ಬೆಂಗಳೂರು, ಮಾರ್ಚ್ 19: ಪಶುಪಾಲಕ ಜಾನುವಾರುಗಳಿಗೆ ಬೇಸಿಗೆಯಲ್ಲಿ ಉಂಟಾಗುವ ಮೇವಿನ ಕೊರತೆಯನ್ನು ನೀಗಿಸಲು ಸರ್ಕಾರ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿದೆ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು ತಿಳಿಸಿದರು.
ಇಂದು ವಿಧಾನ ಪರಿಷತ್ತಿನ ಪ್ರಶ್ನೋತ್ತರ ಕಲಾಪದ ವೇಳೆ ಪರಿಷತ್ ಸದಸ್ಯ ಶಾಂತರಾಮ್ ಬುಡ್ನ ಸಿದ್ದಿ ಅವರ ಚುಕ್ಕೆ ಗುರುತಿನ ಪ್ರಶ‍್ನೆಗೆ ಪಶುಸಂಗೋಪನೆ ಮತ್ತು ರೇಷ್ಮೆ ಇಲಾಖೆ ಸಚಿವರ ಪರಿವಾಗಿ ಉತ್ತರಿಸಿದ ಸಚಿವರು, ಪಶುಪಾಲಕ ಜಾನುವಾರುಗಳಿಗೆ ಬೇಸಿಗೆಯಲ್ಲಿ ಉಂಟಾಗುವ ಮೇವಿನ ಕೊರತೆಯನ್ನು ನೀಗಿಸಲು ಸರ್ಕಾರವು ಮುನ್ನೆಚ್ಚರಿಕೆ ಕ್ರಮಗಳ ತೆಗೆದುಕೊಂಡಿದ್ದು, ಸಾಪ್ತಾಹಿಕ ಮೇವಿನ ವರದಿಯನ್ವಯ ಯಾವುದೇ ತಾಲ್ಲೂಕಿನಲ್ಲಿ ಮೇವಿನ ಲಭ್ಯತೆಯು 4 ವಾರಗಳಿಗಿಂತ ಕಡಿಮೆ ಆದಲ್ಲಿ ಮೇವಿನ ಬ್ಯಾಂಕ್‌ನ್ನು ತೆರೆದು ರೈತರಿಗೆ ರಿಯಾಯಿತಿ ದರದಲ್ಲಿ ಒಣ ಮೇವನ್ನು ಪೂರೈಸಲು ಕ್ರಮವಹಿಸಲಾಗುವುದು.
ಸಾಪ್ತಾಹಿಕ ಮೇವಿನ ವರದಿಯನ್ವಯ ಯಾವುದೇ ತಾಲ್ಲೂಕಿನಲ್ಲಿ ಮೇವಿನ ಲಭ್ಯತೆಯು 2 ವಾರಗಳಿಗಿಂತ ಕಡಿಮೆ ಅದಲ್ಲಿ ಹೋಬಳಿ ಮಟ್ಟದಲ್ಲಿ ಜಾನುವಾರು ಶಿಬಿರವನ್ನು ತೆರೆದು ಜಾನುವಾರುಗಳಿಗೆ ಮೇವು, ನೀರು, ನೆರಳನ್ನು ಒದಗಿಸಿ ಸಂರಕ್ಷಿಸಲಾಗುವುದು. ಜಾನುವಾರುಗಳಿಗೆ ಮೇವಿನ ಸಮಸ್ಯೆ ಉಂಟಾಗದಂತೆ ಮುಂಜಾಗ್ರತೆಯಾಗಿ ಮೇವು ಉತ್ಪಾದನೆಯನ್ನು ಹೆಚ್ಚಿಸಲು ನೀರಾವರಿ ಸೌಲಭ್ಯವಿರುವ ರೈತರಿಗೆ ಕಡಿಮೆ ಅವಧಿಯಲ್ಲಿ ಮೇವು ಉತ್ಪಾದಿಸುವ ಮೇವಿನ ಬೀಜದ 4,52,463 ಮಿನಿ ಕಿಟ್‌ಗಳನ್ನು ನೀಡಲಾಗಿದೆ. ಇಲಾಖೆಯ ಕ್ಷೇತ್ರಗಳಲ್ಲಿ ಮೇವಿನ ಬೇರುಗಳನ್ನು ಉತ್ಪಾದಿಸಿ ಆಸಕ್ತ ರೈತರಿಗೆ ವಿತರಿಸಲಾಗುವುದು.
ಕಡಿಮೆ ದರ್ಜೆಯ ಮೇವಿಗೆ ಯೂರಿಯ ದ್ರಾವಣವನ್ನು ಸಿಂಪಡಿಸಿ ಒಣ ಮೇವು ಪೌಷ್ಠಿಕರಣಗೊಳಿಸುವ ಕುರಿತು ಹಾಗೂ ಹಸಿರು ಮೇವಿನಿಂದ ರಸಮೇವು ತಯಾರಿಸಿ, ಸಂರಕ್ಷಿಸಿ, ಬೇಸಿಗೆಯಲ್ಲಿ ಬಳಸಲು ರೈತರಿಗೆ ತರಬೇತಿ ಮತ್ತು ಪ್ರಾತ್ಯಕ್ಷಿಕೆ ನೀಡಲಾಗುತ್ತಿದೆ. ರೈತರು ಬೆಳೆಯುವ ಮೇವು ಪೋಲಾಗದಂತೆ ಸದ್ಬಳಕೆ ಮಾಡಿಕೊಳ್ಳಲು ರೈತರಿಗೆ ಪ್ರಸಕ್ತ ಸಾಲಿನಲ್ಲಿ ಒಟ್ಟಾರೆಯಾಗಿ 1,428 ಮೇವು ಕತ್ತರಿಸುವ ಯಂತ್ರವನ್ನು ವಿತರಿಸಲಾಗಿದೆ. ಅಲ್ಲದೆ, ತೋಟಗಾರಿಕೆ ಬೆಳೆಗಳ ಮಧ್ಯ ಖಾಲಿ ಇರುವ ಪ್ರದೇಶಗಳಲ್ಲಿ ಮೇವು ಬೆಳೆಯುವ ಕಾರ್ಯಕ್ರಮವನ್ನು ಅಳವಡಿಸಿಕೊಳ್ಳಲು ರೈತರಿಗೆ ಸೂಕ್ತ ಮಾರ್ಗದರ್ಶನ ನೀಡಲಾಗುತ್ತಿದೆ ಎಂದು ತಿಳಿಸಿದರು.