ಬೆಂಗಳೂರು ಸೆ 27: ಬರ ನಿರ್ವಹಣೆ ಕಾರ್ಯಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವ ನಿಟ್ಟಿನಲ್ಲಿ ಕೃಷಿ ಹಾಗೂ ಜಲಾನಯನ ಇಲಾಖೆ ಅಧಿಕಾರಿಗಳು ಹೆಚ್ಚಿನ ಕಾಳಜಿ ವಹಿಸಿ ಕೆಲಸ ನಿರ್ವಹಣೆ ಮಾಡಬೇಕು ಎಂದು ಕೃಷಿ ಸಚಿವರಾದ ಎನ್ ಚಲುವರಾಯಸ್ವಾಮಿ ಸೂಚಿಸಿದ್ದಾರೆ.
ವಿಕಾಸ ಸೌಧದ ಕೊಠಡಿ ಸಂಖ್ಯೆ 422ರಲ್ಲಿಂದು ಕೃಷಿ ಹಾಗೂ ಜಲಾನಯನ ಇಲಾಖೆ ಅಧಿಕಾರಿಗಳ ಸಭೆ ನಡೆಸಿದ ಸಚಿವರು ಅಧಿಕಾರಿಗಳಿಗೆ ಹಲವು ಸಲಹೆ ಸೂಚನೆ ನೀಡಿದರು. ರಾಜ್ಯದಲ್ಲಿ ಬರ ಪರಿಸ್ಥಿತಿ ಮುಂದುವರೆದಿದೆ. ಅಧಿಕಾರಿಗಳು ನಿರಂತರವಾಗಿ ರೈತರೊಂದಿಗೆ ಸಂಪರ್ಕದಲ್ಲಿದ್ದು ಆತ್ಮವಿಶ್ವಾಸ ತುಂಬಬೇಕು. ಸಲಹೆ, ಮಾರ್ಗದರ್ಶನ ನೀಡುತ್ತಾ, ಅರಿವು ಮೂಡಿಸಬೇಕು ಎಂದರು.
ಎಲ್ಲ ಗ್ರಾಮಗಳಲ್ಲಿ ನಿಖರ ಬೆಳೆ ಸಮೀಕ್ಷೆ ನಡೆಸಬೇಕು. ಸದ್ಯದ ಪರಿಸ್ಥಿತಿಯಲ್ಲಿ ಪರ್ಯಾಯ ಬೆಳೆ ಸಾಧ್ಯತೆ ಬಗ್ಗೆ ಅಧ್ಯಯನ ನಡೆಸಿ ರೈತರಿಗೆ ಮಾಹಿತಿ ನೀಡಬೇಕು ಎಂದು ಸಚಿವರು ನಿರ್ದೇಶನ ನೀಡಿದರು.
ರೈತರ ಹಿತ ಸಂರಕ್ಷಣೆ ಮೊದಲ ಆದ್ಯತೆಯಾಗಬೇಕು. ಅಧಿಕಾರಿಗಳು ಸುಲಭವಾಗಿ ರೈತರಿಗೆ ಸಿಗುವಂತಿರಬೇಕು. ವಿಮೆ ಪರಿಹಾರ ವಿತರಣೆಯಲ್ಲಿ ಯಾವುದೇ ಲೋಪವಾಗದಂತೆ ಮೇಲ್ವಿಚಾರಣೆ ನಡೆಸಿ ಎಲ್ಲಾ ಅರ್ಹರಿಗೆ ಸೌಲಭ್ಯ ತಲುಪಬೇಕು ಎಂದ ಸಚಿವರು ಹಿಂಗಾರು ಬೆಳೆಗಳ ವಿಮೆ ನೋಂದಣಿ ಬಗ್ಗೆ ವ್ಯಾಪಕ ಜಾಗೃತಿ ಮೂಡಿಸಿ ಹೆಚ್ಚಿನ ನೊಂದಣಿ ಮಾಡಿಸಲು ಸೂಚನೆ ನೀಡಿದರು.
ಬಜೆಟ್ ನಲ್ಲಿ ಘೋಷಣೆಯಾದ ಎಲ್ಲಾ ಕಾರ್ಯಕ್ರಮ, ಯೋಜನೆಗಳು ಸಮರ್ಪಕವಾಗಿ ಅನುಷ್ಠಾನವಾಗಬೇಕು .
