ಯಕರ್ತರ ಕೊರತೆಯೇ ಕೃಷಿ ಅಭಿವೃದ್ಧಿಗೆ ಅಡ್ಡಿಯೇ ?

0
ಲೇಖಕರು: ಡಾ. ಬಿ.ಎಸ್. ಹರೀಶ್

ಕೃಷಿ ಉತ್ಪಾದಕತೆ ಹಾಗೂ ನಿವ್ವಳ ಲಾಭ ಹೆಚ್ಚಿಸುವಲ್ಲಿನ ದೊಡ್ಡ ತೊಡಕು ವಿಶ್ವಾಸಾರ್ಹ ಹಾಗೂ ಗ್ರಾಹಕೀಕೃತ ಕೃಷಿ ವಿಸ್ತರಣಾ ವ್ಯವಸ್ಥೆಯ ಅನುಪಸ್ಥಿತಿಯೆಂದರೆ ತಪ್ಪಾಗಲಾರದು. ಉತ್ತಮ ತಂತ್ರಜ್ಞಾನಗಳ ಲಭ್ಯತೆ ಇದ್ದರೂ ಸಹ, ಸಮಸ್ಯೆಯಿರುವುದು ಅವುಗಳನ್ನು ಅವಶ್ಯವಿರುವಾಗ ಅವಶ್ಯವಿರುವ ಗ್ರಾಮೀಣ ಕೃಷಿಕರಿಗೆ ತಲುಪಿಸಲು ಇಚ್ಛಾಶಕ್ತಿಯಿಲ್ಲದ ವಿಸ್ತರಣಾ ಕಾರ್ಯಕರ್ತರ ಅಲಭ್ಯತೆ.

ತೋಟಗಾರಿಕೆ ತಂತ್ರಜ್ಞಾನ ವಿಸ್ತರಣೆಯಲ್ಲಿನ ದಶಕಕ್ಕೂ ಮಿಗಿಲಾದ ನನ್ನ ಸ್ವಾನುಭವ ಕಷ್ಟವೆನಿಸಿದರೂ, ನನಗೆ ವೈಯಕ್ತಿಕವಾಗಿಯೂ ವೃತ್ತಿಪರವಾಗಿಯೂ ಹೆಚ್ಚಿನ ಸಂತೃಪ್ತಿ ತಂದಿದೆ. ನಿಸ್ಸಂದೇಹವಾಗಿ ಕೃಷಿ ವಿಸ್ತರಣೆ ಅಷ್ಟು ಸುಲಭದ ಕೆಲಸವಲ್ಲ. ಕೃಷಿ ಪದವಿ ಪಡೆದು ವಿಸ್ತರಣೆಯಲ್ಲಿ ತೊಡಗಿಕೊಂಡವರು ತೀರಾ ಗಂಭೀರವಾಗಿ ತೆಗೆದುಕೊಂಡು ನಿರ್ವಹಿಸಬೇಕಾದ ಕೆಲಸ ವಿಸ್ತರಣೆ. ಕೃಷಿ ತಂತ್ರಜ್ಞಾನ ವರ್ಗಾವಣೆಯ ಒಳ-ಹೊರಗಿನ ಸೂಕ್ಷö್ಮ ತಿಳಿಯಬೇಕೆಂದರೆ ಬೇಕಾಗುವ ಮೂಲಭೂತ ಅವಶ್ಯಕತೆ ಕೃಷಿಕರೊಟ್ಟಿಗಿರುವುದು, ಅವರ ಕೃಷಿ ಚಟುವಟಿಕೆಗಳನ್ನು ಸೂಕ್ಷö್ಮವಾಗಿ ಗಮನಿಸುವುದು, ಅವರಿಗೆ ಅಗತ್ಯವಿರುವಾಗ ಬೇಕಾದ ರೀತಿಯಲ್ಲಿ ಸ್ಪಂದಿಸುವುದು; ಎಲ್ಲಕ್ಕಿಂತ ಹೆಚ್ಚಾಗಿ ಅವರೊಟ್ಟಿಗೆ ಅವರಂತೆಯೇ ಆಗುವುದಾಗಿದೆ.

