ಏಕಬೆಳೆ ಪದ್ಧತಿಯನ್ನು ಅವಲಂಬಿಸುವುದು ಅಪಾಯಕಾರಿ !

0

ಏಕಬೆಳೆ ಪದ್ಧತಿಯನ್ನು ಅವಲಂಬಿಸುವುದು ಯಾವಾಗಲೂ ಅಪಾಯಕಾರಿ. ಒಂದೇ ಬೇಳೆ ಹಾಕುವ ಬದಲು ಎರಡು ಅಥವಾ ಹೆಚ್ಚು ಬೆಳೆಗಳನ್ನು ಹಾಕುವುದು ಸೂಕ್ತ. ಇವುಗಳಲ್ಲಿ ಯಾವುದೇ ಒಂದು ಬೆಳೆ ವಿಫಲವಾದರೂ ಉಳಿದ ಬೆಳೆಗಳು ಕೈ ಹಿಡಿಯುತ್ತವೆ. ರೈತರು ನಷ್ಟಕ್ಕೀಡಾಗುವುದು ತಪ್ಪುತ್ತದೆ. ಈ ನಿಟ್ಟಿನಲ್ಲಿ ಪೂರಕ ಬೆಳೆಗಳ ಬಗ್ಗೆ, ಅವುಗಳ ಪದ್ಧತಿಗಳ ಬಗ್ಗೆ ಕೃಷಿ ವಿಜ್ಙಾನಿಗಳು ಸಂಶೋಧನೆ ಮಾಡಿದ್ದಾರೆ.

ಒಣಬೇಸಾಯದ  ತಾಂತ್ರಿಕತೆಗಳು

ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಕೃಷಿ ವಿಜ್ಞಾನಿಗಳು ಒಣಬೇಸಾಯದ  ತಾಂತ್ರಿಕತೆಗಳನ್ನು, ಪದ್ಧತಿಗಳನ್ನು ಅಭಿವೃದ್ಧಿ ಮಾಡಿದ್ದಾರೆ. ಇವರು ಅಭಿವೃದ್ಧಿಪಡಿಸಿದ ಬೆಳೆ ಪದ್ಧತಿಗಳನ್ನು ಅನುಸರಿಸುವುದು ಕೃಷಿಕರ ಆರ್ಥಿಕ ಕ್ಷೇಮಾಭಿವೃದ್ಧಿ ದೃಷ್ಟಿಯಿಂದ ಅನುಕೂಲಕರ. ಕಡಿಮೆ ಖರ್ಚು, ಹೆಚ್ಚು ಲಾಭಾಂಶ ತರುವ ಪದ್ಧತಿಗಳು ಇವಾಗಿವೆ. ಇವುಗಳನ್ನು ಸಣ್ಣ ಮತ್ತು ಮಧ್ಯಮ ಪ್ರಮಾಣದ ರೈತರನ್ನು ದೃಷ್ಟಿಯಲ್ಲಿಟ್ಟುಕೊಂಡು ಅಭಿವೃದ್ಧಿಪಡಿಸಲಾಗಿದೆ.

ರಾಸಾಯನಿಕ ಪದ್ಧತಿ ಕೃಷಿ ಹೆಚ್ಚು ಚಾಲ್ತಿಗೆ ಬಂದ ನಂತರವೇ ಏಕಬೆಳೆ ಪದ್ಧತಿಯೂ ಹೆಚ್ಚಾಯಿತು. ನಿರ್ವಹಣೆ ಸುಲಭವಾಗುವುದು ಕೂಡ ಇದಕ್ಕೆ ಕಾರಣವಾದ ಅಂಶ. ಆದರೆ ಏಕಬೆಳೆ ಪದ್ಧತಿಯಿಂದ ಆಗುವ ತೊಂದರೆಗಳು ಅಪಾರ. ರೋಗಬಾಧೆ-ಕೀಟಬಾಧೆ ಹೆಚ್ಚಾಗುತ್ತದೆ. ಬೆಳೆ ಇಳುವರಿಯೂ ಕುಗ್ಗುತ್ತದೆ. ಬೆಳೆ ವಿಫಲವಾದರೆ ನಷ್ಟ ಉಂಟಾಗುತ್ತದೆ. ಆದರೆ ಅಂತರ ಬೇಸಾಯ ಮತ್ತು ಮಿಶ್ರಬೆಳೆ ಪದ್ಧತಿಯಲ್ಲಿ ಇಂಥ ಅಪಾಯಗಳು ಇರುವುದಿಲ್ಲ.

