ಕೃಷಿ ಮತ್ತು ತೋಟಗಾರಿಕೆ ಬೆಳೆಗಳನ್ನು ಬಾಧಿಸುವ ರೋಗಗಳಿಗೆ ಕಾರಣವಾದ ರೋಗಾಣುಗಳು ಬೀಜ, ಮಣ್ಣು, ಕೀಟ, ನೀರು ಮತ್ತು ಗಾಳಿಯ ಮೂಲಕ ಪಸರಿಸುತ್ತವೆ. ಈ ರೋಗಗಳನ್ನು ತಡೆಗಟ್ಟಲು ವಿವಿಧ ರೀತಿಯ ಬೇಸಾಯ ಪದ್ದತಿಗಳು, ರಾಸಾಯನಿಕ, ಜೈವಿಕ ಹಾಗೂ ಇತರೆ ರೋಗನಾಶಕ ವಸ್ತುಗಳನ್ನು ಬಳಸುವುದು ಸಾಮಾನ್ಯವಾಗಿ ಕಂಡು ಬರುತ್ತಿದೆ. ಆದರೆ ಅತಿಯಾದ ಮತ್ತು ಅಸಮರ್ಪಕವಾದ ರಾಸಾಯನಿಕ ರೋಗನಾಶಕಗಳ ಬಳಕೆಯಿಂದಾಗಿ ದುಷ್ಪರಿಣಾಮಗಳು ಉಂಟಾಗುತ್ತಿವೆ. ಆದ್ದರಿಂದ ಪರಿಸರ ಹಾಗೂ ಆರೋಗ್ಯ ಪ್ರಜ್ಞೆಯಿಂದ ದೃಷ್ಟಿಯಿಂದ ಸಸ್ಯಗಳಿಗೆ ತಗಲುವ ರೋಗಗಳ ನಿರ್ವಹಣೆಯಲ್ಲಿ ಸಾವಯವ ಪದ್ಧತಿ ಹೆಚ್ಚು ಪರಿಣಾಮಕಾರಿ.


ಇದರಲ್ಲಿ ಜೈವಿಕ ವಿಧಾನಗಳನ್ನು ಬಹಳ ಹಿಂದಿನಿಂದಲೂ ಅಳವಡಿಸಿಕೊಳ್ಳಲಾಗುತ್ತಿದೆ. ಜಾಗತಿಕ ಮಟ್ಟದಲ್ಲಿ ಇಂದು ಸಾವಯವ ಕೃಷಿಪದ್ಧತಿಯಲ್ಲಿ ಬೆಳೆದ ಕೃಷಿ ಉತ್ಪನ್ನಗಳಿಗೆ ಬೇಡಿಕೆ ತೀವ್ರವಾಗಿ ಏರುತ್ತಿರುವ ಹಿನ್ನಲೆಯಲ್ಲಿ ಜೈವಿಕ ವಿಧಾನಗಳನ್ನು ಕ್ರಮಬದ್ದವಾಗಿ ಅಳವಡಿಸಿ ರೋಗ ನಿರ್ವಹಣೆ ಮಾಡುವುದು ಸೂಕ್ತ. ಈ ದಿಶೆಯಲ್ಲಿ ಪ್ರಯತ್ನಿಸಲಾಗಿ, ಟ್ರೈಕೋಡರ್ಮ ಎಂಬ ಶಿಲೀಂಧ್ರ ಸಾಮಾನ್ಯವಾಗಿ ಎಲ್ಲ ಪ್ರದೇಶಗಳ ಮಣ್ಣಿನಲ್ಲಿ ಬದುಕುತ್ತಿದ್ದು, ಒಂದು ಪರಿಸರಸ್ನೇಹಿ ಜೈವಿಕ ರೋಗನಾಶಕವಾಗಿದೆ.