ತೋಟಗಾರಿಕೆ ತಂತ್ರಜ್ಞಾನಗಳ ವರ್ಗಾವಣೆಯ ಒಂದು ದಶಕಕ್ಕೂ ಹೆಚ್ಚಿನ ನನ್ನ ಅನುಭವಗಳ ಒಂದು ಪುಟ್ಟ ಪ್ರಯತ್ನ ಇದಾಗಿದೆ. ಬಹಳಷ್ಟು ಕೃಷಿ ವಿಜ್ಞಾನ ಪದವೀದರರು ಕೃಷಿ ವಿಸ್ತರಣೆಯನ್ನು ವೃತ್ತಿಯನ್ನಾಗಿ ಸ್ವೀಕರಿಸಲು ಹಿಂಜರಿಯುವುದೇ ಹೆಚ್ಚು; ಆದರೆ ಅದನ್ನೇ ಆಯ್ದುಕೊಂಡು ಮುಂದುವರೆದರೆ ಗರಿಷ್ಠ ಕಲಿಕೆಯ ಹಾಗೂ ಸೇವಾ ಸಂತೃಪ್ತಿಯ ಅವಕಾಶ ಹೆಚ್ಚಿರುತ್ತದೆಯೆಂಬುದು ನನ್ನ ಅನುಭವದ ಮಾತು. ಗ್ರಾಮೀಣ ಪ್ರದೇಶಗಳಲ್ಲಿ ಅಂತಹ ವಿಸ್ತರಣಾ ಸೇವೆ ಮಾಡುವವರು ಗರಿಷ್ಠ ಸಂಖ್ಯೆಯಲ್ಲಿ ಅವಶ್ಯವಿರುವುದು ಇಂದಿನ ತುರ್ತು.

ಸಮಸ್ಯೆಯನ್ನು ಹೇಳಿಕೊಳ್ಳಬಹುದಾದ ರೋಗಿಯೊಬ್ಬನ ರೋಗವನ್ನು ಸುಲಭವಾಗಿ ಗುಣಪಡಿಸಬಹುದು; ರೋಗಪೀಡಿತ ಗಿಡ ಅಥವಾ ಬೆಳೆಯ ಸಮಸ್ಯೆಯನ್ನು ಅರ್ಥೈಸಿಕೊಂಡು ಉಪಚರಿಸಿ ಗುಣಪಡಿಸುವುದು ಅಷ್ಟು ಸುಲಭದ ಕೆಲಸವಲ್ಲ. ಕಾರಣ ನಮಗೆ ಸಸ್ಯಗಳ ಭಾಷೆ ಹಾಗೂ ಪರಿಭಾಷೆ ಅಷ್ಟಾಗಿ ತಿಳಿಯದಿರುವುದು. ಬೆಳೆಗಳೂ ಸಹ ತಮ್ಮ ಭಾವನೆಗಳನ್ನು, ನೋವನ್ನು, ಕಷ್ಟವನ್ನು ವ್ಯಕ್ತಪಡಿಸುತ್ತವೆ; ದುರಂತವೆAದರೆ ಅವುಗಳ ಪರಿಭಾಷೆಯನ್ನು ಕೃಷಿ ಪದವೀದರರಿಗೆ ಅರ್ಥೈಸುವಂತೆ ಹೇಳಿಕೊಡುವ ಕೃಷಿ ಶಿಕ್ಷಣ ವ್ಯವಸ್ಥೆ ನಮ್ಮಲ್ಲಿಲ್ಲದಿರುವುದು.

