ತಂಬಾಕು ಹದಗೊಳಿಸಲು ವಿನೂತನ ವಿದ್ಯುತ್‌ ಚಾಲಿತ ಬ್ಯಾರನ್

0
ರೈತರು ಈ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಬಹುದಾಗಿದೆ ಎಂದು ಹೇಳುವ ಡಾ.ರಾಮಕೃಷ್ಣನ್, ಹಿರಿಯ ವಿಜ್ಞಾನಿ ಸಿಟಿಆರ್ಐ ಹುಣಸೂರು.
ಚಿತ್ರ-ಲೇಖನ: ಎಚ್.ಎಸ್.ಸಚ್ಚಿತ್

ಸಿಟಿಆರ್‌ಐ ಕೇಂದ್ರದಲ್ಲಿ ಯಶಸ್ವಿ ಪ್ರಯೋಗ ;ತಂಬಾಕು ಹದಗೊಳಿಸಲು  ವಿದ್ಯುತ್‌ ಚಾಲಿತ ವಿನೂತನ ತಂತ್ರಜ್ಞಾನ ಬ್ಯಾರನ್

ಹುಣಸೂರು:  ಸೌದೆ ಬಳಸಿ ತಂಬಾಕು ಹದಗೊಳಿಸುವ ಸಾಂಪ್ರದಾಯಕ ಪದ್ಧತಿ, ಅರಣ್ಯ ನಾಶ ಪರಿಸರ ಅಸಮತೋಲನಕ್ಕೆ ಕಾರಣವಾಗಿದೆ. ಪರ್ಯಾಯವಾಗಿ  ಕೇಂದ್ರೀಯ ತಂಬಾಕು ಸಂಶೋಧನಾ ಕೇಂದ್ರ,  ವಿದ್ಯುತ್‌ ಚಾಲಿತ ತಂಬಾಕು ಬ್ಯಾರನ್‌ ಸಿದ್ದಪಡಿಸಿ ಯಶಸ್ವಿಯಾಗಿದೆ.

ರಾಜ್ಯದಲ್ಲಿ 50 ಸಾವಿರಕ್ಕೂ ಹೆಚ್ಚು ರೈತರು ತಂಬಾಕು ಬೇಸಾಯ ಅವಲಂಬಿಸಿ ವಾರ್ಷಿಕ 8 ರಿಂದ 10 ಕೋಟಿ ಕೆಜಿ. ಉತ್ಪಾದಿಸುತ್ತಿದ್ದು, ಹದಗೊಳಿಸಲು  ಸೌದೆಯನ್ನು  ಅವಲಂಬಿಸಿದ್ದರು. ವೈಜ್ಞಾನಿಕವಾಗಿ ಪ್ರತಿ ಕೆ.ಜಿ. ತಂಬಾಕು ಹದಗೊಳಿಸಲು 6 ರಿಂದ 7 ಕೆ.ಜಿ.  ಸೌದೆ ಬಳಸುತ್ತಿದ್ದು  ಒಂದು ಸಿಂಗಲ್‌ ಬ್ಯಾರನ್‌ ತಂಬಾಕು ಹದಗೊಳಿಸಲು ಕನಿಷ್ಠ 1.50 ರಿಂದ 2 ಟನ್‌ ಉರುವಲು ಬೇಕಾಗಿದೆ.

ಸಂಶೊಧನೆ: ಆಂದ್ರಪ್ರದೇಶದ ರಾಜಮಹೇಂದ್ರಿ ಕೇಂದ್ರೀಯ ತಂಬಾಕು ಸಂಶೋಧನಾ ಕೇಂದ್ರದಲ್ಲಿ ಕಳೆದ 2 ವರ್ಷದಿಂದ ವಿದ್ಯುತ್‌ ಚಾಲಿತ ತಂಬಾಕು ಹದಗೊಳಿಸುವ ಬ್ಯಾರನ್‌ ಪರೀಕ್ಷೆ ನಡೆದಿದ್ದು, ಸಾಂಪ್ರದಾಯಿಕ ಬ್ಯಾರನ್‌ ನಲ್ಲಿ ಹದಗೊಳಿಸಿದ ಮಾದರಿಯಲ್ಲೇ ಗುಣಮಟ್ಟದ  ಇಳುವರಿ ಸಿಕ್ಕಿದೆ. ರಾಜ್ಯದ ಹುಣಸೂರಿನ ಕೇಂದ್ರೀಯ ತಂಬಾಕು ಸಂಶೊಧನ ಕೇಂದ್ರದಲ್ಲಿ ಕಳೆದ 3 ತಿಂಗಳಿಂದ ಪರೀಕ್ಷೆ ನಡೆಸಿದ್ದು ಇಲ್ಲಿಯೂ ಉತ್ತಮ ಗುಣಮಟ್ಟ ಕಾದುಕೊಂಡಿದೆ.  ಸೌದೆ ಬದಲಿಗೆ ರೈತರು ವಿದ್ಯುತ್‌ ಚಾಲಿತ ಬ್ಯಾರನ್‌ ಗೆ ಬದಲಾವಣೆ ಹೊಂದಲು ಯಾವುದೇ ಸಮಸ್ಯೆ ಇಲ್ಲ ಎಂದು ಕೇಂದ್ರದ ಹಿರಿಯ ವಿಜ್ಞಾನಿ ಡಾ.ರಾಮಕೃಷ್ಣನ್ ಹೇಳಿದರು.

