ಈ ಶೀರ್ಷಿಕೆ ಓದಿದ ಹಲವರಿಗಾದರೂ ಮಾವಿನಹಣ್ಣುಗಳು ಸಹಜವಾಗಿ ಮಾಗುತ್ತವೆ. ಅದರಲ್ಲೇನು ವಿಶೇಷ ಎನಿಸಿರಬಹುದು. ಆದರೆ ಮಾರುಕಟ್ಟೆಯ ಪೈಪೋಟಿಯಿಂದಾಗಿ ಮಾವಿನಹಣ್ಣುಗಳನ್ನು ಕಾರ್ಬೈಡ್ ಮೂಲಕ ಶೀಘ್ರವಾಗಿ ಹಣ್ಣಾಗಿಸಲಾಗುತ್ತದೆ. ಇಂಥ ಹಣ್ಣುಗಳ ಸೇವನೆ ಆರೋಗ್ಯಕ್ಕೆ ಹಾನಿಕಾರಕ. ಆದ್ದರಿಂದ ಈ ನಿಟ್ಟಿನಲ್ಲಿ ಕ್ರಮಕೈಗೊಂಡಿರುವ ರಾಜ್ಯದ ತೋಟಗಾರಿಕೆ ಇಲಾಖೆ ಮತ್ತು ಮಾವು ಮಂಡಳಿ “ವಿಷಮುಕ್ತ ಮಾವಿನಹಣ್ಣುಗಳನ್ನು ರೈತರ ಸಹಕಾರದಿಂದ ಗ್ರಾಹಕರಿಗೆ ತಲುಪಿಸಲು ಶ್ರಮಿಸುತ್ತಿದೆ.
================================
“ಇದೇ ಮೇ 30 ರಿಂದ ಜೂನ್ 24ರವರೆಗೆ ಬೆಂಗಳೂರು ಲಾಲ್ ಬಾಗಿನಲ್ಲಿ ಮಾವು-ಹಲಸು ಮಾರಾಟ ಮೇಳವಿರುತ್ತದೆ. ಈ ಸಂದರ್ಭದಲ್ಲಿ ವೈವಿಧ್ಯಮಯ ಮಾವಿನ ತಳಿಗಳು, ಹಲಸಿನ ತಳಿಗಳ ಪ್ರದರ್ಶನವೂ ಇರುತ್ತದೆ. ಗ್ರಾಹಕರು ಇವುಗಳ ಬಗ್ಗೆ ಅರಿತುಕೊಳ್ಳಬಹುದು. ಕಾರ್ಬೈಡ್ ಮುಕ್ತ ಮಾವಿನಹಣ್ಣುಗಳ ರುಚಿಯನ್ನೂ ನೋಡಬಹುದು. ಹಣ್ಣುಗಳ ಪ್ರದರ್ಶನ ಮತ್ತು ಮಾರಾಟಕ್ಕೆ ಬೇಕಾದ ಎಲ್ಲಬಗೆಯ ವ್ಯವಸ್ಥೆಯನ್ನೂ ಕಲ್ಪಿಸಲಾಗುತ್ತದೆ. ಇದು ಬೆಳೆಗಾರರು ಮತ್ತು ಗ್ರಾಹಕರಿಗೆ ನೇರ ವ್ಯವಹಾರ ವ್ಯವಸ್ಥೆ ಕಲ್ಪಿಸುತ್ತದೆ. ಇದರಿಂದಾಗಿ ಬೆಳೆಗಾರರ ಶ್ರಮಕ್ಕೆ ತಕ್ಕಮೌಲ್ಯವೂ ದೊರೆಯುತ್ತದೆ” ಎಂದು ತೋಟಗಾರಿಕೆ ಇಲಾಖೆ ನಿರ್ದೇಶಕ ಡಾ. ಎಂ.ವಿ. ವೆಂಕಟೇಶ್ ತಿಳಿಸಿದರು.
