ಭತ್ತದ ಬೆಳೆಗೆ ನೀಲಿ ಹಸಿರು ಪಾಚಿಯ ಬಳಕೆ ವಿಧಾನ

0
Rice fields in Bali

ಮೊದಲು ಗದ್ದೆಯನ್ನು 2-3 ಸಲ ಕೆಸರು ಮಾಡಿ ಭೂಮಿ ಸಿದ್ಧಪಡಿಸಿಕೊಳ್ಳಬೇಕು. ನಂತರ 5-10 ಸೆಂ.ಮೀ. ನಷ್ಟು ನೀರು ಹರಿಸಿದ ಮೇಲೆ ನೀರು ತಿಳಿಯಾಗುವವರೆಗೆ ಬಿಡಬೇಕು. ಒಂದು ಹೆಕ್ಟೇರ್ ಭೂಮಿಗೆ 10 ಕಿ.ಗ್ರಾಂ ನಂತೆ ಮಣ್ಣು ಆಧಾರಿತ ಒಣಗಿದ ಪಾಚಿಯನ್ನು ಎಲ್ಲ ಕಡೆ ಹಾಕಬೇಕು. ಎರಡು – ಮೂರು ವಾರಗಳಲ್ಲಿ ಪಾಚಿಯು ಚೆನ್ನಾಗಿ ಬೆಳೆಯುತ್ತದೆ.

ಈ ನಂತರ ನಿಂತ ನೀರನ್ನು ನಿಧಾನವಾಗಿ ಬಸಿದು ಪಾಚಿಯನ್ನು ಮಣ್ಣಿನಲ್ಲಿ ಬೆರೆಸಬೇಕು. ಬಳಿಕ ನಾಟಿ ಮಾಡಬೇಕು. ಹೀಗೆ ಎರಡು – ಮೂರು ವರ್ಷಗಳವರೆಗೆ ಸತತವಾಗಿ ಪೂರೈಸಿದ ನಂತರ ಭೂಮಿಯಲ್ಲಿ ಸಾಕಷ್ಟು ನೀಲಿ ಹಸಿರು ಪಾಚಿಯು ವೃದ್ಧಿಯಾಗುತ್ತದೆ. ಈ ಬಳಿಕ  ಜೈವಿಕ ಗೊಬ್ಬರದ ಬಳಕೆಯನ್ನು 2-3 ವರ್ಷಗಳವರೆಗೆ ನಿಲ್ಲಿಸಬಹುದು. ಭತ್ತದ ಗದ್ದೆಗಳಲ್ಲಿಯೇ ಇದನ್ನು ಕೆಳಗೆ ವಿವರಿಸಿದಂತೆ ಬೆಳೆಸಿ ಉಪಯೋಗಿಸಬಹುದು.

ಬೆಳೆಸುವ ಕ್ರಮ

1. ಗದ್ದೆಯನ್ನು 2-3 ಸಲ ಕೆಸರು ಮಾಡಿ ಭೂಮಿ ಸಿದ್ಧಪಡಿಸಿಕೊಳ್ಳಬೇಕು.

2. ಸುಮಾರು 10 ಮೀ. X 10 ಮೀ. ಅಳತೆಯ ಸಣ್ಣ ಮಡಿಗಳನ್ನು ಮಾಡಿ ಗಟ್ಟಿಯಾಗಿ ಬದುಗಳನ್ನು ಹಾಕಿ ಪ್ರತಿ ಮಡಿಗೂ 1 ಕಿ.ಗ್ರಾಂ ಸೂಪರ್ ಫಾಸ್ಟೇಟ್, 50 ಗ್ರಾಂ ಸುಣ್ಣ ಹಾಗೂ 100 ಗ್ರಾಂ ಕಾರ್ಬೋಫ್ಯುರಾನ್ ಹಾಕಿ ಮಣ್ಣಿನಲ್ಲಿ ಚೆನ್ನಾಗಿ ಬೆರೆಸಬೇಕು.

3. ಮಡಿಗೆ ನೀರು ಹಾಯಿಸಿ 5-10 ಸೆಂ.ಮೀ. ಆಳ ನೀರು ನಿಲ್ಲಿಸಬೇಕು. ನೀರು ತಿಳಿಯಾದಾಗ 1 ಕಿ.ಗ್ರಾಂ ಮಣ್ಣು ಆಧಾರಿತ ನೀಲಿ ಹಸಿರು ಪಾಚಿ ಗೊಬ್ಬರವನ್ನು ಸಮವಾಗಿ ಹರಡಬೇಕು.

4. ಬೇಸಿಗೆ ಕಾಲದಲ್ಲಿ ಪಾಚಿ ಶೀಘ್ರವಾಗಿ ಬೆಳೆದು 7-10 ದಿವಸಗಳಲ್ಲಿ ಪಾಚಿಯ ದಪ್ಪ ಪದರು ನೀರಿನ ಮೇಲೆ ತೇಲುತ್ತದೆ.

5. 15 ದಿವಸಗಳ ನಂತರ ಮಡಿಗಳಲ್ಲಿಯ ನೀರನ್ನು ಬಸಿದು ಪಾಚಿ ಒಣಗಲು ಬಿಡಬೇಕು. ನಂತರ ಪಾಚಿಯ ಪದರನ್ನು ಮಣ್ಣುಸಮೇತ ಶೇಖರಿಸಿ ನೆರಳಿನಲ್ಲಿ ಒಣಗಿಸಿ ಶೇಖರಿಸಬಹುದು. ಪ್ರತಿ ಮಡಿಯಲ್ಲೂ 15-20 ಕಿ.ಗ್ರಾಂ ಒಣ ಪಾಚಿ ದೊರೆಯುತ್ತದೆ. ಅದೇ ಮಡಿಯನ್ನು ಮತ್ತೆ ಪಾಚಿ ಬೆಳೆಸಲು ಬಳಸಬಹುದು. ಒಣಗಿದ ಪಾಚಿಯನ್ನು ಬಹಳ ಕಾಲದವರೆಗೆ ಬಳಸಬಹುದು.

ಕೃಷಿ ತಂತ್ರಜ್ಞಾನ ನಿರ್ವಹಣಾ ಸಂಸ್ಥೆ, ಕೃಷಿ ಇಲಾಖೆ, ಮದ್ದೂರು

LEAVE A REPLY

Please enter your comment!
Please enter your name here