ಹಾವೇರಿ ಮೇ.1: ನಕಲಿ ಬಿತ್ತನೆಬೀಜಗಳ ಮಾರಾಟದ ಮೂಲವನ್ನು ಕಂಡುಹಿಡಿಯಬೇಕಿದೆ. ಅದನ್ನು ಹುಡುಕಿ ಮಟ್ಟ ಹಾಕದೇ ಹೋದರೆ ರೈತ ಸಮುದಾಯಕ್ಕೆ ದೊಡ್ಡನಷ್ಟವಾಗುತ್ತದೆ. ಇದು ಕೃಷಿಕರ ಜೀವನ್ಮರಣದ ಪ್ರಶ್ನೆ. ಆದರೆ ಪೊಲೀಸ್ ಇಲಾಖೆ ಇದುವರೆಗೂ ಅದರ ಬಗ್ಗೆ ಕಠಿಣ ಕ್ರಮ ಜರುಗಿಸಿಲ್ಲದಿರುವುದು ನೋವುಂಟು ಮಾಡಿದೆ ಎಂದು ಕೃಷಿಸಚಿವ ಬಿ.ಸಿ. ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದರು.
ಇಂದು ಸ್ವಕ್ಷೇತ್ರ ಹಿರೇಕೇರೂರಿನಲ್ಲಿ ಸುದ್ದಿಗೋಷ್ಟಿ ಉದ್ದೇಶಿಸಿ ಅವರು ಮಾತನಾಡಿದರು. ನಕಲಿಬಿತ್ತನೆ ಬೀಜದ ಜಾಲ ವ್ಯಾಪಕವಾಗಿದೆ. ಈ ಜಾಲದ ಮೂಲ ಯಾವುದು, ಯಾರುಯಾರು ಅದರಲ್ಲಿ ಇದ್ದಾರೆ ಹುಡುಕಿ ಬಂಧಿಸಬೇಕಾಗಿದೆ. ಅವರು ಎಷ್ಟೇ ಪ್ರಭಾವಶಾಲಿಗಳಾಗಿದ್ದರೂ ಮುಲಾಜಿ ಈ ಕಾರ್ಯವಾಗದಿದ್ದರೆ ಮಾರುಕಟ್ಟೆಯೊಳಗೆ ನುಸುಳುವ ನಕಲಿಬೀಜವನ್ನೇ ಅಸಲಿ ಬಿತ್ತನೆಬೀಜ ಎಂದು ತಿಳಿದು ಖರೀದಿಸುವ ಕೃಷಿಕರಿಗೆ ಭಾರಿ ಅನ್ಯಾಯವಾಗುತ್ತದೆ ಎಂದು ಅವರು ವಿವರಿಸಿದರು.
ನಕಲಿ ಬಿತ್ತನೆಬೀಜ ಮಾರಾಟಗಾರರದು ಅಂತರರಾಜ್ಯ ಜಾಲ. ಅವುಗಳ ಮೂಲ ಆಂಧ್ರಪ್ರದೇಶ, ಹೈದರಾಬಾದ್,ವಿಜಯವಾಡ, ಕರೀಂನಗರವಾಗಿದೆ. ಹೊರರಾಜ್ಯಗಳಲ್ಲಿನ ಹಾಲವನ್ನು ಪತ್ತೆಹಚ್ಚಿ ಮಟ್ಟ ಹಾಕಬೇಕಿರುವ ಕಾರ್ಯವನ್ನು ಪೊಲೀಸ್ ಇಲಾಖೆ ಮಾಡಬೇಕು. ಆದರೆ ಪೊಲೀಸ್ ಇಲಾಖೆ ಇದೂವರೆಗೂ ಯಾವುದೇ ಕ್ರಮ ಜರುಗಿಸಿಲ್ಲ. ಯಾರನ್ನೂ ಬಂಧಿಸಿಲ್ಲ ಎಂದು ಬಿ.ಸಿ.ಪಾಟೀಲ್ ತಿಳಿಸಿದರು.
ನಕಲಿ ಬೀಜ ಮಾರಾಟ ಜಾಲದ ಬಗ್ಗೆ ಪೊಲೀಸ್ ಇಲಾಖೆ ಉನ್ನತಾಧಿಕಾರಿಗಳ ಗಮನಕ್ಕೆ ತರಲಾಗಿದೆ. ಪತ್ರವನ್ನೂ ಬರೆಯಲಾಗಿದೆ. ಮೂರ್ನಾಲ್ಕು ಬಾರಿ ದೂರವಾಣಿ ಕರೆ ಮಾಡಲಾಗಿದೆ ಆದರೂ ಯಾವುದೇ ಕ್ರಮ ಜರುಗಿಸಿಲ್ಲ. ಗೃಹಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೂ ಪತ್ರ ಬರೆಯಲಾಗಿದೆ ಎಂದು ವಿವರಿಸಿದ ಅವರು ನಕಲಿ ಜಾಳದ ಬಗ್ಗೆ ಪೊಲೀಸ್ ಇಲಾಖೆ ತ್ವರಿತ ಕ್ರಮಕ್ಕೆ ಮುಂದಾಗಬೇಕು ಎಂದು ಒತ್ತಾಯಿಸಿದರು.
ಕೃಷಿಇಲಾಖೆಯ ಜಾಗೃತದಳ ತನ್ನ ವ್ಯಾಪ್ತಿಯಲ್ಲಿ ತೀವ್ರ ಕಾರ್ಯಾಚರಣೆ ನಡೆಸಿ ನಕಲಿ ಬಿತ್ತನೆಬೀಜ ಮಾರುವಂಥ ಅಂಗಡಿ, ಅಂಥ ದಾಸ್ತಾನು ಇರುವ ಗೋದಾಮುಗಳ ಮೇಲೆ ದಾಳಿ ನಡೆಸುತ್ತಿದೆ. ನಕಲಿಬೀಗಳನ್ನು ವಶಪಡಿಸಿಕೊಂಡು ಮಾರಾಟಗಾರರ ಮೇಲೆ ಮೊಕದ್ದಮೆ ದಾಖಲಿಸಲಾಗುತ್ತದೆ. ಅಂಥ ಅಂಗಡಿಗಳ ಪರವಾನಿಗೆ ರದ್ದು ಮಾಡಲು ಕ್ರಮ ಜರುಗಿಸಲಾಗುತ್ತಿದೆ ಎಂದು ಅವರು ವಿವರಿಸಿದರು.
ಗುಣಮಟ್ಟವಿಲ್ಲದ, ಮೊಳಕೆಯೊಡೆಯದಂಥ ಬೀಜಗಳನ್ನು ಕೆಲವರು ತಂದು, ಬಣ್ಣಹಾಕಿ ಒಳ್ಳೆಯ ಬೀಜಗಳ ಜೊತೆ ಬೆರೆಸಿ ಮಾರಾಟ ಮಾಡುತ್ತಿರುವುದು ತಮ್ಮ ಗಮನಕ್ಕೆ ಬಂದಿದೆ. ರಾಜ್ಯದ ವಿವಿಧೆಡೆ ಕೃಷಿ ಜಾಗೃತ ದಳ ಕ್ಷಿಪ್ರ ಕಾರ್ಯಾಚರಣೆ ದಾಳಿ ನಡೆಸಿ ವಶಪಡಿಸಿಕೊಂಡಿದೆ.ಇಂತಹ ಅಕ್ರಮದ ಹಿಂದೆ ದೊಡ್ಡ ಲಾಬಿಯೇ ಇದ್ದು, ರೈತನಹಿತಕ್ಕಿಂತ ದುಡ್ಡುಮಾಡುವ ದುರುದ್ದೇಶ ಮಾತ್ರ ಇವರದ್ದಾಗಿರುತ್ತದೆ. ಎಂದ ಅವರು ದಾಳಿ ಮಾಡಿ ವಶಪಡಿಸಿಕೊಂಡ ನಕಲಿ ಬಿತ್ತನೆಬೀಜಗಳ ಬಗ್ಗೆ ಎರಡು ದಿನಗಳಲ್ಲಿ ಪ್ರಯೋಗಾಲಯದಿಂದ ವರದಿ ಪಡೆಯಬೇಕು. ಇಂತಹ ಬೀಜಗಳನ್ನು ಸರ್ಕಾರದ ಆದೇಶ ಪಡೆದು ಸುಟ್ಟುಹಾಕಬೇಕು ಎಂದರು.
ಬಿತ್ತನೆ ಬೀಜಗಳು, ಗೊಬ್ಬರಗಳ ಪೂರೈಕೆಯಲ್ಲಿ ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಳ್ಳಬೇಕೆಂದು ಸಚಿವ ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿಗಳು ಆದೇಶಿಸಿದ್ದಾರೆ. ಅದರಂತೆ ಕ್ರಮ ಕೈಗೊಳ್ಳಲಾಗಿದೆ. ರಾಜ್ಯದ ಯಾವುದೇ ಭಾಗದಲ್ಲಿಯೂ ಇವುಗಳ ಪೂರೈಕೆಯಲ್ಲಿ ಯಾವುದೇ ಕೊರತೆಯೂ ಆಗುವುದಿಲ್ಲ ಎಂದು ಭರವಸೆ ನೀಡಿದರು.
ನಕಲಿ ಬಿತ್ತನೆಬೀಜ ಮಾರಾಟ ಹತ್ತಿಕ್ಕಲು ಕೃಷಿಇಲಾಖೆ ತೆಗೆದುಕೊಳ್ಳುತ್ತಿರುವ ಕ್ರಮಗಳ ಬಗ್ಗೆ ಮುಖ್ಯಮಂತ್ರಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ರೈತರಿಗೆ ಅನ್ಯಾಯವಾಗುವಂತಹ ಯಾವುದೇ ಕೆಲಸವನ್ನು ಸಹಿಸುವುದಿಲ್ಲ ಎಂದಿದ್ದಾರೆ.. ಇದಕ್ಕಾಗಿ ತಾವು ಮುಖ್ಯಮಂತ್ರಿಗಳನ್ನು ಅಭಿನಂದಿಸುವುದಾಗಿ ಹೇಳಿದರು.
ಕೆಲವು ಕೃಷಿ ಔಷಧ ಮಾರಾಟ ಅಂಗಡಿಗಳಲ್ಲಿ ಅವಧಿ ಮುಗಿದ ಕೀಟನಾಶಕಗಳನ್ನು ಮಾರಾಟ ಮಾಡುವ ಪ್ರವೃತ್ತಿ ಬಗ್ಗೆ ತಮಗೆ ದೂರು ಬಂದಿದೆ. ಈ ಬಗ್ಗೆ ಕಾನೂನು ಕ್ರಮ ಕೈಗೊಂಡು, ಮಾರಾಟಗಾರರ ಪರವಾನಿಗೆ ರದ್ದುಗೊಳಿಸಲು ಕೃಷಿ ಜಾಗೃತದಳಕ್ಕೆ ಸೂಚಿಸಲಾಗಿದೆ ಎಂದರು.
ಮುಖ್ಯಮಂತ್ರಿ ಯಡಿಯೂರಪ್ಪ ಅವರ ಆದೇಶದಂತೆ ಕರ್ನಾಟಕ ಹಾಲು ಮಹಾಮಂಡಳಿಯು ಪಶು ಆಹಾರ ತಯಾರಿಕೆಗೆ ಅವಶ್ಯವಾಗಿರುವ ಮೆಕ್ಕೆಜೋಳವನ್ನು ಪ್ರತಿ ಕ್ವಿಂಟಾಲ್‌ಗೆ 1760 ರೂ.ನಂತೆ ಒಂದುವರ್ಷದ ಅವಧಿಗೆ ರೈತರಿಂದ ನೇರವಾಗಿ ಖರೀದಿಸಲು ಮುಂದಾಗಿದೆ. ಇದು ರೈತರಿಗೆ ಸಂತಸದ ವಿಷಯ ಎಂದು ಸಚಿವರು ಮಾಹಿತಿ ನೀಡಿದರು.