ಈ ಟೊಮೆಟೊ ಡೈರಿ ತರಕಾರಿ ಬೆಳೆಗಾರರಿಗೆ ಮಾರ್ಗದರ್ಶಕ !

0

ಹಾಲಿನ ಡೈರಿಗಳು ಗೊತ್ತು ; ಇದ್ಯಾವುದು ಟೊಮೆಟೊ ಡೈರಿ ಎಂದು ಆಶ್ಚರ್ಯವಾಯಿತೆ ? ಇದು ಮಹಾರಾಷ್ಟ್ರದ ಸತಾರಾದಲ್ಲಿದೆ. ಯುವಕರಿಬ್ಬರ ಆಸಕ್ತಿ, ಪರಿಶ್ರಮದಿಂದ ರೂಪಿತವಾಗಿದೆ. ತರಕಾರಿ ಕೃಷಿಕರು ಗುಣಮಟ್ಟದ ತರಕಾರಿಗಳ ಕೃಷಿ ಮಾಡಲು ಉತ್ತಮ ಲಾಭಗಳಿಸಲು ಮಾರ್ಗದರ್ಶಿಯಾಗಿದೆ.

ಟೊಮೆಟೋ ಡೈರಿ ಸ್ಥಾಪನೆಗೆ ಕಾರಣವೂ ಇದೆ. ಸತಾರಾ ಭಾಗದಲ್ಲಿ ಭಾರಿ ಪ್ರಮಾಣದಲ್ಲಿ ಟೊಮೆಟೊ ಬೆಳೆಯುತ್ತಾರೆ. ಈ ಬೆಳೆಗೆ ತಗುಲುವ ಟೊಮೆಟೊ ಮೊಸಾಯಿಕ್ ವೈರಸ್ ದಾಳಿಯ ಬಗ್ಗೆ ಬೆಂಗಳೂರಿನ ಹೆಸರಘಟ್ಟದಲ್ಲಿರುವ ಭಾರತೀಯ ತೋಟಗಾರಿಕಾ ಸಂಶೋಧನಾ ಕೇಂದ್ರ ೨೦೨೦ – ೨೧ರ ಸಾಲಿನಲ್ಲಿ ಕೃಷಿಕರು ಮತ್ತು ಕೃಷಿವಿಜ್ಞಾನಿಗಳೊಂದಿಗೆ ಸಭೆ ಆಯೋಜಿಸಿತ್ತು. ಇದರಲ್ಲಿ ಸತಾರಾ ಮೂಲದ ೩೫ ವರ್ಷ ವಯಸ್ಸಿನ ಅಜಿತ್ ಕೋರ್ಡೆ ಮತ್ತು ಗಣೇಶ್ ನಜೀರ್ಕರ್ ಭಾಗವಹಿಸಿದ್ದರು. ಕೃಷಿ ಪದವೀಧರರಾದ ಇವರಿಬ್ಬರೂ ಪಿಯುಸಿ ಓದುವ ದಿನಗಳಿಂದಲೂ ಸಹಪಾಠಿಗಳು. ಈ ಸಭೆಯ ಸಂದರ್ಭದಲ್ಲಿ ಇವರಿಬ್ಬರೂ ಟೊಮೆಟೊ ಡೈರಿ ಸ್ಥಾಪನೆಯ ಅಗತ್ಯತೆ ಮನಗಂಡರು.

ತಾವು ಗಳಿಸಿದ ಕೃಷಿ ಪದವಿ ಜ್ಞಾನ ಮತ್ತು ಪ್ರಾಯೋಗಿಕ ಅನುಭವದ ಪ್ರಯೋಜನವನ್ನು ವ್ಯವಸ್ಥಿತವಾಗಿ ಕೃಷಿಕರಿಗೆ ನೀಡಬೇಕೆಂದು ನಿರ್ಧರಿಸಿದರು. ಇದರ ಪರಿಣಾಮವಾಗಿ ಟೊಮೆಟೊ ಡೈರಿ ಸ್ಥಾಪನೆಯಾಯಿತು (ಮರಾಠಿಯಲ್ಲಿ ಟೊಮೇಟೊ ನೊಂಧ್ಬಹಿ) ಇಂದು ಈ ಸಂಸ್ಥೆ ತರಕಾರಿ ಬೆಳೆಗಾರರ ಪರಮಾಪ್ತ ಮಿತ್ರವಾಗಿದೆ.
ಟೊಮೆಟೊ ವೈರಸ್ ದಾಳಿಗೆ ಈ ಬೆಳೆ ಬೆಳೆದಿದ್ದ ಹಲವು ಕ್ಷೇತ್ರಗಳು ಬಾಧಿತವಾಗಿದ್ದರೂ ಕೋರ್ಡೆ ಅವರು ಬೆಳೆದಿದ್ದ ಟೊಮೆಟೋಗೆ ಹಾನಿಯಾಗಿರಲಿಲ್ಲ. ಇದರಿಂದ ವಿಜ್ಞಾನಿಗಳು ಆಶ್ವರ್ಯಚಕಿತರಾಗಿದ್ದರು. ಕೋರ್ಡೆ ಅವರು ಬೆಳೆ ನಿರ್ವಹಣೆ ಮಾಡಿದ ರೀತಿ ಬಗ್ಗೆ ಕೇಳಿದ್ದರು. ಇದರ ಬಗ್ಗೆ ದಾಖಲೆಗಳನ್ನು ನಿರ್ವಹಣೆ ಮಾಡಿದ್ದ ಕೋರ್ಡೆ ಅವರು ಅವುಗಳನ್ನು ಒದಗಿಸಿದ್ದರು.

“ನಾನು ವ್ಯವಸಾಯವನ್ನು ಪ್ರಾರಂಭಿಸಿದಾಗಿನಿಂದ, ನನ್ನ ತೋಟದ ಚಟುವಟಿಕೆಗಳ ದಾಖಲೆಯನ್ನು ನಿರ್ವಹಿಸುವುದು ನನ್ನ ಅಭ್ಯಾಸವಾಗಿದೆ . ಹೀಗಾಗಿ, ಬೆಳೆಗಳಿಗೆ ಬಳಸಿದ ರಾಸಾಯನಿಕಗಳು ಮತ್ತು ಸ್ಪ್ರೇಗಳ ಪಟ್ಟಿಯನ್ನು ಒದಗಿಸಿದೆ” ಎಂದು ಅಜಿತ್ ಕೋರ್ಡೆ ಹೇಳುತ್ತಾರೆ.

ಸತಾರದ ಫಾಲ್ತಾನ್ ತಾಲೂಕಿನ ಮಿರೆವಾಡಿ ಗ್ರಾಮದಲ್ಲಿ ಕಳೆದ ಹಲವು ವರ್ಷಗಳಿಂದ ತಮ್ಮ ಹಿಡುವಳಿಯ 70 ಎಕರೆಯಲ್ಲಿ ತರಕಾರಿ ಮತ್ತು ಕಬ್ಬು ಬೆಳೆಯುತ್ತಿರುವ ಕೋರ್ಡೆ ಅವರು ತಮ್ಮ ಪ್ರಗತಿಪರ ಕೃಷಿ ಪದ್ಧತಿಗಳಿಗೆ ಹೆಸರುವಾಸಿಯಾಗಿದ್ದಾರೆ, ಗುಣಮಟ್ಟದ ತೋಟಗಾರಿಕಾ ಉತ್ಪನ್ನಗಳನ್ನು ದಾಖಲೆ ಪ್ರಮಾಣದಲ್ಲಿ ಕಟಾವು ಮಾಡುತ್ತಿದ್ದಾರೆ. ಸ್ಥಳೀಯ ಮಾರುಕಟ್ಟೆಗಳೊಂದಿಗೆ ವ್ಯವಹರಿಸುವ ಬದಲು, ಕೊರ್ಡೆ ಅವರು ತಾವು ಬೆಳೆಯುವ ಉತ್ಪನ್ನಗಳನ್ನು ನೇರವಾಗಿ ನವಿ ಮುಂಬೈನ ವಾಶಿ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಾರೆ.

ʼತೋಟಗಾರಿಕಾ ಬೆಳೆಗಳನ್ನು ಬೀಜ / ನಾಟಿ ಹಂತದಿಂದಲೂ ಸಮರ್ಪಕವಾಗಿ ನಿರ್ವಹಣೆ ಮಾಡಬೇಕು. ಅಗತ್ಯವಿರುವ ಪೋಷಕಾಂಶಗಳನ್ನು ಸಮರ್ಪಕ ಪ್ರಮಾಣದಲ್ಲಿ ನೀಡಬೇಕು. ಕೀಟನಾಶಕಗಳು, ಶಿಲೀಂಧ್ರನಾಶಕಗಳನ್ನು ಸಕಾಲಕ್ಕೆ ಅಗತ್ಯವಿರುವಷ್ಟೇ ಪ್ರಮಾಣದಲ್ಲಿ ನೀಡಬೇಕು. ಇದಕ್ಕಾಗಿ ನುರಿತ ತಜ್ಞರ ಮಾರ್ಗದರ್ಶನ ಪಡೆಯಬೇಕು. ಆದರೆ ಬಹತೇಕ ಬೆಳೆಗಾರರು ಗೊಬ್ಬರದ ಅಂಗಡಿಗಳವರು ಶಿಫಾರಸು ಮಾಡುವುದನ್ನು ಅನುಕರಿಸುತ್ತಾರೆ. ಇದು ಸೂಕ್ತವಲ್ಲ” ಎಂದು ಹೇಳುತ್ತಾರೆ.

ಕೊರ್ಡೆ ಮತ್ತು ನಜೀರ್ಕರ್ ಇಬ್ಬರು ತಾವು ಗಳಿಸಿದ ತೋಟಗಾರಿಕಾ ಜ್ಞಾನವನ್ನು ಇತರ ಬೆಳೆಗಾರರೊಂದಿಗೆ ಮುಕ್ತವಾಗಿ ಹಂಚಿಕೊಳ್ಳುತ್ತಾರೆ. ಹಂತಹಂತವಾಗಿ ಮಾರ್ಗದರ್ಶನ ಮಾಡುತ್ತಾರೆ. ಇದರಿಂದಾಗಿ ಇವರ ಸಮಪರ್ಕದಲ್ಲಿರುವ ಬೆಳೆಗಾರರು ಗುಣಮಟ್ಟದ ತೋಟಗಾರಿಕೆ ಉತ್ಪನ್ನಗಳನ್ನು ಪಡೆಯುವುದು ಸಾಧ್ಯವಾಗಿದೆ.

ಮೂಲತಃ ಗೋಖಾಲಿ ಗ್ರಾಮದ ನಿವಾಸಿಯಾಗಿರುವ ನಜೀರ್ಕರ್, ಅವರು ಟೊಮೆಟೊ ಡೈರಿ ಇನ್ನೂ ಕೆಲವು ಪ್ರಮುಖ ಅಗತ್ಯಗಳನ್ನು ಪೂರೈಸುತ್ತದೆ ಎಂದು ಹೇಳುತ್ತಾರೆ.  “ಬೆಳೆಗಾರರು ಹೂಡಿಕೆ ಮತ್ತು ಅವರ ಹೂಡಿಕೆಯ ಮೇಲಿನ ಆದಾಯವನ್ನು ಟ್ರ್ಯಾಕ್ ಮಾಡುವುದಿಲ್ಲ; ಆದ್ದರಿಂದ ಇವುಗಳನ್ನು ವ್ಯವಸ್ಥಿತ ರೂಪದಲ್ಲಿ ಟಿಪ್ಪಣಿ ಮಾಡಲು ಮಾರ್ಗದರ್ಶನ ನೀಡುತ್ತೇವೆ. ಒಂದು ವೇಳೆ. ಋತುವಿನ ಕೊನೆಯಲ್ಲಿ ಅವರು ನಷ್ಟದಲ್ಲಿದ್ದರೆ, ಅದೇ ಬೆಳೆಯನ್ನು ಮುಂದುವರಿಸಬೇಕೆ ಅಥವಾ ಬೇಡವೇ ಎಂಬ ಬಗ್ಗೆ ನಿರ್ಧಾರ ತೆಗೆದುಕೊಳ್ಳುವುದು ಅವರಿಗೆ ಸಾಧ್ಯವಾಗುತ್ತದೆ” ಎಂದು ವಿವರಿಸುತ್ತಾರೆ.

ಡೈರಿ ಮಾಡುವ ಮತ್ತೊಂದು ಪ್ರಮುಖ ಕಾರ್ಯವೆಂದರೆ ಸ್ಥಳೀಯ ಅಗತ್ಯಗಳಿಗೆ ಅನುಗುಣವಾಗಿ ಬೆಳೆಗಾರರ ಕೃಷಿ ಅಭ್ಯಾಸಗಳನ್ನು ವೈಯಕ್ತೀಕರಿಸುವುದು ಮತ್ತು ಕಸ್ಟಮೈಸ್ ಮಾಡುವುದು. “ಕೃಷಿಯು ಹಲವಾರು ಅಸ್ಥಿರತೆಗಳನ್ನು ಹೊಂದಿದೆ. ಎಲ್ಲವೂ ಒಂದೇ ಆಗಿದ್ದರೂ ಸಹ ಯಾವುದೇ ಎರಡು ಕ್ಷೇತ್ರಗಳು ಒಂದೇ ರೀತಿಯ ಉತ್ಪನ್ನಗಳೊಂದಿಗೆ ಬರಲು ಸಾಧ್ಯವಿಲ್ಲ. ಆದ್ದರಿಂದ, ಈ ಡೈರಿ, ರೈತರಿಗೆ ಒಳಹರಿವು ಮತ್ತು ತಮ್ಮ ಹೊಲ – ತೋಟಗಳಲ್ಲಿ ಅವರು ಬೆಳೆ ನಿರ್ವಹಣೆ ಮಾಡುವ ರೀತಿಯನ್ನು ಟಿಪ್ಪಣಿ ಮಾಡಲು ತಿಳಿಸುತ್ತದೆ. ಈ ಡೈರಿಯ ಮಾರ್ಗದರ್ಶನದಿಂದ ಟೊಮೆಟೊ ಬೆಳೆಗಾರರು ತಮ್ಮ ಹೊಲಗಳಲ್ಲಿ ಉತ್ತಮ ಕೃಷಿ ಅಭ್ಯಾಸಗಳನ್ನು ವಿಕಸನಗೊಳಿಸಲು ಸಾಧ್ಯವಾಗುತ್ತದೆ ಎಂಬುದು ನಮ್ಮ ಆಶಯವಾಗಿದೆ ”ಎಂದು ನಜೀರ್ಕರ್ ಹೇಳುತ್ತಾರೆ.

LEAVE A REPLY

Please enter your comment!
Please enter your name here