ಸೊರಗು ರೋಗ ನಿವಾರಕ ಟ್ರೈಕೋಡರ್ಮ

ಸಾವಯವದ ಮಹತ್ವ ತಿಳಿದಮೇಲೆ, ಹಲವಾರು ಪರಿಸರ ಪೂರಕ ಮಾರ್ಗೋಪಾಯಗಳು ರೈತರ ಜಮೀನಿನಲ್ಲಿ ಅನುಶೋಧನೆಗೊಳಗೊಂಡವು. ರೋಗ ಮತ್ತು ಕೀಟಗಳ ಬಾಧೆ ಎಲ್ಲಾ ಬೆಳೆಗಳಲ್ಲೂ ಕಂಡು ಬರುತ್ತದೆ. ಅದರಲ್ಲೂ ಮಣ್ಣಿನಿಂದ ಬರುವ ರೋಗಗಳಿಂದ ಬೆಳೆಗಳಿಗೆ ಹೆಚ್ಚಿನ ಹಾನಿ ಉಂಟಾಗುತ್ತದೆ.

2
ಲೇಖಕರು: ಮಂಜುನಾಥ ಹೊಳಲು

ನಿಸರ್ಗದ ಅತಿಯಾದ ಬಳಕೆಯಿಂದ ಮಣ್ಣಿನ ಸವಕಳಿ, ಅಂತರ್ಜಲ ಮಟ್ಟದಲ್ಲಿ ಇಳಿಕೆ, ಭೂಮಿ ಬಂಜರು ಬೀಳುವಿಕೆ, ಪರಿಸರ ಮಾಲಿನ್ಯವಾಗಿದೆ ಹಾಗೂ ಅರಣ್ಯ ಸಂಪತ್ತು ನಾಶವಾಗುತ್ತಿದೆ. ಮಣ್ಣು ಮತ್ತು ನೀರು ನಿಸರ್ಗದ ಕೊಡುಗೆ, ಇವು ನಮ್ಮ ಜೀವನಾಧಾರ ಸ0ಪತ್ತು. ಅತಿಯಾದ ಶೀಲಿಂದ್ರನಾಶಕಗಳ ಬಳಕೆಯಿಂದ ಮಣ್ಣು ಹಾಗು ನೀರು ಮಲೀನವಾಗಿದೆ. ಸಾವಯವ ಕೃಷಿಯಲ್ಲಿ ಟ್ರೈಕೋಡರ್ಮ ಬಳಕೆ ಅತಿಮುಖ್ಯ.

ಸಾವಯವದ ಮಹತ್ವ ತಿಳಿದಮೇಲೆ, ಹಲವಾರು ಪರಿಸರ ಪೂರಕ ಮಾರ್ಗೋಪಾಯಗಳು ರೈತರ ಜಮೀನಿನಲ್ಲಿ ಅನುಶೋಧನೆಗೊಳಗೊಂಡವು. ರೋಗ ಮತ್ತು ಕೀಟಗಳ ಬಾಧೆ ಎಲ್ಲಾ ಬೆಳೆಗಳಲ್ಲೂ ಕಂಡು ಬರುತ್ತದೆ. ಅದರಲ್ಲೂ ಮಣ್ಣಿನಿಂದ ಬರುವ ರೋಗಗಳಿಂದ ಬೆಳೆಗಳಿಗೆ ಹೆಚ್ಚಿನ ಹಾನಿ ಉಂಟಾಗುತ್ತದೆ. ಅದರಲ್ಲಿ ಕಿತ್ತಳೆ ಬೆಳೆಗೆ ಬೇರು ಕೊಳೆ ರೋಗ, ಕರಿಮೆಣಸಿನಲ್ಲಿ ಕಂಡು ಬರುವ ಸೊರಗುರೋಗ, ಶುಂಠಿಯಲ್ಲಿನ ಬೇರುಕಾಂಡ ಕೊಳೆ ರೋಗ, ಏಲಕ್ಕಿ ಗಿಡದ ಬೇರುಕಾಂಡ ಮತ್ತು ಕಾಯಿ ಕೊಳೆ ರೋಗಗಳು ಹಾಗೂ ತರಕಾರಿಗಳಲ್ಲಿ ಮಣ್ಣಿನಿಂದ ಬರುವ ಕೊಳೆ ರೋಗಗಳು ಪ್ರಮುಖವಾದವುಗಳು.