ವ್ಯಕ್ತಿಯೊಬ್ಬನಿಗೆ ರೋಗ ಬಂದರೆ ಅವನು ವೈದ್ಯರ ಬಳಿ ಹೋದ ನಂತರವೇ ಔಷಧ ತೆಗೆದುಕೊಳ್ಳುವುದು ವಾಡಿಕೆ. ಆದರೆ, ಬೆಳೆ ಅಥವಾ ಗಿಡಗಳ ವಿಷಯದಲ್ಲಿ ನಡೆಯುತ್ತಿರುವುದು ನಮ್ಮಲ್ಲಿ ಬೇರೆಯದೇ ಇದೆ. ವಿಸ್ತರಣಾಧಿಕಾರಿಗಳು ಅಥವಾ ತಜ್ಞರು ಕ್ಷೇತ್ರ ಭೇಟಿ ಮಾಡಿ ಶಿಫಾರಸು ಮಾಡಿದ ನಂತರವೇ ಮುಂದಿನ ಕ್ರಮ ತೆಗೆದುಕೊಳ್ಳಬೇಕು. ದುರಂತವೆAದರೆ ಎಷ್ಟು ಜನ ವಿಸ್ತರಣಾಧಿಕಾರಿಗಳು ಅಥವಾ ತಜ್ಞರು ಗ್ರಾಮೀಣ ಪ್ರದೇಶದ ರೈತರ ತಾಕುಗಳಿಗೆ ಭೇಟಿ ನೀಡಿ ಶಿಫಾರಸು ಕೊಟ್ಟಾರು?.

 ಸಮಸ್ಯೆಯನ್ನು ನಿಜವಾಗಿ ಅರಿಯಬೇಕೆಂದಾದರೆ ಕ್ಷೇತ್ರ ಭೇಟಿ ಮಾಡಲೇಬೇಕಾಗುವುದು ಅನಿವಾರ್ಯ. ಅಂತಹ ಭೇಟಿಗಳಿಂದ ಸಾಕಷ್ಟು ಕಲಿಕಾ ಅವಕಾಶಗಳಿದ್ದರೂ ಸಹ, ಬಹುಪಾಲು ಕೃಷಿ ವಿಸ್ತರಣಾ ಕಾರ್ಯಕರ್ತರು/ತಜ್ಞರಿಗೆ ಹಾಗೆ ಮಾಡಲು ಒಲ್ಲದ ಮನಸು. ನನ್ನ ಪ್ರಾಯೋಗಿಕ ಕಲಿಕೆಗೆ ಮೂಲ ಕಾರಣ ರೈತರೆಂದು ಹೇಳಲು ಹೆಮ್ಮೆ ಎನಿಸುತ್ತದೆ. ಜೊತೆಗೆ ಆಯಾ ವಿಷಯಗಳ ಪರಿಣತರೊಂದಿಗಿನ ನಿರಂತರ ಒಡನಾಟ ಹಾಗೂ ಚರ್ಚೆ.

ಉತ್ತಮ ಕೃಷಿ ವಿಸ್ತರಣಾ ಕಾರ್ಯಕರ್ತನಾಗಲು ಬೇಕಿರುವ ಮೂಲಭೂತ ಅಂಶವೆದರೆ, ನಿರ್ಬಂಧರಹಿತವಾಗಿ ಸೇವೆ ನೀಡಲು ಸಿದ್ಧರಿರುವುದು ಹಾಗೂ ಕೃಷಿಕರ ಸಮಸ್ಯೆಗಳಿಗೆ ಕಿವಿಯಾಗುವುದು. ಕೃಷಿ ವಿಸ್ತರಣೆಯಲ್ಲಿ ತೊಡಗಿರುವ ಬಹಳಷ್ಟು ಜನರಿಗೆ ಕೃಷಿಕರ ಸಮಸ್ಯೆಗಳನ್ನು ಆಲಿಸುವಷ್ಟು ತಾಳ್ಮೆ ಇಲ್ಲದಿರುವುದು ಬಹುದೊಡ್ಡ ಋಣಾತ್ಮಕ ಅಂಶ. ವಿಸ್ತರಣೆಯಲ್ಲಿ ತೊಡಗಿರುವ ವೃತ್ತಿಪರರಿಗೆ ಇರಬೇಕಾದ ಮೂಲಭೂತ ಗುಣ, ಆಲಿಸುವಿಕೆ.

