ಕಳೆದೆ ಮೂರು ದಶಕಗಳಿಂದ ಬೆಳೆಗಳಿಗೆ ಸಸ್ಯರೋಗ-ಕೀಟ ರೋಗ ಬಾಧೆ ಹೆಚ್ಚಾಗುತ್ತಿದೆ. ಇದಕ್ಕೆ  ಕಾರಣವಾದ ಸಂಗತಿಗಳು ಸಾಕಷ್ಟಿವೆ. ಇವುಗಳಲ್ಲಿ  ಬಹುತೇಕ ರೈತರು ಮಾಗಿ ಉಳುಮೆ ಮಾಡುವುದನ್ನು ಮರೆತಿರುವುದು ಪ್ರಮುಖ ಕಾರಣ. ಇದನ್ನು ಮಾಡುವುದರಿಂದ ಅನೇಕ ರೀತಿಯ ಪ್ರಯೋಜನಗಳಿವೆ. ಆದ್ದರಿಂದಲೇ ಹಿರಿಯರು ‘ ಬಡವನ ಮಾಗಿ ಉಳುಮೆ ಸಾಹುಕಾರನ ಗೊಬ್ಬರಕ್ಕೆ ಸಮಾನ’ ಎಂದೇ ಕರೆಯುತ್ತಿದ್ದರು.

ಬಿರುಸಾದ ಬೇಸಿಗೆ ಮಳೆ ಬರುವುದಕ್ಕೆ ಮುಂಚೆ ಜಮೀನನ್ನು ಚೆನ್ನಾಗಿ ಉಳುಮೆ ಮಾಡುವುದು ಸೂಕ್ತ. ಮಾರ್ಚ್ 15 ರಿಂದ ಏಪ್ರಿಲ್ 15 ಇದಕ್ಕೆ ಸೂಕ್ತ ಕಾಲಘಟ್ಟ ಎನ್ನಬಹುದು. ಏಪ್ರಿಲ್ 15ರ ಅಸುಪಾಸಿನಲ್ಲಿ ಸಾಮಾನ್ಯವಾಗಿ ರಭಸದ ಮಳೆ ಬೀಳುತ್ತದೆ. ಇದಕ್ಕೆ ಮುಂಚೆ ಹೊಲವನ್ನು ಉತ್ತು ಹದ ಮಾಡಿದರೆ ಮುಂದಿನ ಹಂಗಾಮಿನಲ್ಲಿ ಬೆಳೆ ಇಳುವರಿ ಸಮೃದ್ಧ. ಅತಿ ಕಡಿಮೆ ಖರ್ಚಿನಲ್ಲಿ ಅಧಿಕ ಇಳುವರಿ ಪಡೆಯಬಹುದು. ಈ ಉಳುಮೆ ಮಾಡಲು ಮರೆತರೆ ಉಂಟಾಗಬಹುದಾದ ಸಸ್ಯರೋಗಗಳು-ಕೀಟನಾಶಕಗಳನ್ನು ನಿಯಂತ್ರಿಸುವ ಸಲುವಾಗಿ ಕೀಟನಾಶಕ ಸಿಂಪಡಿಸಲು ಹೆಚ್ಚು ಹಣ ಖರ್ಚು ಮಾಡಬೇಕಾಗುತ್ತದೆ. ಆದರೂ ಫಸಲು ಚೆನ್ನಾಗಿ ಬರುವ ಭರವಸೆ ಇರುವುದಿಲ್ಲ.

ಮಳೆನೀರು ಕೊಯ್ಲು: ಹೊಲ-ಗದ್ದೆಯಲ್ಲಿ ಅತ್ಯಂತ ಸಹಜವಾಗಿ ನೀರು ಇಂಗಿಸುವ ವಿಧಾನವೆಂದರೆ ಮಾಗಿ ಉಳುಮೆ. ಹದವಾಗಿ ಉಳುಮೆ ಮಾಡುವುದರಿಂದ ಹೆಂಟೆಗಳು ಹೊಡೆದಿರುತ್ತವೆ. ಮಣ್ಣಿನ ಕಣಗಳ ರಚನೆಯೂ ಸುಧಾರಿಸುತ್ತದೆ. ಮಣ್ಣು ತುಂಬ ಸಡಿಲವಾಗಿರುವುದರಿಂದ ಬಿದ್ದ ಮಳೆನೀರು ಭೂಮಿಯ ಹೊರಪದರದಲ್ಲಿ ಹರಿದು ಹೋಗದೇ ಒಳಗೆ ಇಳಿಯುತ್ತದೆ. ಇದರಿಂದ ಜಮೀನು ದೀರ್ಘಕಾಲ ಹಸಿಯಾಗಿರುತ್ತದೆ. ಇದರ ಪ್ರಯೋಜನ ಸುಲಭವಾಗಿ ಬೆಳೆಗಳಿಗೆ ದಕ್ಕುತ್ತದೆ. ಸುತ್ತಲಿನ ಅಂತರ್ಜಲ ಮಟ್ಟ ಗಣನೀಯವಾಗಿ ಹೆಚ್ಚುತ್ತದೆ. ತೆರೆದ ಬಾವಿ-ಕೊಳವೆ ಬಾವಿಗಳಲ್ಲಿ ನೀರು ಸಮೃದ್ಧವಾಗಿರುತ್ತದೆ. ಉಳುಮೆ ಮಾಡಿದ ನಂತರ ಗಟ್ಟಿಯಾದ ಬದುಗಳನ್ನು ನಿರ್ಮಿಸಬೇಕು. ಇದರಿಂದ ನೀರು ಹೊರಗೆ ಹರಿದು ಹೋಗಲು ಆಸ್ಪದವಿರುವುದಿಲ್ಲ. ಜಮೀನಿನ ಇಳಿಜಾರಿಗೆ ಅಡ್ಡಲಾಗಿ ಉಳುಮೆ ಮಾಡುವುದು ಸೂಕ್ತ.

ಕಳೆನಾಶ: ಬೆಳೆ ಕಟಾವಾದ ನಂತರ ಜಮೀನನ್ನು ದೀರ್ಘಸಮಯ ಮುಂದಿನ ಹಂಗಾಮಿನವರೆಗೂ ಹಾಗೆ ಬಿಟ್ಟಿದ್ದರೆ ಕಳೆ ಹುಲುಸಾಗಿ ಬೆಳೆದಿರುತ್ತದೆ. ಹಂಗಾಮು ಸಂದರ್ಭದಲ್ಲಿ ಅವಸರ ಅವಸರವಾಗಿ ಉಳುಮೆ ಮಾಡಿ ಬೀಜ ಬಿತ್ತವುದು ಅಥವಾ ನಾಟಿ ಮಾಡುವುದರಿಂದ ಬೆಳೆಯುವ ಕಳೆಯನ್ನು ನಿಯಂತ್ರಿಸುವುದೇ ದೊಡ್ಡ ಸಮಸ್ಯೆ. ಮಾಗಿ ಉಳುಮೆ ಮಾಡುವುದರಿಂದ ಗರಿಕೆ ಹುಲ್ಲು ಹಾಗೂ ಇತರ ಕಳೆಗಳನ್ನು ನಿಯಂತ್ರಿಸಬಹುದು. ಮುಂದೆ ಬೆಳೆ ಬಿತ್ತುವ ಅವಧಿಗೆ ಸಾಕಷ್ಟು ಸಮಯವಿರುವುದರಿಂದ ಮಣ್ಣಿನ ಮೇಲ್ಮದರಕ್ಕೆ ಬರುವ ಕಳೆ ಬೀಜಗಳು ದೀರ್ಘ ಹಾಗೂ ತೀಷ್ಣ ಬಿಸಿಲಿನ ಕಾರಣದಿಂದ ತಮ್ಮ ಮೊಳಕೆ ಸಾಮರ್ಥ್ಯ ಕಳೆದುಕೊಂಡಿರುತ್ತವೆ.

ಕೀಟ ಬಾಧೆ ನಿಯಂತ್ರಣ: ಏಪ್ರಿಲ್ನಿಂದ ಜೂನ್ 15ರ ತನಕ ಬಿಸಿಲಿನ ಪ್ರಖರತೆ ಹೆಚ್ಚುತ್ತಲೇ ಇರುತ್ತದೆ. ಮಾಗಿ ಉಳುಮೆ ಮಾಡಿದ್ದರೆ ಮಣ್ಣಿನ ಕೆಳ ಪದರದಲ್ಲಿ ಇರುವ ರೋಗಾಣುಗಳು-ರೋಗಕಾರಕ ಶಿಲೀಂಧ್ರಗಳು ನಾಶವಾಗುತ್ತವೆ. ಉಳುಮೆ ಮಾಡುವಾಗ ಮಣ್ಣು ಮಗುಚುವುದರಿಂದ ಕೀಟಗಳು; ಅವುಗಳ ಕೋಶಗಳು ಮೇಲ್ಪದರಕ್ಕೆ ಬರುತ್ತವೆ. ಇವುಗಳು ಬಿಸಿಲಿನಿಂದ ನಾಶವಾಗುವುದರ ಜೊತೆಗೆ ಹಕ್ಕಿಗಳಿಗೆ ಆಹಾರವಾಗುತ್ತವೆ. ಇದರಿಂದ ಬೆಳೆಯ ಬೆಳವಣಿಗೆ ಹೆಚ್ಚುವ ಸಂದರ್ಭದಲ್ಲಿ ಉಂಟಾಗುವ ಕೀಟ ಬಾಧೆ ನಿಯಂತ್ರಿತವಾಗುತ್ತದೆ.

ಕಂಬಳಿ ಹುಳುಗಳು, ಕೆಂಪು ತಲೆ ಕಂಬಳಿ ಹುಳುಗಳು, ಹೀಲಿಯೋಥೀಸ್ಗಳು ಬೆಳೆಯನ್ನು ಅಪಾರವಾಗಿ ಬಾಧಿಸುತ್ತವೆ. ಇವುಗಳನ್ನು ನಿಯಂತ್ರಿಸುವ ಆತಂಕಕ್ಕೊಳಗಾಗುವ ರೈತರು  ದುಬಾರಿ ಬೆಲೆಯ ರಾಸಾಯನಿಕ ಕೀಟ ನಾಶಕಗಳನ್ನು ಸಿಂಪಡಿಸುತ್ತಾರೆ. ಇದರಿಂದ ಕೀಟ ಬಾಧೆ ನಿಯಂತ್ರಣಕ್ಕೆ ಬಂದೇ ಬರುತ್ತದೆ ಎಂಬ ವಿಶ್ವಾಸವಿರುವುದಿಲ್ಲ. ಆದರೆ ಮಣ್ಣು-ಬೆಳೆ-ರೈತರ ಆರೋಗ್ಯ ಹದಗೆಡುವುದಂತೂ ನಿಶ್ಚಿತ

ಮಿಡತೆಗಳ ಸಂಖ್ಯೆ ಹೆಚ್ಚಳವಾದರೆ ನಿಯಂತ್ರಿಸುವುದು ತುಂಬ ಕಷ್ಟ. ಇದನ್ನು ಸಿದ್ದೆಗುಮ್ಮ, ಕುದುರೆ ಹುಳು ಎಂದೆಲ್ಲ ಕರೆಯಲಾಗುತ್ತದೆ. ಈ ಮಿಡತೆಗಳು ಸಾಯುವುದಕ್ಕೂ ಮೊದಲು ಮಣ್ಣಿನ ಎರಡರಿಂದ ಮೂರು ಇಂಚು ಆಳದಲ್ಲಿ ಇರುತ್ತವೆ. ಕೆಂಪು ತಲೆ ಕಂಬಳಿ ಹುಳುಗಳು ಮೇಲ್ಮಣ್ಣಿನಿಂದ ಮೂರರಿಂದ ನಾಲ್ಕು ಇಂಚು ಒಳಭಾಗದಲ್ಲಿ ಕೋಶಾವಸ್ಥೆಯಲ್ಲಿರುತ್ತವೆ. ಮಳೆಗಾಲ ಆರಂಭವಾಗುತ್ತಿದಂತೆ ಆಚೆ ಬರುವ ಇವುಗಳು ಬೆಳೆಯನ್ನು ಬಾಧಿಸತೊಡಗುತ್ತವೆ.

ಮುಂಗಾರು ಮಳೆ ಆರಂಭವಾದಂತೆ ಬಿತ್ತನೆ ಬೀಜಗಳು ಮೊಳಕೆಯೊಡೆಲು ಆರಂಭಿಸುತ್ತವೆ. ಇದರೊಂದಿಗೆ ಆಸರೆ ಕಳೆಗಳು ಮೊಳಕೆಯೊಡೆಯುತ್ತವೆ. ಇದೇ ಸಂದರ್ಭದಲ್ಲಿ ಮಣ್ಣಿನ ಮೇಲ್ಪದರದಿಂದ ಕೆಳಗೆ ಇರುವ ಕೋಶಗಳಿಂದ ಹಿಲಿಯೋಥಿಸ್ ಕೋಶಗಳು ಹೊರ ಬೀಳುತ್ತವೆ. ಜೂನ್ ತಿಂಗಳಿನಿಂದಲೇ ಚಟುವಟಿಕೆ ಪ್ರಾರಂಬಿಸುವ ಈ ಪತಂಗಗಳು ರಾತ್ರಿ ಸಮಯ ಹೆಚ್ಚು ಚಟುವಟಿಕೆಯಿಂದಿರುತ್ತವೆ.

ಹಿಲಿಯೋಥಿಸ್ ಕೀಟಗಳು 181 ಕ್ಕೂ ಹೆಚ್ಚು ವಿವಿಧ ತಳಿಗಳ ಸಸ್ಯಗಳನ್ನು ಆಶ್ರಯಿಸಿ ವೃದ್ಧಿ ಹೊಂದುತ್ತವೆ. ನೆಲಗಡಲೆ, ಉದ್ದು, ಅಲಸಂದೆ, ಹೆಸರು, ಸಾಸಿವೆ, ಸೂರ್ಯಕಾಂತಿ, ಕುಸುಬೆ, ತೊಗರಿ, ಜೋಳ, ಗೋವಿನ ಜೋಳ, ಆಲೂಗೆಡ್ಡೆ, ಈರುಳ್ಳಿ, ಕ್ಯಾರೆಟ್, ಬೆಂಡೆಕಾಯಿ, ಟೊಮ್ಯಾಟೋ, ಎಲೆಕೋಸು, ಬಟಾಣಿ ಇತ್ಯಾದಿ ಬೆಳೆಗಳಿಗೆ ಇವುಗಳು ಮಾಡುವ ಹಾನಿ ಅಪಾರ. ಮುಖ್ಯವಾಗಿ ಹತ್ತಿ, ಕಡಲೆ, ತೊಗರಿ ಮತ್ತು ಸೂರ್ಯಕಾಂತಿಗೆ ಇವುಗಳ ಬಾಧೆ ತೀವ್ರ. ಇವುಗಳು ವೃದ್ಧಿಸಿದರೆ ನಿಯಂತ್ರಣ ಬಹಳ ಕಷ್ಟ. ಇಂಥ ಕೀಟಗಳು ಕಳೆ ಸಸ್ಯಗಳಲ್ಲಿ ಆಶ್ರಯ ಪಡೆದಿರುತ್ತವೆ. ಮಾಗಿ ಉಳುಮೆ ಮಾಡಿದಾಗ ಇವುಗಳ ಕೋಶಗಳು ಮಣ್ಣಿನ ಮೇಲು ಭಾಗಕ್ಕೆ ಬರುತ್ತವೆ. ಪ್ರಖರ ಬಿಸಿಲಿನಿಂದ ಸಾಯುತ್ತವೆ. ಕೀಟಭಕ್ಷಕಗಳಿಗೆ ಆಹಾರವಾಗುತ್ತವೆ.

ಕಾಲುಗೈ ಅಥವಾ ಬೆಳೆ ಪರಿವರ್ತನೆ ಪದ್ಧತಿ: ಒಂದೇ ಬೆಳೆಯನ್ನು ನಿರಂತರವಾಗಿ ಬೆಳೆಯುವುದರಿಂದಲೂ ಕೀಟ ಬಾಧೆ ಹೆಚ್ಚು. ಪ್ರತಿ ಬಾರಿಯೂ ಇವುಗಳಿಂದ ಉಂಟಾಗುವ ಹಾನಿ ಅಧಿಕ. ಇದಲ್ಲದೇ ಒಂದೇ ಬೆಳೆಯನ್ನು ಪದೇ ಪದೇ ಬೆಳೆಯುತ್ತಲೇ ಇರುವುದರಿಂದ ಸಸ್ಯರೋಗಳು ಹೆಚ್ಚಾಗುವುದಲ್ಲದೇ ಬೆಳೆ ಇಳುವರಿಯೂ ಕುಗ್ಗುತ್ತದೆ. ಇವುಗಳಲ್ಲದೇ ಮಣ್ಣಿನ ಫಲವತ್ತತೆಯೂ ಗಣನೀಯವಾಗಿ ಕಡಿಮೆಯಾಗುತ್ತದೆ. ಇಂಥ ಅನೇಕ ಸಮಸ್ಯೆಗಳನ್ನು ಬೆಳೆ ಪರಿವರ್ತನೆ ಮಾಡುವುದರಿಂದ ಪರಿಣಾಮಕಾರಿಯಾಗಿ ತಡೆಗಟ್ಟಬಹುದು. ಒಂದು ಪ್ರದೇಶದ ರೈತರು ಸಾಮೂಹಿಕವಾಗಿ ಮಾಗಿ ಉಳುಮೆ-ಕಾಲುಗೈ ಬೆಳೆ ಪದ್ಧತಿ ಅಳವಡಿಸಿಕೊಂಡಾಗ ಅದರಿಂದ ಉತ್ತಮ ಬೆಳವಣಿಗೆಗಳು ಆಗುತ್ತವೆ.

2 COMMENTS

  1. ಇದು ಒಪ್ಪುವುದು ಕಷ್ಟ. ಹಿಂದಿನ ಮಳೆ, ಬಿಸಿಲು ಹಾಗಿದ್ದವು. ಈಗ ಬಿಸಿಲಿನ ಪ್ರಮಾಣ ಗಮನಿಸಿದರೆ ಮಣ್ಣಿನ ಖನೀಜಕರಣಕ್ಕೆ ಮಾಗಿಯ ಉಳುಮೆ ಕಾರಣ ಎಂದು ನಾರಾಯಣ ರೆಡ್ಡಿಯವರು ಪ್ರತಿಪಾದಿಸುತ್ತಿದ್ದರು. ನಿಮ್ಮ ಗಮನಕ್ಕೆ ಬಂದಿಲ್ಲವೇ ?

    • ಮಾರ್ಚ್ 15 ರಿಂದ ಏಪ್ರಿಲ್ 15ರ ನಡುವಿನ ಮಾಗಿ ಉಳುಮೆ ಮಹತ್ವದ ಬಗ್ಗೆ ಸಾವಯವ ಕೃಷಿಕರು ಹೇಳಿಕೊಂಡು ಬಂದಿದ್ದಾರೆ. ಹಿರಿಯ ಕೀಟಶಾಸ್ತ್ರರಾದ ಪ್ರೊ. ಕಟ್ಟಗಿಹಳ್ಳಿಮಠ್ ಅವರು ಸಹ ಇದರ ಪ್ರಯೋಜನಗಳನ್ನು ಹೇಳಿದ್ದಾರೆ. ಮುಖ್ಯವಾಗಿ ಇದು ಹಾನಿಕಾರಕ ಕೀಟಗಳು, ಅವುಗಳ ಕೋಶಗಳ ನಾಶಕ್ಕೆ ಅನುಕೂಲಕರ. ಏಪ್ರಿಲ್ 15ರ ಆಸುಪಾಸಿನಲ್ಲಿ ಬೇಸಿಗೆಮಳೆಯಾಗುವುದರಿಂದ ಬಿದ್ದ ಮಳೆನೀರು ಮಣ್ಣಿನೊಳಗೆ ಇಳಿಯಲು ಇದು ಸಹಾಯಕ ಎಂಬ ಅಂಶಗಳನ್ನು ಗಮನಿಸಬೇಕು.

LEAVE A REPLY

Please enter your comment!
Please enter your name here