ರಮ್ಯ ಮನೋಹರ ರಾಮಪತ್ರೆ ಜಡ್ಡಿಗಳ ಪ್ರಾಮುಖ್ಯತೆ

ಈ ರಾಮಪತ್ರೆ ಜಡ್ಡಿ ಕಾಡುಗಳು ಸಿಂಗಳೀಕ, ದೊಡ್ಡ ದಾಸ ಮಂಗಟ್ಟೆ ಹಕ್ಕಿ, ಬೂದು ಮಲೆ ಮಂಗಟ್ಟೆ ಹಕ್ಕಿ, ಹಪ್ಪಾಟೆ ಹಾವು (ಮಲಬಾರ್ ಪಿಟ್ ವೈಪರ್), ಮಲಬಾರ್ ಟ್ರೀ ನಿಂಫ್ ಚಿಟ್ಟೆ ಮುಂತಾದ ಅಷ್ಟೇನೂ ಪರಿಚಿತವಲ್ಲದ ವನ್ಯಜೀವಿ ಪ್ರಬೇಧಗಳಿಗೆ ಆಶ್ರಯತಾಣವಾಗಿವೆ. ಕಪ್ಪೆ, ಏರೋಪ್ಲೇನ್ ಚಿಟ್ಟೆ ಮತ್ತು ಕೆಲ ಅಣಬೆಗಳ ಪ್ರಬೇಧಗಳನ್ನು ಈ ಕಾಡುಗಳಲ್ಲಿ ಹೊಸದಾಗಿ ಸಂಶೋಧಿಸಲಾಗಿದೆ ಮತ್ತು ಈಗಲೂ ಕೂಡ ಹೊಸ ಹೊಸ ಪ್ರಬೇಧಗಳನ್ನು ಈ ಜಡ್ಡಿ ಕಾಡುಗಳಲ್ಲಿ ವಿಜ್ಞಾನಿಗಳು ಕಂಡು ಹಿಡಿಯುತ್ತಲೇ ಇದ್ದಾರೆ.

0
ಲೇಖಕರು: ಸಂಜಯ್ ಗುಬ್ಬಿ, ಪರಿಸರವಾದಿ, ವನ್ಯಜೀವಿ ಸಂರಕ್ಷಣೆಕಾರ

ರಾಮಪತ್ರೆ ಜಡ್ಡಿ (Myristica swamp) ಅಥವಾ ಜಡ್ಡಿ ಕಾಡು ಎಂಬುದು ಅತ್ಯಂತ ಸೂಕ್ಷ್ಮ, ಪುರಾತನವಾದ ಮತ್ತು ಅಳಿವಿನಂಚಿನಲ್ಲಿರುವ ಪರಿಸರ ವ್ಯವಸ್ಥೆಯಾಗಿದೆ.  ಹುಬ್ಬಳ್ಳಿ ಅಂಕೋಲಾ ರೈಲು ಯೋಜನೆ (ಹು.ಅಂ.ರೈ.ಹ.ಯೋ) ಜಾರಿಯಾದದ್ದೇ ಆದರೆ, ಈ ರಾಮಪತ್ರೆ ಜಡ್ಡಿ ಕಾಡುಗಳು ನಾಮಾವಶೇಷವಾಗಲಿವೆ. ಇವು ಸಿಹಿನೀರಿನ ಜೌಗು ಪ್ರದೇಶಗಳಾಗಿದ್ದು ಅವುಗಳಲ್ಲಿ ಬಹುತೇಕ ಜಡ್ಡಿಗಳು ನಮ್ಮ ನಗರಗಳಲ್ಲಿರುವ ಉದ್ಯಾನಗಳಷ್ಟೂ ದೊಡ್ಡವಾಗಿರುವುದಿಲ್ಲ. ಇಂದು ಇವುಗಳ ವ್ಯಾಪ್ತಿಯು ಪಶ್ಚಿಮ ಘಟ್ಟದ ಕೆಲವೇ ಕೆಲವು ಪ್ರದೇಶಗಳಿಗೆ ಸೀಮಿತವಾಗಿವೆ. ಮುಂಚೆ ಪಶ್ಚಿಮ (ಕೊಂಕಣ) ಕರಾವಳಿ ತೀರದ ಎಲ್ಲೆಡೆ ಕಂಡು ಬರುತ್ತಿದ್ದ ಇವು ಈಗ ದಕ್ಷಿಣ ಕೇರಳ, ಕರ್ನಾಟಕ, ಗೋವಾ ಮತ್ತು ಮಹಾರಾಷ್ಟ್ರದ ಕೆಲವೇ ಕೆಲವು ಭಾಗಗಳಲ್ಲಿ ಕಂಡುಬರುತ್ತವೆ. ಕರ್ನಾಟಕದಲ್ಲಿ ಇವುಗಳ ವ್ಯಾಪ್ತಿ ಉತ್ತರ ಕನ್ನಡ ಜಿಲ್ಲೆ, ಮತ್ತು ಶಿವಮೊಗ್ಗ, ದಕ್ಷಿಣ ಕನ್ನಡ ಜಿಲ್ಲೆಗಳ ಕೆಲವೇ ಕೆಲವು ಭಾಗಗಳಿಗೆ ಸೀಮಿತವಾಗಿವೆ.