ಮಣ್ಣಿನಿಂದ ಬರುವ ರೋಗಗಳನ್ನು ಅವು ಬಂದ ನಂತರ ಹತೋಟಿ ಮಾಡುವುದಕ್ಕಿಂತ, ರೋಗ ಬರದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವುದು ಸೂಕ್ತ. ಮಣ್ಣಿನಿಂದ ಬರುವ ರೋಗಗಳನ್ನು ನಿಯಂತ್ರಿಸಲು ಟ್ರೈಕೋಡರ್ಮ ಎಂಬ ಸೂಕ್ಷ್ಮಾಣು ಜೀವಿಗಳನ್ನು ಉಪಯೋಗಿಸಲಾಗುತ್ತಿದೆ. ನಮ್ಮ ಅಗತ್ಯಕ್ಕೆ ತಕ್ಕಂತೆ ಇದನ್ನು ಅಭಿವೃದ್ಧಿ ಪಡಿಸಿಕೊಂಡು ಬಳಸಬಹುದಾಗಿದೆ. ಟ್ರೈಕೋಡಮರ್ಮ ವಿರಿಡೆ ಹಾಗು ಟ್ರೈಕೋಡರ್ಮ ಹಾಜರಿಯಾನಮ್ ಎಂಬ ಎರಡು ಪ್ರಭೇದದ ಜೀವಿಗಳಿವೆ.

ಟ್ರೈಕೋಡರ್ಮ ಸೂಕ್ಷ್ಮಜೀವಿಯನ್ನು ಕೊಟ್ಟಿಗೆ ಗೊಬ್ಬರ ಅಥವಾ ಕಾಂಪೋಸ್ಟ್ ಗೊಬ್ಬರದೊಂದಿಗೆ ಬೆರೆಸಿ ಅಭಿವೃದ್ಧಿ ಪಡಿಸಿಕೊಳ್ಳಬೇಕು. ನೂರು ಕೆ.ಜಿ. ಚೆನ್ನಾಗಿ ಕಳಿತ ಕೊಟ್ಟಿಗೆ ಗೊಬ್ಬರವನ್ನು ತೆಗೆದುಕೊಂಡು ಅದಕ್ಕೆ ಕನಿಷ್ಟ ಒಂದು ಕೆ.ಜಿ. ಟ್ರೈಕೋಡರ್ಮ ಹಾಜರಿಯಾನಮ್ ಸೂಕ್ಷ್ಮಾಣುಜೀವಿಯನ್ನು ಬೆರೆಸಬೇಕು. ಗೊಬ್ಬರದಲ್ಲಿ ಸುಮಾರು ಶೇ.30-40 ತೇವಾಂಶವಿರುವಂತೆ ನೋಡಿಕೊಳ್ಳಬೇಕು. ಗೊಬ್ಬರದ ಮೇಲೆ ನೇರವಾಗಿ ಸೂರ್ಯನ ಕಿರಣಗಳು ಬೀಳದಂತೆ ಗೋಣಿಚೀಲದಿಂದ ಅಥವಾ ಕೃಷಿ ತ್ಯಾಜ್ಯವಸ್ತುಗಳಿಂದ ಸರಿಯಾಗಿ ಮುಚ್ಚಬೇಕು.