ಅವಿಷ್ಕಾರ: ಆಂಧ್ರಪ್ರದೇಶದ ತಂಬಾಕು ಬೇಸಾಯ ಕುಟುಂಬದ ಸ್ನಾತಕೋತ್ತರ ಪದವಿ ಎಂಜಿನಿಯರ್ ನಾರಾಯಣ ರೆಡ್ಡಿ ‌ ಮತ್ತು  ಇಬ್ಬರು ಸ್ನೇಹಿತರು ಆರಂಭಿಸಿದ “ಔಲ್‌ ಟೆಕ್‌ನೋ” (owltechno) ವಿದ್ಯುತ್‌ ಚಾಲಿತ ಬ್ಯಾರನ್‌ ಅವಿಷ್ಕಾರಕ್ಕೆ ಕಾರಣವಾಗಿದೆ.  ಮೂಲತಃ ತಂಬಾಕು ಬೆಳೆಗಾರರಾದ ಯುವ ವಿಜ್ಞಾನಿ ತಂಡ, ಅಗ್ನಿ ಅವಘಡದಲ್ಲಿ ಬ್ಯಾರನ್‌ ಸುಟ್ಟು ಭಸ್ಮವಾದ ಕಹಿ ಘಟನೆಯಿಂದ  ಸಮಸ್ಯೆ ಮುಕ್ತ ಮತ್ತು ಪರಿಸರ ಪೂರಕ ಬ್ಯಾರನ್‌  ಹೊಸ ತಂತ್ರಜ್ಞಾನದ ಮೊಳಕೆ ಒಡೆಯಲು ಕಾರಣವಾಯಿತು ಎಂದು ಅದರ ವಿವರಗಳನ್ನು ತಿಳಿಸಿದರು.

ಮಿತವಾಗಿ ವಿದುತ್‌ ಬಳಸುವ ತಂಬಾಕು ಬ್ಯಾರನ್

ತಂಬಾಕು ಸಂಶೋಧನಾ ಕೇಂದ್ರ ರಾಜಮಹೇಂದ್ರಿ ಯೊಂದಿಗೆ  ಒಪ್ಪಂದ ಮಾಡಿಕೊಂಡು  ವಿದ್ಯುತ್‌ ಬ್ಯಾರನ್‌ ನಲ್ಲಿ 2 ವರ್ಷ ನಿರಂತರ ಪ್ರಯತ್ನಿಸಿ ಗುಣಮಟ್ಟದ ತಂಬಾಕು ಹದಗೊಳಿಸಿದ ಫಲಿತಾಂಶ ಸಿಕ್ಕಿದೆ. ಕರ್ನಾಟಕದ ವಾತಾವರಣದಲ್ಲಿ ಬೆಳೆದ ತಂಬಾಕು ಹೊಸ ತಂತ್ರಜ್ಞಾನದಲ್ಲಿ ಹದಗೊಳಿಸುವ ಕಾರ್ಯ ಕಳೆದ 3 ತಿಂಗಳಿಂದ ಹುಣಸೂರು ಸಿಟಿಆರ್‌ಐ ಕೇಂದ್ರದಲ್ಲಿ ನಡೆದಿದ್ದು ಇಲ್ಲಿಯೂ ಉತ್ತಮ ಗುಣಮಟ್ಟ ಕಾದುಕೊಳ್ಳುವಲ್ಲಿ ಯಶಸ್ವಿಯಾಗಿದ್ದೇವೆ ಎಂದರು.

ವಿದ್ಯುತ್‌ ಬಳಕೆ: ಹೊಸ ವಿನ್ಯಾಸದಲ್ಲಿ ಹೊರ ಬಂದಿರುವ ವಿದ್ಯುತ್‌ ಬ್ಯಾರನ್‌ ನಲ್ಲಿ ತಂಬಾಕು ಹದಗೊಳಿಸಲು ಪ್ರತಿ ಬ್ಯಾರನ್‌ ಗೆ 400 ರಿಂದ 500 ಯುನಿಟ್‌ ವಿದ್ಯುತ್‌ ಬೇಕು. ಇದಕ್ಕೆ ತಗಲುವ ವೆಚ್ಚ ₹ 3 ರಿಂದ 4 ಸಾವಿರ, ಸೌದೆ ಬಳಸಿದಲ್ಲಿ ₹ 8 ರಿಂದ 9 ಸಾವಿರ ಖರ್ಚು ಬರುತ್ತದೆ. ಇದಲ್ಲದೆ ಕೂಲಿ ಕಾರ್ಮಿಕರು ಹಗಲು ರಾತ್ರಿ ಪಾಳಿಯಲ್ಲಿ ಉರುವಲು ನೀಡಬೇಕು. ಈ ತಂತ್ರಜ್ಞಾನದಲ್ಲಿ ಎಲ್ಲವೂ ಆಟೋಮೆಟಿಕ್‌ ವ್ಯವಸ್ಥೆ ಅಳವಡಿಸಿದೆ. ಮೊಬೈಲ್‌ ಮೂಲಕ  ಶಾಖ ನಿರ್ವಹಣೆ ಮಾಡುವ ಸೌಲಭ್ಯ ಕಲ್ಪಿಸಿದೆ ಎಂದರು.

