ಸಿಡಿಲು ಬಡಿತದಿಂದ ರಕ್ಷಿಸುವ ಜೀವರಕ್ಷಕ ಮೊಬೈಲ್ ಆ್ಯಪ್ ಬಗ್ಗೆ ಗೊತ್ತೆ

0
ಸಿಡಿಲು ಬಡಿತ

ಅನಾದಿ ಕಾಲದಿಂದಲೂ ಮಿಂಚು – ಗುಡುಗು – ಸಿಡಿಲು ಮನುಕುಲಕ್ಕೆ ದಿಗಿಲು – ಆತಂಕ ಹುಟ್ಟಿಸುವ ಸಂಗತಿ. ಮನುಷ್ಯರಷ್ಟೇ ಅಲ್ಲ, ಪಶುಪಕ್ಷಿ ಪ್ರಾಣಿಗಳು ಸಹ ಇವುಗಳಿಗೆ ಬೆಚ್ಚುತ್ತವೆ. ಬಯಲು ಪ್ರದೇಶದಲ್ಲಿ ಮೇಯುತ್ತಿರುವ ಜಾನುವಾರುಗಳಿಗೆ ಪ್ರಕೃತಿಯ ಭಾಷೆ ಬಹುಬೇಗ ಅರ್ಥವಾಗುವುದರಿಂದ ಪ್ರಾಕೃತಿಕ ವಿಕೋಪ ಕಾಲದಲ್ಲಿ ಸುರಕ್ಷಿತ ಸ್ಥಳಕ್ಕೆ ಧಾವಿಸುತ್ತವೆ.

ವಿಸ್ತಾರವಾದ ಬಯಲಿನಲ್ಲಿರುವ ಜಾನುವಾರುಗಳು, ವನ್ಯಮೃಗಗಳು ಸಿಡಿಲಿನ ಆಘಾತಕ್ಕೆ ಸಿಲುಕಿ ಮರಣ ಹೊಂದುತ್ತವೆ. ಸೂಕ್ತವಾದ ಆಸರೆ ಹುಡುಕದ ಮನುಷ್ಯರು ಸಹ ಸಿಡಿಲಿಗೆ ಬಲಿಯಾಗುವ ಸಾಧ್ಯತೆ ಅಧಿಕ. ಬಿತ್ತನೆ ಮಾಡುವಾಗ, ನಾಟಿ ಮಾಡುವಾಗ ಹೊಲ – ಗದ್ದೆಗಳಲ್ಲಿರುವ ಕೃಷಿಕರು ಗುಡುಗು – ಮಿಂಚು ಬರುತ್ತಿದ್ದ ಹಾಗೆ ಸುರಕ್ಷಿತ ಸ್ಥಳಗಳಿಗೆ ಧಾವಿಸುವುದು ಅಗತ್ಯ. ಇಲ್ಲದಿದ್ದರೆ ಸಿಡಿಲು ಆ ಪ್ರದೇಶದಲ್ಲಿ ತುಸು ಎತ್ತರದಲ್ಲಿರುವ ಮನುಷ್ಯ ಸೇರಿದಂತೆ ಯಾವುದೇ ವಸ್ತುವಿಗೆ ಬಡಿಯುವ ಸಾಧ್ಯತೆ ಹೆಚ್ಚಳ.

ಗುಡುಗು – ಮಿಂಚು – ಸಿಡಿಲು ಸಹಿತ ಮಳೆ ಬರುವಾಗ ಎತ್ತರವಾದ ಮರಗಿಡಗಳ ಬಳಿ ಆಶ್ರಯ ಪಡೆಯುವುದು ಸಹ ಅಪಾಯಕಾರಿ. ಆಯಾ ಪ್ರದೇಶದಲ್ಲಿರುವ ಎತ್ತರದ ಮರಗಳಿಗೆ ಉದಾಹರಣೆಯಾಗಿ ಹೇಳುವುದಾದರೆ ತೆಂಗಿನ ಮರಗಳಂಥ ಎತ್ತರದ ಮರಗಳಿಗೆ ಸಿಡಿಲು ಅಪ್ಪಳಿಸುತ್ತದೆ. ಇಂಥ ಮರಗಳ ಕೆಳಗೆ ಆಶ್ರಯ ಪಡೆದವರಿಗೂ ತೊಂದರೆ ಉಂಟಾಗುತ್ತದೆ.

ಗುಡುಗು – ಮಿಂಚು – ಸಿಡಿಲು ಸಹಿತ ಮಳೆ ಬರುವಾಗ ಕೆರೆ, ಸರೋವರ – ಸಮುದ್ರ ತೀರಗಳಲ್ಲಿ ಇರುವುದು ಕೂಡ ಅಪಾಯಕಾರಿ. ಸುರಕ್ಷಿತ ಸ್ಥಳಕ್ಕೆ ಧಾವಿಸದೇ ಇಂಥ ಸ್ಥಳಗಳಲ್ಲಿಯೇ ಇರುವ ವ್ಯಕ್ತಿಗಳು ಸಿಡಿಲಿಗೆ ಬಲಿಯಾಗುವ ದುರ್ಘಟನೆಗಳು ಪದೇಪದೇ ವರದಿಯಾಗುತ್ತಲೇ ಇರುತ್ತದೆ.