ಸಮುದ್ರ ಮಟ್ಟಕ್ಕಿಂತ ತುಂಬ ಎತ್ತರವಲ್ಲದ ಕಣಿವೆ ಪ್ರದೇಶಗಳಲ್ಲಿ ಕಂಡುಬರುವ ಈ ಜಡ್ಡಿ ಕಾಡುಗಳು ಕಾಡಿನ ತೊರೆಗಳಲ್ಲಿ ವರ್ಷಪೂರ್ತಿ ನೀರಿನ ಹರಿವಿರುವಂತೆ ನೋಡಿಕೂಳ್ಳುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ, ಇವು ಸ್ಪಂಜಿನಂತೆ ನೀರನ್ನು ಹಿಡಿದಿಟ್ಟುಕೊಂಡು ಬೇಸಿಗೆಯ ಸಮಯದಲ್ಲಿ ನೀರನ್ನು ಬಿಡುಗಡೆಗೊಳಿಸುತ್ತವೆ, ಹೀಗಾಗಿ ಕೃಷಿಕರಿಗೆ ಇವು ವರದಾನವೇ ಆಗಿವೆ. ಇತರ ಕಾಡುಗಳಿಗೆ ಹೋಲಿಸಿದರೆ ಹೆಚ್ಚಿನ ಪ್ರಮಾಣದಲ್ಲಿ ಇಂಗಾಲವನ್ನು ಹಿಡಿದಿಟ್ಟುಕೊಳ್ಳುವ ಜಡ್ಡಿ ಕಾಡುಗಳು ಜಾಗತಿಕ ತಾಪಮಾನ ನಿಯಂತ್ರಣದಲ್ಲೂ ಮಹತ್ವದ ಪಾತ್ರವನ್ನು ವಹಿಸಬಲ್ಲವು .