ಟ್ರೈಕೋಡರ್ಮ: ಈ ರೋಗನಾಶಕದ ಬಳಕೆಯಿಂದಾಗಿ ಅತ್ಯಂತ ಅಪಾಯಕಾರಿ ರೋಗಗಳನ್ನುಂಟು ಮಾಡುವ, ಮಣ್ಣಿನಲ್ಲಿ ವಾಸಿಸುವ ಮತ್ತು ಮಣ್ಣಿನಿಂದ ಹರಡುವ ಸ್ಕ್ಲೀರೋಷಿಯಂ, ರೈಜೋಕ್ಟೋನಿಯಾ, ಪಿಥಿಯಂ, ಫೈಟೋಪ್ತೋರಾ, ಫುಜೇರಿಯಂ, ಮ್ಯಾಕ್ರೋಫೋಮಿನಾ ಮುಂತಾದ ಬೇರು ಕೊಳೆರೋಗ, ಬಾಡು/ಸೊರಗು ರೋಗಗಳನ್ನುಂಟು ಮಾಡುವ ಶಿಲೀಂದ್ರಗಳನ್ನು ನಿರ್ವಹಣೆ ಮಾಡಬಹುದು. ಟ್ರೈಕೋಡರ್ಮ ಶಿಲೀಂಧ್ರದಲ್ಲಿ ಸುಮಾರು 18-20 ಪ್ರಬೇಧಗಳಿವೆ. ಅವುಗಳಲ್ಲಿ ಟ್ರೈಕೋಡರ್ಮ ವಿರಿಡೆ ಮತ್ತು ಟ್ರೈಕೋಡರ್ಮ ಹಾಜರಿಯಾನಂ ಪ್ರಮುಖ ಜೈವಿಕ ರೋಗನಾಶಕಗಳನ್ನಾಗಿ ಬಳಸಬಹುದು.

ಉತ್ಪಾದನೆಯ ವಿಧಾನ: ಮೊದಲಿಗೆ ವಿಶಿಷ್ಟ ಮಾಧ್ಯಮ ಬಳಸಿ ಮಣ್ಣಿನಿಂದ ಟ್ರೈಕೋಡರ್ಮವನ್ನು ಬೇರ್ಪಡಿಸಲಾಗುತ್ತದೆ. ನಂತರ ಪ್ರಯೋಗಾಲಯದಲ್ಲಿ ಪೊಟ್ಯಾಟೊ ಡೆಕ್ಸ್ಟ್ರೋಸ್ ದ್ರವ್ಯ ಮಾಧ್ಯಮದಲ್ಲಿ 5 ರಿಂದ 8 ದಿವಸ ಬೆಳೆಸಲಾಗುತ್ತದೆ. ನಂತರ ಸಂಸ್ಕರಿಸಿದ ಟಾಲ್ಕಮ್ ಪುಡಿಯಲ್ಲಿ ಬೆರೆಸಿ (ಪ್ರತಿ ಕೆ. ಜಿ. ಟಾಲ್ಕಮ್ ಪುಡಿಗೆ 500 ಮಿ. ಲೀ. ಟ್ರೈಕೋಡರ್ಮ) ಸೂಕ್ತವಾದ ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಲಾಗುವುದು. ಪ್ರಾಯೋಗಿಕವಾಗಿ ಪ್ರತಿ ಗ್ರಾಂ. ಪುಡಿಯ ಮಿಶ್ರಣದಲ್ಲಿ ಒಂದು ಕೋಟಿಗೂ ಅಧಿಕ ಸಂಖ್ಯೆಯಲ್ಲಿ ಟ್ರೈಕೋಡರ್ಮ ಜೀವ ಕಣಗಳು ಲಭ್ಯವಿರುತ್ತವೆ.

                                      ===================
ರೈತರು ಕೂಡ ಅತಿ ಕಡಿಮೆ ಖರ್ಚಿನಲ್ಲಿ ತಮ್ಮದೇ ಸ್ಥಳಗಳಲ್ಲಿ ಟ್ರೈಕೊಡರ್ಮ ಬೆಳೆಸಿ ಉಪಯೋಗಿಸುವ ವಿಧಾನಗಳಿವೆ. ಅವುಗಳಲ್ಲಿ ಪ್ರಮುಖವಾಗಿ ರೈತರು ಟ್ರೈಕೋಡರ್ಮವನ್ನು ಪ್ರಯೋಗಾಲಯಗಳಲ್ಲಿ ಲಭ್ಯವಿರುವ ಮೂಲ ರೂಪದಲ್ಲಿ ತಂದುಕೊಂಡು ತಿಪ್ಪೆಗೊಬ್ಬರ ಅಥವಾ ಬೆಳೆಗಳ ತ್ಯಾಜ್ಯಗಳಲ್ಲಿ 10 ರಿಂದ 15 ದಿವಸಗಳವರೆಗೆ ಸೇರಿಸಬೇಕು. ಇದರಿಂದ ಟ್ರೈಕೋಡರ್ಮ ಸಂಖ್ಯೆ ಉಲ್ಬಣಗೊಳ್ಳುತ್ತದೆ ಅಥವಾ ಒಂದು ಕೆ. ಜಿ. ಟ್ರೈಕೋಡರ್ಮ ಪುಡಿಯನ್ನು ಒಂದು ಟನ್ ಸಾವಯವ ಪದಾರ್ಥಕ್ಕೆ ಪದರಿನ ರೀತಿಯಲ್ಲಿ ಸೇರಿಸಿ ಕಾಂಪೋಸ್ಟನ್ನು ತಯಾರಿಸಬಹುದು.

