ಸೊಪ್ಪಿನಿಂದ ಸುಖಮಯ ಬದುಕು

ಕಾಯಿ-ಪಲ್ಲೆ ಬೆಳೆಗೆ ಇಡಿ ಗ್ರಾಮದ ಜನರ ಬದುಕನ್ನು ಹಸನಗೊಳಿಸುವ ಶಕ್ತಿ ಅಡಗಿದೆ. ಕೃಷಿಯಿಂದ ಕೈ ಸುಟ್ಟುಕೊಂಡು ಸಾಕಪ್ಪ ಕೃಷಿಯ ಸಹವಾಸ ಎನ್ನುವರಿಗೆಲ್ಲ ತಾಜಾ ಪಾಠವಾಗಿದೆ.  ಜೊತೆಗೆ  ಇವರ ಹೊಲದಲ್ಲಿನ ಬೆಳೆಗಳು ಕಾರಣಾಂತರಗಳಿಂದ ಕೈಕೊಟ್ಟರು ಇದು ಮಾತ್ರ ಇವರಿಗೆ ಕೈ ಬಿಟ್ಟಿಲ್ಲ. ಜೊತೆಗೆ  ಮಹಿಳೆಗೂ ಅರೆಕಾಲಿಕ ಉದ್ಯೋಗ ನೀಡುತ್ತಿದೆ. ಇದರಿಂದಾಗಿಯೇ  ಈ ಗ್ರಾಮದಲ್ಲಿ ಕೃಷಿಯಿಂದ ಬಸವಳಿದು ಹೋದೆ ಎನ್ನುವ ರೈತರಿಲ್ಲ.

0
ಲೇಖಕರು: ಸ್ವರೂಪಾನಂದ.ಎಂ.ಕೊಟ್ಟೂರು

ಕಾಯಿಪಲ್ಲೆಗಳನ್ನೇ ಪ್ರಮುಖವಾಗಿ ಬೆಳೆಯುವ ಪದ್ದತಿ ಕೃಷಿ ಕ್ಷೇತ್ರದಲ್ಲಿ ಇತ್ತೀಚೆಗೆ ಪ್ರಚಲಿತದಲ್ಲಿದೆ. ಮೊದಲೆಲ್ಲಾ ಬಹುತೇಕ ರೈತರು ತಮ್ಮ ಬೆಳೆಗಳ ನಡುವೆ ಅದರಲ್ಲಿಯೂ ಮುಖ್ಯವಾಗಿ ಅರಕಲು ಆಗಿದ್ದ ಜಾಗದಲ್ಲಿ ಸೊಪ್ಪು, ತರಕಾರಿ ಬೀಜಗಳನ್ನು ನೆಟ್ಟು ಫಲ ಉಣ್ಣುವುದನ್ನು ಕಂಡಿದ್ದೇವೆ.  ಇನ್ನೂ ಕೆಲವರು ಮನೆ ಸಲುವಾಗಿ ಮಡಿ ಮಾಡಿ ಕಾಯಿ-ಪಲ್ಲೆಗಳನ್ನು ಬೆಳೆಯುವುದು ಸಹಜ. ಆದರೆ ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲ್ಲೂಕಿನಿಂದ ಕೂಗಳೆತೆಯ ದೂರದಲ್ಲಿರುವ ಕೆರೆಕಾವಲರಹಟ್ಟಿಯ ಕೃಷಿಕರಿಗೆ ಮಾತ್ರ ಇದು ಕೃಷಿಯಲ್ಲಿ ಲಾಭಂಶವನ್ನು ನಿರ್ಧರಿಸುವ ಬೆಳೆಯಾಗಿಬಿಟ್ಟಿದೆ.