ಮತ್ತೊಂದು ಮುಖ್ಯ ಅಂಶವೆAದರೆ, ಕ್ಷೇತ್ರ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಒಂದಷ್ಟು ಹೆಚ್ಚಿನ ಜವಾಬ್ದಾರಿ ತೆಗೆದುಕೊಳ್ಳುವುದು ಹಾಗೂ ಕೃಷಿಕರ ನಿರೀಕ್ಷೆಗೆ ತಕ್ಕಂತೆ ಸಮಯಕ್ಕೆ ಸರಿಯಾಗಿ ಸ್ಪಂದಿಸುವುದು. ಯಾವುದೇ ಸಂದರ್ಭದಲ್ಲೂ ಸುಳ್ಳು ಅಥವಾ ತಪ್ಪು ಮಾಹಿತಿ ನೀಡದೇ ಇರುವುದು ಅತಿ ಮುಖ್ಯ ವಿಚಾರ. ಸಮಸ್ಯೆಗೆ ಸೂಕ್ತ ಪರಿಹಾರ ತಿಳಿಯದಿದ್ದ ಪಕ್ಷದಲ್ಲಿ, ಯಾವುದೇ ಶಿಫಾರಸನ್ನು ಆ ಕೂಡಲೇ ನೀಡಬಾರದು; ಅದರ ಅನುಷ್ಠಾನಕ್ಕೆ ಕೃಷಿಕರು ಅದೆಷ್ಟೋ ಹಣ ವ್ಯಯಿಸಬೇಕಾಗಿರುತ್ತದೆ. ಕೊಟ್ಟ ಶಿಫಾರಸು ತಪ್ಪಾಗಿದ್ದಲ್ಲಿ, ಕೃಷಿಕರಿಗೆ ಎರಡು ಬಗೆಯ ನಷ್ಟ; ಒಂದು ಸಮಸ್ಯೆ ಬಗೆಹರಿಯದೇ ಇರುವುದು; ಮತ್ತೊಂದು ಅನಾವಶ್ಯಕವಾಗಿ ಹಣ ವ್ಯಯ.

ಸಮಸ್ಯೆ ಗುರುತಿಸುವುದೇ ಅತೀ ಮಹತ್ವದ ಅಂಶ. ಅದರ ಹೊರತಾಗಿ ನೀಡುವ ಯಾವುದೇ ಶಿಫಾರಸ್ಸು ಪ್ರಯೋಜನಕ್ಕೆ ಬಾರದು. ಬಹಳಷ್ಟು ವಿಸ್ತರಣಾ ಕಾರ್ಯಕರ್ತರು ತಪ್ಪು ಮಾಡುವುದು ಈ ಹಂತದಲ್ಲೇ. ಅನುಮಾನವಿದ್ದಲ್ಲಿ ಪರಿಣಿತರನ್ನು ಸಂಪರ್ಕಿಸಿ, ಪರೀಕ್ಷಿಸಿ, ಸಮಸ್ಯೆ ಏನೆಂದು ಖಾತ್ರಿಪಡಿಸಿಕೊಂಡು ನಂತರ ಸೂಕ್ತ ಸಲಹೆ ನೀಡಬೇಕು. ಹಾಗಾದಲ್ಲಿ ಮಾತ್ರ ಸಮಸ್ಯೆ ಬಗೆಹರಿದು ಕೃಷಿಕರಿಗೆ ವಿಸ್ತರಣಾಧಿಕಾರಿಗಳ ಬಗೆಗಿನ ವಿಶ್ವಾಸಾರ್ಹತೆ ಹೆಚ್ಚಲು ಸಾಧ್ಯ. ಕೊಡುವ ಶಿಫಾರಸಿನಿಂದ ಕೃಷಿಕನಿಗೆ ಅಥವಾ ಕೃಷಿ ಪರಿಸರಕ್ಕೆ ಮಾರಕವಾಗಿರಬಾರದು; ಸುಲಭವಾಗಿ ಅನುಷ್ಠಾನ ಮಾಡಲು ಬರುವಂತಿರಬೇಕು,