====================

 ಲಾಭಗಳು: 1. ವಾತಾವರಣದ ಮೇಲೆ ಯಾವುದೇ ರೀತಿಯ ದುಷ್ಪರಿಣಾಮಗಳಾಗುವುದಿಲ್ಲ. 2. ಅತೀ ಕಡಿಮೆ ಖರ್ಚಿನಲ್ಲಿ ರೋಗಗಳನ್ನು ನಿಯಂತ್ರಣ ಮಾಡಬಹುದು. 3. ಮಣ್ಣಿನಲ್ಲಿ ಸಾವಯವ ಪದಾರ್ಥ ಹಾಗೂ ತೇವಾಂಶವಿದ್ದಲ್ಲಿ ತಾನಾಗಿಯೇ ಅಭಿವೃದ್ದಿ ಹೊಂದುತ್ತದೆ. 4. ಜೈವಿಕ ಸಮತೋಲನವನ್ನು ಕಾಪಾಡಲು ಸಹಕಾರಿಯಾಗಿದೆ.

ಟ್ರೈಕೋಡರ್ಮ ರೋಗನಾಶಕದ ಗುಣಗಳು:ಇದು ಅನೇಕ ಪ್ರಬೇಧಗಳನ್ನು ಹೊಂದಿದ್ದು, ಮಣ್ಣಿನಲ್ಲಿ, ಬೆಳೆಗಳ ಬೇರು ವಲಯದಲ್ಲಿ ಯಥೇಚ್ಛವಾಗಿ ಕಂಡು ಬರುತ್ತದೆ. ಸಾಮಾನ್ಯವಾಗಿ ಹಸಿರು ಬಿಳಿ ಬಣ್ಣವನ್ನು ಹೊಂದಿರುತ್ತದೆ. ರೋಗಕಾರಕ ಶಿಲೀಂಧ್ರಗಳ ಮೇಲೆ ಪರಾವಂಬಿಯಾಗಿ ಬೆಳೆದು ಅವುಗಳಿಗೆ ಆಹಾರ ಮತ್ತು ಸ್ಥಳ ಸಿಗದ ಹಾಗೆ ಮಾಡಿ ಅವುಗಳ ಸಂಖ್ಯೆ ಮತ್ತು ಸಂತಾನೋತ್ಪತ್ತಿಯನ್ನು ಕಡಿಮೆ ಮಾಡುತ್ತದೆ. ಮಣ್ಣಿನಲ್ಲಿ ಆಂಟಿಬಯೋಟಿಕ್ ವಸ್ತುಗಳಾದ ಡಮರ್ನ್, ವಿರಿಡಿನ್, ಗ್ಲೈಯೋಟಾಕ್ಸಿನ್, ಟ್ರೈಕೋಡರ್ಮ ಅಸಿಟಾಲ್ಡಿಹೈಡ್ ಮತ್ತು ಅನೇಕ ಕಿಣ್ವಗಳನ್ನು ಬಿಡುಗಡೆಮಾಡಿ, ಬೀಜ ಮತ್ತು ಮಣ್ಣಿನಿಂದ ಹರಡುವ ಅನೇಕ ರೋಗಾಣುಗಳನ್ನು ನಿರ್ವಹಣೆ ಮಾಡುತ್ತದೆ. ರೋಗಕಾರಕ ದುಂಡಾಣು ಹಾಗೂ ಜಂತುಗಳನ್ನು ನಿಯಂತ್ರಿಸುತ್ತದೆ.