ಹೊಲಗಳಲ್ಲಿ ಮಡಿ ಮಾಡಿ ಸೊಪ್ಪು ತರಕಾರಿಗಳನ್ನು ಬೆಳೆದಿರುವುದು

ಈ ಪದ್ದತಿಯನ್ನು ಕಳೆದ ಮೂರು ದಶಕಗಳಿಂದ ಮಾಡುತ್ತಾ ಬಂದಿರುವುದು ವಿಶೇಷವಾಗಿದೆ. ಇಲ್ಲಿನ ರೈತರು ಎಕರೆಗೆ ಕನಿಷ್ಠ ಪಕ್ಷ ಕಾಲು ಎಕ್ಕರೆಯನ್ನು ಸೊಪ್ಪು-ತರಕಾರಿಯನ್ನು ಬೆಳೆಯಲು ಮೀಸಲಿಡುತ್ತಾರೆ. ಅರ್ಧ ಎಕ್ಕರೆಯನ್ನೂ ದಾಟಿಸಿದ ರೈತರಿಗೇನು ಇಲ್ಲಿ ಕಮ್ಮಿಯಿಲ್ಲ. ಒಟ್ಟಾರೆಯಾಗಿ ಕೆರೆಕಾವಲರಹಟ್ಟಿಯ ಕೃಷಿ ಜಮೀನುಗಳಲ್ಲಿ ಸೊಪ್ಪು-ತರಕಾರಿಯ ಹೊರತಾದ ಫಸಲನ್ನು ಕಾಣಲು ಸಾಧ್ಯವಿಲ್ಲ. ಇವರಿಗೆಲ್ಲ ವ್ಯವಸಾಯವೇ ಪ್ರಧಾನವಾದರೂ ಕಾಯಿ-ಪಲ್ಲೆ ಬೆಳೆಗೆ ಮೊದಲ ಅದ್ಯತೆ.

ಇದಕ್ಕೆ ಕಾರಣ ಇಷ್ಟೆ, ನಂಬಿಕೊಂಡ ಅಂತರ್ಜಲ ಕುಸಿಯುತ್ತಿದೆ. ಬೇರೆ ಬೆಳೆಗಳನ್ನು ಬೆಳೆದರೆ ನೀರಿನ ಅಭಾವ ತಲೆದೋರುತ್ತದೆ. ಇದರಿಂದ ಕಾಯಿ-ಪಲ್ಲೆ ಬೆಳೆಯುವ ಕೆಲಸ ದಿನೆ-ದಿನೆ ಹೆಚ್ಚುತ್ತಾ ಸಾಗಿದೆ. ಮಡಿಗಳಿಗೆ ನೀರು ಉಣಿಸಲು ಅಲ್ಪ ನೀರು ಸಾಕಾಗುತ್ತದೆ. ಜೊತೆಗೆ ಸೊಪ್ಪು ತರಕಾರಿ ಬೆಳೆಯುವುದಕ್ಕೆ ಕೂಲಿಗಾರರ ಅಗತ್ಯತೆಯೂ ಬೀಳುವುದಿಲ್ಲ. ಮನೆಯ ಸದಸ್ಯರೇ ಅಚ್ಚುಕಟ್ಟಾಗಿ ಸೊಪ್ಪು-ತರಕಾರಿಯನ್ನು ಸೊಂಪಾಗಿ ಬೆಳೆಯಲು ಸಾಧ್ಯವಿದೆ.

ಎಲ್ಲ ದೃಷ್ಠಿಯಿಂದಲೂ ಇದು ರೈತರಿಗೆ ಸುಲಭ ಮಾರ್ಗವಾಗಿದ್ದರಿಂದ ಇದರ ಕಡೆ ವಾಲುತ್ತಿರುವುದು ತುಸು ಹೆಚ್ಚಾಗಿಯೇ ಇದೆ. ಜೊತೆಗೆ ಹೊಲ ಅಂದಮೇಲೆ ಬದುವಿನ ಮೇಲೆ ಮರ-ಗಿಡಗಳು ಸಹಜವಾಗಿ ಬೆಳೆದಿರುತ್ತದೆ. ಇದರ ನೆರಳಲ್ಲಿ ಬೆಳೆ ಬೆಳೆಯುವುದು ತುಸು ಕಷ್ಟವೇ. ಆದರೆ ಈ ಜಾಗದಲ್ಲಿ ಸೊಪ್ಪಿನ ಮಡಿಗಳನ್ನು ಮಾಡಿ ಬಂಪರ್ ಬೆಳೆಯನ್ನು ತೆಗೆಯಬಹುದು.

ಈ ಗ್ರಾಮದಲ್ಲಿ ಗಂಡು-ಹೆಣ್ಣು ಕೂಡಿ ದುಡಿದು ಬದುಕು ಕಟ್ಟಿಕೊಳ್ಳುವ ಕಾರ್ಯ ಸಾಗಿದೆ. ಕೃಷಿಯಲ್ಲಿ ತೋರಿಸುವ ಬುದ್ದಿವಂತಿಕೆ, ಹಾಕುವ ಶ್ರಮ, ಜೊತೆಗೆ ಮಾರುಕಟ್ಟೆಯ ಮೇಲಿನ ಸಾಧಿಸಿದ ಹಿಡಿತ ಇವರ ವ್ಯವಸಾಯದ ಬದುಕನ್ನೇ ಹಸನಾಗಿಸಿಬಿಟ್ಟಿದೆ. ಇವರಿಂದಲೇ ಸುತ್ತಲಿನ ಹತ್ತು ಊರುಗಳಿಗೆ ವಿಷರಹಿತ, ತಾಜಾ ಸೊಪ್ಪು-ತರಕಾರಿಗಳ ಸರಬರಾಜು ಆಗುತ್ತಿದೆ.

