ರಾಜ್ಯದ ಬಹುತೇಕ ಸ್ಥಳಗಳಲ್ಲಿ ಜುಲೈ 23ರಂದು ಮಳೆಯಾಗಿದೆ. ಕರ್ನಾಟಕ ಕರಾವಳಿಯ 12 ಕಡೆಗಳಲ್ಲಿ ಅತೀ ಭಾರಿ ಪ್ರಮಾಣದ ಮಳೆಯಾಗಿದೆ. 15 ಕಡೆ ಭಾರಿ ಪ್ರಮಾಣದ ಮಳೆಯಾಗಿದೆ.
ಕರ್ನಾಟಕದ ಜಿಲ್ಲಾವಾರು ಮಳೆ ಪ್ರಮಾಣದ ಅಂಕಿ ಅಂಶ: ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿ 20 ಸೆಂಟಿ ಮೀಟರ್ ಮಳೆಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆ ಮಾಣಿಯಲ್ಲಿ 16 ಸೆಂಟಿ ಮೀಟರ್, ಉಡುಪಿ ಜಿಲ್ಲೆ ಕೊಲ್ಲೂರಿನಲ್ಲಿ 13 ಸೆಂಟಿ ಮೀಟರ್ ಮಳೆಯಾಗಿದೆ.
ಕರ್ನಾಟಕದ ದಕ್ಷಿಣ ಒಳನಾಡಿನ ಹತ್ತು ಕಡೆಗಳಲ್ಲಿ ಅತೀ ಭಾರಿ ಮಳೆ, 9 ಕಡೆಗಳಲ್ಲಿ ಭಾರಿ ಮಳೆಯಾಗಿದೆ. ಕೊಡಗು ಜಿಲ್ಲೆ ಭಾಗಮಂಡಲದಲ್ಲಿ 20 ಸೆಂಟಿ ಮೀಟರ್ ಮಳೆ, ಶಿವಮೊಗ್ಗ ಜಿಲ್ಲೆ ಕುಂಚನಕಟ್ಟೆಯಲ್ಲಿ 14 ಸೆಂಟಿ ಮೀಟರ್, ಚಿಕ್ಕಮಗಳೂರು ಜಿಲ್ಲೆ ಕಮ್ಮರಡಿ, ಕೊಪ್ಪದಲ್ಲಿ ತಲಾ 13 ಸೆಂಟಿ ಮೀಟರ್ ಮಳೆಯಾಗಿದೆ.
ಕರ್ನಾಟಕದ ಉತ್ತರ ಒಳನಾಡಿನಲ್ಲಿ ಎರಡು ಕಡೆ ಭಾರಿ ಮಳೆಯಾಗಿದೆ. ಬೆಳಗಾವಿ ಜಿಲ್ಲೆ ರೊಂಡದಲ್ಲಿ 10 ಸೆಂಟಿ ಮೀಟರ್, ಬೆಳಗಾವಿಯಲ್ಲಿ 8 ಸೆಂಟಿ ಮೀಟರ್ ಮಳೆಯಾಗಿದೆ.
ಕರ್ನಾಟಕ ರಾಜ್ಯದಲ್ಲಿ ಜೂನ್ 01 ರಿಂದ ಇಂದಿನ ತನಕ ಕರ್ನಾಟಕ ರಾಜ್ಯದಲ್ಲಿ ವಾಡಿಕೆ ಮಳೆಗಿಂತ ಶೇಕಡ 04ರಷ್ಟು ಕೊರತೆಯಾಗಿದೆ. ವಾಡಿಕೆಯಂತೆ 40 ಸೆಂಟಿ ಮೀಟರ್ ಮಳೆಯಾಗಬೇಕು. ಆದರೆ ಒಟ್ಟಾರೆ ಆಗಿರುವುದು 38 ಸೆಂಟಿ ಮೀಟರ್. ಆದ್ದರಿಂದ ಮಳೆ ಕೊರತೆ ಶೇಕಡ 04ರಷ್ಟಾಗಿದೆ.
ಉತ್ತರ ಒಳನಾಡಿನಲ್ಲಿ ವಾಡಿಕೆಗಿಂತ ಶೇಕಡ 06 ರಷ್ಟು ಹೆಚ್ಚು ಮಳೆಯಾಗಿದೆ. ವಾಡಿಕೆಯಂತೆ ಜೂನ್ 01 ರಿಂದ ಇಂದಿನ ತನಕ 19 ಸೆಂಟಿ ಮೀಟರ್. ಆದರೆ 21 ಸೆಂಟಿ ಮೀಟರ್ ಪ್ರಮಾಣದಷ್ಟು ಮಳೆಯಾಗಿದೆ.
ದಕ್ಷಿಣ ಒಳನಾಡಿನಲ್ಲಿ ಮಳೆ ಕೊರತೆ ಶೇಕಡ 15ರಷ್ಟು ಇದೆ. ಆಗಬೇಕಿದ್ದ ಮಳೆ ಪ್ರಮಾಣ 30 ಸೆಂಟಿ ಮೀಟರ್, ಆದರೆ ಆಗಿದ್ದು 26 ಸೆಂಟಿ ಮೀಟರ್ ಮಾತ್ರ.
ಇಡೀ ರಾಜ್ಯದಲ್ಲಿ ಚಿತ್ರದುರ್ಗ ಜಿಲ್ಲೆಯಲ್ಲಿ ವಾಡಿಕೆಗಿಂತ ಶೇಕಡ 60 ರಷ್ಟು ಅತ್ಯಧಿಕ ಮಳೆಯಾಗಿದೆ. ಬೀದರ್, ಹಾವೇರಿ, ಕಲ್ಬುರ್ಗಿ, ದಾವಣಗೆರೆ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ.
