ಮಲೆನಾಡಿನ ಮಳೆಗಾಲದ ಅತಿಥಿಗಳು

0
Malabar pit viper or Malabar rock pit viper
ಚಿತ್ರ – ಲೇಖನ: ದಿನೇಶ್ ಚಲವಾದಿ, ವನ್ಯಜೀವಿ ಛಾಯಾಗ್ರಹಕರು

ಮಳೆ ಪ್ರಕೃತಿಗೆ ಜೀವಧಾರೆ, ಮಳೆ ರೈತನಿಗೆ ಉದ್ಯೋಗ, ಮಳೆ ಹಳ್ಳಿ ಬದುಕಿಗೆ ಉತ್ತೇಜನ, ಮಳೆ ಪ್ರಾಣಿ ಪಕ್ಷಿಗಳಿಗೆ ಹಬ್ಬದೌತಣ, ಮಳೆ ಸರಿಸೃಪ-ಕೀಟಗಳ ಬದುಕಿಗೆ ಆಧಾರ ಹೀಗೆ ಮಳೆಯ ಅನೇಕ ಬಗೆಯ ಉಪಯೋಗಗಳಿಂದ ಸಂಭ್ರಮಿಸುವುದು ಒಂದೆಡೆ.

Malabar pit viper or Malabar rock pit viper

ಮಳೆ,  ಪಟ್ಟಣವಾಸಿಗಳಿಗೆ ಟ್ರಾಫಿಕ್ ಕಿರಿಕಿರಿ, ಜನ ಜೀವನ ಅಸ್ತವ್ಯಸ್ತ. ಅತಿವೃಷ್ಠಿಯಿಂದ ಹಾನಿ, ವ್ಯಾಪಾರ ವ್ಯವಹಾರಗಳಿಗೆ ತೊಂದರೆ ಎಂದು ಶಪಿಸುವವರು ಇನ್ನೊಂದೆಡೆ.

Malabar pit viper or Malabar rock pit viper

ಪಶ್ಚಿಮ ಘಟ್ಟಗಳಲ್ಲಿ ಮಳೆ ಬಂತೆಂದರೆ ಸ್ವರ್ಗದ ಬಾಗಿಲು ತೆರೆದಂತೆ. ನಿತ್ಯಹರಿದ್ವರ್ಣದ ಕಾಡುಗಳಲ್ಲಿ ಸುಯ್ಯೋ ಎಂದು ಬೀಳುವ ಮಳೆ ಕೆಲವು ಅತಿಥಿಗಳನ್ನು ಕೈಬೀಸಿ ಕರೆಯುತ್ತದೆ. ಚಿಟಪಟ ಸದ್ದಿನೊಂದಿಗೆ ಪ್ರಾರಂಭವಾಗುವ ವರ್ಷಧಾರೆಗೆ ಕೀಟಗಳು ಉತ್ತೇಜನಗೊಂಡು ಸಂಭ್ರಮಿಸಲು ಪ್ರಾರಂಭಿಸುತ್ತವೆ.

Asian vine snakes

ಇತ್ತ ಮಂಡೂಕಗಳು ಕೀಟಗಳನ್ನು ಬೇಟೆಯಾಡಿ ತಮ್ಮ ಹೊಟ್ಟೆಗಳನ್ನು ತುಂಬಿಸಿಕೊಂಡು ಕರ್‌ರ್‌ರ್‌ರ್ ಕಟಕಟಕಟ ಎಂದು ತಮ್ಮ ಸುಂದರ ಕಂಠದಲ್ಲಿ ಅರಚುತ್ತಾ ಸಂಗಾತಿಗಳನ್ನು ಹುಡುಕಿಕೊಂಡು ವಂಶಾಭಿವೃದ್ಧಿಯಲ್ಲಿ ತೊಡಗುತ್ತವೆ. ಈ ಮಂಡೂಕಗಳನ್ನು ಭಕ್ಷಿಸಲು ಹಾವುಗಳು ಹೊಂಚುಹಾಕಿ ಇವುಗಳು ಮಾಡುವ ಶಬ್ಧಗಳನ್ನು ಗ್ರಹಿಸಿ ಬೇಟೆಯಾಡಿ ತಮ್ಮ ಹೊಟ್ಟೆ ತುಂಬಿಸಿಕೊಳ್ಳುತ್ತವೆ.

