ಆಗಸ್ಟ್ ಕೊನೆಯ ಎರಡು ವಾರದಲ್ಲಿ ಮಳೆ ಸಾಧ್ಯತೆ ಇದೆಯೇ ?

0

ಕರ್ನಾಟಕ ರಾಜ್ಯದಲ್ಲಿ ಈ ಬಾರಿಯ ಮುಂಗಾರು ಮಳೆ ಜೂನ್ ತಿಂಗಳಿನಲ್ಲಿ ನಾಪತ್ತೆಯಾಗಿತ್ತು. ಜುಲೈ ತಿಂಗಳಿನಲ್ಲಿ ಹಲವೆಡೆ ಆರ್ಭಟಿಸಿದೆ. ಆಗಸ್ಟ್ ತಿಂಗಳಿನಲ್ಲಿ ಮತ್ತೆ ಮಂಕಾಗಿದೆ. ಇನ್ನೂ ಹಲವು ಪ್ರಮುಖ ಅಣೆಕಟ್ಟೆಗಳು ಭರ್ತಿಯಾಗಿಲ್ಲ. ಮಳೆಯಾಶ್ರಿತ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಅದು ಕೈ ಹಿಡಿಯಬೇಕಾದರೆ ಆಗಸ್ಟ್ ತಿಂಗಳಿನಲ್ಲಿ ಮಳೆಯಾಗಬೇಕು.

“ ಆಗಸ್ಟ್ 11 ರಿಂದ ಆಗಸ್ಟ್ 18ರ ತನಕ ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ವಾಡಿಕೆಗಿಂತ ಬಹಳ ಕಡಿಮೆಯಾಗಲಿದೆ. ಈಗಾಗಲೇ ಕರಾವಳಿಯ ಹೆಚ್ಚಿನ ಪ್ರದೇಶಗಳಲ್ಲಿ ಮಳೆಯಾಗುತ್ತಿಲ್ಲ.  ಇದೇ ಅವಧಿಯಲ್ಲಿ ರಾಜ್ಯದ ಇತರೆಡೆ ವಾಡಿಕೆ ಮಳೆಯಾಗಬಹುದು. ಇದೇ ಆಗಸ್ಟ್ 18 ರಿಂದ ಆಗಸ್ಟ್ 24ರೆಗೆ ಕರಾವಳಿಯ ಬಹುತೇಕ ಕಡೆ ಮಳೆ ವಾಡಿಕೆಗಿಂತ ಹೆಚ್ಚಾಗುವ ಸಾಧ್ಯತೆ ಇದೆ” ಎಂದು ಭಾರತೀಯ ಹವಾಮಾನ ಇಲಾಖೆಯ ತಜ್ಞ ಪ್ರಸಾದ್ ಅವರು ಅಭಿಪ್ರಾಯಪಟ್ಟರು.

“ಪಶ್ಚಿಮ ಘಟ್ಟಗಳಿಗೆ ಹೊಂದಿಕೊಂಡಿರುವ ಜಿಲ್ಲೆಗಳಾದ ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ ಜಿಲ್ಲೆಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗುವ ಸಾಧ್ಯತೆಗಳಿವೆ. ಇದೇ ಅವಧಿಯಲ್ಲಿ ಅಂದರೆ ಆಗಸ್ಟ್ 18 ರಿಂದ 24ರವರೆಗೆ  ದಕ್ಷಿಣ ಒಳನಾಡಿನ ಇತರ ಜಿಲ್ಲೆಗಳಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗುವ ಸಾಧ್ಯತೆ ಇದೆ.  ಉತ್ತರ ಒಳನಾಡಿನಲ್ಲಿ ವಾಡಿಕೆ ಪ್ರಮಾಣದ ಮಳೆಯಾಗುವ ಸಾಧ್ಯತೆ ಇದೆ” ಎಂದು ಪ್ರಸಾದ್ ತಿಳಿಸಿದರು.

ಆಗಸ್ಟ್ ಕೊನೆಯ ವಾರದಲ್ಲಿ ದಕ್ಷಿಣ ಒಳನಾಡಿಗೆ ವಾಡಿಕೆ ಮಳೆಯಾಗುವ ಸಾಧ್ಯತೆ ಇದೆ. ಇನ್ನೂ ಅದರ ಬಗ್ಗೆ ಹೆಚ್ಚಿನ ಅಧ್ಯಯನ ಮಾಡಬೇಕಾಗಿದೆ ಎಂದು ಪ್ರಸಾದ್ ಅವರು ತಿಳಿಸಿದರು.

ರಾಜ್ಯದಲ್ಲಿ ಜೂನ್ ನಿಂ‍ದ ಸಪ್ಟೆಂಬರ್ ತನಕ ಮುಂಗಾರು ಮಳೆ ಅವಧಿಯಿದೆ. ಕಳೆದ ವರ್ಷ 2022ರಲ್ಲಿ ಈ ಅವಧಿಯಲ್ಲಿ ಉತ್ತಮ ಮಳೆಯಾಗಿದೆ. ಈ ವರ್ಷ ಎಲ್ ನಿನೋ ಪ್ರಭಾವದಿಂದಾಗಿ ಮಳೆ ಪ್ರಮಾಣದಲ್ಲಿ ವ್ಯತ್ಯಯವಾಗಿದೆ.

LEAVE A REPLY

Please enter your comment!
Please enter your name here