ಬಹು ಮುಖ್ಯವಾಗಿ ಸಮಸ್ಯೆಯನ್ನು ಅತಿ ಶೀಘ್ರವಾಗಿ ಬಗೆಹರಿಸುವಂತಿರಬೇಕು. ಎಕರೆವಾರು ಉತ್ಪಾದಕತೆ ಹೆಚ್ಚಿಸಿ ಕಡಿಮೆ ಸಮಯದಲ್ಲಿ ಹೆಚ್ಚಿನ ನಿವ್ವಳ ಲಾಭ ತರುವಂತಿರಬೇಕಲ್ಲದೆ ಸಲಹೆ/ಶಿಫಾರಸ್ಸು ಸುಸ್ಥಿರವಾಗಿರಬೇಕು. ವಾಸ್ತವದಲ್ಲಿ ಬಹಳಷ್ಟು ವಿಸ್ತರಣಾಧಿಕಾರಿಗಳು/ತಜ್ಞರು ಸಮಸ್ಯೆ ಪತ್ತೆ ಹಚ್ಚದೆಯೇ ಸಲಹೆ ನೀಡುತ್ತಿರುವುದು ವೃತ್ತಿಧರ್ಮಕ್ಕೆ ವಿರುದ್ಧವಾಗಿರುವ ಪ್ರಕ್ರಿಯೆಯಾಗಿದೆ. ಹೀಗೆ ನೀಡುವ ಸಲಹೆಗಳನ್ನು ಪಾಲಿಸಿಯೂ ಸಮಸ್ಯೆಗಳು ಬಗೆಹರಿಯದಿದ್ದರೆ ವಿಶ್ವಾಸಾರ್ಹತೆ ಕಡಿಮೆಯಾಗುವುದು ಅಥವಾ ಕಳೆದೇ ಹೋಗುವುದು.

 ಪ್ರತೀ ಮನುಷ್ಯನೂ ಹೇಗೆ ಭಿನ್ನವೋ ಹಾಗೆಯೇ ಪ್ರತಿ ಕೃಷಿಕನೂ ಹಾಗೂ ಅವನ ಕೃಷಿ ಕ್ಷೇತ್ರವೂ ಸಹ ಭಿನ್ನ. ಸಾರ್ವತ್ರಿಕವಾಗಿ ಶಿಫಾರಸ್ಸು ಮಾಡಲಾಗಿರುವ ವಿಷಯಗಳು/ತಂತ್ರಜ್ಞಾನಗಳು ಒಂದೇ ಬೆಳೆ ಬೆಳೆಯುತ್ತಿರುವ ಎಲ್ಲ ಕೃಷಿಕರಿಗೂ ಬಹಳಷ್ಟು ಸಲ ಅನ್ವಯವಾಗುವುದಿಲ್ಲ. ಶಿಫಾರಸು/ಸಲಹೆಗಳನ್ನು ಅವಶ್ಯಕತೆಗೆ ತಕ್ಕಂತೆ ಮಾರ್ಪಾಡು ಮಾಡಿ ವೈಯಕ್ತೀಕರಿಸಿ ಕೊಡುವಲ್ಲಿ ಇಡೀ ವಿಸ್ತರಣಾ ವ್ಯವಸ್ಥೆಯೇ ಬಹುತೇಕ ವೈಪಲ್ಯಗೊಂಡಿರುವುದು ದುರದೃಷ್ಟಕರ ಸಂಗತಿ.

ಕೊಡಮಾಡುವ ಸಲಹೆ/ಶಿಫಾರಸ್ಸು ಅನುಷ್ಠಾನಗೊಳಿಸಲು ತಗಲಬಹುದಾದ ವೆಚ್ಚ ಎಷ್ಟಾಗಬಹುದೆಂಬ ಅರಿವು ಸಲಹೆ ನೀಡುವವರಿಗೆ ಇರಬೇಕಾದ್ದು ಮೂಲಭೂತ ಅವಶ್ಯಕತೆ. ವಾಸ್ತವದಲ್ಲಿ ಸಲಹೆ ನೀಡುವವರು ಇದರ ಬಗೆಗೆ ಹೆಚ್ಚಿನ ಗಮನ ನೀಡುವುದೇ ಇಲ್ಲ. ಬಹಳಷ್ಟು ಸಲ ಅತೀ ವೆಚ್ಚದಾಯಕ ಸಲಹೆ ನೀಡಿದರೆ ಮಾತ್ರ ಅಂತಹ ತಜ್ಞರು ಹೆಚ್ಚು ಪರಿಣತರೆಂದು ಕೃಷಿಕರು ಭಾವಿಸುತ್ತಾರೆ ಎಂಬ ವಿಸ್ತರಣಾ ಕಾರ್ಯಕರ್ತರ ನಂಬಿಕೆ. ಅಳವಡಿಸಲು ತೀರಾ ಕಷ್ಟಕರ ಅಥವಾ ಪ್ರಾಯೋಗಿಕವಲ್ಲದ ಸಲಹೆಗಳನ್ನು ನೀಡದಿರುವುದೇ ಉತ್ತಮ. ವೃತ್ತಿಪರರಾಗಿ ವೆಚ್ಚದಾಯಕ ಸಲಹೆಗಳು ಅನಿವಾರ್ಯವೋ ಇಲ್ಲವೋ ಎಂಬುದನ್ನು ನಿರ್ಧರಿಸುವಲ್ಲಿ ಎಚ್ಚರವಹಿಸಬೇಕಾದ ಅನಿವಾರ್ಯತೆಯಿದೆ.

