
ಶೃಂಗೇರಿ ಸಮೀಪದ ಮೆಣಸೆಯಲ್ಲಿ ಇರುವ ನನ್ನ ಹಿರಿಯ ಜೇನು ಮಿತ್ರ ವೆಂಕಟೇಶ ಭಟ್ಟರು ಎಂದಿಗೂ ಸುಮ್ಮನೆ ಕೂರುವಂತಹ ಜನರಂತೂ ಅಲ್ಲವೇ ಅಲ್ಲ. ಈ ವರ್ಷದ ಜೇನು ಹಂಗಾಮಿನ ಪೂರ್ವದಲ್ಲಿ ಜೇನು ಸಾಕಾಣಿಕೆಯ ಕಾರಣದಿಂದ ನಾವು ಮಿತ್ರರಾದೆವು. ಐದಾರು ಜೇನು ಕುಟುಂಬಗಳೊಂದಿಗೆ ಅವರು ಜೇನು ಕೃಷಿಯನ್ನು ಆರಂಭಿಸಿದ್ದರು. ಈ ಬಗ್ಗೆ ನಾನು ಈ ನನ್ನ ವಾಲಿನಲ್ಲಿ ಬರೆದಿದ್ದೆ ಕೂಡ.
ಇಂದು ಶೃಂಗೇರಿಯ ಕಡೆ ನನ್ನ ತಿರುಗಾಟವಿತ್ತು. ವೆಂಕಟೇಶ ಭಟ್ಟರ ಜೇನು ಕೃಷಿ ಎಲ್ಲಿಗೆ ಬಂದು ಮುಟ್ಟಿದೆ ಎಂಬ ವಿಷಯ ತಿಳಿದುಕೊಳ್ಳೋಣ ಎಂದು ಅವರಿಗೆ ಫೋನಾಯಿಸಿದೆ.. ಮನೆಯಲ್ಲೇ ಇದ್ದೇನೆ ಬನ್ನಿ ಎಂದರು..
ಜೇನು ಕೃಷಿ ಪ್ರಥಮ ಚುಂಬನ ಆಗಲಿಲ್ಲ ಎಂದು ಸಮಾಧಾನ ವ್ಯಕ್ತ ಪಡಿಸಿದರು. ಈ ಬಾರಿ ಜೇನುತುಪ್ಪ ಭರಪೂರ ಸಿಕ್ಕದೇ ಹೋದರೂ ಭರವಸೆ ಮೂಡಿಸಿದೆ ಎಂದರು.. ಜೇನು ಕೃಷಿಗೆ ಮೊದಲಿಟ್ಟ ಸಂದರ್ಭದಲ್ಲಿ ಅವರಲ್ಲಿ ಅಂಜಿಕೆ ಇತ್ತು. ಈಗಾಗಲೇ ಜೇನು ಕೃಷಿಯಲ್ಲಿ ಇದ್ದವರ ನೆರವು ಬೇಕಾಗಿತ್ತು.. ಈಗ ಹಾಗಿಲ್ಲ.. ವೆಂಕಟೇಶ ಭಟ್ಟರು ಸ್ವತಃ ಅವರೇ ಜೇನು ಪೆಟ್ಟಿಗೆಯ ನಿರ್ವಹಣೆ ಮಾಡುತ್ತಿದ್ದಾರೆ. ಅಷ್ಟು ಮಾತ್ರವಲ್ಲ ನೆರ ಹೊರೆಯ ಜೇನು ಕೃಷಿಕರಿಗೂ ಸಹಾಯ ಮಾಡುತ್ತಿದ್ದಾರೆ. ಇದು ತುಂಬಾ ಧನಾತ್ಮಕ ಬೆಳವಣಿಗೆ.
ವೆಂಕಟೇಶ ಭಟ್ಟರನ್ನು ನಮ್ಮ ಜೇನು ಕೃಷಿಕರ ಬಳಗಕ್ಕೆ ಸೇರಿಸಿ ಕೊಂಡ ಬಳಿಕ ನಮ್ಮ ನಡುವೆ ಮೂರ್ನಾಲ್ಕು ಭೇಟಿ ಆಗಿದೆ. ಪ್ರತಿ ಬಾರಿ ಅವರಲ್ಲಿಗೆ ಹೋದಾಗಲೂ ನನ್ನನ್ನು ಅವರು ಬರಿಗೈಯಲ್ಲಿ ಕಳಿಸಲಿಲ್ಲ. ಅವರ ಹಿತ್ತಲಿನಲ್ಲಿ ಬೆಳೆದ ಏನಾದರೊಂದು ತರಕಾರಿ, ಒಗ್ಗು ಹಾಕಿದ ತರಕಾರಿ ಸಸಿ ಕೊಟ್ಟೇ ಕಳಿಸುತ್ತಾರೆ.