ಪ್ರತಿ ವರ್ಷದ ಜೂನ್ ತಿಂಗಳಿನಲ್ಲಿ ಮಳೆಗಾಲ ಪ್ರಾರಂಭವಾದರೆ ಸೆಪ್ಟೆಂಬರ್‌ವರೆಗೂ ನಮಗೆ ವರುಣನ ಕೃಪಕಟಾಕ್ಷ ಇರುತ್ತದೆ. ಅದರೆ ಈ ವರ್ಷ ಮಾತ್ರ ಯಾಕೋ ವರುಣದೇವ ಮುನಿಸಿಕೊಂಡಂತೆ ಕಾಣುತ್ತದೆ.

Malabar tree toad

ಜೂನ್ ತಿಂಗಳಲ್ಲಿ ಪ್ರಾರಂಭವಾಗಬೇಕಿದ್ದ ಮಳೆಗಾಲ ನಮಗೆ ಜುಲೈ ತಿಂಗಳು ಆದರೂ ಕುಂಟುತ್ತಾ ಪ್ರವೇಶಿಸುತ್ತಿದೆ. ವನ್ಯಜೀವಿ ಛಾಯಾಗ್ರಹಕನಾದ ನನಗೆ ಪ್ರತಿ ಮಳೆಗಾಲದಲ್ಲೂ ಪಶ್ಚಿಮಘಟ್ಟದ ಕಾಡು-ಮೇಡುಗಳನ್ನು ಅಲೆದು ಅಲ್ಲಿ ಸಿಗುವ ಕೀಟಗಳು, ಕಪ್ಪೆಗಳು, ಹಾವುಗಳು ಎಲ್ಲೆಂದರಲ್ಲಿ ಬಗೆಬಗೆಯಾಗಿ ಬೆಳೆಯುವ ನಾಯಿಕೊಡೆಗಳನ್ನು ಹುಡುಕಿಕೊಂಡು ಹೋಗಿ ಅವುಗಳನ್ನು ನನ್ನ ಕ್ಯಾಮೆರಾದಲ್ಲಿ ಸೆರೆಯಿಡಿದು ಸಂಗ್ರಹದ ಪುಟಗಳಿಗೆ ಸೇರಿಸುವುದು ಎಂದರೆ  ಎಲ್ಲಿಲ್ಲದ ಆಸಕ್ತಿ.

ನಾನು ನನ್ನ ಗೆಳೆಯ ಬೆಳ್ಳಂಬೆಳಗ್ಗೆ ಬೆಂಗಳೂರಿನಿಂದ ಹೊರಟು ಪಶ್ಚಿಮಘಟ್ಟವನ್ನು ಮಧ್ಯಾಹ್ನದ ಹೊತ್ತಿಗೆ ತಲುಪಿದೆವು.  ಸ್ವಲ್ಪ ಹೊತ್ತು ವಿಶ್ರಮಿಸಿದೆವು.   ಸೂರ್ಯಾಸ್ತ ನಂತರ ಕ್ಯಾಮೆರಾವನ್ನು ಸಿದ್ದ ಮಾಡಿಕೊಂಡು ಅಗತ್ಯವಾಗಿ ಬೇಕಾದ ಟಾರ್ಚ್, ಕೊಡೆ, ಕುಡಿಯಲು  ನೀರನ್ನು ತೆಗೆದುಕೊಂಡು ದಟ್ಟ ಅರಣ್ಯದಲ್ಲಿ ಕೀಟ, ಸರಿಸೃಪ ಹಾಗೂ ಕಪ್ಪೆಗಳನ್ನು ಹುಡುಕಿಕೊಂಡು ಹೊರೆಟೆವು.

