ವಾಟೇಕಾಯಿ ಸೂಜು ಮೆಣಸು ಜೋಡಿಯ ಮೌಲ್ಯವರ್ಧನೆ ರುಚಿ

0
ಚಿತ್ರ-ಲೇಖನ: ನಾಗೇಂದ್ರ ಸಾಗರ್‌, ಪ್ರಗತಿಪರ ಕೃಷಿಕರು, ಸಾಗರ, ಶಿವಮೊಗ್ಗ ಜಿಲ್ಲೆ

ನಿನ್ನೆ ತೀರ್ಥಹಳ್ಳಿ ಸಮೀಪದ ಮೇಳಿಗೆಯ ಹರೀಶ ಭಟ್ಟರಲ್ಲಿಗೆ ಅವರ ತಿಂಗಳ ಕೋಟಾ ಜಾನುವಾರು ಹಿಂಡಿ ಕೊಡಲು ಹೋಗಿದ್ದೆ. ಬುಟ್ಟಿ ತುಂಬಾ ತುಂಬಿಟ್ಟುಕೊಂಡ ವಾಟೇಕಾಯಿ ಹೆಚ್ಚುತ್ತಿದ್ದರು. “ಇದೇನು ಈ ಪಾಟಿ ವಾಟೇಕಾಯಿ” ಎಂದೆ. “ನಾವು ದಿನ ಬಳಕೆಗೆ ಹುಣಸೆಗಿಂತ ವಾಟೇ ಹುಡಿಯನ್ನೇ ಹೆಚ್ಚು ಬಳಸುತ್ತೇವೆ. ಇದು ನಮಗೆ ಮಾತ್ರವಲ್ಲ ಹತ್ತಿರದ ನೆಂಟರಿಷ್ಟರಿಗೂ ಹಂಚುತ್ತೇವೆ” ಎಂದರು.
“ನಿಮಗೂ ಸ್ವಲ್ಪ ಕೊಡುತ್ತೇವೆ” ಎಂದರು. ವಾಟೇಕಾಯಿ ನೋಡಿದೊಡನೆಯೇ ನನಗೆ ವಾಣಿ ಮಾಡುವ ತೊಕ್ಕು ನೆನಪಿಸಿಕೊಂಡು ಬಾಯಲ್ಲಿ ನೀರೂರಿಯಾಗಿತ್ತು. “ಬಿಢೆ ಬಿಟ್ಟು ತೊಕ್ಕು ಮಾಡಲು ನಾಕೇ ನಾಕು ಕಾಯಿ ಕೊಡಿ ಸಾಕು” ಎಂದೆ.
“ಅರೇ ಈ ಬಾರಿ ಆ ನಮನಿ ಮಾವಿನಕಾಯಿ ಇದೆ. ಅದರದೇ ತೊಕ್ಕು ಮಾಡಬಹುದಲ್ಲ” ಎಂದರು. ಮಾವಿನಕಾಯಿ ಬಿಟ್ಟು ಅದು ಯಾವುದೇ ಕಾಯಿ ಇರಲಿ ವಾಟೇಕಾಯಿ ತೊಕ್ಕಿನ ಮಜವೇ ಬೇರೆ ಎಂದೆ.”ಅರರೇ ನಮಗಿದು ಹೊಸ ವಿಚಾರ” ಎಂದು ಹರೀಶ ಭಟ್ಟರ ಹೆಂಡತಿ ಹೇಳಿದರು. ಅಲ್ಲೇ ಇದ್ದ ಇನ್ನೊಬ್ಬ ಮಹನೀಯರು ವಾಟೇಕಾಯಿ ಚಟ್ನಿ, ಮಂದನ ಗೊಜ್ಜು ಮತ್ತು ಮೊಸರು ಗೊಜ್ಜಿನ ವಿಷಯವೆಲ್ಲಾ ಹೇಳಿ ಆ ಹೊತ್ತಿಗೆ ನನ್ನ ಜಠರಾಗ್ನಿಯನ್ನು ಕೆರಳಿಸಿ ಬಿಟ್ಟರು.
ಊರಿಗೆ ಬಂದವನೇ ಕೈ ಚೀಲದಲ್ಲಿ ಇದ್ದ ವಾಟೇಕಾಯನ್ನು ಊಟದ ಟೇಬಲ್ಲಿನ ಮೇಲೆ ವಾಣಿಯ ಕಣ್ಣಿಗೆ ಥಟ್ಟನೆ ಬೀಳುವಂತೆ ಜೋಡಿಸಿಟ್ಟೆ. “ಓಹೋ ವಾಟೇಕಾಯಿ ಬಂದಿದೆ” ಎಂದವಳು, “ಆದರೆ ಸೂಜು ಮೆಣಸೇ ಇಲ್ಲವಲ್ಲಾ, ಅದಿಲ್ಲದೆ ಬೇರೆಯ ಖಾರ ಸರಿ ಹೋಗುವುದಿಲ್ಲ”
