ಗೊಬ್ಬರದಗಿಡ ಬಳಸಿ , ಇಲಿ ಹೆಗ್ಗಣ ಕಾಟ ನಿವಾರಿಸಿ !

13

ಇಲಿ ಮತ್ತು ಹೆಗ್ಗಣಗಳು ಮೂಲತಃ ಅನುಮಾನದ ಪ್ರಾಣಿಗಳು. ಉಗ್ರ ವಾಸನೆಯ ವಿಷಗಳನ್ನು ಬೇಗ ಪತ್ತೆಹಚ್ಚಿ ದೂರ ಉಳಿಯುತ್ತವೆ. ಆದ್ದರಿಂದಲೇ ಇಲಿಗಳನ್ನು ಕೊಲ್ಲಲ್ಲು ಉಪಯೋಗಿಸುವ ರಾಸಾಯನಿಕ ವಿಷಗಳು ಅಷ್ಟೊಂದು ಯಶಸ್ವಿಯಾಗುವುದಿಲ್ಲ. ಇದರ ಬದಲಿಗೆ ಗೊಬ್ಬರಗಿಡ ಬಳಸಿ ಇಲಿ – ಹೆಗ್ಗಣಗಳನ್ನು ಸಮರ್ಥವಾಗಿ ನಿಯಂತ್ರಿಸಬಹುದು. ಕೃಷಿಕರೆಲ್ಲರಿಗೂ ಗ್ಲಿರಿಸೀಡಿಯಾ ಸೊಪ್ಪು ಪರಿಚಿತ. ಇದನ್ನು ಗೊಬ್ಬರದಗಿಡ ಎಂದು ಕರೆಯುತ್ತಾರೆ.

ವಾಸ್ತವವಾಗಿ ಈ ಸಸ್ಯವನ್ನು ಗ್ರೀಕ್ ದೇಶದ ಜನರು ಇಲಿ – ಹೆಗ್ಗಣಗಳನ್ನು ನಿಯಂತ್ರಿಸಲು ಬಳಸುತ್ತಿದ್ದರು. ಗ್ರೀಕ್ ಭಾಷೆಯಲ್ಲಿ ಗ್ಲಿರಿಸೀಡಿಯಾ ಎಂದರೆ ಇಲಿನಾಶಕ ಎಂದರ್ಥ. ಇಂಥ ಗುಣ ಹೊಂದಿರುವುದರಿಂದಲೇ ಗೊಬ್ಬರದ ಗಿಡವನ್ನು ಗ್ಲಿರಿಸೀಡಿಯಾ ಎಂದು ಕರೆದರು. ನಿರ್ದಿಷ್ಟ ಪ್ರಮಾಣದ ಅನ್ನ ಮತ್ತು ಗ್ಲಿರಿಸೀಡಿಯಾ ಎಲೆಗಳನ್ನು ಮಿಶ್ರಣ ಮಾಡಿ, ನಾಲ್ಕುದಿನಗಳ ಕಾಲ ಪಾತ್ರೆಯಲ್ಲಿ ಭದ್ರವಾಗಿ ಮುಚ್ಚಿಡಬೇಕು. ಸೊಪ್ಪನ್ನು ಚೆನ್ನಾಗಿ ಅರೆದು ಕೂಡ ಅನ್ನದಲ್ಲಿ ಬೆರೆಸಬಹುದು. ಒಂದೆರಡು ದಿನಗಳಲ್ಲಿಯೇ ಇದರಿಂದ ತೀವ್ರ ಹಳಸಲು ವಾಸನೆ ಬರಲು ಪ್ರಾರಂಭವಾಗುತ್ತದೆ. ನಾಲ್ಕುದಿನಗಳ ಬಳಿಕ ಈ ಮಿಶ್ರಣವನ್ನು ಉಂಡೆಗಳನ್ನಾಗಿ ಮಾಡಿ ಇಲಿ –ಹೆಗ್ಗಣಗಳ ಬಿಲಗಳ ಬಳಿ ಅಥವಾ ಅವುಗಳು ಓಡಾಡುವ ದಾರಿಯಲ್ಲಿ ಇಡಬೇಕು. ಹಳಸಲು ಅನ್ನದ ವಾಸನೆಗೆ ಆಕರ್ಷಿತವಾಗುವ ಇಲಿ – ಹೆಗ್ಗಣಗಳು ಖಂಡಿತವಾಗಿಯೂ ಉಂಡೆಗಳನ್ನು ತಿನ್ನುತ್ತವೆ. ಬಳಿಕ ಅಸ್ವಸ್ಥಗೊಂಡು ಸಾವನ್ನಪ್ಪುತ್ತವೆ.

