ಪರಿಣಾಮಕಾರಿ ಸೋಲರ್ ಕೀಟನಿಯಂತ್ರಕ ಸಾಧನ ಅಭಿವೃದ್ಧಿ

0
ಲೇಖಕರು: ಎಂ. ಜಿ. ಕರಿಬಸಪ್ಪ, ಕೃಷಿಕ, ರೈತವಿಜ್ಞಾನಿ

ಭಾಗ – 1

ನಮ್ಮದು ದಾವಣಗೆರೆ ಜಿಲ್ಲೆ ಮಲೆಬೆನ್ನೂರು ಸಮೀಪದ ಜಿಗಳಿ ಗ್ರಾಮದ ರೈತಾಪಿ ಕುಟುಂಬ. ನಮ್ಮ ಅಜ್ಜ, ಅಪ್ಪ ಹೀಗೆ ಎಲ್ಲರೂ ರೈತರು.  ನಾನು ವಿದ್ಯಾಭ್ಯಾಸ ಮಾಡಿದ ನಂತರ ಕೃಷಿಕೆಲಸದಲ್ಲಿ ತೊಡಗಿಸಿಕೊಂಡೆ. ಎತ್ತುಗಳನ್ನು ಕಟ್ಟಿಕೊಂಡು ಬೇಸಾಯ ಮಾಡುತ್ತಿದ್ದೆ. 1981 ರಿಂದ 93ರ ತನಕ ಹೀಗೆ ಎತ್ತುಗಳ ಸಹಾಯದಿಂದ ಕೃಷಿ ಮಾಡಿದೆ. 1993ರಲ್ಲಿ ವಿ.ಎಸ್.ಟಿ. ಟಿಲ್ಲರ್ ಖರೀದಿ ಮಾಡಿ ತಂದೆವು. ಕೆಲವು ವರ್ಷಗಳಲ್ಲಿಯೇ ಟ್ರಾಕ್ಟರ್ ತಂದು ಬೇಸಾಯ ಮಾಡತೊಡಗಿದೆವು.  ಹೀಗೆ ವ್ಯವಸಾಯದಲ್ಲಿಯೇ ಮುಂದುವರಿಯುತ್ತಾ ಬರುತ್ತಿದ್ದೇವೆ.

ನಾವು ದಾಳಿಂಬೆ ಕೂಡ ಬೆಳೆಯುತ್ತೇವೆ. ಆಗ ಐದು ಎಕರೆಯಲ್ಲಿ ಬೆಳೆಯುತ್ತಿದ್ದೆ. ಈ ಹಣ್ಣಿನ ಬೆಳೆಗೆ ಕೀಟಗಳ ಹಾವಳಿ ಬಹಳ. ಉತ್ತರ ಕರ್ನಾಟಕದಲ್ಲಿ ದಾಳಿಂಬೆ ಡಾಕ್ಟರ್ ಎಂದು ಹೇಳಿಕೊಳ್ಳುವವರು ಇದ್ದಾರೆ.  ಅವರು ಬರೆದುಕೊಡುತ್ತಿದ್ದ ರಾಸಾಯನಿಕ ಕೀಟನಾಶಕಗಳನ್ನು ತಂದು ಸಿಂಪಡಿಸುತ್ತಿದ್ದೆವು. ಒಮ್ಮೆಯಂತೂ ದಾವಣಗೆರೆ ರಸಗೊಬ್ಬರ – ಕೀಟನಾಶಕಗಳ ಅಂಗಡಿಯಲ್ಲಿ ನಾಲ್ಕು ಲಕ್ಷ ರೂಪಾಯಿ ಸಾಲ ಆಗಿತ್ತು. ಫಸಲು ಕೂಡ ಬರಲಿಲ್ಲ.