ದೋಣಿ ಸಾಲುಗಳು

ಮಣ್ಣಿನ ಫಲವತ್ತೆಯನ್ನು ಕಾಪಾಡಿ, ಬೆಳೆಯನ್ನು ಸಂರಕ್ಷಿಸುವಲ್ಲಿ ಬಸಿಗಾಲುವೆಗಳ ಪಾತ್ರ ಅಪಾರ. ಮಳೆಯಾಶ್ರಿತ ಪ್ರದೇಶವೇ ಆಗಲಿ ಅಥವಾ ನೀರಾವರಿ ಆಶ್ರಿತ ಪ್ರದೇಶವೇ ಆಗಲಿ ಅಲ್ಲಿ ಬಸಿಗಾಲುವೆಗಳು ಇರುವುದು ಅತ್ಯವಶ್ಯಕ. ಇದರಿಂದ ಅಧಿಕ ಪ್ರಮಾಣದ ನೀರು ಕೃಷಿಭೂಮಿಯಲ್ಲಿ ನಿಲ್ಲದೇ ಹೊರಗೆ ಹರಿದು ಹೋಗುತ್ತದೆ. ರಾಗಿ ಮತ್ತು ತೊಗರಿ ಇರುವ ಹೊಲದಲ್ಲಿ ದೋಣಿ ಸಾಲುಗಳನ್ನು ಮಾಡುವುದರಿಂದ ಹೆಚ್ಚುವರಿ ನೀರನ್ನು ಹೊರ ಹಾಕಲು ಸಹಾಯಕವಾಗುತ್ತದೆ.

ಮಿಶ್ರ ಬೆಳೆಗಳು

ತೊಗರಿಗೆ ರೋಗ ಮತ್ತು ಕೀಟಬಾಧೆ ಹೆಚ್ಚು. ಮಳೆ ಪ್ರಮಾಣ ತೀರಾ ಕಡಿಮೆಯಾದರೂ ಇಳುವರಿ ಕಡಿಮೆಯಾಗುವ ಅಥವಾ ಬೆಳೆ ವಿಫಲವಾಗುವ ಸಾಧ್ಯತೆಗಳು ಇರುತ್ತವೆ. ಅಂತರ ಬೆಳೆ ಅಥವಾ ಮಿಶ್ರ ಬೆಳೆ ಇದ್ದಾಗ ತೊಗರಿಯಲ್ಲಿ ಕಡಿಮೆ ಇಳುವರಿ ಬಂದರೂ ನಷ್ಟವಾಗುವುದಿಲ್ಲ. ತೊಗರಿ ಮತ್ತು ರಾಗಿಯನ್ನು ಒಂದೇ ತಾಕಿನಲ್ಲಿ ಮಿಶ್ರ ಬೆಳೆಗಳಾಗಿ ಬೆಳೆದಾಗ ಉತ್ತಮ ಫಲಿತಾಂಶವೂ ಬರುತ್ತದೆ.

ಸರಳ ಯಂತ್ರೋಪಕರಣಗಳು

ಪ್ರಸ್ತುತ ದಿನಗಳಲ್ಲಿ ಕೃಷಿಕಾರ್ಮಿಕರ ಕೊರತೆ ಹೆಚ್ಚಾಗಿದೆ. ಒಣಬೇಸಾಯ ಪ್ರದೇಶಗಳಲ್ಲಿ ಇದರಿಂದ ಬಹಳ ತೊಂದರೆಯಾಗುತ್ತಿದೆ. ಸಕಾಲದಲ್ಲಿ ಬಿತ್ತನೆ ಮಾಡುವುದು, ಕಳೆ ನಿವಾರಣೆ ಮತ್ತು ಕೊಯ್ಲು ಕಾರ್ಯ ಸಾಧ್ಯವಾಗುತ್ತಿಲ್ಲ. ಇದರ ಬಗ್ಗೆ ಗಮನ ಹರಿಸಿರುವ ಕೃಷಿ ವಿಜ್ಞಾನಿಗಳು ಒಣ ಬೇಸಾಯದ ಪ್ರದೇಶಕ್ಕೆ ಸೂಕ್ತವಾದ ಸರಳ ಯಂತ್ರೋಪಕರಣಗಳನ್ನು ಅಭಿವೃದ್ಧಿಪಡಿಸಿದ್ದಾರೆ.