Wayanad bush frog or common bush frog

ಸೂರ್ಯಾಸ್ತವಾಗುತ್ತಿದ್ದಂತೆ ಮಂಡೂಕಗಳು ತಮ್ಮ ಇರುವಿಕೆಯನ್ನು ನಮಗೆ ತಿಳಿಸುತ್ತಿದ್ದವು. ಕಾಡಿಗೆ ಪ್ರವೇಶಿಸುತ್ತಿದ್ದಂತೆ ನಮಗೆ ಅಪರೂಪದಲ್ಲಿ ಅಪರೂಪದ ಏಷ್ಯಾದ ಚಾವಟಿ ಹಾವು (Asian vine snakes) ಕಣ್ಣಿಗೆ ಬಿತ್ತು. ಸಾಮಾನ್ಯವಾಗಿ ಹಸಿರು ಚಾವಟಿ ಹಾವುಗಳು ಪಶ್ಚಿಮಘಟ್ಟಗಳಲ್ಲಿ ಅತೀ ಹೆಚ್ಚಾಗಿ ಕಾಣಸಿಗುತ್ತವೆ. ಆದರೆ ಅದೇ ಜಾತಿಗೆ ಸೇರಿದ ಈ ಹಾವು ಸ್ವಲ್ಪಮಟ್ಟಿಗೆ ಅಪರೂಪದ್ದೇ ಆಗಿದೆ. ಮೈಯ ಮೇಲ್ಬಾಗದಲ್ಲಿ ಹಚ್ಚ ಹಸಿರಿನಿಂದ ಕೂಡಿದ್ದು, ಕೆಳಭಾಗದಲ್ಲಿ ನೀಲಿ ಮಿಶ್ರಿತ ಹಸಿರು ಬಣ್ಣದಿಂದ ಕೂಡಿರುತ್ತದೆ. ಇದು ಸ್ವಲ್ಪ ಮಟ್ಟಿಗೆ ವಿಷಕಾರಿ ಹಾವು ಬೇರೆ ವೀಷಪೂರಿತ ಹಾವುಗಳಿಗಳಂತೆ ಇದರಲ್ಲಿರುವ ವಿಷ, ಮನುಷ್ಯರ ಪ್ರಾಣಕ್ಕೆ ಕಂಟಕವಲ್ಲ. ಆದರೆ ಕಡಿತದಿಂದ ತೀವ್ರ ಅಲರ್ಜಿಯಾಗಬಹುದು.

ಮುಂದೆ ಸಾಗುತ್ತಿದ್ದಂತೆ ನಮಗೆ ಕಂಡದ್ದು ವಿಶೇಷವಾದ ಕಪ್ಪೆ  (Malabar tree toad) ಇದು ಮಧ್ಯಮಗಾತ್ರದ ತೆಳ್ಳಗಿನ ಕಪ್ಪೆ, ದಪ್ಪ ಕಣ್ಣುಗಳು, ಉದ್ದವಾದ ಕಾಲಬೆರಳುಗಳು ಹಾಗೂ ಮೈಯೆಲ್ಲ ಗುಳ್ಳೆಗಳನ್ನು ಹೊಂದಿರುವ ಬಲು ಅಪರೂಪದ ಜೀವಿ. ಈ ಜಾತಿಯ ಕಪ್ಪೆಗಳು ಹೆಚ್ಚಾಗಿ ಮರದ ಆವಾಸಸ್ಥಾನಗಳಲ್ಲಿ ವಾಸಿಸುತ್ತವಾದರೂ ಕೆಲವು ಮರಗಳ ತರಗೆಲೆಗಳ ನಡುವೆ ಕಂಡುಬರುತ್ತವೆ.

