ಅದ್ಯಾಕೋ ಇದ್ಕಿದ್ದಂಗೆ ಕತೆ ಹೇಳಮ್ಮ ಅಂದ ಮಗ. ತಕ್ಷಣಕ್ಕೆ ಚಿಕ್ ಮಕ್ಕಳ ಕತೆ ಗೆಪ್ತಿ ಬರದಿದ್ರೂ, ದೊಡ್ಡ ಮಗನಿಗೆ ಹೇಳ್ತಿದ್ದ ನೆನಪಲ್ಲಿ ಒಂದ್ ಕತೆ ಶುರು ಮಾಡ್ದೆ . ‘ಒಂದೂರಲ್ಲಿ ಒಬ್ಬ ರೈತ ಇದ್ದ.ಕಾಡಿಗೆ ಸೌದೆ ತರೋಕ್ ಹೋಗಿದ್ದ’ ಅಂತ. ಸೌತೆ ಅಂದ್ರೆ? ಅಂದ. ಸೌತೆ ಅಲ್ವೋ ಮಾರಾಯ. ಸೌದೆ ಅಂದೆ. ಹೇಗೋ ಕತೆ ಮುಗಿಸಿದರೂ. ಇವನಿಗೆ ಸೌದೆ ಗೊತ್ತಿಲ್ವಲ್ಲ ಯಾಕೆ ಅನಿಸ್ತು. ಗೊತ್ತಿರಲು ಹೇಗೆ ಸಾಧ್ಯ? ಅಂತ ತರ್ಕಿಸತೊಡಗಿದೆ.
ನಾವ್ ಚಿಕ್ಕೋರಿದ್ದಾಗ ಸೌದೆ ಒಲೇಲಿ ಅಡುಗೆ ಆಗ್ತಿತ್ತು. ಸೌದೆ ಒಣಗಿಲ್ಲ, ಅಯ್ಯೋ ಸೌದೆಯೇ ಇಲ್ಲ. ಗೊಬ್ಬಳಿ ಮುಳ್ಳು ಚುಚ್ತವೆ. ನೀರೊಲೆಗ್ ಸೌದೆ ಹಾಕಿ, ಸೌದೆ ತರಬೇಕು ಹೀಗೆಲ್ಲ ನಿತ್ಯದ ಮಾತುಕತೆಯಲ್ಲಿ ಸೌದೆ ಬರ್ತಿದ್ದಾಗ ಸೌದೆ ಅನಾಯಾಸಯಾಗಿ ಗೊತ್ತಿರ್ತಿತ್ತು. ದೊಡ್ಡ ಮಗನಿಗೆ ಈ ವಯಸ್ಸಲ್ಲಿ ಸೌದೆ ಗೊತ್ತಿತ್ತು. ಆಗ ಊರೊಳಗಿನ ಮನೆಯಲ್ಲಿ ಸೌದೆ ಒಲೆಗೆ ಸ್ನಾನಕ್ಕೆ ನೀರೊಟ್ಟುವುದು ಕಾಣ್ತಿತ್ತು.
ಈಗ ಅಡುಗೆಗೆ ಗ್ಯಾಸು. ಸ್ನಾನಕ್ಕೆ ಸೋಲಾರ್. ಮಳೆಗಾಲದಲಿ ನೀರು ಕಾಯದಿದ್ದಾಗಷ್ಟೆ ನೀರೊಲೆ.
ಸೌದೆ ಎಂಬ ಪದಬಳಕೆ. ನಮ್ಮ ನಿತ್ಯ ಜೀವನದಲ್ಲಿ ಮರೆಯಾಗಿದೆ. ಕಿವಿಗೆ ಬೀಳದ ಪದ.ಕಣ್ಣಿಗೆ ಕಾಣದ ವಸ್ತು ಕತೆಯಲ್ಲಿ ಬಂದರೆ , ‘ಸೌದೆ ಅಂದ್ರೇನು?’ ಅಂತ ಎಲ್ ಕೆ ಜಿ ಮಗು ಕೇಳಿದರೆ ಅವನ ತಪ್ಪೇನು? ಈಗ ಸ್ಕೂಲಿಗೆ ಹೊಂಟ. ಸಂಜೆ ಬರಲಿ. ಒಲೆ ಮುಂದಕ್ ಕರ್ಕಂಡೋಗಿ ಮೊದಲು ಸೌದೆ ಅಂದರೆ ಇದು ಅಂತ ಹೇಳಬೇಕಿದೆ.
ರೈತ ಅಂದ್ರೆ? ಕಾಡು ಅಂದ್ರೆ? ಮಳೆ ಅಂದ್ರೆ ಅಂತೆಲ್ಲ ಕೇಳೋ ಸ್ಥಿತಿ ಬಾರದಿರಲಿ ಮುಂದಿನ ತಲೆಮಾರಿಗೆ. ನಮ್ಮ ಜೀವನಶೈಲಿ ಬದಲಾದ್ದರಿಂದಾಗಿ ಗಮನಕ್ಕೇ ಬಾರದೇ ಬದುಕಿನಿಂದ ದೂರವಾದ ನಿತ್ಯಬಳಕೆಯ ಪದಗಳು ಅದೆಷ್ಟಿರಬಹುದು? ಹುಡುಕ್ತಿರುವೆ. ಈ ಕ್ಷಣಕ್ಕೆ ದಿನಾ ಹಾಲು ಹಾಕಿಸಿಕೊಳ್ಳೋಕೆ ‘ವರ್ತನೆ’ ಅಂತೊಂದು ಪದ ಬಳಸುತ್ತಿದ್ದುದು, ತೊಲೆ ಮೇಲೆ ಲೆಕ್ಕಕ್ಕೆಂದು ಸೀಮೆಸುಣ್ಣದಲ್ಲಿ ಗೀಟು ಎಳೀತಿದ್ದುದು ನೆನಪಾಗ್ತಿದೆ.