===================================
ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ ನಿರ್ದೇಶಕ ಡಾ. ಸಿ.ಜಿ. ನಾಗರಾಜು ಅವರು ಮೇಳ ಉದ್ದೇಶಗಳನ್ನು ಬಿಡಿಬಿಡಿಯಾಗಿ ವಿವರಿಸಿದರು.
- ಬೆಳೆಗಾರರಿಂದ ಗ್ರಾಹಕರಿಗೆ ನೇರವಾಗಿ ಕಾರ್ಬೈಡ್ ಮುಕ್ತ, ಸಹಜವಾಗಿ ಮಾಗಿದ ಹಣ್ಣುಗಳನ್ನು ಒದಗಿಸುವುದು
- ಮಾವು ಮತ್ತು ಹಲಸು ಹಣ್ಣುಗಳ ಬೆಳೆಗಾರರು, ಗ್ರಾಹಕರಿಗೆ ನೇರ ಸಂಪರ್ಕ ಕಲ್ಪಿಸುವುದು. ಇದರಿಂದ ಬೆಳೆಗಾರರಿಗೆ ಯೋಗ್ಯಬೆಲೆ ದೊರೆಯುತ್ತದೆ. ಗ್ರಾಹಕರಿಗೆ ಗುಣಮಟ್ಟದ ಹಣ್ಣುಗಳು ಮುಕ್ತ ಮಾರುಕಟ್ಟೆಗಿಂತ ಕಡಿಮೆಬೆಲೆಯಲ್ಲಿ ದೊರೆಯುತ್ತದೆ.
- ಮಾವು ಮತ್ತು ಹಲಸಿನಲ್ಲಿರುವ ಉತ್ತಮತಳಿಗಳನ್ನು ವೀಕ್ಷಿಸುವ, ಸವಿಯುವ ಅವಕಾಶ ದೊರೆಯುತ್ತದೆ.
- ಮೇಳದಲ್ಲಿ 50 ರಿಂದ 60 ಬಗೆಯ ಮಾವಿನಹಣ್ಣುಗಳು, 10 ರಿಂದ 12 ಬಗೆಯ ಹಲಸುತಳಿಗಳ ಪ್ರದರ್ಶನವಿರುತ್ತದೆ. ಒಂದೇಕಡೆಯಲ್ಲಿ ಇಷ್ಟೊಂದು ವೈವಿಧ್ಯಮಯ ತಳಿಗಳ ಪ್ರದರ್ಶನ ಮತ್ತು ಮಾರಾಟ ಅಪರೂಪ. ಇದನ್ನು ಗ್ರಾಹಕರು ಸದುಪಯೋಗಪಡಿಸಿಕೊಳ್ಳಬೇಕು.
- ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ ಸೇರಿದಂತೆ ಒಟ್ಟು 8 ಜಿಲ್ಲೆಗಳ ಬೆಳೆಗಾರರು ಭಾಗವಹಿಸುತ್ತಾರೆ.
- ಮೇಳದಲ್ಲಿ ಮಾವು ಬೆಳೆಗಾರರಿಗೆ ಒಟ್ಟು 112 ಮಳಿಗೆಗಳು, ಹಲಸು ಬೆಳೆಗಾರರಿಗೆ 10 ಮಳಿಗೆಗಳು ಮತ್ತು ಇವೆರಡು ಹಣ್ಣುಗಳ ಮೌಲ್ಯವರ್ಧನೆ ಆಹಾರಪದಾರ್ಥಗಳ ಮಾರಾಟಗಾರರಿಗೆ 9 ಮಳಿಗೆಗಳನ್ನು ಹಂಚಿಕೆ ಮಾಡಲಾಗಿದೆ.
- ಮೇಳದಲ್ಲಿ 50 ಗ್ಲೋಬಲ್ ಗ್ಯಾಪ್ ಪ್ರಮಾಣಿತ ಮಾವು ಬೆಳೆಗಾರರು, 5 ಸಾವಯವ, 3 ಎಫ್.ಪಿಓ ಸಂಸ್ಥೆಗಳು, ಸ್ತ್ರೀಶಕ್ತಿ ಸಂಘದವರು,ಮಾವು, ಹಲಸು ಬೆಳೆಗಾರರ ಸಂಘಗಳ ಪ್ರತಿನಿಧಿಗಳು ಭಾಗವಹಿಸುತ್ತಾರೆ.