ಇಂಥ ಸಂದರ್ಭದಲ್ಲಿ ಮುಂದೇನು ಮಾಡುವುದು ಎಂದು ಯೋಚನೆ ಮಾಡುತ್ತಾ ತೋಟದಲ್ಲಿದ್ದ ಪಂಪ್ ಹೌಸಿನಲ್ಲಿ ಕುಳಿತಿದ್ದೆ. ಆಗ ಕರೆಂಟ್ ಕಟ್ ಆಗಿತ್ತು. ಒಂದ್ ಚಿಕ್ಕ ಸೋಲರ್ ಲೈಟ್ ಹಾಕಿಕೊಂಡಿದ್ದೆವು. ಸಂಜೆಯಾಗಿತ್ತು. ಮಬ್ಬುಗತ್ತಲು.  ಆ ದೀಪದ ಹತ್ತಿರ ಹುಳಗಳು ಹಾರಾಡುತ್ತಿದ್ದವು. ಇದನ್ನು ನೋಡಿ ಉಪಾಯವೊಂದು ಹೊಳೆಯಿತು. ಆ ಸೋಲಾರ್ ಲೈಟ್ ಅನ್ನು ತೆಗೆದುಕೊಂಡು ಹೋಗಿ ಹೊಲದಲ್ಲಿಟ್ಟು ಅದರ ಕೆಳಗೆ ನೀರಿರುವ ಬಕೇಟ್ ಇಟ್ಟು ಬಂದೆ.

ಬೆಳಗ್ಗೆ ಎದ್ದು ಹೋಗಿ ನೋಡಿದಾಗ ಬೆಳೆಗಳಿಗೆ ಬಾಧೆ ನೀಡುವ  ಕೀಟಗಳು ಬಿದ್ದಿದ್ದವು. ಆ ಎಲ್ಲ ಕೀಟಗಳನ್ನು ತೆಗೆದುಕೊಂಡು ಹೋಗಿ ದಾವಣಗೆರೆ ಜಿಲ್ಲಾ ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಬಸವನಗೌಡ ಅವರಿಗೆ ತೋರಿಸಿದೆ. ಆಗ ಅವರು ಸೋಲರ್ ಬಲ್ಪಿನ ಬಣ್ಣಗಳನ್ನು ಬದಲಾಯಿಸಿ ನೋಡುವಂತೆ ಸಲಹೆ ನೀಡಿದರು.

ಈ ನಂತರ ನಾನು ಬೆಳಗಳೂರಿಗೆ ಬಂದು ಬೇರೆಬೇರೆ ಬಣ್ಣಗಳ ಸೋಲಾರ್ ಲೈಟ್ ತೆಗೆದುಕೊಂಡು ಹೋದೆ.  ಇವುಗಳನ್ನು ಬಳಸಿ ಪ್ರಾಯೋಗಿಕ ಪರೀಕ್ಷೆಗಳನ್ನು ಮಾಡಿದೆ. ಹಳದಿ ಕಲರಿಗೆ ಜೇನುಹುಳುಗಳು ಬಿದ್ದವು. ಇವುಗಳು ರೈತಸ್ನೇಹಿ ಕೀಟಗಳು. ಆದ್ದರಿಂದ ಹಳದಿ ಲೈಟ್ ಉಪಯುಕ್ತವಲ್ಲವೆಂದು ತಿಳಿದೆ. ಆಗ ಮತ್ತೆ ಬೇರೆಬೇರೆ ಕಲರ್ ಲೈಟುಗಳನ್ನು ಬಳಸಿ ಯಾವಬಗೆಯ ಕೀಟಗಳು ಬೀಳುತ್ತವೆ ಎಂದು ಗಮನಿಸತೊಡಗಿದೆ.

ಈ ಹಂತದಲ್ಲಿ ನನಗೆ ಅಲ್ಟ್ರಾ ವಯಲೆಟ್ ಲೈಟ್ ಸಿಕ್ಕಿತ್ತು. ಅದನ್ನು ತಂದು ಪ್ರಾಯೋಗಿಕ ಪರೀಕ್ಷೆ ಮಾಡಿ ನೋಡಿದೆ. ಒಂದು ಸುಸಜ್ಜಿತ ಬೋರ್ಡ್ ಮಾಡಿ, ಬಾಕ್ಸ್ ಮಾಡಿ ಅದಕ್ಕೆ ಅಲ್ಟ್ರಾ ವಯ್ಲೈಟ್ ಅಳವಡಿಸಿದೆ. ಅಚ್ಚುಕಟ್ಟಾಗಿ ಸೋಲರ್ ಟ್ರ್ಯಾಪ್ ಸಿದ್ಧ ಮಾಡಿ ಹೊಲದಲ್ಲಿರಿಸಿದೆ. ಇದು ಬಹಳ ಯಶಸ್ವಿಯಾಯಿತು. ಹೀಗೆ  ಉತ್ತಮ ಗುಣಮಟ್ಟ, ದೀರ್ಘ ಬಾಳಿಕೆಯ ಸೋಲರ್ ಇನ್ ಸೆಕ್ಟ್ ಟ್ರ್ಯಾಪ್ ಸಿದ್ಧವಾಯಿತು.