ಕರ್ನಾಟಕದ 12 ಜಿಲ್ಲೆಗಳಲ್ಲಿ ವಾಡಿಕೆ ಪ್ರಮಾಣದ ಮಳೆಯಾಗಿದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಬಳ್ಳಾರಿ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಮಗಳೂರು, ಮಂಡ್ಯ, ಮೈಸೂರು, ಶಿವಮೊಗ್ಗ ಮತ್ತು ತುಮಕೂರು.
ಕರ್ನಾಟಕದ 13 ಜಿಲ್ಲೆಗಳಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿದೆ. ಈ ಮುಂದೆ ಪ್ರಸ್ತಾಪಿಸಿರುವ ಜಿಲ್ಲೆಗಳಲ್ಲಿ ಮಳೆ ಕೊರತೆ ಶೇಕಡವಾರು ಪ್ರಮಾಣದಲ್ಲಿ ಹೆಚ್ಚಾಗಿರುವುದು ಗಮನಾರ್ಹ. ಕೊಡಗು, ರಾಮನಗರ, ಹಾಸನ ಮತ್ತು ವಿಜಯಪುರ. ಕೊಡಗಿನಲ್ಲಿ ಶೇಕಡ 40 ರಷ್ಟು ಮಳೆ ಕೊರತೆಯಾಗಿದೆ. ರಾಮನಗರದಲ್ಲಿ ಮಳೆ ಕೊರತೆ ಶೇಕಡ 46ರಷ್ಟು ಇದೆ. ಹಾಸನ ಮತ್ತು ವಿಜಯಪುರದಲ್ಲಿ ಇದು ಶೇಕಡ 29ರಷ್ಟು ಇದೆ.
ಬೆಂಗಳೂರು ನಗರದಲ್ಲಿ ವಾಡಿಕೆಗಿಂತ ಶೇಕಡ 12 ರಷ್ಟು ಹೆಚ್ಚು ಮಳೆಯಾಗಿದೆ. ಇಲ್ಲಿಯ ತನಕ ಆಗಬೇಕಿದ್ದ ಮಳೆ ಪ್ರಮಾಣ 15 ಸೆಂಟಿ ಮೀಟರ್. ಆದರೆ 19 ಸೆಂಟಿ ಮೀಟರಿನಷ್ಟು ಮಳೆಯಾಗಿದೆ.
ಹವಾಮಾನ ಮುನ್ಸೂಚನೆ
ಇಂದು 20 ಡಿಗ್ರಿ ಉತ್ತರ ಅಕ್ಷಾಂಶದಲ್ಲಿ ಸಮುದ್ರ ಮಟ್ಟಕ್ಕಿಂತ 5.8 ಕಿಲೋ ಮೀಟರ್ ಎತ್ತರದಲ್ಲಿ ಗಾಳಿ ದಿಕ್ಕಿನ ಬದಲಾವಣೆ ಕಾಣಿಸುತ್ತಿದೆ. ಇದರ ಪ್ರಭಾವದಿಂದ ಉತ್ತರ ಒಳನಾಡಿನ ಒಂದೆರಡು ಕಡೆಗಳಲ್ಲಿ ಭಾರಿಮಳೆಯಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಭಾರತೀಯ ಹವಾಮಾನ ಇಲಾಖೆ ಇಂದಿನಿಂದ ಜುಲೈ 26ರವರೆಗೆ ಯೆಲ್ಲೋ ಅಲರ್ಟ್ ಘೋಷಿಸಿದೆ.
ಉತ್ತರ ಕನ್ನಡ, ದಕ್ಷಿಣ ಕನ್ನಡ ಜಿಲ್ಲೆಗಳ ಕೆಲವೆಡೆ 20 ಸೆಂಟಿ ಮೀಟರಿಗಿಂತ ಹೆಚ್ಚು ಮಳೆಯಾಗುವ ಸಾಧ್ಯತೆಗಳಿರುವುದರಿಂದ ಕರ್ನಾಟಕ ಕರಾವಳಿ ಪ್ರದೇಶದಲ್ಲಿ ರೆಡ್ ಅಲರ್ಟ್ ಘೋಷಣೆಯಾಗಿದೆ. ನಾಳೆ ಮತ್ತು ನಾಳಿದ್ದು ಅಂದರೆ ಜುಲೈ 25, 26 ರಂದು ರಾಜ್ಯದ ಕರಾವಳಿಯ ಎಲ್ಲ ಜಿಲ್ಲೆಗಳಿಗೂ ಆರೆಂಜ್ ಅಲರ್ಟ್ ಘೊಷಣೆಯಾಗಿದೆ.
ದಕ್ಷಿಣ ಒಳನಾಡಿಗೆ ಇಂದು ಆರೆಂಜ್ ಅಲರ್ಟ್ ಘೋಷಣೆಯಾಗಿದೆ. ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಕೊಡಗು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಅನ್ವಯವಾಗುತ್ತದೆ. ಹಾಸನಕ್ಕೆ ಯೆಲ್ಲೋ ಆಲರ್ಟ್ ಘೋಷಣೆಯಾಗಿದೆ. ಮುಂದಿನ ಐದು ದಿನಗಳಲ್ಲಿ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ.