ಮಲೆನಾಡು, ಕರಾವಳಿ ಪ್ರದೇಶಗಳ ಕುರುಚಲು ಕಾಡು-ಗುಡ್ಡಗಳಲ್ಲಿ ಮಳೆಗಾಲದಲ್ಲಿ ಮಾತ್ರ ಕಂಡು ಬರುವ ಅಪರೂಪದ ಸ್ವಾದಿಷ್ಟವಾದ ತರಕಾರಿ ಕರೋಳು ಕಾಯಿ. ಕರುವೋಳು ಕಾಯಿ, ಗರಗಳ ಕಾಯಿ, ಕಾಡುತೊಂಡೆಕಾಯಿ ಮುಂತಾದ ಸ್ಥಳೀಯ ಹೆಸರುಗಳಿವೆ. ಇದರ ಸಸ್ಯಶಾಸ್ತ್ರೀಯ ಹೆಸರು ಸೊಲೆನಾ ಆಂಪ್ಲೆಕ್ಸಿಕ್ಯಾಲಿಸ್. ಇದೊಂದು ಅಪರೂಪದ ಔಷಧೀಯ ಸಸ್ಯವೂ ಹೌದು. ಇದರಲ್ಲಿ ಕಾರ್ಬೊಹೈಡ್ರೇಟ್‍ಗಳು, ಫೈಬರ್, ಖನಿಜಗಳು, ಪೊಟಾಸಿಯಂ, ಸಲ್ಫರ್ ಮತ್ತು ಪ್ರೋಟೀನ್ ಹೇರಳವಾಗಿದೆ.
ಇದು ಸೌತೆಕಾಯಿಯ ಕ್ಯುಕುರ್ಬೈಟೇಸಿಯೆ ಕುಟುಂಬಕ್ಕೆ ಸೇರಿದೆ.. ಕರೋಳು ಕಾಯಿ ನೋಡಲು ತೊಂಡೆಕಾಯಿಯನ್ನು ಹೋಲುತ್ತದೆ. ಗಾತ್ರದಲ್ಲಿ ತೊಂಡೆಕಾಯಿಗಿಂತ ತುಂಬ ಚಿಕ್ಕದಾಗಿರುತ್ತದೆ. ಇದರ ಮೂಲ ಭಾರತ. ಕರ್ನಾಟಕದ ಕರಾವಳಿ, ಮಲೆನಾಡು, ತಮಿಳ್ನಾಡು, ಆಂಧ್ರಪ್ರದೇಶಗಳಲ್ಲಿ ಬೆಳೆಯುತ್ತದೆ.
ದಟ್ಟ ಬಿಸಿಲು ಬೀಳುವ ಕುರುಚಲು ಗಿಡಗಂಟಿಗಳಿರುವ ಬೆಟ್ಟ-ಗುಡ್ಡಗಳಲ್ಲಿ ನಾಲ್ಕಾರು ಅಡಿ ಉದ್ದಕ್ಕೆ ಬೆಳೆಯುವ ಪುಟ್ಟ ಬಳ್ಳಿ ಇದು. ವೀಳ್ಯೆದೆಲೆಯನ್ನು ಹೋಲುವ ಹಸಿರೆಲೆಗಳು. ಕುರುಚಲು ಗಿಡಗಳನ್ನು ಆಧಾರವಾಗಿಸಿಕೊಂಡು ಹಬ್ಬಿ ಬೆಳೆಯುತ್ತದೆ. ನೆರಳಿನಲ್ಲಿ ಇದು ಬೆಳೆಯುವುದಿಲ್ಲ. ಮೊದಲ ಮಳೆ ಬಿದ್ದಾಕ್ಷಣ ಭೂಮಿಯಲ್ಲಿರುವ ಗಡ್ಡೆಗಳು, ಹಿಂದಿನ ವರ್ಷ ಹಕ್ಕಿಗಳು ಉದುರಿಸಿದ ಬೀಜಗಳು ಮೊಳೆತು ಚಿಗುರಲಾರಂಭಿಸುತ್ತದೆ. ಎರಡು ತಿಂಗಳಲ್ಲಿ ನಾಲ್ಕಾರು ಎಗೆಯೊಡೆದು ಹರಡಿದ ಬಳ್ಳಿಯ ಎಲೆಗಳ ಅಡಿ ಭಾಗದಲ್ಲಿ ಹೂಬಿಟ್ಟು ಕಾಯಿ ಕಚ್ಚಲು ಪ್ರಾರಂಭವಾಗುತ್ತದೆ.
