ಬೆಂಗಳೂರು: (ಜಿಕೆವಿಕೆ – ಕೃಷಿಮೇಳ) ನವೆಂಬರ್ 05: ಕೃಷಿ ವಿಶ್ವವಿದ್ಯಾಲಯ ಬೆಂಗಳೂರಿನ ಗಾಂಧಿ ವಿಜ್ಞಾನ ಕೇಂದ್ರದಲ್ಲಿ ನಡೆಯುತ್ತಿರುವ ಕೃಷಿಮೇಳಕ್ಕೆ ದಾಖಲೆಯ ಜನಸಾಗರವೇ ಹರಿದು ಬಂದಿದೆ.
ಇಂದು ಕೃಷಿಮೇಳದ 3ನೇ ದಿನ. ಇಂದು ಬೆಳಗ್ಗೆಯಿಂದ ಸಂಜೆ ತನಕ 7.16 ಲಕ್ಷ ಮಂದಿ ಕೃಷಿಮೇಳಕ್ಕೆ ಬಂದು ಕೃಷಿ ವೈವಿಧಯ ಕಣ್ತುಂಬಿಕೊಂಡರು. ಹಿಂದೆಂದೂ ಈ ಪ್ರಮಾಣದಲ್ಲಿ ಸಂದರ್ಶಕರು ಬೆಂಗಳಳೂರು ಕೃಷಿಮೇಳಕ್ಕೆ ಆಗಮಿಸಿರಲಿಲ್ಲ. ಆದ್ದರಿಂದ ಇದು ದಾಖಲೆಯೆನ್ನಿಸಿದೆ ಎಂದು ವಿಶ್ವವಿದ್ಯಾಲಯದ ಹಿರಿಯ ವಾರ್ತಾತಜ್ಞ ಡಾ. ಕೆ. ಶಿವರಾಮು ಅವರು “ಅಗ್ರಿಕಲ್ಚರ್ ಇಂಡಿಯಾ” ಪ್ರತಿನಿಧಿಗೆ ತಿಳಿಸಿದರು.
ಹಲವಾರು ತಾಯಂದಿರು ತಮ್ಮತಮ್ಮ ಹಸುಗೂಸುಗಳು, ಪುಟ್ಟ ಮಕ್ಕಳನ್ನು ಕರೆದುಕೊಂಡು ಮೇಳಕ್ಕೆ ಭೇಟಿ ನೀಡಿದ್ದು ಗಮನ ಸೆಳೆಯಿತು. ಅಪಾರ ಸಂಖ್ಯೆಯಲ್ಲಿ ಬಂದಿದ್ದ ಕೃಷಿಕರು ತಮಗೆ ಅಗತ್ಯವಿರುವ ಕೃಷಿ ಸಲಕರಣೆಗಳು, ಬಿತ್ತನೆಬೀಜಗಳನ್ನು ರಿಯಾಯತಿ ದರದಲ್ಲಿ ಖರೀದಿಸಿ ಮೇಳದ ಆಹಾರ ಮಳಿಗೆಯ ವಿಶೇಷ ಆಕರ್ಷಣೆಯಾದ ಮುದ್ದೆ ಊಟ ಸವಿದು ಉತ್ತಮ ವ್ಯವಸ್ಥೆ ಬಗ್ಗೆ ಶ್ಲಾಘಿಸುತ್ತಿದದ್ದು ಕಂಡು ಬಂತು.
ಇಂದು 12, 500 ಮಂದಿ ಕೃಷಿ ವಿಶ್ವವಿದ್ಯಾಲಯದ ರಿಯಾಯತಿ ದರದ ಭೀಜನಾಲಯಕ್ಕೆ ಆಗಮಿಸಿ ಸಾಂಪ್ರದಾಯಿಕ ಶೈಲಿಯ ಬಿಸಿಬಿಸಿ ಆಹಾರ ಸವಿದರು. ಇಷ್ಟೊಂದು ಸಂಖ್ಯೆಯಲ್ಲಿ ಆಗಮಿಸಿದರೂ ಎಲ್ಲೆಯೂ ತಳ್ಳಾಟ, ಗದ್ದಲ ನಡೆಯದೇ ಸರದಿಯಲ್ಲಿ ಬಂದು ಆಹಾರ ಸವಿದು ತೆರಳುತ್ತಿದ್ದರು.
ಜಾನುವಾರು ಮಳಿಗೆಯಲ್ಲಿದ್ದ ವೈವಿಧ್ಯ ತಳಿಗಳ ಕೋಳಿಗಳು, ಮೇಕೆ, ಕುರಿಗಳು, ಡ್ರೋನ್ ಬಳಸಿ ಕೃಷಿಕಾರ್ಯ, ಸೆನ್ಸಾರ್ ಅವಲಂಬಿತ ವೈಜ್ಞಾನಿಕ ಕೃಷಿ, ಸೂರ್ಯಕಾಂತಿಯ ತಾಕು ಜನರ ಗಮನ ಸೆಳೆದಿದ್ದವು. ಎರಡು ವರ್ಷದ ನಂತರ ಅಪಾರ ಸಂಖ್ಯೆಯ ಆಸಕ್ತರನ್ನು ಕಂಡು ಮಳಿಗೆಗಳನ್ನು ಹಾಕಿದ್ದ ಉದ್ಯಮಿಗಳು ಸಂತಸಗೊಂಡರು. ಇಂದು ಕೃಷಿಮೇಳದಲ್ಲಿ 2.85 ಕೋಟಿಯ ವಹಿವಾಟಾಗಿದೆ
ಕೃಷಿ ವಿಶ್ವಿದ್ಯಾಲಯ ಕೃಷಿಕರಿಗೆ ಸಲಹೆ ನೀಡಲು ಸ್ಥಾಪಿಸಿರುವ ಸಲಹಾ ಕೇಂದ್ರಕ್ಕೆ 684 ರೈತರು ಭೇಟಿ ನೀಡಿ ತಮ್ಮತಮ್ಮ ಕೃಷಿ ಸಮಸ್ಯೆಗಳಿಗೆ ಪರಿಹಾರಗಳನ್ನು ತಿಳಿದುಕೊಂಡರು.
ಮೊದಲನೇ ದಿನ ನಿರಂತರ ಮಳೆ ಸುರಿದ್ದಿದ್ದು ಹೆಚ್ಚಿನ ಜನರ ಬರುವಿಕೆಗೆ ಅಡ್ಡಿಯಾಗಿತ್ತು. ಎರಡನೇ ದಿನ ಪರಿಸ್ಥಿತಿ ಸುಧಾರಿಸಿತು. ಇಂದು ದಿನವಿಡೀ ಬಿಸಿಲಿತ್ತು. ಇದು ಕೂಡ ಹೆಚ್ಚಿನ ಜನರ ಆಗಮನಕ್ಕೆ ಕಾರಣವಾಗಿದೆ. ನಾಳೆ ವಾರಾಂತ್ಯ ದಿನ ಮತ್ತಷ್ಟೂ ಆಸಕ್ತರು ಆಗಮಿಸುವ ನಿರೀಕ್ಷೆಯಿದೆ.