ಈ ಸುಸಜ್ಜಿತ ಟ್ರ್ಯಾಪ್ ಅನ್ನು ದಾವಣಗೆರೆ ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ಕೃಷಿವಿಜ್ಞಾನಿಗಳೇ ನೋಡಿದರು. ಅದರ ಫಲಿತಾಂಶಗಳನ್ನು ಅಧ್ಯಯನ ಮಾಡಿದರು. ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಬೆಳೆಗಳಿಗೆ ಹಾನಿಕಾರಕವಾದ ಕೀಟಗಳ ನಿಯಂತ್ರಣಕ್ಕೆ ಇದು ಸೂಕ್ತವಾಗಿದೆ ಎಂದು ಹೇಳಿದರು. ಬೇರೆಬೇರೆ ರೈತರಿಗೂ ಕೂಡ ಈ ವಿಚಾರವನ್ನು ತಿಳಿಸಿದರು.

ಈ ಬಳಿಕ ಈ ಟ್ರ್ಯಾಪಿನ ಫಲಿತಾಂಶ ಗಮನಿಸಿದ ಕೃಷಿ ಇಲಾಖೆಯ ದಾವಣಗೆರೆ ಜಿಲ್ಲಾ ಜಂಟಿ ನಿರ್ದೇಶಕರು ನಮ್ಮಿಂದ  ಸೋಲರ್ ಇನ್ ಸೆಕ್ಟ್  ಟ್ರ್ಯಾಪ್ ಗಳನ್ನು ಖರೀದಿ ಮಾಡಿದರು. ಈ ನಂತರ ಕೃಷಿ ಇಲಾಖೆಯ ಬೇರೆಬೇರೆ ಜಿಲ್ಲಾ ಕಚೇರಿಗಳಿಂದಲೂ ಬೇಡಿಕೆ ಬರಲಾರಂಭಿಸಿತು. 19 ಜಿಲ್ಲೆಗಳವರು ನಮ್ಮಿಂದ ಸೋಲಾರ್ ಟ್ರ್ಯಾಪ್ ಗಳನ್ನು ಖರೀದಿ ಮಾಡಿದರು. ಆತ್ಮ ಯೋಜನೆಯಡಿ ಇದರ ಪ್ರಾತ್ಯಕ್ಷಿಕೆಯೂ ನಡೆಯಿತು. ಇಲ್ಲಿಂದ ನಮ್ಮ ಸೋಲರ್ ಇನ್ ಸೆಕ್ಟ್ ಟ್ರ್ಯಾಪಿನ ಯಶಸ್ಸಿನ ಪಯಣ ಶುರುವಾಯಿತು.

ರಾಸಾಯನಿಕ ಕೀಟನಾಶಕಗಳಿಗೆ ಪರ್ಯಾಯ ಬೇಕು ಎಂಬ ಉದ್ದೇಶದಿಂದ ಮಾಡಿದ ಸಾಧನಕ್ಕೆ ಕೃಷಿವಿಜ್ಞಾನಿಗಳ, ಕೃಷಿಕರ ಮನ್ನಣೆ ದೊರೆತಿದೆ. ಇದರ ಜೊತೆಗೆ 6 ದೇಶಗಳಿಗೆ ನಾನು ಮಾಡಿರುವ ಸೋಲರ್ ಪೆಸ್ಟ್ ಕಂಟ್ರೋಲ್ ಟ್ರ್ಯಾಪ್ ಮಾದರಿಗಳು ಹೋಗಿವೆ. ಪ್ರಕೃತಿದತ್ತವಾಗಿ ಕೀಟ ನಿಯಂತ್ರಿಸಿ ಎನ್ನುವುದು ನನ್ನ ಧೈಯವಾಕ್ಯವಾಗಿದೆ.

ಮುಂದುವರಿಯುತ್ತದೆ.

ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ: 9880973218 /  9901928191

LEAVE A REPLY

Please enter your comment!
Please enter your name here