ಆಷಾಢ ಕಳೆದು ಶ್ರಾವಣ ಕಾಲಿಡುತ್ತಿದ್ದಂತೆಯೇ ಹಕ್ಕಿಗಳಿಗೆ ಹಬ್ಬ. ಈ ಹೊತ್ತಿನಲ್ಲಿ ಹಕ್ಕಿಗಳಿಗೆ ಸ್ವಾದಿಷ್ಟ ಭೋಜನವಾದ ರುಚಿಕರ ಕರೋಳು ಕಾಯಿ ತಿನ್ನಲು ಸಿದ್ಧವಾಗಿರುತ್ತದೆ. ಬೆಳೆದ ಕಾಯಿ ಕೆಂಪಾದ ತೊಂಡೆ ಹಣ್ಣಿನಂತೆ ಕಾಣುತ್ತದೆ. ಹಣ್ಣಿನಲ್ಲಿ 20-25 ಕಪ್ಪು ಬೀಜಗಳಿರುತ್ತವೆ. ಮಳೆಗಾಲ ಮುಗಿಯುವವರೆಗೂ ಈ ಕಾಯಿ ಲಭ್ಯ.. ಒಂದು ಬಳ್ಳಿಯಲ್ಲಿ ವಾರಕ್ಕೊಮ್ಮೆ 10-15 ಕಾಯಿಗಳು ಕೊಯ್ಲಿಗೆ ಸಿಗುತ್ತವೆ. ಮಳೆಗಾಲ ಕಳೆದಂತೆ ಬಳ್ಳಿ ಒಣಗಿ ಸಾಯುತ್ತದೆ. ಅಡಿಯಲ್ಲಿ ಗಡ್ಡೆಗಳಿದ್ದು ಮುಂದಿನ ಮಳೆಗಾಲದಲ್ಲಿ ಚಿಗುರಿ ಪುನಃ ಕಾಯಿ ಬಿಡುತ್ತದೆ. ಕರೋಳು ಕಾಯಿ ಪಕ್ಷಿಗಳಿಗೆ ಪ್ರಿಯವಾದ ಆಹಾರ. ಬಲಿತ ಕಾಯಿಗಳನ್ನು ಪಕ್ಷಿಗಳು ಬಿಡುವುದೇ ಇಲ್ಲ. ಕಾಯಿ ತಿಂದು ಪಕ್ಷಿಗಳು ಬೀಜ ವಿಸರ್ಜಿಸುವುದರಿಂದ ಮುಂದಿನ ವರ್ಷ ಬೀಜ ಮೊಳೆಕೆಯೊಡೆದು ಸಸಿಯಾಗುತ್ತದೆ.
ತಿನ್ನುವುದು ಹೇಗೆ?:
ಎಳೆಕಾಯಿಗಳನ್ನು ಹಸಿಯಾಗಿಯೇ ತಿನ್ನಬಹುದು. ಗರಿಗರಿಯಾಗಿ ತಿನ್ನಲು ಸ್ವಾದಿಷ್ಟವಾಗಿರುತ್ತದೆ. ಬಲಿತ ಕಾಯಿ ಹಸಿರು ಹಳದಿ ಮಿಶ್ರಿತ ಬಣ್ಣವನ್ನು ಹೊಂದಿರುತ್ತದೆ. ಸಿಹಿಯಾದ ಗರಿಗರಿಯಾದ ಕಾಯಿಗಳನ್ನು ಮಕ್ಕಳು ಪೇರಳೆ ಹಣ್ಣನ್ನು ತಿಂದಂತೆ ಇಷ್ಟಪಟ್ಟು ಜಗಿದು ತಿನ್ನುತ್ತಾರೆ. ಈ ಕಾಯಿಗಳಿಂದ ಪಲ್ಯ, ಸಾಂಬಾರ್, ಕೂಟು, ಬಜ್ಜಿ, ಚಟ್ನಿ ಪುಡಿ ಮುಂತಾದ ವಿವಿಧ ಬಗೆಯ ಖಾದ್ಯಗಳನ್ನು ತಯಾರಿಸಬಹುದು. ಕರೋಳಿಗೆ ಅದರದ್ದೇ ಆದ ಸ್ವಾದ, ರುಚಿ ಇದೆ. ಆದರೆ ನಗರೀಕರಣ, ಕೈಗಾರಿಕೀಕರಣದ ಶಾಪದಿಂದಾಗಿ ಈ ಸ್ವಾದಿಷ್ಟ ತರಕಾರಿ ಬಳ್ಳಿ ಇಂದು ವಿನಾಶದ ಅಂಚಿಗೆ ಬಂದು ನಿಂತಿದೆ. ಮಲೆನಾಡು, ಕರಾವಳಿಗಳಲ್ಲಿದ್ದ ಅರಣ್ಯ ಪ್ರದೇಶ ಇಂದು ಕಡಿಮೆಯಾದುದರ ಪರಿಣಾಮ ಇದು.
ಉತ್ತರ ಕನ್ನಡ ಜಿಲ್ಲೆಯ ಗೋಕರ್ಣ, ಮಂಗಳೂರಿನ ಗ್ರಾಮಾಂತರ ಪ್ರದೇಶಗಳಲ್ಲಿ, ಕೊಣಾಜೆ, ಕೈರಂಗಳ, ಪುತ್ತೂರು, ವಿಟ್ಲ ಪರಿಸರದಲ್ಲಿ ಕರೋಳು ಕಾಯಿ ಅಲ್ಪ ಸಂಖ್ಯೆಯಲ್ಲಿ ಕಾಣಲು ಸಿಗುತ್ತಿರುವುದು ಆಶಾದಾಯಕ. 25-30 ವರ್ಷಗಳ ಹಿಂದೆ ಗ್ರಾಮೀಣರು ಕರೋಳು ಕಾಯಿ ಸಂಗ್ರಹಿಸಿ ಪೇಟೆಯಲ್ಲಿ ಮಾರಾಟ ಮಾಡುತ್ತಿದ್ದರು. ಆದರೆ ಈಗ ಮಾತ್ರ ಎಲ್ಲಿಯೂ ಮಾರುಕಟ್ಟೆಗೆ ಕಳುಹಿಸುವಷ್ಟು ಪ್ರಮಾಣದಲ್ಲಿ ಸಿಗುತ್ತಿಲ್ಲ. ಕಾರಣ ಸ್ಪಷ್ಟ. ಕರಾವಳಿಯ ಕಾಡುಗಳ ಜಾಗದಲ್ಲಿ ವಾಣಿಜ್ಯ ಕೇಂದ್ರಗಳು, ವಸತಿ ಸಮುಚ್ಛಯಗಳು, ಕೈಗಾರಿಕೆಗಳು ತಲೆಯೆತ್ತಿವೆ. ಗುಡ್ಡಗಳು, ಕುಮ್ಕಿ ಪ್ರದೇಶಗಳು ಮಾಯವಾಗಿ ಅಡಿಕೆ, ರಬ್ಬರ್ ತೋಟಗಳು ನಳನಳಿಸುತ್ತಿವೆ. ಹೀಗಾಗಿ ಕರೋಳು ಕಾಯಿ, ಮಡೆಹಾಗಲ ಕಾಯಿಯಂತಹ ಅಪ್ಪಟ ನೈಸರ್ಗಿಕ ತರಕಾರಿಗಳು, ವಿಷ್ಣುಕ್ರಾಂತಿ ಸೊಪ್ಪು, ಸೊಗದೇ ಬೇರು ಸೇರಿದಂತೆ ಅನೇಕ ಔಷಧೀಯ ಸಸ್ಯಗಳ ಭಂಡಾರಗಳೇ ಅಳಿವಿನಂಚಿಗೆ ಸರಿದಿವೆ.
ಕೃಷಿ ಮಾಡುವುದು ಹೇಗೆ?:
ಕರೋಳು ಕಾಡಿನ ತರಕಾರಿಯಾದರೂ ಮಲೆನಾಡಿನ ಕೃಷಿಕರು ಹಿಂದೆ ಇದನ್ನು ಕೃಷಿ ಮಾಡುತ್ತಿದ್ದರು ಎಂದು ನೆನಪಿಸಿಕೊಳ್ಳುತ್ತಾರೆ ಹಿರಿಯ ಕೃಷಿಕರಾದ ಪಳ್ಳತ್ತಡ್ಕ ವೆಂಕಟರಮಣ ಭಟ್. ಜೂನ್ ತಿಂಗಳಿನಲ್ಲಿಯೇ ಕಾಡಿನಲ್ಲಿ ಸೊಪ್ಪು ಕಡಿದಾಗ ಚಿಕ್ಕದಾದ ಕರೋಳು ಬಳ್ಳಿ ಕಾಣಿಸುತ್ತಿತ್ತು. ಹಿತ್ತಿಲಿನಲ್ಲಿ ಬೀಜ ಬಿತ್ತಿಯೂ ಸಸಿ ಮಾಡಬಹುದು. ಕಾಂಡ ಕತ್ತರಿಸಿ ತಂದು ನೆಟ್ಟರೂ ಬದುಕುತ್ತದೆ. ಹತ್ತರಿಂದ ಇಪ್ಪತ್ತು ಸಸಿಗಳನ್ನು ನೆಟ್ಟು ವಿಶಾಲವಾದ ಚಪ್ಪರ ಹಾಕಿದರೆ ಒಂದಿಷ್ಟು ಹಟ್ಟಿ ಗೊಬ್ಬರ ನೀಡಿದರೆ ಬಳ್ಳಿ ಹಬ್ಬಿ ಬೇಕಾದಷ್ಟು ಕಾಯಿ ಬಿಡುತ್ತಿತ್ತು ಎಂದು ಭಟ್ಟರು ನೆನಪಿಸಿಕೊಳ್ಳುತ್ತಾರೆ. ಇದಕ್ಕೆ ಯಾವುದೇ ವಿಶೇಷ ಆರೈಕೆ ಬೇಕಿಲ್ಲ. ಬುಡಕ್ಕೆ ಸ್ವಲ್ಪ ಹಟ್ಟಿಗೊಬ್ಬರ, ಸೊಪ್ಪು ನೀಡಿದರೆ ಸಾಕು. ಹುಲುಸಾಗಿ ಬೆಳೆಯುತ್ತದೆ. ಬಿಸಿಲು ಧಾರಾಳ ಬೀಳುವ ಪ್ರದೇಶದಲ್ಲಿ ಮಾತ್ರ ಇದನ್ನು ನೆಡಬೇಕು ಎಂದು ಭಟ್ಟರು ಸಲಹೆ ನೀಡುತ್ತಾರೆ.
ಔಷಧಿಯಾಗಿ ಕರೋಳು:
ಸ್ವಾದಿಷ್ಟ ತರಕಾರಿಯಾದ ಕರೋಳು ಕಾಯಿಯ ಇಡೀ ಬಳ್ಳಿಯನ್ನು ಔಷಧಿಯಾಗಿ ಬಳಸಬಹುದು. ಇದರಲ್ಲಿ ನೈಸರ್ಗಿಕ ಆಂಟಿ ಆಕ್ಸಿಡೆಂಟ್‍ಗಳಿವೆ. ಎಲೆಗಳಲ್ಲಿ ನೋವು ನಿವಾರಕ ಅಂಶಗಳಿವೆ. ವಿವಿಧ ರೀತಿಯ ಚರ್ಮ ರೋಗಗಳಲ್ಲಿ ಇದರ ಎಲೆಗಳು ಹೆಚ್ಚು ಪರಿಣಾಮಕಾರಿ. ಹಸಿ ಕಾಯಿಗಳನ್ನು ತಿಂದರೆ ದೇಹ ಸದೃಢವಾಗುತ್ತದೆ. ಎಲೆಗಳ ರಸದಿಂದ ಅರಿಷಿನ ಕಾಮಾಲೆ ರೋಗಕ್ಕೆ ಮದ್ದು ತಯಾರಿಸಲಾಗಿತ್ತದೆ. ಈ ಗಿಡದ ಬೇರಿನ ಕಷಾಯದಿಂದ ಹೊಟ್ಟೆ ನೋವು ನಿವಾರಣೆಯಾಗುತ್ತದೆ. ಆಸ್ತಮಾ, ಅಲರ್ಜಿಯಿಂದ ಬಳಲುವವರಿಗೆ ಇದರ ಸೇವನೆ ಒಳ್ಳೆಯದು.
ಕರೋಳು ಬಳ್ಳಿ ಹಬ್ಬಿ ಕಾಯಿ ಬಿಡಲು ಪ್ರಾರಂಭಿಸಿದೆ. ರೈತರು ತಮ್ಮ ತೋಟದ ಬೇಲಿ, ಹಿತ್ತಿಲುಗಳಲ್ಲಿ ಕಳೆ ತೆಗೆಯುವಾಗ ಈ ಅಪರೂಪದ ಬಳ್ಳಿಯನ್ನು ನಾಶ ಮಾಡದೆ ಉಳಿಸಿಕೊಳ್ಳುವ ಅಗತ್ಯವಿದೆ.
ಆಹಾರವಾಗಿ, ಔಷಧಿಯಾಗಿ ಉಪಕರಿಸುವ, ಕಾಡಿನ ಗಿಳಿ, ಗುಬ್ಬಚ್ಚಿಗಳು ಮತ್ತು ಅಳಿಲು, ಬೆರುವಿನಂತಹ ಪುಟ್ಟ ಪ್ರಾಣಿಗಳ ಜೀವಕ್ಕೆ ಅಗತ್ಯ ಆಹಾರ ಒದಗಿಸುವ ಈ ಪುಟ್ಟ ಬಳ್ಳಿ ಇಂದು ನಮ್ಮ ದುರಾಸೆಯಿಂದಾಗಿ ಅಳಿವಿನಂಚಿನಲ್ಲಿದೆ. ಕರೋಳು ಕಾಯಿಯ ಬಳ್ಳಿ ಕಂಡಲ್ಲಿ ಸಂರಕ್ಷಿಸಿ ಉಳಿಸಿ ಬೆಳೆಸಬೇಕಾದ್ದು ನಮ್ಮ ಆದ್ಯ ಕರ್ತವ್ಯವಾಗಿದೆ.