ರಾಮಪತ್ರೆ ಜಡ್ಡಿಗಳು ಸ್ಥಳೀಯ (endemic) ಪ್ರಾಣಿ ಮತ್ತು ಸಸ್ಯ ಸಂಪತ್ತಿನ ಆಗರವಷ್ಟೇ ಅಲ್ಲದೆ ಪ್ರವಾಹವನ್ನು ನಿಯಂತ್ರಿಸುವಲ್ಲಿಯೂ ಪ್ರಮುಖ ಪಾತ್ರವನ್ನು ವಹಿಸುತ್ತವೆ. ರಾಮಪತ್ರೆ (Myristica fatua), ಹೆಡೆಮಂಗಲ (Gymnacranthera canarica), ಕಾನ್ ಗೇರು (Semecarpus kathalekanensis) ಮುಂತಾದ ಸಸ್ಯಗಳು ಕೇವಲ ಜಡ್ಡಿ ಕಾಡುಗಳಲ್ಲಿ ಮಾತ್ರ ಕಂಡುಬರುತ್ತವೆ. ಮಧುಕ (Madhuca bourdillonii) ಎಂಬ ಸಸ್ಯವು ಅಳಿವಿನಂಚಿನಲ್ಲಿದ್ದು ಇದು ಕೇವಲ ರಾಮಪತ್ರೆ ಜಡ್ಡಿ ಕಾಡುಗಳಲ್ಲಿ ಮಾತ್ರ ಕಂಡುಬರುತ್ತದೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ ಕೇವಲ ೧೩ ಮಧುಕ ಮರಗಳು ಮಾತ್ರ ಉಳಿದಿರುವುದು ದಾಖಲೆಯಾಗಿದೆ.. ಹೊಳೆ ನೇರಳೆ (Syzygium travancoricum) ಅತ್ಯಂತ ಅಪಾಯದಲ್ಲಿದ್ದು ಇದು ಕೂಡ ಕೇವಲ ರಾಮಪತ್ರೆ ಜಡ್ಡಿ ಕಾಡುಗಳಲ್ಲಿ ಮಾತ್ರ ಕಂಡು ಬರುತ್ತದೆ. ಜಗತ್ತಿನಿಂದ ಶಾಶ್ವತವಾಗಿ ಅಳಿದು ಹೋಗುವ ಅಪಾಯದಲ್ಲಿರುವ ಈ ಹೊಳೆ ನೇರಳೆ ಮರಗಳ ಸಂಖ್ಯೆಯು ಜಗತ್ತಿನಾದ್ಯಂತ ೨೦೦ ಕ್ಕೂ ಕಡಿಮೆ ಎಂಬುದು ಇವುಗಳ ಸ್ಥಿತಿಗೆ ಹಿಡಿದ ಕನ್ನಡಿ. ಉತ್ತರ ಕನ್ನಡ ಜಿಲ್ಲೆಯಿಂದ ಈ ಜಡ್ಡಿ ಕಾಡುಗಳು ನಾಶವಾಗಿ ಹೋದರೆ ಇಲ್ಲಿ ಕಂಡು ಬರುವ ಅಪರೂಪದ ಸಸ್ಯ ಸಂಪತ್ತು ಕೂಡ ನಾಶವಾಗಿ ಹೋಗಲಿವೆ.

ಈ ರಾಮಪತ್ರೆ ಜಡ್ಡಿ ಕಾಡುಗಳು ಸಿಂಗಳೀಕ, ದೊಡ್ಡ ದಾಸ ಮಂಗಟ್ಟೆ ಹಕ್ಕಿ, ಬೂದು ಮಲೆ ಮಂಗಟ್ಟೆ ಹಕ್ಕಿ, ಹಪ್ಪಾಟೆ ಹಾವು (ಮಲಬಾರ್ ಪಿಟ್ ವೈಪರ್), ಮಲಬಾರ್ ಟ್ರೀ ನಿಂಫ್ ಚಿಟ್ಟೆ ಮುಂತಾದ ಅಷ್ಟೇನೂ ಪರಿಚಿತವಲ್ಲದ ವನ್ಯಜೀವಿ ಪ್ರಬೇಧಗಳಿಗೆ ಆಶ್ರಯತಾಣವಾಗಿವೆ. ಕಪ್ಪೆ, ಏರೋಪ್ಲೇನ್ ಚಿಟ್ಟೆ ಮತ್ತು ಕೆಲ ಅಣಬೆಗಳ ಪ್ರಬೇಧಗಳನ್ನು ಈ ಕಾಡುಗಳಲ್ಲಿ ಹೊಸದಾಗಿ ಸಂಶೋಧಿಸಲಾಗಿದೆ ಮತ್ತು ಈಗಲೂ ಕೂಡ ಹೊಸ ಹೊಸ ಪ್ರಬೇಧಗಳನ್ನು ಈ ಜಡ್ಡಿ ಕಾಡುಗಳಲ್ಲಿ ವಿಜ್ಞಾನಿಗಳು ಕಂಡು ಹಿಡಿಯುತ್ತಲೇ ಇದ್ದಾರೆ.