ಉಪಯೋಗಿಸುವ ವಿಧಾನ: 1 ಬೀಜ ಪ್ರತೀ ಕೆಜಿ ಬೀಜಕ್ಕೆ 4-5 ಗ್ರಾಂ. ಟ್ರೈಕೋಡರ್ಮ ಪುಡಿಯನ್ನು ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಬೇಕು. ನಂತರ 1 ರಿಂದ 2 ಗಂಟೆಗಳವರೆಗೆ ನೆರಳಿನಲ್ಲಿ ಒಣಗಿಸಿ ಬಿತ್ತನೆ ಮಾಡಬೇಕು. 2 ಮಣ್ಣು 2 ಕೆ.ಜಿ. ಟ್ರೈಕೋಡರ್ಮ ಪುಡಿಯನ್ನು 50 ಕೆ.ಜಿ. ಕಳೆತ ತಿಪ್ಪೆಗೊಬ್ಬರದೊಂದಿಗೆ ಬೆರೆಸಿ ಬಿತ್ತುವ ಮುಂಚೆ ಅಥವಾ ಬಿತ್ತನೆಯ ಸಮಯದಲ್ಲಿ ಹೊಲದ ಮಣ್ಣಿನಲ್ಲಿ ಸೇರಿಸಬೇಕು. 3 ಬೆಳೆ 10 ರಿಂದ 15 ಗ್ರಾಂ. ಟ್ರೈಕೋಡರ್ಮ ಪುಡಿಯನ್ನು ಪ್ರತಿ 4 ಕೆ.ಜಿ. ಸಾಣಿಸಿದ ತಿಪ್ಪೆಗೊಬ್ಬರದೊಂದಿಗೆ ಬೆರೆಸಿ ಗಿಡಗಳ ಸುತ್ತಲೂ ಉಂಗುರ ಆಕಾರದಲ್ಲಿ ಮಣ್ಣಿನಲ್ಲಿ ಸೇರಿಸಿ ನಂತರ ನೀರು ಕೊಡಬೇಕು. 4 ಮಡಿ/ಸಸಿ 10 ಗ್ರಾಂ. ಟ್ರೈಕೋಡರ್ಮ ಪುಡಿಯನ್ನು ಪ್ರತೀ ಲೀ. ನೀರಿಗೆ ಬೆರೆಸಿ ಸಸಿ, ಗಿಡ ಅಥವಾ ತುಂಡುಗಳನ್ನು 30 ನಿಮಿಷ ಅದ್ದಿ ನಂತರ ನಾಟಿ ಮಾಡಬೇಕು. 5 ದ್ರಾವಣ ರೂಪ ಪ್ರತಿ ಲೀ. ನೀರಿಗೆ 5 ರಿಂದ 10 ಗ್ರಾಂ. ನಷ್ಟು ಟ್ರೈಕೋಡರ್ಮ ಬೆರೆಸಿ ತಯಾರಿಸಿದ ದ್ರಾವಣವನ್ನು ಸಿಂಪರಣೆ ಮಾಡಬೇಕು.

ಮುಂಜಾಗ್ರತಾ ಕ್ರಮಗಳು: ಬಳಸುವ ಜೈವಿಕ ರೋಗನಾಶಕಗಳಲ್ಲಿ 2 ಥ 10-6 ಸಿ. ಎಫ್. ಯು/ಗ್ರಾಂ. ಇರಲೇಬೇಕು. ಜೈವಿಕ ರೋಗನಾಶಕವನ್ನು ಬಳಸುವಾಗ ಮಣ್ಣಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸಾವಯವ ಪದಾರ್ಥಗಳಾದ ಕೊಟ್ಟಿಗೆ ಗೊಬ್ಬರ/ಬೇವಿನ ಹಿಂಡಿ/ಕಾಂಪೋಸ್ಟ/ಎರೆಹುಳು ಗೊಬ್ಬರ ಇದ್ದರೆ ಅವುಗಳ ಆಭಿವೃದ್ದಿ ಉತ್ತಮವಾಗಿರುತ್ತದೆ. ಮಣ್ಣಿನಲ್ಲಿ ಸಾಕಷ್ಟು ತೇವಾಂಶ ಕಾಪಾಡುವುದರಿಂದ ಜೈವಿಕ ಕ್ರಿಯೆ ಉತ್ತಮಗೊಳ್ಳುತ್ತದೆ. ರಾಸಾಯನಿಕ ಪೀಡೆನಾಶಕಗಳ ಜೊತೆಗೆ/ಬೆರೆಸಿ ಉಪಯೋಗಿಸಬಾರದು. ಜೈವಿಕ ರೋಗನಾಶಕಗಳ ಡಬ್ಬಿಗಳನ್ನು ತಂಪಾದ ಹಾಗೂ ಒಣ ಪ್ರದೇಶದಲ್ಲಿ ಶೇಖರಿಸಿಡಬೇಕು. ಶೇಖರಣೆ ಮಾಡುವಾಗ ರಾಸಾಯನಿಕ ಗೊಬ್ಬರ/ ರೋಗನಾಶಕ/ ಕಳೆನಾಶಕ/ ಕೀಟನಾಶಕಗಳೊಂದಿಗೆ ಎಂದೂ ಸೇರಿಸಬಾರದು. ಬೀಜೋಪಚಾರ ಮಾಡಿದ ಬೀಜಗಳನ್ನು ನೇರವಾದ ಬಿಸಿಲಿನಿಂದ ರಕ್ಷಿಸಿ ನೆರಳಿನಲ್ಲಿ ಒಣಗಿಸಿ ಬಿತ್ತುವುದರಿಂದ ಉತ್ತಮ ರೋಗರಹಿತ ಮೊಳಕೆಗಳನ್ನು ಕಾಣಬಹುದಾಗಿದೆ. ಉತ್ಪಾದನೆಯಾದ 6 ತಿಂಗಳೊಳಗೆ ಜೈವಿಕ ರೋಗನಾಶಕವನ್ನು ಉಪಯೋಗಿಸಿದರೆ ಹೆಚ್ಚಿನ ಲಾಭವಾಗುವುದು.

ಟ್ರೈಕೋಡರ್ಮದಿಂದ ವಿವಿಧ ರೋಗಗಳ ನಿರ್ವಹಣೆ:
1. ಕಡಲೆ/ತೊಗರಿ ಸೊರಗು ರೋಗ 5 ಗ್ರಾಂ. ಪ್ರತಿ ಕೆ.ಜಿ. ಬೀಜಕ್ಕೆ
2. ಹತ್ತಿ ಬೇರು ಕೊಳೆ ರೋಗ 8 ಗ್ರಾಂ. ಪ್ರತಿ ಕೆ.ಜಿ. ಬೀಜಕ್ಕೆ
3.ಟೊಮ್ಯಾಟೋ/ಬದನೆ/ತಂಬಾಕುಸಸಿ ಸಾಯುವ/ಸ್ಕ್ಲೀರೋಷಿಯಂ ರೋಗ5 ಗ್ರಾಂ. ಪ್ರತಿ ಕೆ.ಜಿ. ಬೀಜಕ್ಕೆ
4.ಕಬ್ಬು ಕೆಂಪು ಕೊಳೆ ರೋಗ 10 ಗ್ರಾಂ. ಪ್ರತಿ ಕೆ.ಜಿ. ಬೀಜಕ್ಕೆ
5.ಆಲೂಗಡ್ಡೆ ಸೊರಗು/ಕೊಳೆ ರೋಗ 10 ಗ್ರಾಂ. ಪ್ರತಿ ಕೆ.ಜಿ. ಬೀಜಕ್ಕೆ
6.ಕರಿ ಮೆಣಸು ಸೊರಗು ರೋಗ 5 ಗ್ರಾಂ. ಪ್ರತಿ ಕೆ.ಜಿ. ಬೀಜಕ್ಕೆ
7.ಎಲ್ಲ ಬೆಳೆ ಸಿಡಿ ರೋಗ 5 ಗ್ರಾಂ. ಪ್ರತಿ ಕೆ.ಜಿ. ಬೀಜಕ್ಕೆ
ಲೇಖಕರು: ಶೃತಿ, ಟಿ. ಹೆಚ್. ಮಧುಶ್ರೀ ಕೆರಕಲಮಟ್ಟಿ, ರಂಜನಾ ಜೋಶಿ, ಅನನ್ಯ ಕಟ್ಟಿಮನಿ,
ಕೃಷಿ ವಿಶ್ವವಿದ್ಯಾಲಯ ರಾಯಚೂರು – ತೋಟಗಾರಿಕಾ ವಿಶ್ವವಿದ್ಯಾಲಯ ಬಾಗಲಕೋಟೆ

1 COMMENT

LEAVE A REPLY

Please enter your comment!
Please enter your name here