ಕಾವೇರಿ ನದಿ ನೀರು;  ತಮಿಳುನಾಡು ಆತುರಪಡುವ ಅಗತ್ಯವಿಲ್ಲ

0

ಬೆಂಗಳೂರು: ಕಾವೇರಿ ನದಿ ನೀರು ಹಂಚಿಕೆ ವಿಚಾರವಾಗಿ ನಾವು ನ್ಯಾಯಾಲಯದ ಸಂಕಷ್ಟ ಸ್ಥಿತಿ ನೀರು ಹಂಚಿಕೆ ಸೂತ್ರವನ್ನು ಗೌರವಿಸುತ್ತೇವೆ. ತಮಿಳುನಾಡಿನವರು ಇಷ್ಟು ಆತುರವಾಗಿ ಸುಪ್ರೀಂ ಕೋರ್ಟ್ ಮೆಟ್ಟಿಲೇರುವ ಅಗತ್ಯ ಇರಲಿಲ್ಲ ಎಂದು ಬೃಹತ್ ನೀರಾವರಿ ಸಚಿವರೂ ಆಗಿರುವ ಡಿಸಿಎಂ ಡಿ ಕೆ ಶಿವಕುಮಾರ್ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಎರಡೂ ರಾಜ್ಯಗಳ ಹಿತ ಕಾಯಲು ನಾವು ಒಟ್ಟಾಗಿ ಕೆಲಸ ಮಾಡಬೇಕು ಎಂದು ಅವರು ಕೆಂಪೇಗೌಡ ಬಡಾವಣೆ ಪರಿಶೀಲನೆ ಸಂದರ್ಭದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.

ತಮಿಳುನಾಡು ಸರಕಾರ ಕಾವೇರಿ ನೀರು ಬಿಡುಗಡೆ ಮಾಡಲು ಕರ್ನಾಟಕಕ್ಕೆ ಸೂಚಿಸುವಂತೆ ಕೋರಿ ಸುಪ್ರೀಂ ಕೋರ್ಟ್ ಗೆ ಸಲ್ಲಿಸಿರುವ ಅರ್ಜಿ ವಿಚಾರಣೆಗೆ ಅಂಗೀಕಾರ ಆಗಿರುವ ಬಗ್ಗೆ ಗಮನ ಸೆಳೆದಾಗ ಅವರು ಈ ರೀತಿ ಉತ್ತರಿಸಿದರು.

“ಕರ್ನಾಟಕದ ಕಾವೇರಿ ಜಲಾನಯನ ಪ್ರದೇಶದಲ್ಲಿ ಈ ಹಂಗಾಮಿನಲ್ಲಿ ಬೀಳುತ್ತಿರುವ ಮಳೆ ಹಾಗೂ ಆಣೆಕಟ್ಟುಗಳಿಗೆ ಒಳಹರಿವು ಪ್ರಮಾಣ ಆಧರಿಸಿ ಕ್ರಮ ಕೈಗೊಳ್ಳುತ್ತಿದ್ದೇವೆ. ಮಂಡ್ಯದ ರೈತರಿಗೆ ಯಾವುದೇ ರೀತಿಯ ಬಿತ್ತನೆ ಮಾಡಬೇಡಿ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಚಲುವರಾಯಸ್ವಾಮಿ ಅವರು ಈಗಾಗಲೇ ಮನವಿ ಮಾಡಿದ್ದಾರೆ.

ನಮ್ಮ ಅಗತ್ಯ ಪ್ರಮಾಣದ ಕುಡಿಯುವ ನೀರು ಇಟ್ಟುಕೊಂಡು ತಮಿಳುನಾಡಿಗೆ ನೀರು ನೀಡಲು ಬದ್ಧರಾಗಿದ್ದೇವೆ.  ನೀರು ಹರಿಸುವ ಸಂಪೂರ್ಣ ಅಧಿಕಾರ ಪ್ರಾಧಿಕಾರದ ಬಳಿ ಇದೆ. ನಾವು ಎರಡೂ ರಾಜ್ಯದ ರೈತರನ್ನು ಉಳಿಸಬೇಕಿದೆ. ಎಲ್ಲರೂ ವಾಸ್ತವಾಂಶ ಅರಿತು ಹೆಜ್ಜೆ ಇಡಬೇಕಿದೆ. ನಮ್ಮ ರೈತರ ಜಮೀನು ಒಣಗಬಾರದು, ಅದೇ ರೀತಿ ತಮಿಳುನಾಡಿನ ರೈತರ ಜಮೀನು ಒಣಗಬಾರದು. ಹಾಗೆ ಕ್ರಮ ಕೈಗೊಳ್ಳಬೇಕಿದೆ ಎಂದರು.

ತಮಿಳುನಾಡಿನ ಅರ್ಜಿ ವಿಚಾರವಾಗಿ ಕಾನೂನು ತಜ್ಞರ ಜತೆ ಚರ್ಚೆ ಮಾಡುತ್ತೇನೆ. ನಾವು ಯಾವುದೇ ಸಂಘರ್ಷಕ್ಕೆ ಮುಂದಾಗುವ ಮನಸ್ಥಿತಿ ಇಲ್ಲ. ನಾವೆಲ್ಲರೂ ಅಣ್ಣತಮ್ಮಂದಿರಂತೆ. ಸಂಘರ್ಷಕ್ಕೆ ಇಳಿಯದೇ ಸಮಸ್ಯೆ ಬಗೆಹರಿಸಿಕೊಳ್ಳಬೇಕು” ಎಂದು ತಿಳಿಸಿದರು.

LEAVE A REPLY

Please enter your comment!
Please enter your name here