ಸೂಜು ಮೆಣಸಿನಕಾಯಿ ಸಂಪಾದಿಸಿ ತಂದು ಕೊಡಲು ವಾಣಿ ನೀಡಿದ ಟಾಸ್ಕನ್ನು ಕೈಗೆತ್ತಿಕೊಂಡು ಎಲ್ಲೆಲ್ಲಿ ಸೂಜು ಮೆಣಸಿನ ಗಿಡ ಇದೆ ಎಂಬ ಅಂದಾಜಿದೆಯೋ ಅಲ್ಲೆಲ್ಲಾ ಹೋಗಿ ಬಂದೆ. ಬಿಸಿಲ ಹೊಡೆತಕ್ಕೆ ಕರಟಿ ಹೋದ ಗಿಡಗಳಲ್ಲಿ ಇತ್ತೀಚೆಗೆ ಬಿದ್ದ ಮಳೆಯ ಕಾರಣಕ್ಕೆ ಹೊಸ ಚಿಗುರು ಬಂದದ್ದು ಕಂಡಿತೇ ಹೊರತು ಫಸಲಿರಲಿ ಹೊಸ ಹೂವೂ ಕಾಣಲಿಲ್ಲ.
ತಳತಂಪು ಇರುವ ಜಾಗದಲ್ಲಿ ಇದ್ದ ಗಿಡಗಳಲ್ಲಿ ಬರಲು ಬರಲಾದ ಟಿಸಿಲುಗಳೇನೋ ಇದ್ದವು. ಆದರೆ ಹುಡುಕಿದರೂ ಒಂದೇ ಚಿಗುರು ಕಾಯಿ ಇಲ್ಲದಂತೆ ಕಾಗೆಗಳು ನವಿಲು ಇನ್ನಿತರ ಪಕ್ಷಿಗಳು ತಿಂದು ಮುಗಿಸಿದ್ದವು.
ಈ ವರ್ಷ ಮುಂಗಾರು ಬರುತ್ತಿದ್ದಂತೆ ಬಂದೋಬಸ್ತಾದ ಜಾಗದಲ್ಲಿ ಗಿಡ ನೆಟ್ಟು ನೋಡೋಣ ಎಂದು ಹೊಸ ಗಿಡಗಳನ್ನು ಗುರುತಿಸಿ ಬಂದಿದ್ದೇನೆ. ಇನ್ನು ವಾಟೇಕಾಯಿ ತೊಕ್ಕು ಸವಿಯಬೇಕು ಎಂದರೆ ದುಡ್ಡು ಕೊಟ್ಟಾದರೂ ನಮ್ಮ ಮಲೆನಾಡು ಗಿಡ್ಡ ಕಂಪನಿಯ ಕಚೇರಿಯಿಂದ ಸೂಜು ಮೆಣಸು ತರಬೇಕಿದೆ.
ಕೈ ತೊಳೆದ ನೀರು ಹೋಗುವ ಜಾಗದಲ್ಲಿ ವಿಶಾಲವಾಗಿ ಹರಡಿ ನಿಂತ ನಿಂಬೆ ಗಿಡವೊಂದಿದೆ. ಅದರ ಬುಡದಲ್ಲಿ ಒಂದೆರಡು ಸೂಜು ಮೆಣಸಿನ ಗಿಡ ಇದೆ. ಅದರಲ್ಲಾದರೂ ಸಿಕ್ಕೀತು ಎಂಬ ನಿರೀಕ್ಷೆಯಲ್ಲಿ ಹೋದೆ.. ಅಲ್ಲಿಯೂ ನಿರಾಸೆ. ಆದರೆ ನಿಂಬೆ ಗಿಡದ ತುಂಬಾ ನಿಂಬೆಯ ಹೂವು. ಅದನ್ನು ಕೊಯ್ಯಲು ಮುಗಿ ಬಿದ್ದ ಜೇನು ದುಂಬಿಗಳು.. ಈ ವರ್ಷ ಬುಟ್ಟಿಗಟ್ಟಲೆ ಹಣ್ಣು ಕೊಯ್ಯಲು ಅಡ್ಡಿಯಿಲ್ಲ.. ವಿವಿಧ ಕಾಂಬಿನೇಶನ್ನಿನಲ್ಲಿ ನಿಂಬೆ ಹಣ್ಣಿನ ಉಪ್ಪಿನಕಾಯಿ ಮಾಡ ಬಹುದೇ ಆದರೂ ಅದೇ ಸೂಜು ಮೆಣಸಿನ ಖಾರ ಹಾಕಿ ಮಾಡುವ ಬಿಳಿ ಉಪ್ಪಿನಕಾಯಿಯ ಮಜವೇ ಬೇರೆ..

LEAVE A REPLY

Please enter your comment!
Please enter your name here