ವಿದ್ಯುತ್‌ ಅಡಚಣೆ ಆದಲ್ಲಿ ಸೌರಶಕ್ತಿ ಚಾಲಿತ ವಿದ್ಯುತ್‌ ಪರ್ಯಾಯವಾಗಿ ಬಳಸುವ ವ್ಯವಸ್ಥೆ ಈ ತಂತ್ರಜ್ಞಾನದಲ್ಲಿ ಅಳವಡಿಸಿದ್ದು, ಗ್ರಾಮೀಣ ಪರಿಸರಕ್ಕೆ ಪೂರಕವಾಗಿ ಅಭಿವೃದ್ಧಿಗೊಳಿಸಲಾಗಿದೆ ಎಂದು ವಿವರಿಸಿದರು ಎನ್ನವರು.

ಶಿವಣ್ಣ‌, ತಂಬಾಕು ಬೆಳೆಗಾರರ ಹಿತರಕ್ಷಣಾ ಸಮಿತಿ ಅಧ್ಯಕ್ಷ

 

ವಿದ್ಯುತ್‌ ಚಾಲಿತ ತಂಬಾಕು ಹದಗೊಳಿಸುವ ಬ್ಯಾರನ್‌ ಪರಿಸರ ಪೂರಕವಾಗಿದ್ದು, ಆರ್ಥಿಕ ಹೊರೆ ತಗ್ಗಲಿದೆ, ಆರಂಭದ ಬಂಡವಾಳ ₹ 18 ರಿಂದ 20 ಲಕ್ಷ  ಹೂಡಬೇಕಾಗಿದ್ದು, ರೈತರಿಗೆ ಕಷ್ಟ ಸಾಧ್ಯ. ಬ್ಯಾಂಕ್‌ ಸಾಲ ಸೌಲಭ್ಯ ಮತ್ತು ತಂಬಾಕು ಮಂಡಳಿ ರಿಯಾಯಿತಿ ದರದಲ್ಲಿ ನೀಡಬೇಕು.
ನಾರಾಯಣ ರೆಡ್ಡಿ, ಯುವ ವಿಜ್ಞಾನಿ
ವಿದ್ಯುತ್‌ ಬ್ಯಾರನ್‌ ಮೂರು ಫೇಸ್‌ ನಲ್ಲಿ ಬಳಸುವಂತೆ ಅಭಿವೃದ್ಧಿಪಡಿಸಲಾಗಿದೆ, ರಾಜ್ಯದಲ್ಲಿ ವಿದ್ಯುತ್‌ ಸಮಸ್ಯೆ ಕುರಿತು ರೈತರು ಮಾಹಿತಿ ನೀಡಿದ್ದು, ಮುಂದಿನ ದಿನದಲ್ಲಿ ಸಿಂಗಲ್‌ ಫೇಸ್‌ ವಿದ್ಯುತ್‌ ಬಳಸಿ ಹದಗೊಳಿಸುವ ತಂತ್ರಜ್ಞಾನ ಅಳವಡಿಸುವ ಚಿಂತನೆ ಇದೆ.
ಹದಗೊಳಿಸಿದ ತಂಬಾಕು ಪ್ರಯೋಗಾಲಯಕ್ಕೆ ಕಳುಹಿಸಿ ವೈಜ್ಞಾನಿಕ ಪರೀಕ್ಷೆ ನಡೆಸಿದ್ದು, ಸಾಂಪ್ರದಾಯಕ ಪದ್ಧತಿ ಮತ್ತು ವಿದ್ಯುತ್‌ ಪದ್ಧತಿಯಲ್ಲಿ ಹದಗೊಳಿಸಿದ ತಂಬಾಕಿನಲ್ಲಿ ಯಾವುದೇ ರಾಸಾಯನಿಕ ಬದಲಾವಣೆ ಕಂಡು ಬಂದಿಲ್ಲ ಎಂಬ ವರದಿ ಬಂದಿದ್ದು, ರೈತರು ಈ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಬಹುದಾಗಿದೆ.
ಡಾ.ರಾಮಕೃಷ್ಣನ್‌ ಹಿರಿಯ ವಿಜ್ಞಾನಿ ಸಿಟಿಆರ್‌ಐ ಹುಣಸೂರು.

LEAVE A REPLY

Please enter your comment!
Please enter your name here