- ಬೇರೆಬೇರೆ ಭಾಗಗಳಿಂದ ಬರುವ ಬೆಳೆಗಾರರು, ಗ್ರಾಹಕರಿಗೆ ಮೇಳದಲ್ಲಿ ಯಾವುದೇ ರೀತಿಯ ತೊಂದರೆಯೂ ಆಗದ ಹಾಗೆ ವ್ಯವಸ್ಥೆ ಮಾಡಲಾಗಿದೆ. ಸೂಕ್ತ ಪಾರ್ಕಿಂಗ್ ಸೌಲಭ್ಯವೂ ಇರುತ್ತದೆ.
=========================
ಅಂಚೆ ಇಲಾಖೆ ಮೂಲಕ ವಿತರಣೆ: ಕಾರ್ಬೈಡ್ ಮುಕ್ತ ಮಾವು ಮಾರಾಟ ಅಭಿಯಾನಕ್ಕೆ ಅಂಚೆ ಇಲಾಖೆ ಸಹ ಕೈಜೋಡಿಸಿದೆ. ಬೇರೆಬೇರೆ ಜಿಲ್ಲೆಗಳಿಂದ ಬರುವ ಮಾವು ಬೆಂಗಳೂರಿನ ಜಿ.ಪಿ.ಓ. ಮುಖಾಂತರ ವಿತರಣೆಯಾಗಲಿದೆ. ಇದಕ್ಕಾಗಿ ಅಂಚೆ ಇಲಾಖೆ ಪ್ರತ್ಯೇಕ ವಿತರಣೆ ವ್ಯವಸ್ಥೆ ಮಾಡಿದೆ. ಇದಕ್ಕಾಗಿ ಕಡಿಮೆ ಸೇವಾವೆಚ್ಚ ವಿಧಿಸುತ್ತದೆ. ದೈನಂದಿನ ಕೆಲಸಕಾರ್ಯಗಳ ಒತ್ತಡದಿಂದ ಮಾರುಕಟ್ಟೆಗೆ ಬಂದು ಹಣ್ಣು ಖರೀದಿಸಲಾಗದ ಗ್ರಾಹಕರಿಗೆ ಈ ವ್ಯವಸ್ಥೆ ಅನುಕೂಲ ಎಂದು ಡಾ. ನಾಗರಾಜ್ ವಿವರಿಸಿದರು.
===========================
ಆನ್ ಲೈನ್ ಮೂಲಕ ಮಾರಾಟ: ಮಾವುಮಂಡಳಿಯೂ ಆನ್ ಲೈನ್ ಮೂಲಕ ಮಾವು ಮಾರಾಟಕ್ಕೆ ವ್ಯವಸ್ಥೆ ಕಲ್ಪಿಸಿದೆ. ಆನ್ಲೈನ್ ನಲ್ಲಿ ಮುಂಗಡಹಣ ಪಾವತಿಸಿ ತಮಗೆ ಬೇಕಾದ ಹಣ್ಣುಗಳನ್ನು ಖರೀದಿಸಬಹುದು. ಇದು ರೈತರ ಮೂಲಕ ಅಂಚೆ ಇಲಾಖೆ ತಲುಪುತ್ತದೆ. ಅಲ್ಲಿಂದ ಗ್ರಾಹಕರ ಮನೆಬಾಗಿಲಿಗೆ ವಿತರಣೆಯಾಗುತ್ತದೆ ಎಂದು ತಿಳಿಸಿದರು. www.karsirimangoes.karnataka.gov.in