ಇವುಗಳನ್ನು ಹೊರತುಪಡಿಸಿದರೆ ನಮಗೆ ಸಿಕ್ಕ ಮತ್ತೊಂದು ಸರಿಸೃಪ “ಗೂಳೀ ಮಂಡಲ ಹಾವು” (Malabar pit viper or Malabar rock pit viper) ಇವು ಪಶ್ಚಿಮಘಟ್ಟಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ವಿಷಪೂರಿತ ಹಾವುಗಳು.  ಇವುಗಳೂ ಹೆಚ್ಚಾಗಿ ಮರದ ಮೇಲೆ ವಿಶ್ರಮಿತ್ತಿರುತ್ತವೆ. ಕತ್ತಲಾಗುತ್ತಿದ್ದಂತೆ ಮರದಿಂದ ಕೆಳಗಿಳಿದು ಕಪ್ಪೆ ಹಾಗೂ ಇತರ ಸಣ್ಣ ಜಾತಿಯ ಜೀವಿಗಳನ್ನು ಬೇಟೆಯಾಡುತ್ತವೆ. ಈ ಜಾತಿಯ ಹಾವುಗಳಲ್ಲಿ ವಿಶೇಷವೆಂದರೆ ಬಣ್ಣಗಳು.  ನಮ್ಮ ಭಾರತದ ಪಶ್ಚಿಮಘಟ್ಟದಲ್ಲಿ ಇದುವರೆವಿಗೂ ಸುಮಾರು 16 ರಿಂದ 17 ಬಗೆಯ ಬಣ್ಣಗಳನ್ನು ಹೊಂದಿರುವ ಪ್ರಭೇದಗಳನ್ನು ಗುರುತಿಸಲಾಗಿದೆ. ಅವುಗಳಲ್ಲಿ ನಮಗೆ ಸಿಕ್ಕ ಕೆಲವು ಬಣ್ಣಗಳ ಹಾವುಗಳನ್ನು ಇಲ್ಲಿ ತೋರಿಸಲಾಗಿದೆ.  ಇವುಗಳು ಅತೀ ವಿಷಪೂರಿತ ಹಾವುಗಳು. ಆದರೂ ಇವುಗಳಿಂದ ಮನುಷ್ಯನಿಗೆ ಸಾವುಗಳು ಸಂಭವಿಸಿರುವುದು ತೀರ ವಿರಳ. ಈ ಹಾವುಗಳು ಮನುಷ್ಯನಿಗೆ ಕಚ್ಚಿದರೆ ಕಚ್ಚಿದ ಭಾಗದಲ್ಲಿ ಅತಿಯಾದ ಊತ ಹಾಗೂ ಬಾಧೆ ಕಾಡುತ್ತದೆ.

ಇನ್ನು ನಮಗೆ ಕಂಡದ್ದು ಮಂಡೂಕಗಳು ಮೊದಲಿಗೆ ನಾವು ನೋಡಿದ್ದು, ವೈನಾಡು ಬೇಲಿ ಕಪ್ಪೆ (Wayanad bush frog or common bush frog) ಇವುಗಳು ನಿತ್ಯ ಹರಿದ್ವರ್ಣದ ಕಾಡುಗಳಲ್ಲಿ ಹಾಗೂ ಪಶ್ಚಿಮಘಟ್ಟದ ಹಳ್ಳಿಗಾಡುಗಳಲ್ಲಿ ಸಾಮಾನ್ಯವಾಗಿ ಕಂಡುಬರುತ್ತದೆ. ಮೂರ್ತಿ ಚಿಕ್ಕದಾದರೂ ಸೂರ್ಯಾಸ್ತವಾಗುತ್ತಿದ್ದಂತೆ ಇವುಗಳು ತಮ್ಮ ತಮ್ಮ ಸಂಗಾತಿಗಳನ್ನು ಸೇರಲು ಹೊರಸೂಸುವ ಶಬ್ಧ ಮಾತ್ರ ಜೋರಾಗಿರುತ್ತದೆ. ಗಂಡು ಕಪ್ಪೆಗಳು ತನ್ನ ಕತ್ತಿನ ಕೆಳಭಾಗವನ್ನು ಭೂಮಂಡಲದಂತೆ ಊದಿಸಿಕೊಂಡು ಜೋರಾಗಿ ಶಬ್ದ ಮಾಡುತ್ತವೆ.  ಹೆಣ್ಣು ಕಪ್ಪೆಗಳು ಹತ್ತಿರ ಬರುತ್ತಿದ್ದಂತೆ ಇನ್ನೂ ಜೋರಾಗಿ ಶಬ್ದ ಮಾಡುತ್ತವೆ.

LEAVE A REPLY

Please enter your comment!
Please enter your name here