ಜಿಕೆವಿಕೆ ಆವರಣ

ಕೃಷಿ ವಿಶ್ವವಿದ್ಯಾಲಯ ಬೆಂಗಳೂರು ಇಲ್ಲಿನ ಜಿಕೆವಿಕೆ ಆವರಣದಲ್ಲಿ ಇರುವ ಒಣ ಬೇಸಾಯ ಕೃಷಿ ವಿಭಾಗದಲ್ಲಿ ಬೇರೆಬೇರೆ ಬೆಳೆಗಳನ್ನು ಹಾಕಲಾಗಿದೆ. ರೈತರು ಅನುಸರಿಸಲು ಸುಲಭವಾಗುವ ಪದ್ಧತಿಗಳನ್ನು ಅಭಿವೃದ್ಧಿಪಡಿಸಲಾಗಿದೆ. ರಾಗಿ, ತೊಗರಿ, ಸರ್ಯಕಾಂತಿ, ಹುಚ್ಚೆಳ್ಳು, ಮೆಣಸಿನಕಾಯಿ, ಅಕ್ಕಿ ಅವರೆ ಇತ್ಯಾದಿ ಬೆಳೆಗಳನ್ನು ಬೆಳೆಯಲಾಗುತ್ತಿದೆ. ಈ ಮಾದರಿಗಳು ಯಶಸ್ವಿಯೆಂದು ಮನವರಿಕೆಯಾದ ನಂತರವೇ ಅವುಗಳನ್ನು ರೈತ ಸಮುದಾಯಕ್ಕೆ ಪರಿಚಯಿಸಲಾಗುತ್ತಿದೆ.

ಮಳೆನೀರಿನ ಕೊಯ್ಲು

ಒಣಭೂಮಿ ಪ್ರದೇಶದಲ್ಲಿ ಮಳೆನೀರಿನ ಕೊಯ್ಲು ಅತ್ಯಗತ್ಯ. ಈ ನಿಟ್ಟಿನಲ್ಲಿ ಸೂಕ್ತ ವಿಧಾನಗಳನ್ನು ಅಉಸರಿಸಬೇಕು. ಮಾಗಿ ಉಳುಮೆ ಸಂರ್ಭದಲ್ಲಿ ಅನುಸರಿಸುವ ವಿಧಾನಗಳು ಇದಕ್ಕೆ ಸಹಾಯಕ. ಇದು ಬಿದ್ದ ಮಳೆನೀರನ್ನು ಭೂಮಿಯೊಳಗೆ ಸರಾಗವಾಗಿ ಇಳಿಸುತ್ತದೆ. ಇದಲ್ಲದೇ ಬದುಗಳನ್ನು ಭದ್ರಪಡಿಸಬೇಕು. ಇದು ಕೂಡ ಕೃಷಿಭೂಮಿಯಲ್ಲಿ ಬಿದ್ದ ಮಳೆನೀರು ಹೊರಗೆ ಹರಿದು ಹೋಗದಂತೆ ತಡೆಯುತ್ತದೆ.

ಬದುಗಳು ಸಹಾಯಕ

ಮೇಲ್ಮಣ್ಣಿನ ಸಂರಕ್ಷಣೆ ಅತ್ಯಗತ್ಯ. ಇದು ಬಿರುಸಾಗಿ ಬೀಳುವ ಮಳೆಗೆ ಕೊಚ್ಚಿಕೊಂಡು ಹೋಗಬಹುದು. ಹೀಗೆ ಮೇಲ್ನಣ್ಣು ತೊಳೆದು ಹೋದರೆ ಮಣ್ಣು ನಿಸ್ಸಾರವಾಗುತ್ತದೆ. ಮೇಲ್ಪದರ ಮಣ್ಣಿನಲ್ಲಿಯೇ ಕೃಷಿಗೆ ಸಹಾಯಕವಾದ ಸೂಕ್ಷ್ಮಾಣುಗಳು ಇರುತ್ತವೆ. ಈ ನಿಟ್ಟಿನಲ್ಲಿ ಮೇಲ್ನಣ್ಣು ಕೊಚ್ಚಿ ಹೋಗದಂತೆ ತಡೆಯಲು ಬದುಗಳು ಸಹಾಯಕ. ಹೀಗೆ ನಿರ್ಮಿಸಿದ ಬದುಗಳನ್ನು ಆಗಾಗ ಪರಿಶೀಲಿಸುತ್ತಿರಬೇಕು. ಇಲ್ಲದಿದ್ದರೆ ಇವುಗಳಲ್ಲಿ ರಂಧ್ರಗಳು ಉಂಟಾಗಿ ಬೇಗನೆ ದರ್ಬಲವಾಗಿ ಕುಸಿಯುತ್ತವೆ.

ಮಾಗಿ ಉಳುಮೆ

ಮಣ್ಣಿನ ಫಲವತ್ತೆ ಕಾಪಾಡುವ ದೃಷ್ಟಿಯಲ್ಲಿ ಮಾಗಿ ಉಳುಮೆ ಪ್ರಾಮುಖ್ಯತೆಯನ್ನು ಬಹು ಹಿಂದಿನಿಂದಲೂ ಹೇಳಿಕೊಂಡು ಬರಲಾಗಿದೆ. ಕೃಷಿವಿಜ್ಞಾನಿಗಳು ಈ ಮಾತನ್ನು ಮತ್ತೆಮತ್ತೆ ಹೇಳುತ್ತಿರುತ್ತಾರೆ. ಈ ವಿಧಾನವನ್ನು ಅನುಸರಿಸಿದಾಗ ಕೃಷಿಯ ಖರ್ಚು-ವೆಚ್ಚವೂ ಗಣನೀಯವಾಗಿ ಕಡಿಮೆಯಾಗುತ್ತದೆ. ಬೆಳೆ ಇಳುವರಿ ವರ್ಷದಿಂದ ರ್ಷಕ್ಕೆ ವೃದ್ಧಿಸುತ್ತದೆಯೇ ಹೊರತು ಕಡಿಮೆಯಾಗುವುದಿಲ್ಲ

ಅಧಿಕ ಇಳುವರಿ ನೀಡುವ ತಳಿಗಳು

ಮಳೆಯಾಶ್ರಿತ ಪ್ರದೇಶದಲ್ಲಿ ಎಣ್ಣೆಕಾಳು ಬೆಳೆಗಳನ್ನು ಹೆಚ್ಚು ಪ್ರಮಾಣದಲ್ಲಿ ಬೆಳೆಯುತ್ತಾರೆ. ಇಂಥ ಕೃಷಿ ಮಾಡುವ ರೈತರನ್ನು ಗಮನದಲ್ಲಿಟ್ಟುಕೊಂಡು ಅಲ್ಪಾವಧಿಯಲ್ಲಿ ಅಧಿಕ ಇಳುವರಿ ನೀಡುವ ತಳಿಗಳನ್ನು ಕೃಷಿ ವಿಶ್ವವಿದ್ಯಾಲಯ, ಬೆಂಗಳೂರು ಅಭಿವೃದ್ಧಿಪಡಿಸಿದೆ. ಇವುಗಳು ರೋಗ ಮತ್ತು ಕೀಟ ನಿರೋಧಕ ಅಂಶಗಳನ್ನು ಹೊಂದಿರುವುದು ಗಮನರ್ಹ. ಇದರ ಜೊತೆಗೆ ಇತರ ಅಲ್ಪಾವಧಿ ಬೆಳೆಗಳಲ್ಲಿಯೂ ಸಾಕಷ್ಟು ತಳಿಗಳನ್ನು ಅಭಿವೃದ್ಧಿಪಡಿಸಲಾಗಿದೆ.

