
ವ್ಯವಸಾಯದಲ್ಲಿ ಮೊದಲು ಕೃಷಿಕರ ಮೊಗದಲ್ಲಿ ನೆಮ್ಮದಿಯ ನಗು ಮೂಡಬೇಕು; ಆಗಷ್ಟೇ ಸಾರ್ಥಕತೆ ಇರುತ್ತದೆ. ಇದನ್ನು ಮಲ್ಲರಾಜೇ ಅರಸ್ ಅವರು ಸಾಧಿಸಿದ್ದಾರೆ. ಇವರ ಸಾಧನೆ ಕುರಿತು ಹಿರಿಯ ಪತ್ರಕರ್ತ ಎಚ್.ಎಸ್.ಸಚ್ಚಿತ್ ಬರೆದಿರುವ ವಿವರ ಲೇಖನ ನಿಮ್ಮ ಮುಂದಿದೆ.
ಆರ್ಥಿಕ ಸ್ವಾವಲಂಬನೆಗೆ ತೋಟಗಾರಿಕೆ ಬೇಸಾಯಕ್ಕೆ ಒಲವು ತೋರಿದ ವಿಜ್ಞಾನ ಪದವೀಧರ ಮಲ್ಲರಾಜೇ ಅರಸು ತಮ್ಮ 20 ಎಕರೆ ಪ್ರದೇಶದಲ್ಲಿ ನಾಲ್ಕು ಹಂತದಲ್ಲಿ ಸಮಗ್ರ ತೋಟಗಾರಿಕೆ ನಡೆಸುತ್ತಿದ್ದಾರೆ. ಇದರ ಮೂಲಕ ಪ್ರತಿವರ್ಷ ಸರಾಸರಿ 20-25 ಲಕ್ಷ ರೂಪಾಯಿ ಗಳಿಸುತ್ತಿದ್ದಾರೆ. ನೆಮ್ಮದಿಯ ಬದುಕು ತಮ್ಮದಾಗಿಸಿಕೊಂಡಿದ್ದಾರೆ
ಮಲ್ಲರಾಜೇ ಅರಸು ಮೂಲತಃ ಮಂಡ್ಯ ಜಿಲ್ಲೆಯವರು. 25 ವರ್ಷಗಳ ಹಿಂದೆ ಹುಣಸೂರು ತಾಲ್ಲೂಕಿನ ಗಡಿ ಭಾಗ ದೇವಗಳ್ಳಿ ಗ್ರಾಮದಲ್ಲಿ 20 ಎಕರೆ ಭೂಮಿ ಖರೀದಿಸಿದರು. ಹಂತ ಹಂತವಾಗಿ ತೋಟಗಾರಿಕೆಗೆ ಮುಂದಾದರು. ಆರಂಭದಲ್ಲಿ 500 ತೆಂಗಿನ ಸಸಿ ನೆಟ್ಟು ಬೆಳೆಸಿದರು. ಕ್ರಮೇಣ ತೆಂಗಿನ ಮರಕ್ಕೆ ಕಾಣಿಸಿಕೊಂಡ ಕಪ್ಪು ತಲೆ ಹುಳು ಬಾಧೆ, ಕಾಂಡ ಸೋರುವಿಕೆ ಬಾಧೆಗೆ 150 ಕ್ಕೂ ಹೆಚ್ಚು ಮರಗಳು ತುತ್ತಾಗಿ ಧರೆಗುರುಳಿದವು. ಆದರೂ ದೃತಿಗೆಡದೆ ಬಿದ್ದ ಮರಗಳ ಜಾಗಗಳಲ್ಲಿಯೇ ಸಪೋಟ ಸಸಿಗಳನ್ನು ನೆಟ್ಟು ಪೋಷಿಸಿದರು. ಈಗ ಸಮೃದ್ಧ ಸಪೋಟಾ ತೋಟವೇ ಅಲ್ಲಿ ನಿರ್ಮಾಣವಾಗಿದೆ.