ಮುಂಜಾನೆ ಪಟ್ಟಣ ಪ್ರದೇಶಗಳಿಗೆ ಮಾರಾಟ ಮಾಡಲು ಹೊರಟಿರುವ ಮಹಿಳೆಯರ ದಂಡು

ಹೀಗೆ ಬೆಳೆದ ಕಾಯಿಪಲ್ಲೆಗಳನ್ನು ಈ ಗ್ರಾಮಸ್ಥರು ಕೂಡ್ಲಿಗಿ ಸೇರಿದಂತೆ ಸುತ್ತಮುತ್ತಲಿನ ಊರುಗಳಲ್ಲಿ ಮಾರುತ್ತಾರೆ. ಇದರಲ್ಲಿ ಹೆಂಗಸರು ಮತ್ತು ಮಕ್ಕಳದ್ದೇ ಅಧಿಕ ಪಾಲು. ಹಣದಿಂದ ಮನೆಯ ಬಾಳ್ವೆ ತೂಗಿಸುವುದಲ್ಲದೆ, ಮಹಿಳೆಯರು ತಮ್ಮ ಸ್ರ್ತೀ ಶಕ್ತಿ ಗುಂಪುಗಳನ್ನು ಮಾಡಿಕೊಂಡು ಹಣವನ್ನು ಉಳಿತಾಯ ಮಾಡುವ ಮಾರ್ಗಗಳತ್ತ ಮನಸ್ಸು ಹರಿಬಿಡುತ್ತಾರೆ. ಇವರೊಂದಿಗೆ ತೆರಳಿದ್ದ ಮಕ್ಕಳು ಸಹ ತಮ್ಮ ಶಿಕ್ಷಣದ ಅಗತ್ಯಗಳಿಗೆ ತಾವೇ ಕಷ್ಟಪಟ್ಟು ಹಣ ಹೊಂದಿಸಿಕೊಳ್ಳುತ್ತಾರೆ. ಇದು ಮಕ್ಕಳಲ್ಲಿ ಶ್ರಮ ಮತ್ತು ಅದರಿಂದ ಬರುವ ಫಲದ ಬಗ್ಗೆ ಪಾಠ ಕಲಿಸುತ್ತದೆ.

ಮಹಿಳೆಯರಿಗೆ ಹಣ ಉಳಿತಾಯದ ಬಗ್ಗೆ ಜಾಣ್ಮೆ ಮೂಡಿಸುವುದಲ್ಲದೆ ಮನೆಯ ಬಾಳ್ವೆಗೆ, ಸಣ್ಣ-ಪುಟ್ಟ ಖರ್ಚುವೆಚ್ಚಗಳನ್ನು ತೂಗಿಸಿಕೊಂಡು ಹೋಗುವಷ್ಟು ಶಕ್ತರನ್ನಾಗಿ ಮಾಡುತ್ತದೆ. ಅದೇನೆ ಇರಲಿ ಕಾಯಿ-ಪಲ್ಲೆ ಬೆಳೆಗೆ ಇಡಿ ಗ್ರಾಮದ ಜನರ ಬದುಕನ್ನು ಹಸನಗೊಳಿಸುವ ಶಕ್ತಿ ಅಡಗಿದೆ. ಕೃಷಿಯಿಂದ ಕೈ ಸುಟ್ಟುಕೊಂಡು ಸಾಕಪ್ಪ ಕೃಷಿಯ ಸಹವಾಸ ಎನ್ನುವರಿಗೆಲ್ಲ ತಾಜಾ ಪಾಠವಾಗಿದೆ.  ಜೊತೆಗೆ  ಇವರ ಹೊಲದಲ್ಲಿನ ಬೆಳೆಗಳು ಕಾರಣಾಂತರಗಳಿಂದ ಕೈಕೊಟ್ಟರು ಇದು ಮಾತ್ರ ಇವರಿಗೆ ಕೈ ಬಿಟ್ಟಿಲ್ಲ. ಜೊತೆಗೆ  ಮಹಿಳೆಗೂ ಅರೆಕಾಲಿಕ ಉದ್ಯೋಗ ನೀಡುತ್ತಿದೆ. ಇದರಿಂದಾಗಿಯೇ  ಈ ಗ್ರಾಮದಲ್ಲಿ ಕೃಷಿಯಿಂದ ಬಸವಳಿದು ಹೋದೆ ಎನ್ನುವ ರೈತರಿಲ್ಲ.

LEAVE A REPLY

Please enter your comment!
Please enter your name here