ಅನೇಕ ಕ್ಷೇತ್ರ ಸಮಸ್ಯೆಗಳು ಕೀಟ/ರೋಗಗಳಿಗೆ ಸಂಬAಧಿಸಿರುತ್ತವೆ, ಅಂತಹ ಸಂದರ್ಭದಲ್ಲಿ ಕೇವಲ ರಾಸಾಯನಿಕ ವಿಧಾನಗಳನ್ನು ಮಾತ್ರ ಶಿಫಾರಸು ಮಾಡುತ್ತಿರುವುದು ನಿಜಕ್ಕೂ ಪ್ರಶ್ನಾರ್ಹ. ಸಮಗ್ರ ನಿರ್ವಹಣಾ ಕ್ರಮಗಳನ್ನು ಅಭ್ಯಸಿಸಿದ್ದರೂ ಸಹ, ಅದರ ಅಳವಡಿಕೆಗೆ ಮಹತ್ವ ನೀಡುವುದೇ ಇಲ್ಲ.

ಪ್ರಸ್ತುತ ವಿಸ್ತರಣಾ ಕಾರ್ಯಕರ್ತರ ಮತ್ತೊಂದು ಮೂಲಭೂತ ಸಮಸ್ಯೆಯೆಂದರೆ ಇತ್ತೀಚಿಗೆನ ಕೃಷಿ ವಿಜ್ಞಾನ-ತಂತ್ರಜ್ಞಾನ ಕ್ಷೇತ್ರದ ಬೆಳೆವಣಿಗೆಗಳನ್ನು ಗಮನಸಿಸದೇ ಇರುವುದು ಹಾಗೂ ಆಗಾಗ ಅವುಗಳ ಕುರಿತು ಅಪ್ಡೇಟ್ ಆಗದೇ ಇರುವುದು. ಇದಕ್ಕಿಂತಲೂ ವಿಷಾದವೆಂದರೆ ಕೆಲವು ಸಲ ನಿಷೇಧಿಸಲಾದ ಶಿಫಾರಸ್ಸುಗಳನ್ನು ನೀಡುವುದು. ವೃತ್ತಿಪರರಾಗಿ ಇದು ಸಮ್ಮತವಲ್ಲ.

ಕೃಷಿಕರೊಂದಿಗೆ ಪ್ರಜ್ಞಾಪೂರ್ವಕವಾಗಿ ಒಡನಾಡಿದರೆ ಸಾಕು ಅದೆಷ್ಟೋ ವಿಚಾರಗಳು ತಿಳಿಯುತ್ತಾ-ಹೊಳೆಯುತ್ತಾ ಹೋಗುತ್ತವೆ. ಆದರೆ, ಬಹಳಷ್ಟು ಸಲ, ನಾವು ಹಾಗೆ ಮಾಡಲಾರೆವು. ಅವರ ಅರಿವಿಗೆ ಬಾರದೆಯೇ ಅವರು ನಮ್ಮ ಜ್ಞಾನವೃದ್ಧಿ ಮಾಡುತ್ತಲೇ ಹೋಗುತ್ತಾರೆ. ಅದಕ್ಕಾಗಿ ವಿಸ್ತರಣಾ ಕಾರ್ಯಕರ್ತರು/ತಜ್ಞರು ಕೃಷಿಕರಿಗೆ ಕೃತಜ್ಞರಾಗಿರಬೇಕು. ಇಂದಿನ ಅನೇಕ ಪ್ರಗತಿಪರ ರೈತರೊಂದಿಗಿನ ನಿರಂತರ ಚರ್ಚೆಯಿಂದ ಸಿಗಬಹುದಾದ ಜ್ಞಾನ ನೂರಾರು ಪುಸ್ತಕಗಳನ್ನು ಓದಿದರೂ ಸಿಗದು.