ಸಿರಿಧಾನ್ಯಗಳು

ಪ್ರಸ್ತುತ ದಿನಗಳಲ್ಲಿ ಸಿರಿಧಾನ್ಯಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಜನರಲ್ಲಿ ಆರೋಗ್ಯ ಪ್ರಜ್ಞೆ ಹೆಚ್ಚಳವಾಗಿರುವುದೇ ಇದಕ್ಕೆ ಕಾರಣ. ಈ ಹಿಂದೆ ಕಾರಣಾಂತರಗಳಿಂದ ಇವುಗಳ ಬಳಕೆ ತೀರಾ ಕುಗ್ಗಿತ್ತು. ನಗರ ಪ್ರದೇಶಗಳಲ್ಲಿ ಇವುಗಳನ್ನು ಬಳಸುವವರೇ ಇಲ್ಲ ಎಂಬಂಧ ಪರಿಸ್ಥಿತಿ ಇತ್ತು. ತೃಣಧಾನ್ಯಗಳೆಂದೇ ಕರೆಯಲ್ಪಡುತ್ತಿದ್ದ ಇವುಗಳನ್ನು ಈಗ ಸಿರಿಧಾನ್ಯಗಳೆಂದೇ ಕರೆಯಲಾಗುತ್ತಿದೆ. ಅವುಗಳಲ್ಲಿರುವ ಉತ್ಕೃಷ್ಟ ಪೋಷಕಾಂಶವೇ ಇದಕ್ಕೆ ಪ್ರಮುಖ ಕಾರಣ.

ಫಲವತ್ತತೆ ಹೆಚ್ಚಳ

ಸಿರಿಧಾನ್ಯಗಳನ್ನು ಬೆಳೆಯುವುದರಿಂದ ಮಣ್ಣಿನ ಫಲವತ್ತತೆ ಮೇಲೂ ಉತ್ತಮ ಪರಿಣಾಮಗಳು ಉಂಟಾಗುತ್ತವೆ. ಅದರ ಫಲವತ್ತತೆ ಹೆಚ್ಚಳವಾಗುತ್ತದೆ. ಇದರ ಬೇರುಗಳು ಚೆನ್ನಾಗಿ ಬೆಳವಣಿಗೆಯಾಗಿರುತ್ತವೆ. ಕಟಾವು ಮಾಡಿದ ನಂತರ ಪೈರನ್ನು ಕತ್ತರಿಸಿದ ಮೇಲೆ ಉಳುಮೆ ಮಾಡಬೇಕು. ಇದರಿಂದ ಬೇರು ಮಣ್ಣಿನೊಂದಿಗೆ ಚೆನ್ನಾಗಿ ಮಿಶ್ರಣವಾಗುತ್ತದೆ.  ಮಣ್ಣಿನ ಫಲವತ್ತತೆ ಹೆಚ್ಚುತ್ತದೆ.

ಪಾರಂಪಾರಿಕವಾಗಿ ಸಿರಿಧಾನ್ಯಗಳನ್ನು ಬೆಳೆಯುತ್ತಾ ಬಂದಿದ್ದ ಪ್ರದೇಶಗಳಲ್ಲಿಯೂ ಇದು ಈ ಬೆಳೆಗಳು ಕಾಣುತ್ತಿಲ್ಲ. ಒಂದು ವೇಳೆ ಇದ್ದರೂ ಅತಿಕಡಿಮೆ ಸಂಖ್ಯೆಯ ಕೃಷಿಕರು ಬೆಳೆಯುತ್ತಿರುತ್ತಾರೆ. ಈ ಪರಿಸ್ಥಿತಿ ತಪ್ಪಿಸಿ ಹೆಚ್ಚು ಮಂದಿ ಕೃಷಿಕರು ಸಿರಿಧಾನ್ಯಗಳನ್ನು ಬೆಳೆಯುವಂತೆ ಕೃಷಿ ವಿಶ್ವವಿದ್ಯಾಲಯ, ಬೆಂಗಳೂರು ಉತ್ತೇಜಿಸುತ್ತಿದೆ. ಸಾಕಷ್ಟು ಸುಧಾರಿತ ತಳಿಗಳನ್ನು ಇಲ್ಲಿ ಪರಿಚಯಿಸಲಾಗುತ್ತಿದೆ.