ನಾಲ್ಕು ಹಂತದ ಬೇಸಾಯ:
ಮಲ್ಲರಾಜೇ ಅರಸು ಅವರು ಕೃಷಿಯಲ್ಲಿ ಪ್ರತಿಯೊಂದು ವಿಷಯವನ್ನು ವೈಜ್ಞಾನಿಕ ದೃಷ್ಟಿಯಲ್ಲೇ ಗಮನಿಸುತ್ತಾರೆ. ಇದರಿಂದಾಗಿ ನಾಲ್ಕು ಹಂತದಲ್ಲಿ ತೋಟಗಾರಿಕೆ ಬೆಳೆ ಕೃಷಿ ಮಾಡುತ್ತಿದ್ದಾರೆ. ವಾಣಿಜ್ಯ ಬೆಳೆಗಳಾದ 350 ತೆಂಗಿನ ಮರ, 2೦೦೦ ಅಡಿಕೆ, 8೦ ಸಪೋಟಾ, ಅರೇಬಿಕ, ಚಂದ್ರತಳಿ ಕಾಫಿ ಗಿಡಗಳಿವೆ. 4೦೦ ಸಿಲ್ವರ್ ಮರಗಳಲ್ಲಿ ಪಣಿಯೂರು ತಳಿ ಕಾಳುಮೆಣಸು ಬೆಳೆಸಿದ್ದಾರೆ. ಸಾವಯವ, ಹಸಿರು ಗೊಬ್ಬರ ಬೇಸಾಯಕ್ಕೆ ಆದ್ಯತೆ ನೀಡುತ್ತಿದ್ದಾರೆ. ಮಿತ ಪ್ರಮಾಣದಲ್ಲಿ ರಾಸಾಯನಿಕ ಗೊಬ್ಬರ ನೀಡುತ್ತಾರೆ.
“ಸಂಪೂರ್ಣ ಸಾವಯವ ಬೇಸಾಯ ಮಾಡುವ ಉದ್ದೇಶ ಹೊಂದಿದ್ದೆ. ಕೆಲವೊಂದು ಕೊರತೆ ನೀಗಿಸಲು ರಸಗೊಬ್ಬರದ ಮೊರೆ ಹೋಗಬೇಕಾಗುತ್ತದೆ. ವರ್ಷಕ್ಕೆ ಒಮ್ಮೆ ಅಡಿಕೆ, ತೆಂಗು ಮತ್ತು ಕಾಫಿ ಬೆಳೆಗೆ ಯೂರಿಯಾ, ಪೊಟ್ಯಾಶ್ ಮತ್ತು ಸೂಪರ್ ಗೊಬ್ಬರ ನೀಡುತ್ತೇನೆ. ಇದರೊಂದಿಗೆ ವಾರ್ಷಿಕವಾಗಿ ಬೇವಿನ ಹಿಂಡಿ, ಕೊಟ್ಟಿಗೆ ಗೊಬ್ಬರ ನೀಡುವುದರಿಂದ ತೋಟ ರೋಗಮುಕ್ತವಾಗಿದೆ. ಸದಾಕಾಲ ಹಸಿರಾಗಿರುತ್ತದೆ” ಎಂದು ಕೃಷಿಕ ಮಲ್ಲರಾಜೇ ಅರಸು ಹೇಳಿದರು.
ಜೀವಾಮೃತ ಪೂರೈಕೆ:
ಅರಸು ಅವರು ಸಾವಯವ ಬೇಸಾಯಕ್ಕೆ ಪೂರಕವಾದ ನಾಟಿ ತಳಿ ಹಸು ಸಾಕಣೆ ಮಾಡುತ್ತಿದ್ದಾರೆ. ಹಳ್ಳಿಕಾರ್, ಬರಗೂರು ತಳಿಗಳ 8 ಜೊತೆ ಹಸುಗಳಿವೆ. ಹೈನುಗಾರಿಕೆಗೆ ಹೆಚ್ಚಿನ ಒತ್ತು ನೀಡದೇ ನಾಟಿ ತಳಿಯಿಂದ ಬರುವ ಗಂಜಲ ಮತ್ತು ಸಗಣಿಯನ್ನು ಸಂಸ್ಕರಿಸಿ ಜೀವಾಮೃತ ಸಿದ್ದಪಡಿಸಿ ಪ್ರತಿಯೊಂದು ಮರಕ್ಕೆ 10 ರಿಂದ 12 ಲೀ ನೀಡುವ ಪದ್ಧತಿ ಅಳವಡಿಸಿಕೊಂಡಿದ್ದಾರೆ. ನಾಟಿ ತಳಿ ಹಾಲಿಗೆ ಬೇಡಿಕೆ ಇದೆ. ನಿತ್ಯ 4 ಲೀಟರ್ ಹಾಲು ಮಾರಾಟ ಮಾಡುತ್ತೇನೆ. ಇದರಿಂದ ಬರುವ ಹಣ ನಿತ್ಯದ ಖರ್ಚಿಗೆ ಬಳಕೆಯಾಗುತ್ತಿದೆ ಎಂದರು.