ಕೃಷಿಕರ ಸಮಸ್ಯೆಗಳನ್ನು ಮೂಲದಲ್ಲಿ ಅರಿಯಲು ಅವರ ಮಟ್ಟಕ್ಕೆ ವಿಸ್ತರಣಾ ಕಾರ್ಯಕರ್ತರು ಇಳಿಯಬೇಕು; ಅಲ್ಲದೇ, ಕೃಷಿಕರು ನೋಡುವ ದೃಷ್ಟಿಕೋನದಲ್ಲಿ ಅವರ ಸಮಸ್ಯೆಗಳನ್ನು ನೋಡಬೇಕಾದ ಅನಿವಾರ್ಯತೆ ಇದೆ. ಹಾಗೆ ಮಾಡಲಾಗದಿದ್ದಲ್ಲಿ, ಅವರ ಸಮಸ್ಯೆಗಳಿಗೆ ಸೂಕ್ತವಾದ ಪ್ರಾಯೋಗಿಕ ಮತ್ತು ಅಳವಡಿಸಲು/ಅನುಷ್ಠಾನಗೊಳಿಸಲು ಸುಲಭವಾದ ಸಲಹೆ/ಶಿಫಾರಸ್ಸು ನೀಡುವುದು ಬಹುತೇಕ ಕಷ್ಟಸಾಧ್ಯ.

ಸಲಹೆ/ಶಿಫಾರಸ್ಸು ನೀಡಿ ಸುಮ್ಮನಾಗಿಬಿಡುವುದು ಬಹಳಷ್ಟು ತಜ್ಞರ/ವಿಸ್ತರಣಾ ಕಾರ್ಯಕರ್ತರ ಪದ್ಧತಿ. ಕೊಟ್ಟ ಸಲಹೆ-ಶಿಫಾರಸಿನ ಬಗೆಗೆ ಹಿಮ್ಮಾಹಿತಿ ಪಡೆಯದೇ ಇರುವುದೂ ಸಹ ವೃತ್ತಿಪರತೆಯ ಲಕ್ಷಣವಲ್ಲ. ಈ ಒಂದು ಪ್ರಮುಖ ಅಂಶ, ವೃತ್ತಿಪರರು ತಮ್ಮ ಕೌಶಲ್ಯ/ಜ್ಞಾನವನ್ನು ನಿಜವಾಗಿಯೂ ಪರೀಕ್ಷಿಸಲು ಇರುವ ಸದವಕಾಶ. ಇದರಿಂದ ಸಮಸ್ಯೆ ಕುರಿತ ನಮ್ಮ ಜ್ಞಾನವನ್ನು ಹೆಚ್ಚಿಸಿಕೊಂಡು ಅದನ್ನು ಆಮೂಲಾಗ್ರವಾಗಿ ಪರಿಹರಿಸಲು ಸಹಕಾರಿಯಾಗುತ್ತೆಂಬುದು ಗಮನಾರ್ಹ. ತಪ್ಪುಗಳನ್ನು ತಿದ್ದಿಕೊಳ್ಳಲೂ ಹಿಮ್ಮಾಹಿತಿ ಪಡೆಯುವುದು ಅನಿವಾರ್ಯ.

ಕೃಷಿ ಕ್ಷೇತ್ರ ನಿಂತ ನೀರಲ್ಲ; ಅದು ಸ್ಥಾವರವಲ್ಲ, ಜಂಗಮನAತೆ. ಬದಲಾಗುತ್ತಲೇ ಇರುತ್ತದೆ. ಕೃಷಿ/ತೋಟಗಾರಿಕೆ ವೃತ್ತಿಪರರು, ಕೃಷಿ ವಿಸ್ತರಣೆಯಲ್ಲಿ ತೊಡಗಿಸಿಕೊಳ್ಳಬೇಕೆನ್ನುವವರು ಅಥವಾ ಅದನ್ನೇ ವೃತ್ತಿಯಾಗಿ ಆಯ್ಕೆ ಮಾಡಿಕೊಳ್ಳಬೇಕೆನ್ನುವವರು ಈ ಅಂಶವನ್ನು ಗಮನಿಸಿ, ಅದರಂತೆ, ಅದೇ ವೇಗದಲ್ಲಿ ತಾವೂ ಬದಲಾಗಬೇಕಿರುವುದು ತೀರಾ ಅನಿವಾರ್ಯ. ಇಲ್ಲವಾದಲ್ಲಿ, ಈ ವೃತ್ತಿಯನ್ನು ಆಯ್ಕೆ ಮಾಡಿಕೊಳ್ಳದಿರುವುದೇ ಉತ್ತಮ.