 

ಈ ಮಿಶ್ರಣವನ್ನು 2 ರಿಂದ 3 ದಿನ ಇಡಬೇಕು. ಈ ಹಂತದಲ್ಲಿ ಟೈಕೋಡರ್ಮ ಸೂಕ್ಷ್ಮಾಣು ಜೀವಿಗಳು ಗೊಬ್ಬರದಲ್ಲಿ ಚೆನ್ನಾಗಿ ಅಭಿವೃದ್ಧಿ ಹೊಂದಿರುತ್ತವೆ. ತೋಟಗಾರಿಕಾ ಅಥವಾ ಸಂಬಾರು ಬೆಳೆಗಳಲ್ಲಿ 10 ವರ್ಷ ಮೇಲ್ಪಟ್ಟ ಗಿಡಗಳಿಗೆ 10 ಕೆ.ಜಿ. ಕೊಟ್ಟಿಗೆ ಗೊಬ್ಬರ ಮತ್ತು 10 ವರ್ಷದೊಳಿಗಿರುವ ಗಿಡಗಳಿಗೆ 5 ಕೆ.ಜಿ. ಗೊಬ್ಬರವನ್ನು ಬುಡದ ಸುತ್ತಲೂ ಹಾಕಿ ಮಣ್ಣಿನೊಂದಿಗೆ ಬೆರೆಸಬೇಕು. ಉಳಿದ ಬೆಳೆಗಳಿಗೆ ಒಂದು ಎಕರೆಗೆ 10 ಕೆ.ಜಿ.ಯಂತೆ ಬಳಸಬೇಕು.

ಮುನ್ನೆಚ್ಚರಿಕಾ ಕ್ರಮಗಳು: ಟ್ರೈಕೋಡರ್ಮ ಸೂಕ್ಷ್ಮಾಣು ಜೀವಿಗಳನ್ನು ಬಹುವಾರ್ಷಿಕ ಬೆಳೆಗಳಲ್ಲಿ ವರ್ಷಕ್ಕೆ 2 ಸಲ ಮುಂಗಾರಿನ ಆರಂಭದಲ್ಲಿ, ಅಂದರೆ ಮೇ-ಜೂನ್ ತಿಂಗಳಿನಲ್ಲಿ ಮತ್ತು ಹಿಂಗಾರಿನಲ್ಲಿ ಅಂದರೆ ಸೆಪ್ಟೆಂಬರ್-ಅಕ್ಟೋಬರ್ ತಿಂಗಳಿನಲ್ಲಿ ಉಪಯೋಗಿಸಬೇಕು. ಇತರ ಬೆಳೆಗಳಲ್ಲಿ ಗಿಡ ನಾಟಿ ಮಾಡುವ ಮೊದಲು ಬಳಸಬೇಕು.

