ಭಾರತೀಯ ಹವಾಮಾನ ಇಲಾಖೆ (IMD) ಕರ್ನಾಟಕದ ಕೆಲವು ಜಿಲ್ಲೆಗಳಿಗೆ ‘ಹಳದಿ’ ಅಲರ್ಟ್ ಘೋಷಿಸಿದ್ದು, ಭಾರೀ ಮಳೆಯಾಗುವ ಮುನ್ಸೂಚನೆ ನೀಡಿದೆ.ನವೆಂಬರ್ 9 ರಂದು ದಕ್ಷಿಣ ಒಳನಾಡಿನ ಭಾರಿ ಮಳೆಯ ಮುನ್ಸೂಚನೆ ನೀಡಿದೆ.
ನವೆಂಬರ್ 9 ರಂದು ಕೇರಳ ಮತ್ತು ತಮಿಳುನಾಡಿನಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕೊಂಕಣ, ಗೋವಾ, ದಕ್ಷಿಣ ಮಧ್ಯ ಮಹಾರಾಷ್ಟ್ರ, ದಕ್ಷಿಣ ಕೇರಳ ಮತ್ತು ದಕ್ಷಿಣ ತಮಿಳುನಾಡಿನಲ್ಲಿ ನವೆಂಬರ್ 8 ರಂದು ಭಾರಿ ಮಳೆಯಾಗಿದೆ.
ಇಂದಿನ ಹವಾಮಾನ ಪರಿಸ್ಥಿತಿಗಳನ್ನು ನೋಡಿದರೆ ನಿನ್ನೆ ಕನ್ಯಾಕುಮಾರಿಗೆ ಸೇರಿದ ಸಮುದ್ರ ಪ್ರದೇಶದಲ್ಲಿ ಒಂದು ಸುಳಿಗಾಳಿ ಸಮುದ್ರ ಮಟ್ಟದಿಂದ ಒಂದೂವರೆ ಕಿಲೋ ಮೀಟರ್ ಮೇಲೆ ಗೋಚರಿಸುತ್ತಿತ್ತು. ಅದು ಇಂದು ತುಸು ದುರ್ಬಲವಾಗಿದೆ. ಸಮುದ್ರ ಮಟ್ಟದಿಂದ ಒಂಭೈನೂರು ಮೀಟರ್ ಎತ್ತರದಲ್ಲಿ ಕಾಣುತ್ತಿದೆ.
ಈಶಾನ್ಯ ದಿಕ್ಕಿನಿಂದ ಬೀಸುವಂಥ ಗಾಳಿ, ಪೂರ್ವ ದಿಕ್ಕಿನಿಂದ ಬೀಸುವಂಥ ಗಾಳಿಯಲ್ಲಿ ಇನ್ನೂ ವೇಗ ಮತ್ತು ತೇವಾಂಶ ಇರುವುದರಿಂದ ಇಂದು ಕೂಡ ಕರ್ನಾಟಕ ರಾಜ್ಯದಲ್ಲಿ ಮಳೆ ಪ್ರಮಾಣ ಹೆಚ್ಚಿರುತ್ತದೆ. ನಾಳೆಯಿಂದ ಇದು ಕ್ರಮೇಣ ಕಡಿಮೆಯಾಗುವ ಸಾಧ್ಯತೆ ಇದೆ.
ನವೆಂಬರ್ ೧೨, ೧೩ನೇ ತಾರೀಖು ಒಣಹವೆ ಮುಂದುವರಿಯುವ ಸಾಧ್ಯತೆ ಇರುತ್ತದೆ. ನವೆಂಬರ್ ೧೪, ೧೫ನೇ ತಾರೀಖು ದಕ್ಷಿಣ ಒಳನಾಡಿನ ಒಂದೆರಡು ಕಡೆಗಳಲ್ಲಿ ಮಳೆಯಾಗುವ ಸಾಧ್ಯತೆ ಇರುತ್ತದೆ.
ಬೆಂಗಳೂರು ಸೇರಿದಂತೆ ಅದರ ಸುತ್ತಮುತ್ತಲ ಪ್ರದೇಶದಲ್ಲಿ ಇಂದು ಮತ್ತು ನಾಳೆ ಆಕಾಶವು ಮೋಡವಾಗಿರುತ್ತದೆ. ಸಂಜೆ ಅಥವಾ ರಾತ್ರಿಗೆ ಗುಡುಗು ಮಿಂಚಿನಿಂದ ಕೂಡಿದ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಗರಿಷ್ಠ ಮತ್ತು ಕನಿಷ್ಠ ಉಷ್ಣಾಂಶ ಕ್ರಮವಾಗಿ ೨೮ ಮತ್ತು ೨೦ ಡಿಗ್ರಿ ಸೆಲ್ಸಿಯಸ್ ಆಗಿರುತ್ತದೆ.
ಇಂದು ದಕ್ಷಿಣ ಒಳನಾಡಿನ ಕೆಲವು ಜಿಲ್ಲೆಗಳಿಗೆ ಭಾರತೀಯ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಿಸಿದೆ. ಹಾಸನ, ಚಿಕ್ಕಮಗಳೂರು, ಕೊಡಗು ಜಿಲ್ಲೆಯ ಒಂದೆರಡು ಕಡೆ ಭಾರಿಮಳೆಯಾಗುವ ಸಾಧ್ಯತೆ ಇದೆ.