ಸಸ್ಯದ/ಬೆಳೆಯ ಭಾಷೆಯನ್ನು ಅರ್ಥೈಸಿಕೊಂಡAತೆ, ಕೃಷಿಕನ ಭಾಷೆ-ಪರಿಭಾಷೆಗಳನ್ನೂ ಅರಿಯಬೇಕಿದೆ. ನಮ್ಮ ಪುಸ್ತಕ ಜ್ಞಾನವನ್ನು ಒತ್ತಾಯಪೂರ್ವಕವಾಗಿ ಅವರ ಮೇಲೆ ಪ್ರಯೋಗಿಸಬಾರದು/ಹೇರಬಾರದು. ಅವರ ಸಾಂಪ್ರದಾಯಿಕ ಜ್ಞಾನಾನುಭವಗಳನ್ನು ನಾವೂ ಕಲಿಯಲೇಬೇಕು. ವೃತ್ತಿಪರರಾಗಿ ಮುಂದುವರೆಯಲು ಅದು ನಮಗೆ ತೀರಾ ಅನಿವಾರ್ಯ. ವೃತ್ತಿಪರ ಕೃಷಿ/ತೋಟಗಾರಿಕೆ ತಜ್ಞ ಇಲ್ಲವೇ ವಿಸ್ತರಣಾಧಿಕಾರಿಗಳಿಗೆ ಕೃಷಿಕರ ಹಾಗೂ ಕೃಷಿ ವಿದ್ಯಾರ್ಥಿಗಳ ಪ್ರೀತಿ ಮತ್ತು ವಿಶ್ವಾಸ ಗಳಿಸುವುದು ಧ್ಯೇಯವಾಗಬೇಕು. ಇಷ್ಟೆಲ್ಲವನ್ನೂ, ನನ್ನ ಹದಿನೈದು ವರ್ಷಗಳ ಕೃಷಿಕರ ಒಡನಾಟ ಹಾಗೂ ತೋಟಗಾರಿಕೆ ಕ್ಷೇತ್ರದ ವಿಸ್ತರಣಾ ಕೆಲಸಗಳ ಅನುಭವದ ಆಧಾರದ ಮೇಲೆ ಇಲ್ಲಿ ಅಭಿವ್ಯಕ್ತಿಸಲು ಪ್ರಯತ್ನಿಸಿದ್ದೇನೆ. ಯಾವ ವ್ಯವಸ್ಥೆಯನ್ನೂ ಅಥವಾ ವ್ಯಕ್ತಿಗಳನ್ನೂ ದೂಷಿಸುವ ಉದ್ದೇಶ ಈ ಲೇಖನದ್ದಲ್ಲ. ನನ್ನ ತೋಟಗಾರಿಕೆ ಕ್ಷೇತ್ರದ ಜ್ಞಾನಾನುಭವಗಳಿಗೆ ಕಾರಣರಾದ ನಾಡಿನ ಅಸಂಖ್ಯ ಕೃಷಿಕರಿಗೆ, ವಿಷಯ ತಜ್ಞರುಗಳಿಗೆ ಹಾಗೂ ನನಗೆ ತೋಟಗಾರಿಕೆ ವಿಜ್ಞಾನದ ಒಳ-ಹೊರಗುಗಳನ್ನು ಕಲಿಸಿದ ಗುರುಗಳಿಗೊಂದು ಶರಣು.

ಹೆಚ್ಚಿನ ಮಾಹಿತಿಗೆ”  9480557634.

LEAVE A REPLY

Please enter your comment!
Please enter your name here