ಭೂಮಿಯಲ್ಲಿ ತೇವಾಂಶ ಅತೀ ಹೆಚ್ಚು ಅಥವಾ ಕಡಿಮೆಯಿದ್ದಾಗ ಟ್ರೈಕೋಡರ್ಮ ಬಳಸುವುದು ಸೂಕ್ತವಲ್ಲ. ಟ್ರೈಕೋಡರ್ಮ ಹಾಕುವ 21 ದಿವಸಗಳ ಮುಂಚೆ ಹಾಗೂ 21 ದಿವಸಗಳ ನಂತರ ಯಾವುದೆ ರಾಸಾಯನಿಕ ಶಿಲೀಂಧ್ರನಾಶಕ ಹಾಗೂ ರಾಸಾಯನಿಕ ಗೊಬ್ಬರಗಳನ್ನು ಬಳಸಬಾರದು. ಮಿಶ್ರ ಮಾಡಲು ಚೆನ್ನಾಗಿ ಕಳಿತ ಗೊಬ್ಬರವನ್ನು ಮಾತ್ರ ಬಳಕೆ ಮಾಡಬೇಕು. ಇದರ ನಿರಂತರ ಬಳಕೆಯಿಂದ ಮಣ್ಣಿನಲ್ಲಿರುವ ರೋಗಾಣುಗಳ ಸಂಖ್ಯೆ ಕಡಿಮೆಯಾಗುತ್ತದೆ. ಇದರಿಂದಾಗಿ ಬೇರುಗಳ ಬೆಳವಣಿಗೆ ಚೆನ್ನಾಗಿ ಆಗುತ್ತದೆ. ಇದರ ಪರಿಣಾಮವಾಗಿ ಗಿಡಗಳ ಬೆಳವಣಿಗೆ ಉತ್ತಮವಾಗಿದ್ದು ಫಸಲೂ ಸಹ ಹೆಚ್ಚಾಗುತ್ತದೆ. ರೋಗ ಬಂದಿರುವ ಗಿಡಗಳಿಗೆ ಬಳಸುವುದರಿಂದ ಹೆಚ್ಚಿನ ಪರಿಣಾಮ ಉಂಟಾಗುವುದಿಲ್ಲ. ರೋಗ ಬರುವ ಮೊದಲೇ ಮುಂಜಾಗ್ರತ ಕ್ರಮವಾಗಿ ಬಳಕೆ ಮಾಡುವ ಮೂಲಕ ರೋಗ ಬರದಂತೆ ತಡೆಯಬಹುದು.

 

ಮಣ್ಣಿನಲ್ಲಿರುವ ಟ್ರೈಕೋಡರ್ಮ ಸಂಖ್ಯೆ ವೃದ್ಧಿಯಾಗಲು ಸುಮಾರು 3 ರಿಂದ 4 ವರ್ಷಗಳ ಸಮಯ ಬೇಕಾಗುತ್ತದೆ. ಮಣ್ಣಿನಲ್ಲಿ ಸೂಕ್ತ ತೇವಾಂಶವಿರುವಾಗ ಬಳಸುವುದು ಉತ್ತಮ. ಒಣಭೂಮಿಯಲ್ಲಿ ಅಥವಾ ಅತಿ ಹೆಚ್ಚು ತೇವಾಂಶ ಮಣ್ಣಿನಲ್ಲಿ ಬಳಸಬಾರದು. ಟ್ರೈಕೋಡರ್ಮ ಮತ್ತು ಇತರೆ ಉಪಯೋಗಿ ಜೀವಾಣುಗಳು ಮಣ್ಣಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರಬೇಕಾದರೆ ತೋಟಗಾರಿಕಾ ಹಾಗು ಸಂಬಾರು ಬೆಳೆಗಳಲ್ಲಿ ಪ್ರತಿ ಗಿಡಕ್ಕೆ 10 ಕೆ.ಜಿ. ಕೊಟ್ಟಿಗೆಗೊಬ್ಬರ, 5 ಕೆ.ಜಿ ಬೇವಿನ ಹಿಂಡಿ, 2 ಕೆ.ಜಿ.ಯಂತೆ ಎರೆಹುಳು ಗೊಬ್ಬರ ಬಳಕೆ ಮಾಡಬೇಕು.  ತಯಾರಿಸಿದ ನಂತರ ಸುಮಾರು 6 ತಿಂಗಳವರೆಗೆ ಬಳಸಲು ಯೋಗ್ಯ ಆದರೆ ನೆರಳಿನಲ್ಲಿ ಶೇಕರಿಸಿಡಬೇಕು. ಮಣ್ಣಿನಲ್ಲಿ ಮಿಶ್ರಣ ಮಾಡುವಾಗ ಗಿಡದ ಬೇರುಗಳು ತುಂಡಾಗದಂತೆ ಎಚ್ಚರಿಕೆ ವಹಿಸಬೇಕು.

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: 9480330652

2 COMMENTS

  1. Good information, prevention is better than cure , it’s apply to plants life as well. indeed it’s become need of the hour in context to present agricultural practices…

LEAVE A REPLY

Please enter your comment!
Please enter your name here