ಪಟ್ಟಣ-ನಗರ-ಮಹಾನಗರಗಳಲ್ಲಿ ಸಿರಿಧಾನ್ಯಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಉತ್ತಮ ಧಾರಣೆಯೂ ದೊರೆಯುತ್ತಿದೆ. ಇವುಗಳನ್ನು ಸಂಸ್ಕರಿಸುವ ಯಂತ್ರಗಳು ಕೂಡ ಬಂದಿವೆ. ಸುಧಾರಿತ ತಳಿಗಳು ಕೂಡ ಲಭ್ಯವಿವೆ. ಈ ಎಲ್ಲ ಅವಕಾಶವನ್ನೂ ಬಳಸಿಕೊಂಡು ಸಿರಿಧಾನ್ಯಗಳನ್ನು ಬೆಳೆಯಲು ಕೃಷಿಕರು ಹೆಚ್ಚೆಚ್ಚು ಸಂಖ್ಯೆಯಲ್ಲಿ ಮುಂದಾಗಬೇಕು. ಈ ನಿಟ್ಟಿನಲ್ಲಿ ಅಗತ್ಯವಾದ ಸಲಹೆ-ಸಹಕಾರಗಳು ಕೃಷಿ ವಿವಿಯ ತಜ್ಞರಿಂದ ದೊರೆಯುತ್ತದೆ.

ಎಣ್ಣೆಕಾಳು ಬೆಳೆಗಳು

ಪರ್ಯಾಯ ಬೆಳೆ ಪದ್ಧತಿಗಳ ಮಹತ್ವದ ಬಗ್ಗೆ ಕೃಷಿ ವಿಜ್ಞಾನಿಗಳು ಮತ್ತೆಮತ್ತೆ ಪ್ರತಿಪಾದಿಸುತ್ತಲೇ ಇರುತ್ತಾರೆ. ಆಯಾ ಪ್ರದೇಶದ ಹವಾಮಾನಕ್ಕನುಗುಣವಾದ ಪರ್ಯಯ ಬೆಳೆಗಳು ಮತ್ತು ಪದ್ಧತಿಗಳ ಬಗ್ಗೆ ಅವರು ಮಾಹಿತಿ ನೀಡುತ್ತಾರೆ. ಪರ್ಯಾಯ ಬೆಳೆ ಪದ್ಧತಿಗಳಲ್ಲಿ ಎಣ್ಣೆಕಾಳು ಬೆಳೆಗಳೂ ಸೇರುತ್ತವೆ. ಸೂಕ್ತವಾದ ಹಂಗಾಮಿನಲ್ಲಿ ಇವುಗಳನ್ನು ಬೆಳೆದು ಲಾಭಾಂಶವನ್ನು ಹೆಚ್ಚಿಸಿಕೊಳ್ಳಬಹುದು

ಅಲ್ಪಾವಧಿ ತಳಿಗಳು

ಸೆಪ್ಟೆಂಬರ್ ನಂತರ ಮಳೆ ಪ್ರಮಾಣ ಕಡಿಮೆಯಾಗುತ್ತದೆ. ಈ ಹಂತದಲ್ಲಿ ಸೂಕ್ತವಾದ ಬೆಳೆಗಳನ್ನು ಬೆಳೆಯಬೇಕು. ಯಾವ ತಳಿ ಮತ್ತು ಅದು ಕಟಾವಿಗೆ ಬರುವ ಅವಧಿಯೆಷ್ಟು ಎಂಬುದು ಕೂಡ ಮುಖ್ಯವಾಗುತ್ತದೆ. ಇಂಥ ಸಂರ್ಭದಲ್ಲಿ ಅಲ್ಪಾವಧಿ ತಳಿಗಳು ಸೂಕ್ತ. ಶೀಘ್ರ ಕಟಾವಿಗೆ ಬರುವುದರಿಂದ ನೀರಿನ ಅವಶ್ಯಕತೆಯ ದಿನಗಳು ಕೂಡ ಕಡಿಮೆಯಾಗಿರುತ್ತವೆ.