ಈ ಎಲ್ಲ ಹಿನ್ನೆಲೆಯಲ್ಲಿ ಯಾವ ಪ್ರದೇಶದಲ್ಲಿ ಗುಡುಗು – ಮಿಂಚು – ಸಿಡಿಲು ಹೆಚ್ಚಾಗಿ ಉಂಟಾಗುವ ಸಾಧ್ಯತೆ ಇರುತ್ತದೆಯೋ ಅಂಥ ಸ್ಥಳಗಳ ಮಾಹಿತಿಯನ್ನು ಭಾರತೀಯ ಹವಾಮಾನ ಇಲಾಖೆ ನೀಡುತ್ತದೆ. ರೇಡಿಯೋ – ದೂರದರ್ಶನಗಳನ್ನು ಬಳಸಿಕೊಂಡು ಇಂಥ ಮಾಹಿತಿ ನೀಡಲಾಗುತ್ತದೆ.

ಇತ್ತೀಚಿನ ದಶಕಗಳಲ್ಲಿ ಸಾಮಾನ್ಯವಾಗಿ ಎಲ್ಲಿಯೇ ಹೋದರೂ ಜೊತೆಯಲ್ಲಿ ಮೊಬೈಲ್ ತೆಗೆದುಕೊಂಡು ಹೋಗುವ ಪ್ರವೃತ್ತಿ ಬೆಳೆದಿದೆ. ಇದನ್ನು ಗಮನಿಸಿರುವ ಭಾರತೀಯ ಹವಾಮಾನ ಇಲಾಖೆ, ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟ್ರಾಪಿಕಲ್ ಮೆಟಿಯಾಲಜಿ (IITM-ಪುಣೆ) ಮತ್ತು ಸಚಿವಾಲಯದ ಅಡಿಯಲ್ಲಿ ಅರ್ಥ್ ಸಿಸ್ಟಮ್ ಸೈನ್ಸ್ ಆರ್ಗನೈಸೇಶನ್ (ESSO),  ಗುಡುಗು – ಮಿಂಚು – ಸಿಡಿಲು ಬಗ್ಗೆ ಪೂರ್ವಭಾವಿಯಾಗಿ ಮಾಹಿತಿ ನೀಡುವ ಆ್ಯಪ್ ಸಿದ್ದಪಡಿಸಿದೆ.

Daamini App

ದಾಮಿನಿ ಅಪ್ಲಿಕೇಶನ್

ಮುಂಚಿತವಾಗಿ ಮಾಹಿತಿ ನೀಡುವ ದಾಮಿನಿ ಅಪ್ಲಿಕೇಶನ್ ಉಚಿತ. ಇದನ್ನು ತಮ್ಮತಮ್ಮ ಸ್ಮಾರ್ಟ್ ಮೊಬೈಲ್ ಪೋನ್ ಗಳಲ್ಲಿ ಉಚಿತವಾಗಿ ಡೌನ್ ಲೋಡ್ ಮಾಡಿಕೊಂಡು ಇನ್ ಸ್ಟಾಲ್ ಮಾಡಿಕೊಳ್ಳಬಹುದು. ತೆರೆದ ಬಯಲು, ಹೊಲ ಗದ್ದೆ – ತೋಟಗಳಲ್ಲಿ ದುಡಿಯುವ ಕೃಷಿಕರಿಗೆ ಈ ಅ್ಯಪ್ ವಿಶೇಷ ನೆರವು ನೀಡುತ್ತದೆ. SMS ಮತ್ತು ಆಡಿಯೋ ಸಂದೇಶಗಳನ್ನು ಒದಗಿಸುತ್ತದೆ.

ಈ ಅಪ್ಲಿಕೇಶನ್ ಮೂಲಕ ಸೂಚನೆ ಸಿಕ್ಕ ಕೂಡಲೇ ಸುರಕ್ಷಿತ ಸ್ಥಳಗಳಿಗೆ ಧಾವಿಸುವ ಕಾರ್ಯ ಮಾಡಬೇಕು, ಯಾವುದೇ ಕಾರಣಕ್ಕೂ ವಿಳಂಬ ಮಾಡಬಾರದು. ಹೀಗೆ ಮಾಡಿದಾಗ ತಮ್ಮ ಜೀವಗಳನ್ನು ರಕ್ಷಿಸಿಕೊಳ್ಳುವುದರ ಜೊತೆಗೆ ಸಹವರ್ತಿಗಳ ಜೀವಗಳನ್ನು ರಕ್ಷಣೆ ಮಾಡಬಹುದು. ಇನ್ನೇಕೆ ತಡ , ನೀವು ಆಂಡ್ರಾಯ್ಡ್ ಆಧಾರಿತ ಮೊಬೈಲ್ ಪೋನ್ ಬಳಸುತ್ತಿದ್ದರೆ “ಗೂಗಲ್ ಪ್ಲೇ ಸ್ಟೋರ್ “ ಮುಖಾಂತರ ಇದನ್ನು ಡೌನ್ ಲೋಡ್ ಮಾಡಿ ಇನ್ ಸ್ಟಾಲ್ ಮಾಡಿಕೊಳ್ಳಿ.

LEAVE A REPLY

Please enter your comment!
Please enter your name here