ಅನುದಾನ ಬಿಡುಗಡೆಗೆ ಅನುಗುಣವಾಗಿ ಎಲ್ಲಾ ಜಿಲ್ಲೆಗಳಲ್ಲಿ ಶೇ 100% ಆರ್ಥಿಕ ಭೌತಿಕ ಗುರಿ ಸಾಧನೆಯಾಗಬೇಕು ಎಂದು. ಉದ್ಯೋಗ ಖಾತರಿ ಯೋಜನೆ ಸದ್ಬಳಕೆ ಮಾಡಿ ಜಲ ಸಂರಕ್ಷಣೆ ಚಟುವಟಿಕೆಗಳಿಗೆ ಆಧ್ಯತೆ ನೀಡಿ ಎಂದು ಸಚಿವರು ತಿಳಿಸಿದರು
ಹಿಂಗಾರಿನಲ್ಲಿ ಸಾಧ್ಯವಿರುವ ಒಣ ಬೇಸಾಯದ ಬಗ್ಗೆ ಕೃಷಿ ವಿಶ್ವ ವಿದ್ಯಾಲಯಗಳ ವಿಜ್ಞಾನಿಗಳಿಂದ ಮಾಹಿತಿ ಪಡೆದು ಅದನ್ನು ರೈತರಿಗೆ ವರ್ಗಾಯಿಸಿ. ಮುಂದಿನ ದಿನಗಳಲ್ಲಿ ಸಮಗ್ರ ಕೃಷಿ (ಮಿಶ್ರ ಬೇಸಾಯ) ಹಾಗೂ ಸಿರಿಧಾನ್ಯ ಬೆಳೆ ಬಗ್ಗೆ ಹೆಚ್ಚಿನ ಅರಿವು ಮೂಡಿಸಿ ರೈತರ ನಷ್ಟ ತಪ್ಪಿಸಿ ನಿಶ್ಚಿತ ಆದಾಯ ಖಾತರಿ ಮಾಡುವ ಸಾಧ್ಯತೆಗಳ ಬಗ್ಗೆ ಪರಿಶೀಲಿಸಿ ಎಂದು ಸಚಿವರು ಸಲಹೆ ನೀಡಿದರು.
ಕಳಪೆ ಬಿತ್ತನೆ ಬೀಜ ,ರಸಗೊಬ್ಬರ ಮಾರಾಟವಾಗದಂತೆ ಗಮನ ಹರಿಸಿ, ಕೃಷಿ ಯಾಂತ್ರೀಕರಣ, ಯಂತ್ರಧಾರೆ, ಸಬ್ಸಿಡಿ ಯೋಜನೆಯಲ್ಲಿ ಯಾವುದೇ ದುರ್ಬಳಕೆಯಾಗದಂತೆ ನಿಗಾವಹಿಸಬೇಕು. ನಿರ್ಲಕ್ಷ್ಯ ತೋರಿದಲ್ಲಿ ಅಯಾಯ ಜಿಲ್ಲೆಗಳ ಜಂಟಿ ನಿರ್ದೇಶಕರನ್ನು ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಸಚಿವರು ಎಚ್ಚರಿಕೆ ನೀಡಿದರು.
ನವೋದ್ಯಮ ಪ್ರೋತ್ಸಾಹ ಯೋಜನೆ ಅನುಷ್ಠಾನ, ನಂದಿನಿ ಮಾದರಿಯಲ್ಲಿ ಕೃಷಿ ಉತ್ಪನ್ನಗಳ ಬ್ರಾಂಡಿಗ್,
ಕೇಂದ್ರ ಪುರಸ್ಕೃತ ಜಲಾನಯನ ಅಭಿವೃದ್ಧಿ ಮತ್ತು ಜಲ ಸಂರಕ್ಷಣಾ ಯೋಜನೆಗಳ ಪರಿಣಾಮಕಾರಿ ಬಳಕೆ ಕುರಿತು ಕೃಷಿ ಸಚಿವರು ಸೂಚನೆ ನೀಡಿದರು.
ಕೃಷಿ ಇಲಾಖೆ ಆಯುಕ್ತ ವೈ ಎಸ್. ಪಾಟೀಲ್, ನಿರ್ದೇಶಕ ಜಿ.ಟಿ ಪುತ್ರ,ಜಲಾನಯನ ಇಲಾಖೆ ಆಯುಕ್ತರಾದ ಗಿರೀಶ್,ನಿರ್ದೇಶಕ ಶ್ರೀನಿವಾಸ್, ಸಚಿವರ ಆಪ್ತ ಕಾರ್ಯದರ್ಶಿ ಪ್ರಭಾಕರ್ ಹಾಗೂ ವಿವಿಧ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು