ಬಯಲು ಬೆಳೆ ಮತ್ತು ತೋಟಗಾರಿಕೆ ಬೆಳೆಗಳನ್ನು ಬಾಧಿಸುವ ಕೀಟಗಳ ಸಂಖ್ಯೆ ಅಪಾರ, ರಾಸಾಯನಿಕ ಕೀಟನಾಶಕಗಳಿಂದಲೇ ಇವುಗಳನ್ನು ನಿಯಂತ್ರಿಸುತ್ತೇವೆಂದುತಿಳಿಯುವುದು ಭ್ರಮೆ, ಬೆಳೆಗಳನ್ನು ಬಾಧಿಸುವ ಜೀವ ಸಂಕುಲಕ್ಕೆ ಮಾರಕವಾದ ಕೀಟಗಳನ್ನು ನಿಯಂತ್ರಿಸಲು ಪ್ರಕೃತಿ ತನ್ನದೇ ಆದ ಜೀವ ಸರಪಳಿ ನಿರ್ಮಿಸಿದೆ. ಇದರಲ್ಲಿ ಬಾವಲಿ (Bat) ಯೂ ಪ್ರಮುಖ.
ಹೊಲ-ಗದ್ದೆ-ತೋಟಗಳಲ್ಲಿ ಹಗಲು ವೇಳೆ ಬೆಳೆ ಬಾಧಿಸುವ ಕೀಟಗಳು ಮಣ್ಣು ಮತ್ತು ಎಲೆಗಳ ಮರೆಯಲ್ಲಿ ಅಡಗಿರುತ್ತವೆ. ರಾತ್ರಿ ವೇಳೆ ಹೊರಬಂದು ಬೆಳೆಗಳ ಮೇಲೆ ಆಕ್ರಮಣ ಮಾಡುತ್ತವೆ. ಇವುಗಳು ಎಳೆ ಎಲೆಗಳನ್ನು, ಕಾಂಡವನ್ನು ತಿನ್ನುವುದರಿಂದ ಸಸ್ಯದ ಬೆಳವಣಿಗೆ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ.
ಇಂಥ ಕೀಟಗಳು ರಾಸಾಯನಿಕ ಕೀಟನಾಶಕಗಳಿಗೆ ಬಹಳ ಬೇಗ ನಿರೋಧಕತೆ ಬೆಳೆಸಿಕೊಳ್ಳುತ್ತವೆ. ಆದ್ದರಿಂದಲೇ ಕೃಷಿಕರು ಬೇರೆ ಬೇರೆ ರಾಸಾಯನಿಕ ಕೀಟನಾಶಕಗಳನ್ನು ಮಿಶ್ರಣ ಮಾಡಿ ಸಿಂಪಡಿಸಿದರೂ ಕೀಟಗಳು ಹತೋಟಿಯಾಗುತ್ತಿಲ್ಲ. ಬದಲಿಗೆ ಮಣ್ಣಿನ ಫಲವತ್ತತೆ ಹಾಳಾಗುತ್ತದೆ. ಅಮೂಲ್ಯ ಅಂತರ್ಜಲ ಕಲುಷಿತವಾಗುತ್ತದೆ. ಸಸ್ಯಗಳು ಜೊತೆಗೆ ಜನ ಜಾನುವಾರುಗಳ ಆರೋಗ್ಯದ ಮೇಲೂ ದುಷ್ಪರಿಣಾಮ ಉಂಟಾಗುತ್ತದೆ.
ರಾತ್ರಿಯ ವೇಳೆ ಆಹಾರಕ್ಕಾಗಿ ಹಾರಾಟ ನಡೆಸುವ ಬಾವಲಿ (Bats)ಗಳಿಗೆ ಇಂಥ ಹಾನಿಕಾರಕ ಕೀಟಗಳು ಆಹಾರವಾಗುತ್ತವೆ. ಒಂದೇ ರಾತ್ರಿಯಲ್ಲಿ ಒಂದೇ ಒಂದು ಬಾವಲಿ ಸಾವಿರಾರು ಕೀಟಗಳನ್ನು ಭಕ್ಷಿ ಸುತ್ತದೆ. ದೊಡ್ಡ ಹಿಂಡು ಒಂದು ರಾತ್ರಿ ಅವಧಿಯಲ್ಲಿ 6 ಟನ್ ಗಳಷ್ಟು ಪ್ರಮಾಣದ ಕೀಟಗಳನ್ನು ತಿನ್ನುತ್ತವಂತೆ. ಹೀಗಾಗಿ ರೈತ ನೆಮ್ಮದಿಯಾಗಿ ನಿದ್ದೆ ಮಾಡಬಹುದು.
ತೋಟಗಾರಿಕೆ ಬೆಳೆಗಳಿಗೆ ಬಾವಲಿಗಳ ಹಿಕ್ಕೆ ಉತ್ಕೃಷ್ಟ ದರ್ಜೆಯ ಗೊಬ್ಬರ. ಇದರಿಂದ ಮಣ್ಣಿನ ಫಲವತ್ತತೆ ಹೆಚ್ಚುತ್ತದೆ. ಇಂಥ ಉತ್ತಮ ದರ್ಜೆಯ ಸಾವಯವ ಪೋಷಕಾಂಶಕ್ಕೆ ರಸಗೊಬ್ಬರ ಯಾವುದೇ ಕಾರಣಕ್ಕೂ ಪರ್ಯಾಯವಾಗುವುದಿಲ್ಲ
ಸಸ್ಯಗಳು ರೋಗ ನಿರೋಧಕ ಶಕ್ತಿಯೊಂದಿಗೆ ಬೆಳೆಯುತ್ತವೆ. ಫಸಲು ಸಮೃದ್ಧವಾಗಿರುತ್ತದೆ. ಬಾವಲಿಗಳು ಅತಿಹೆಚ್ಚು ಸಂಖ್ಯೆಯಲ್ಲಿ ವಾಸಿಸುವ ಸ್ಥಳಗಳಿಂದ ಅವುಗಳ ಹಿಕ್ಕೆಯನ್ನು ಕಾಂಪೋಸ್ಟ್ ಮಾಡಿ ತೋಟಕ್ಕೆ ಒದಗಿಸಿದರೆ ಮುಂದಿನ ನಾಲ್ಕು ವರ್ಷ ಇತರ ಯಾವುದೇ ಗೊಬ್ಬರ ಒದಗಿಸುವ ಅವಶ್ಯಕತೆಯೂ ಇಲ್ಲ.
ಆಗುತ್ತಿರುವುದೇನು ?
ಬೆಳಗಳನ್ನು ಬಾಧಿಸುವ ಕೀಟಗಳ ನಿಯಂತ್ರಣಕ್ಕಾಗಿ ದುರ್ವಾಸನೆಯ, ಉಗ್ರ ಸ್ವರೂಪದ ಕೀಟನಾಶಕಗಳನ್ನು ಸಿಂಪಡಿಸಲಾಗುತ್ತಿದೆ. ಇವುಗಳ ವಾಸನೆಯಿಂದಾಗಿ ಸೂಕ್ಷ್ಮ ಸಂವೇದಿ ಬಾವಲಿಗಳು ಅತ್ತ ಸುಳಿಯುತ್ತಿಲ್ಲ. ಕೀಟನಾಶಕಗಳ ಸಿಂಪಡಣೆಯಿಂದ ಸತ್ತಿರುವ ಕೀಟಗಳನ್ನು ತಿನ್ನುವುದರಿಂದ ಅವುಗಳ ಆರೋಗ್ಯವೂ ಹದಗೆಡುತ್ತದೆ. ಸಾವು ಸಹ ಸಂಭವಿಸುತ್ತದೆ.