ಮರಗಳ ಕಾಂಡಗಳಲ್ಲಿ ಮೇಲ್ಮಟ್ಟದಲ್ಲಿಯೇ ಬೇರುಗಳು ಟಿಸಿಲೊಡೆಯುವುದು ರಾಮಪತ್ರೆ ಜಡ್ಡಿ ಕಾಡುಗಳಲ್ಲಿ ಕಂಡು ಬರುವ ಮರಗಳ ವಿಶೇಷ ಲಕ್ಷಣ. ನೀರಿನಿಂದ ಕೂಡಿದ ಈ ಜೌಗು ಪ್ರದೇಶದಲ್ಲಿ ಮರಕ್ಕೆ ಭದ್ರವಾಗಿ ನಿಲ್ಲಲು ಇದು ಸಹಕಾರಿಯಾಗಿದೆ. ಈ ಜೌಗಿನಲ್ಲಿನ ಮರಗಳ ಇನ್ನೊಂದು ವಿಶಿಷ್ಟ ಲಕ್ಷಣವೆಂದರೆ ಕಮಾನಿನಾಕಾರದಲ್ಲಿ ವಿಚಿತ್ರವಾಗಿ ಕಾಣುವ ಬೇರುಗಳು. ಈ ಬೇರುಗಳು ನೀರಿನಿಂದ ಹೊರಬಂದು ವಾತಾವರಣದಲ್ಲಿನ ಅನಿಲಗಳ ವಿನಿಮಯ ಮಾಡಿಕೊಳ್ಳಲು ಮರಕ್ಕೆ ಸಹಕರಿಸುತ್ತವೆ.

ಈ ಹಿಂದೆ ಜಡ್ಡಿ ಕಾಡುಗಳು ಭತ್ತದ ಗದ್ದೆ, ಅಡಿಕೆ ತೋಟ, ಕಾಫಿ ಮತ್ತು ರಬ್ಬರ್ ತೋಟಗಳಾಗಿ ಮಾರ್ಪಾಟಾಗಿವೆ. ಅದೆಷ್ಟೋ ವಿಸ್ತೀರ್ಣದ ಜಡ್ಡಿ ಕಾಡುಗಳು ಅಣೆಕಟ್ಟುಗಳ ಹಿನ್ನೀರಿನಲ್ಲಿ ಮುಳುಗಿ ಹೋಗಿವೆ. ಈ ಕಾಡುಗಳಲ್ಲಿ ಕಂಡುಬರುವ ಮರಗಳನ್ನು ಪ್ಲೈವುಡ್ ಉದ್ಯಮಕ್ಕೆ ಬಳಸಿಕೊಂಡಿದ್ದೇವೆ. ಒಂದು ಅಂದಾಜಿನ ಪ್ರಕಾರ ಉತ್ತರ ಕನ್ನಡ ಜಿಲ್ಲೆಯಲ್ಲಿ ಈಗ ಕೇವಲ ೫೧ ಜಡ್ಡಿ ಕಾಡುಗಳು ಉಳಿದುಕೊಂಡಿವೆ. ಈ ಅಳಿದುಳಿದ ಜಡ್ಡಿ ಕಾಡುಗಳನ್ನು ಶಾಶ್ವತವಾಗಿ ಇಲ್ಲದಂತೆ ಮಾಡಲು ಹು.ಅಂ.ರೈ.ಹ.ಯೋಜನೆಯ ತೂಗು ಕತ್ತಿ ನೇತಾಡುತ್ತಿದೆ

LEAVE A REPLY

Please enter your comment!
Please enter your name here