ಇದೇ ಸಂದರ್ಭದಲ್ಲಿ ಕೋಲಾರಜಿಲ್ಲೆಯ ಮಾವು ಬೆಳೆಗಾರ ಚಿನ್ನಪ್ಪರೆಡ್ಡಿ ಮಾತನಾಡಿದರು. ಮಾವು ಮಂಡಳಿಯ ಅಭಿವೃದ್ಧಿ ಕಾರ್ಯಕ್ರಮಗಳು ಬೆಳೆಗಾರರಿಗೆ ಅನುಕೂಲಕರವಾಗಿವೆ. ಮಧ್ಯವರ್ತಿಗಳಿಲ್ಲದೇ ಗ್ರಾಹಕರೊಂದಿಗೆ ನೇರವಾಗಿ ವ್ಯವಹರಿಸಲು ಸಾಧ್ಯವಾಗಿದೆ. ಗ್ರಾಹಕರು ಮಾವಿಗಾಗಿ ಆನ್ ಲೈನ್ ಪೋರ್ಟಲ್ ಮೂಲಕ ಸಲ್ಲಿಸುವ ಬೇಡಿಕೆ ನೇರ ಬೆಳೆಗಾರರಿಗೆ ತಲುಪುತ್ತದೆ. ಇದನ್ನು ಅಂಚೆ ಇಲಾಖೆ ಮೂಲಕ ವಿತರಣೆಯಾಗುವಂತೆ ಮಾಡಿರುವುದಕ್ಕೆ ಮೆಚ್ಚುಗೆ ಸೂಚಿಸಿದರು.
==============================
ಮಾವು, ಹಲಸು ಮೇಳವನ್ನು ಆರಂಭಿಸಿದ ಖ್ಯಾತಿ ಹೊಂದಿರುವ ಡಾ. ಎಸ್.ವಿ. ಹಿತ್ತಲಮನಿ (ನಿವೃತ್ತ ಅಪರ ನಿರ್ದೇಶಕರು, ತೋಟಗಾರಿಕೆ ಇಲಾಖೆ) ಇವರು “ಅಗ್ರಿಕಲ್ಚರ್ ಇಂಡಿಯಾ”ಪ್ರತಿನಿಧಿಯೊಂದಿಗೆ ಮಾತನಾಡಿದರು. ಕಾರ್ಬೈಡ್ ಮುಕ್ತ, ಗುಣಮಟ್ಟದ ಮಾವಿನ ವೈವಿಧ್ಯಮಯ ತಳಿಗಳನ್ನು ಕರ್ನಾಟಕದ ಬೇರೆಬೇರೆ ಜಿಲ್ಲೆಗಳಲ್ಲಿಯೂ ಮಾರಾಟ ಮಾಡುವ ವ್ಯವಸ್ಥೆಯನ್ನು ತೋಟಗಾರಿಕೆ ಇಲಾಖೆ, ಮಾವುಮಂಡಳಿ ಮಾಡುತ್ತಿದೆ. ಇಂಥ ಗುಣಮಟ್ಟದ ಹಣ್ಣುಗಳು ರಾಜ್ಯದ ಪ್ರತಿಯೊಂದು ಕಡೆಯೂ ಲಭ್ಯವಾಗುವಂತೆ ಮಾಡಲು ಆರೋಗ್ಯ ಇಲಾಖೆ ಸಹಾಯವೂ ಬೇಕು. ಕಾರ್ಬೈಡ್ ನಿಂದ ಆಗುವ ಅನಾಹುತಗಳ ಬಗ್ಗೆ ಅವರೂ ಸಹ ವ್ಯಾಪಕವಾದ ತಿಳಿವಳಿಕೆ ಮೂಡಿಸಬೇಕು. ಎಲ್ಲಿಯಾದರೂ ಮಾರುಕಟ್ಟೆಗಳಲ್ಲಿ ಕಾರ್ಬೈಡ್ ಮೂಲಕ ಹಣ್ಣು ಮಾಡಿರುವಂಥವುಗಳು ಕಂಡು ಬಂದರೆ ಕ್ರಮ ಜರುಗಿಸಬೇಕು” ಎಂದು ಅಭಿಪ್ರಾಯಪಟ್ಟರು.
=================================