ಮಣ್ಣಿಗೆ ಜೀವಂತ ಮುಚ್ಚಿಗೆ

ತೊಗರಿಯಲ್ಲಿ ಸಾಲುಗಳ ನಡುವೆ ಅಂತರ ಹೆಚ್ಚು. ಇಂಥಲ್ಲಿ ಅಲ್ಪಾವಧಿಯ ಇತರ ಬೆಳೆಗಳನ್ನು ಬೆಳೆದುಕೊಳ್ಳುವುದು ತುಂಬ ಲಾಭಕರ. ಅಲಸಂದೆ, ಅವರೆ ಇತ್ಯಾದಿ ಬೆಳೆಗಳನ್ನು ಬೆಳೆಯುವುದು ಸೂಕ್ತ. ಅವರೆ, ಅಲಸಂದೆ ಬೆಳೆಯುವುದರಿಂದ ಮಣ್ಣಿಗೆ ಜೀವಂತ ಮುಚ್ಚಿಗೆ ದೊರೆತಂತೆ ಆಗುತ್ತದೆ. ಇದರಿಂದ ಮಣ್ಣಿನಲ್ಲಿ ದೀರ್ಘಕಾಲ ತೇವಾಂಶವಿರುತ್ತದೆ. ಮುಚ್ಚಿಗೆ ಇರುವುದರಿಂದ ತೊಗರಿಯ ಬೆಳವಣಿಗೆಯೂ ಉತ್ತಮವಾಗಿ ಸಾಗುತ್ತದೆ.

ಮಿಶ್ರಬೆಳೆಗಳ ಮಾರಾಟ

ತೊಗರಿಯ ಸಾಲುಗಳ ನಡುವೆ ಅಲ್ಪಾವಧಿ ಬೆಳೆಗಳನ್ನು ಬೆಳೆಯುವುದರಿಂದ ಉಂಟಾಗುವ ಅನುಕೂಲಗಳನ್ನು ಕೃಷಿ ವಿಜ್ಞಾನಿಗಳು ಮತ್ತೆಮತ್ತೆ ಹೇಳುತ್ತಿರುತ್ತಾರೆ. ಈ ಮೊದಲೇ ಹೇಳಿದಂತೆ ತೊಗರಿಗೆ ರೋಗಬಾಧೆ-ಕೀಟ ಬಾಧೆ ಹೆಚ್ಚು. ಇವುಗಳನ್ನು ಬಾರದಂತೆ ತಡೆಗಟ್ಟಲು ಅಥವಾ ನಿಯಂತ್ರಿಸಲು ಸಾಕಷ್ಟು ಹಣ ಖರ್ಚು ಮಾಡಬೇಕಾಗುತ್ತದೆ. ಈ ಹಣ, ಮಿಶ್ರಬೆಳೆಗಳ ಮಾರಾಟದಿಂದ ದೊರೆಯುತ್ತದೆ.

ಸುಧಾರಿತ ಮೇವು ತಳಿ

ಜಾನುವಾರುಗಳ ಸಾಕಣೆ ಮಾಡುತ್ತಿದ್ದರೆ ಅವುಗಳಿಗೆ ಪೌಷ್ಟಿಕಾಂಶಯುಕ್ತ ಮೇವು ನೀಡಬೇಕು. ಇಂಥ ಮೇವನ್ನು ಸ್ವತಃ ಬೆಳೆದುಕೊಳ್ಳುವುದು ಅವುಗಳ ನಿರ್ವಹಣಾ ವೆಚ್ಚವನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ. ಇಂದು ಸಾಕಷ್ಟು ಸುಧಾರಿತ ಮೇವು ತಳಿಗಳಿವೆ. ಅವುಗಳಲ್ಲಿ ಉತ್ತಮ ತಳಿಗಳನ್ನು ಅಭಿವೃದ್ಧಿಪಡಿಸಲಾಗಿದೆ. ಆಯಾ ಪ್ರದೇಶಕ್ಕೆ ಅನುಗುಣವಾದ ತಳಿಗಳನ್ನು ಕೃಷಿ ಮಾಡಬಹುದು

LEAVE A REPLY

Please enter your comment!
Please enter your name here