ತಪ್ಪು ಗ್ರಹಿಕೆ
ಸಾಕಷ್ಟು ಕೃಷಿಕರಲ್ಲಿಯೂ ಬಾವಲಿಗಳ ಕುರಿತು ತಪ್ಪು ಗ್ರಹಿಕೆ ಇದೆ. ಇವುಗಳು ತೋಟಗಳ ಹಣ್ಣುಗಳನ್ನು ತಿಂದು ಹಾಳು ಮಾಡುತ್ತವೆ. ಸಂಗ್ರಹಣೆಯಾಗುವ ಹಣ್ಣುಗಳ ಪ್ರಮಾಣ ಗಣನೀಯವಾಗಿ ಕಡಿಮೆಯಾಗುತ್ತವೆ. ಇದರಿಂದ ಆರ್ಥಿಕವಾಗಿ ನಷ್ಟ ಉಂಟಾಗುತ್ತದೆ ಎಂದುಕೊಳ್ಳುತ್ತಾರೆ. ಆದರೆ ಇದು ಸಂಪೂರ್ಣ ಆಧಾರ ರಹಿತ ಗ್ರಹಿಕೆ, ತೀವ್ರವಾಗಿ ಕಳಿತು. ಹೆಚ್ಚು ವಾಸನೆ ಬರುತ್ತಿರುವ ಹಣ್ಣುಗಳನ್ನಷ್ಟೆ ಅವುಗಳು ತಿನ್ನುತ್ತವೆ. ಇಷ್ಟು ತೀವ್ರ ಪ್ರಮಾಣದಲ್ಲಿ ಕಳಿತ ಹಣ್ಣುಗಳನ್ನು ಕೊಯ್ದು ಮಾಡುವುದಾಗಲಿ ಅಥವಾ ಸಾಗಾಣಿಕೆ ಮಾಡುವುದಾಗಲಿ ಸಾಧ್ಯವಿಲ್ಲ ಎಂಬುದನ್ನು ಗಮನಿಸಬೇಕು.
ಬಾವಲಿ ಹಿಕ್ಕೆಯ ಮಹತ್ವ ಅರಿತಿರುವ ಬೆಳೆಗಾರರು ಇವುಗಳು ಅತಿ ಹೆಚ್ಚಾಗಿ ಇರುವ ಪ್ರದೇಶಗಳನ್ನು ಆರಸುತ್ತಾರೆ. ಇವುಗಳಿರುವ ಗುಹೆಗಳು, ಮರಗಳ ಕೆಳಗಿನ ಗೊಬ್ಬರ ತಂದು ಬೆಳೆಗಳಿಗೆ ಪೂರೈಸುತ್ತಾರೆ. ಅತೀ ಕಡಿಮೆ ಖರ್ಚಿನಲ್ಲಿ ಅತ್ಯುತ್ತಮ ಪೋಷಕಾಂಶ ಒದಗಿಸಿ ನಿರಂತರವಾಗಿ ಮಣ್ಣಿನ ಫಲವತ್ತತೆ ಕಾಪಾಡುತ್ತಾರೆ.
ತೋಟಗಳ ಫಲವತ್ತತೆ ಹೆಚ್ಚಿಸುವ ಮತ್ತು ಕೀಟ ಬಾಧೆಯನ್ನು ನಿಯಂತ್ರಣದಲ್ಲಿಟ್ಟು ಫಸಲು ಸಂರಕ್ಷಿಸುವ ಬಾವಲಿಗಳ ಕಾರ್ಯವನ್ನು ಅರ್ಥ ಮಾಡಿಕೊಳ್ಳುವುದು ಸೂಕ್ತ, ಇವು ತೀರಾ ಕಳಿತ ಹಣ್ಣು ತಿಂದರೆ ನಷ್ಟವಲ್ಲ, ಬದಲಾಗಿ ಲಾಭ !
ಹೆಚ್ಚಿನ ಮಾತಿಗೆ: 74067 68999