ಹಿಂದಿನ ಸಲ ಬಂದಾಗ ಒಂದು ಕಂತೆ ಹಸಿ ಮೆಣಸಿನ ಗಿಡ ಮತ್ತು ಕೆಂಪು ಹರಿವೆ ಸೊಪ್ಪಿನ ಸಸಿ ಕೊಟ್ಟಿದ್ದರು. ವಾಣಿ ಮೇಡಮ್ಮಿನ ಕುಶಲ ಆರೈಕೆಯಲ್ಲಿ ಹರಿವೆ ಸೊಪ್ಪಿನ ಪದಾರ್ಥ ವಾರದಲ್ಲಿ ಎರಡು ಬಾರಿಯಾದರೂ ಆಗುತ್ತಿದೆ. ಮತ್ತು ಹಸಿ ಮೆಣಸು ಈಗ ಬಿಡ ತೊಡಗಿದೆ…
ಈ ಸಲ ವೆಂಕಟೇಶ ಭಟ್ಟರು ನನಗೆ ನನ್ನ ಇಷ್ಟದ ಈರನಕೆರೆ ಬದನೇಕಾಯಿ ಕೊಟ್ಟಿದ್ದಾರೆ.. ಇದನ್ನು ಬಳಸಿ ಮಾಡುವ ವಾಂಗೀಬಾತ್ ನನಗೆ ಬಹಳ ಇಷ್ಟ. ಬದನೇಕಾಯಿ ಕೊಟ್ಟರೆ ಎರಡು ದಿನದ ಪದಾರ್ಥಕ್ಕೆ ಆಯಿತು, ಒಂದೆರಡು ಗಿಡಗಳನ್ನೂ ಕೊಡಿ. ಹಿಂದಿನ ಹರಿವೇ ಸೊಪ್ಪಿನ ಕತೆಯಂತೆಯೇ ಬದನೇಕಾಯಿ ಕೊಯ್ಯುವಾಗೆಲ್ಲಾ ನಿಮ್ಮ ಹೆಸರು ಹೇಳುತ್ತೇವೆ ಎಂದು ಭಿಢೆ ಬಿಟ್ಟು ಕೇಳಿದೆ. ಒಂದಕ್ಕೆ ನಾಲ್ಕರಷ್ಟು ಗಿಡಗಳನ್ನು ಕೊಟ್ಟಿದ್ದಾರೆ…
ಹೀಗೆ ಪ್ರತೀ ಬಾರಿ ಬಂದಾಗಲೂ ನಾನೇ ಒಯ್ಯೋದು ಆಗಿದೆ. ಮುಂದಿನ ಸಲ ಬರುವಾಗ ನಮ್ಮ ಕಡೆಯ ಬರದವಳ್ಳಿ ಬದನೇ ಬೀಜ ತಂದು ಕೊಡುತ್ತೇನೆ ಎಂದು ಹೇಳಿದ್ದೇನೆ. ಇದಷ್ಟೇ ಅಲ್ಲದೆ ನಮ್ಮ ಕಡೆಯ ವಿಶೇಷದ ತರಕಾರಿ ಬೀಜ, ಗಿಡಗಳನ್ನು ತಂದು ಕೊಡುತ್ತೇನೆ ಎಂದು ಹೇಳಿದ್ದೇನೆ.
ಹೀಗೆ ಜೇನಿನ ಹೆಳೆಯಿಂದ ಆರಂಭಗೊಂಡ ನಮ್ಮ ಸ್ನೇಹಯಾನ ವಿವಿಧ ಮಜಲುಗಳನ್ನು ದಾಟಿ ನಿಕಟ ಆಗುತ್ತಾ ಹೋಗಿರುವುದು ವಿಶೇಷ… ಇಂತಹ ಸ್ನೇಹ ಸೇತು ನನ್ನ ಜೀವನದಲ್ಲಿ ಸಾಕಷ್ಟು ಆಗಿದೆ… ಈ ಕಾರಣದಿಂದ ನಾನು ಈ ನನ್ನ ಕೃಷಿ ಬದುಕಿಗೆ ಸದಾ ಋಣಿ.
