ಸಮಗ್ರ ತೋಟಗಾರಿಕೆಯಿಂದ ಆದಾಯ:
23- 24 ನೇ ಸಾಲಿನಲ್ಲಿ ಸಮಗ್ರ ತೋಟಗಾರಿಕೆಯಿಂದ 2೦ ಲಕ್ಷ ರೂಪಾಯಿ ಬಂದಿದೆ. 3೦೦ ಕ್ವಿಂಟಾಲ್ ಅಡಿಕೆ ಪ್ರತಿ ಕ್ವಿಂಟಾಲ್ ಗೆ 60 ಸಾವಿರ ರೂಪಾಯಿಯಂತೆ , 20 ಕ್ವಿಂಟಾಲ್ ಕಾಳು ಮೆಣಸು 9 ಲಕ್ಷ ರೂಪಾಯಿಗೆ ಮಾರಾಟವಾಗಿದೆ. ತೆಂಗಿನಕಾಯಿ, ಕಾಫಿ ಹಾಗೂ ಸಪೋಟ ಈ ಎಲ್ಲಕ್ಕೂ ಉತ್ತಮ ದರ ಸಿಕ್ಕಿದೆ. ಸಂಪಾದಿಸಿದ ಹಣದಲ್ಲಿ ಅರ್ಧಷ್ಟು ಹಣವನ್ನು ತೋಟ ನಿರ್ವಹಣೆಗೆ ಬಳಸುತ್ತಿದ್ದೇನೆ” ಎಂದು ಸಂತೃಪ್ತಿಯಿಂದ ಮುಗುಳ್ನಗು ಬೀರುತ್ತಾರೆ.
ತೋಟಗಾರಿಕೆ ಬೇಸಾಯವನ್ನು ವೈಜ್ಞಾನಿಕವಾಗಿ ಮಾಡುವುದರಿಂದ ಬಹುತೇಕ ನಷ್ಟ ಬಹುತೇಕ ಇರುವುದಿಲ್ಲ, ನಾಲ್ಕು ಹಂತದ ಲೆಕ್ಕಾಚಾರದಲ್ಲಿ ವಿವಿಧ ಬೆಳೆ ಮಾಡುವುದರಿಂದ ನಿತ್ಯ ಹಣ ಕಾಣಬಹುದು, ಏಕಬೆಳೆ ಪದ್ದತಿ ರೈತರಿಗೆ ಲಾಭದಾಯಕವಲ್ಲ ಎಂದು ಮಲ್ಲರಾಜೇ ಅರಸು ಪ್ರತಿಪಾದಿಸಿದರು.
ತೋಟಗಾರಿಕೆ ಬೇಸಾಯ ಮಾಡುವ ಪ್ರಗತಿಪರ ರೈತರಿಗೆ ಹನಿ ನೀರಾವರಿ, ತೆಂಗು ಬೇಸಾಯಕ್ಕೆ ಆರ್ಥಿಕ ಸಹಾಯ ಸೇರಿದಂತೆ ಹಲವು ಯೋಜನೆಗಳಿವೆ. ಅವುಗಳ ಪ್ರಯೋಜನವನ್ನು ರೈತರು ಬಳಸಿಕೊಂಡಲ್ಲಿ ಪಡೆದುಕೊಂಡರೆ ನೆಮ್ಮದಿಯ ಕೃಷಿ ಬದುಕು ಸಾಗಸಲು ಸಾಧ್ಯ ಎಂದು ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ನಾಗರಾಜ್ ಹೇಳಿದರು.
