ಗ್ಲಿರಿಸೀಡಿಯಾ ಸೊಪ್ಪು ಮಿಶ್ರಿತ ಅನ್ನದ ಉಂಡೆಯನ್ನು ಇಲಿ – ಹೆಗ್ಗಣ ತಿಂದ ಲಕ್ಷಣಗಳಿದ್ದು, ಸತ್ತ ಇಲಿಗಳು ಕಾಣಿಸದಿದ್ದರೆ ತುಸು ದೂರ ಸಾಗಿ ಸತ್ತಿರುತ್ತವೆ. ಹಲವು ಬಾರಿ ಪಾಷಾಣ ಬೆರೆಸಿದ ಆಹಾರ ತಿಂದ ಇಲಿ – ಹೆಗ್ಗಣಗಳು ಬದುಕಿ ಉಳಿಯುತ್ತವೆ. ಇದಕ್ಕಾಗಿ ಇವುಗಳು ಮಾಡುವ ತಂತ್ರವೆಂದರೆ ಚೆನ್ನಾಗಿ ನೀರು ಕುಡಿಯುವುದು. ಇದರಿಂದ ಅವುಗಳ ಜೀರ್ಣಾಂಗದ ಮೇಲೆ ವಿಷ ಪರಿಣಾಮಕಾರಿಯಾಗುವುದಿಲ್ಲ. ಆದರೆ ಗ್ಲಿರಿಸೀಡಿಯಾ ಸೇವಿಸಿದ ಇಲಿ – ಹೆಗ್ಗಣಗಳು ನೀರು ಕುಡಿದರೆ ಮತ್ತಷ್ಟು ಬೇಗ ಸಾಯುತ್ತವೆ. ಏಕೆಂದರೆ ಗ್ಲಿರಿಸೀಡಿಯಾ ಅಷ್ಟು ಪರಿಣಾಮಕಾರಿ. ನಾಯಿ, ಕಾಗೆ ಮತ್ತಿತರ ಇನ್ನಿತರ ಪ್ರಾಣಿ-ಪಕ್ಷಿಗಳು ಆಕಸ್ಮಿಕವಾಗಿ ಈ ಉಂಡೆಗಳನ್ನು ತಿಂದರೂ ಸಾಯುವುದಿಲ್ಲ.

ಇದೊಂದು ಬಹು ಅಚ್ಚರಿಯ ವಿಷಯ. ಗ್ಲಿರಿಸೀಡಿಯಾ ಮಿಶ್ರಿತ ಆಹಾರ ಸೇವಿಸುವುದರಿಂದ ಸಾಯುವ ಜೀವಿಗಳೆಂದರೆ ಇಲಿ-ಹೆಗ್ಗಣ, ಅಳಿಲುಗಳು ಮಾತ್ರ. ಇದು ಪ್ರಕೃತಿಯ ಅನೇಕ ವಿಸ್ಮಯಗಳಲ್ಲಿ ಒಂದು. ಗ್ರೀಕ್ ದೇಶದ ಜನ ಇದನ್ನು ಅರಿತು ಬಳಸುತ್ತಾ ಬಂದಿದ್ದಾರೆ. ಇಲಿ – ಹೆಗ್ಗಣಗಳನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುತ್ತಲೂ ಬಂದಿದ್ದಾರೆ.ನೆನಪಿಡಿ: “ಗ್ಲಿರಿಸೀಡಿಯಾ ಸೊಪ್ಪು ಮತ್ತು ಅನ್ನ ನಿರ್ದಿಷ್ಟ ಪ್ರಮಾಣದಲ್ಲಿ ಇರಬೇಕು. ಇದರ ಅಳತೆಯಲ್ಲಿ ವೆತ್ಯಾಸವಾದರೂ ಪರಿಣಾಮವಾಗುವುದಿಲ್ಲ” ಎಂದು ಹಿರಿಯ ಕೃಷಿವಿಜ್ಞಾನಿ ವಿ.ಪಿ. ಹೆಗ್ಡೆ ಹೇಳುತ್ತಾರೆ.

13 COMMENTS

  1. Very good information. Please furnish the right proportion/quantity of rice and leaves of glyricedia to be used to control mice/ bandicoots effectively. Thank you.

LEAVE A REPLY

Please enter your comment!
Please enter your name here