ಆಸ್ಪತ್ರೆ ಬೇಕೇ ಆರೋಗ್ಯ ಬೇಕೇ ?

0
ಡಾ. ನಾಗರಾಜ್, ಕೃಷಿಯಂತ್ರ ವಿನ್ಯಾಸಗಾರರು, ತಯಾರಕರು

ಇಂದೆಂಥಾ ವಿಚಿತ್ರ ಪ್ರಶ್ನೆಗಳು ಎಂದುಕೊಳ್ಳಬೇಡಿ ! ಆಸ್ಪತ್ರೆ ಮತ್ತು ಆರೋಗ್ಯ ಒಂದಕ್ಕೊಂದು ಪೂರಕವಲ್ಲವೇ ಎಂಬ ಪ್ರಶ್ನೆಯೂ ನಿಮ್ಮಿಂದ ರೊಯ್ಯನೇ ಬರಬಹುದು. ಅನಾರೋಗ್ಯ ಉಂಟಾದಾಗ ಆಸ್ಪತ್ರೆಯೇ ಹೊರತು ; ಆಸ್ಪತ್ರೆಯಿಂದ ಆರೋಗ್ಯವಲ್ಲ ಅಲ್ಲವೇ ? ಅದು ಸರಿ ಈ ಅನಾರೋಗ್ಯ ಎಂಬುದು ಏಕೆ ಬರುತ್ತದೆ ಎಂಬುದು ಮೂಲಭೂತ ಪ್ರಶ್ನೆಯಲ್ಲವೇ ?

ನಾನೋರ್ವ ಕೃಷಿಯಂತ್ರ ಅಭಿವೃದ್ಧಿಗಾರ ಜೊತೆಗೆ ಕೃಷಿಕ ಸಹ. ಬೆಂಗಳೂರು ಸಮೀಪ ಇರುವ ನೆಲಮಂಗಲ ನಿವಾಸಿ. ಕೇವಲ 50 ವರ್ಷದ ಹಿಂದೆ ಇಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರವೊಂದಿತ್ತು. ನರ್ಸಿಂಗ್ ಹೋಮ್ ಎಬುದು ಇರಲಿಲ್ಲ. ಆರೋಗ್ಯಕ್ಕೆ ಸಂಬಂಧಿಸಿದಂತೆ ಏನಾದರೊಂದು ತುರ್ತು ಪರಿಸ್ಥಿತಿ ಬಂದರೆ ಅನುಕೂಲಸ್ಥರು ಬೆಂಗಳೂರಿಗೆ ಧಾವಿಸುತ್ತಿದ್ದರು. ಅಲ್ಲಿಯೂ ಬೆರಳೆಣಿಕೆಯಷ್ಟು ನರ್ಸಿಂಗ್ ಹೋಮ್ ಗಳಿದ್ದವು. ಹೆಚ್ಚಿನ ಶ್ರೀಮಂತರು ಸಹ ಸಹ ಸರ್ಕಾರಿ ಆಸ್ಪತ್ರೆಗಳನ್ನುಅವಲಂಬಿಸಿದ್ದರು.

ಇಂದು ನೆಲಮಂಗಲದಲ್ಲಿ ಸಾಕಷ್ಟು ನರ್ಸಿಂಗ್ ಹೋಮ್ ಗಳಾಗಿವೆ. ಇದರಲ್ಲಿ ಹೈಟೆಕ್ ನರ್ಸಿಂಗ್ ಹೋಮ್ ಗಳು ಬಂದಿವೆ. ಬೆಂಗಳೂರಿನಲ್ಲಂತೂ ಎಣಿಸಲಾರದಷ್ಟು ಸಂಖ್ಯೆಯಲ್ಲಿವೆ. ಹೈಟೆಕ್ ಆಸ್ಪತ್ರೆಗಳೂ ಎಣಿಸಲಾರದಷ್ಟು ಸಂಖ್ಯೆಯಲ್ಲಿವೆ. ಇದು ನೆಲಮಂಗಲದ ಪರಿಸ್ಥಿತಿ ಮಾತ್ರವಲ್ಲ ; ಎಲ್ಲಊರುಗಳಲ್ಲಿ ಉಂಟಾಗಿರುವ ಬೆಳವಣಿಗೆ !

ಜನಸಂಖ್ಯೆ ಜಾಸ್ತಿಯಾಗಿದೆ. ಆದ್ದರಿಂದ ಆಸ್ಪತ್ರೆಗಳೂ ಜಾಸ್ತಿಯಾಗಿವೆ ಎಂದು ನೀವು ಹೇಳಬಹುದು. ಜನಸಮಖ್ಯೆ ಜಾಸ್ತಿಯಾದರೆ ಕಾಯಿಲೆಗಳೂ ಹೆಚ್ಚಾಗಬೇಕೆಂದು ನಿಯಮ ಇದೆಯೇ ? ಹಿಂದೆ ಸಕ್ಕರೆ ಕಾಯಿಲೆ ಇರುವ ವ್ಯಕ್ತಿಗಳನ್ನು ಹುಡುಕಬೇಕಿತ್ತು. ಒಂದು ಊರಿನಲ್ಲಿ ಒಬ್ಬರೋ ಇಬ್ಬರೋ ಇದ್ದರೆ ಹೆಚ್ಚು. ಅದು ಶ್ರೀಮಂತರಿಗೆ ಬರುವ ಕಾಯಿಲೆ ಎಂದೇ ಹೆಸರಾಗಿತ್ತು. ಇಂದು ಪ್ರತಿಮನೆಯಲ್ಲಿ ಒಬ್ಬರೋ ಇಬ್ಬರೋ ಮಧುಮೇಹ ಬಂದವರಿದ್ದಾರೆ. ಸಕ್ಕರೆ ಕಾಯಿಲೆ ಬಡವ ಬಲ್ಲಿದರು ಎಂಬ ತಾರತಮ್ಯವನ್ನು ಮಾಡುತ್ತಿರಲಿಲ್ಲ.

ಹಿಂದೆ ಹೃದ್ರೋಗಗಳು ಇರಲೇ ಇಲ್ಲ ಎಂದು ಹೇಳಿದರೆ ಉತ್ಪ್ರೇಕ್ಷೆಯಾದೀತು. ಆದರೆ ತೀರಾ ಅದು ತೀರಾ ಅಪರೂಪ. ಇತ್ತೀಚಿನ ಮೂರು ದಶಕಗಳಿಂದ ಹೃದ್ರೋಗಗಳು ಸಾಮಾನ್ಯ ಎಂಬಂತಾಗಿದೆ. ಸಕ್ಕರೆ ಕಾಯಿಲೆ ಬಂದರೆ ಅದರ ಹಿಂದೆಯೇ ರಕ್ತದೊತ್ತಡ. ಈ ಬಿಪಿ, ಶುಗರ್ ಅನ್ನು ಸಮತೋಲನದಲ್ಲಿಡುವುದರಲ್ಲಿಯೇ ಮನುಷ್ಯರು ಸುಸ್ತಾಗುತ್ತಿದ್ದಾರೆ.

ಏಕೆ ಹೀಗೆ ಕಾಯಿಲೆಗಳ ಸಂಖ್ಯೆ ಹೆಚ್ಚಾಯಿತು ಎಂದು ನಾನು ನಿತ್ಯವೂ ಚಿಂತಿಸುತ್ತಿರುತ್ತೇನೆ. ಆಗ ನನಗನ್ನಿಸುವುದು ನಮ್ಮ ಆಹಾರದ ಗುಣಮಟ್ಟ ಕುಸಿದಿದೆ. ಕುಸಿದಿದೆ ಎನ್ನುವುದಕ್ಕಿಂತಲೂ ಪಾತಾಳಕ್ಕೆ ಇಳಿದಿದೆ ಎಂದರೂ ಸರಿಯಾದೀತು.

ಅದೇ ಭೂಮಿ, ಅದೇ ಮಣ್ಣು, ಅದೇ ಗಾಳಿ, ಅದೇ ನೀರು ಇರುವಾಗ ಆಹಾರದ ಗುಣಮಟ್ಟ ಕುಸಿದಿದೆ ಎಂದರೆ ಹೇಗೆ ಎಂಬ ಪ್ರಶ್ನೆ ಬರಬಹುದು. ಕೇವಲ ಐವತ್ತು ವರ್ಷದ ಹಿಂದಿನ ಭೂಮಿ, ಮಣ್ಣು, ಗಾಳಿ, ನೀರು ಇಂದಿಲ್ಲ. ಅಂದು ಅದೆಲ್ಲ ಗುಣಮಟ್ಟದಿಂದ ಕೂಡಿತ್ತು. ಇಂದು ಗುಣಮಟ್ಟ ಎಂಬುದೇ ಇಲ್ಲ.

ಇದಕ್ಕೆಲ್ಲ ಮುಖ್ಯ ಕಾರಣ ಸಾಕಷ್ಟಿವೆ. ಆದರೆ ಮುಖ್ಯವಾಗಿ ನಾವು ಸೇವಿಸುವ ಆಹಾರ ಪದಾರ್ಥಗಳು ಕಲುಷಿತವಾಗಿರುವುದೇ ನಮ್ಮ ಆರೋಗ್ಯ ಹದಗೆಡಲು ಕಾರಣ ಎಂಬುದು ನಮ್ಮ ಗ್ರಹಿಕೆ. ಇದರಿಂದಾಗುತ್ತಿರುವ ಅನಾಹುತ ಅಪಾರ. ನಮ್ಮ ಪೀಳಿಗೆ ಆಹಾರದ ಗುಣಮಟ್ಟ ಕಂಡವರು. ಆಹಾರವೇ ಆರೋಗ್ಯ ಎಂಬುದು ನಂಬಿದವರು. ನಮ್ಮ ಮಕ್ಕಳು, ಅವರ ಮಕ್ಕಳು ಆಹಾರದಿಂದ ಆರೋಗ್ಯ ಎನ್ನುವುದರ ಬದಲು ಆಸ್ಪತ್ರೆಯಿಂದ ಆರೋಗ್ಯ ಎಂಬ ಸ್ಥಿತಿ ತಲುಪಿದ್ದಾರೆ.

ರಾಸಾಯನಿ ಆಧಾರಿತ ಕೃಷಿ ಪದ್ದತಿ

ನಮ್ಮ ದೇಶ ಸಾವಯವ ಕೃಷಿಪದ್ಧತಿಗೆ ಹೆಸರಾಗಿತ್ತು. ಕಳೆದ 55 ವರ್ಷಗಳಿಂದ ರಾಸಾಯನಿಕ ಕೃಷಿ ಪದ್ದತಿ ಆರಂಭವಾಗಿದೆ. ಇಂದು ಈ ಮಾದರಿಯ ಕೃಷಿ ಮಾಡದವರನ್ನು ಹುಡುಕಬೇಕು. ನಾವು ಬಳಸುವ ಅಕ್ಕಿ, ಗೋಧಿ ಸೇರಿದಂತೆ ಹೆಚ್ಚಿನ ಧಾನ್ಯಗಳು, ತರಕಾರಿಗಳು, ಹಣ್ಣುಗಳು ಎಲ್ಲವನ್ನು ಕೃಷಿ ಮಾಡಲು ರಾಸಾಯನಿಕ ಗೊಬ್ಬರ, ಕೀಟನಾಶಕಗಳನ್ನು ಸಿಂಪಡಿಸಲಾಗುತ್ತಿದೆ. ಹಲವು ಹಣ್ಣು, ತರಕಾರಿಗಳಿಗೆ ಹಲವು ಬಾರಿ ಇವುಗಳನ್ನು ಸಿಂಪಡಿಸಲಾಗುತ್ತಿದೆ.

ಕೀಟನಾಶಕಗಳಿಂದಾಗುತ್ತಿರುವ ಅಪಾಯಗಳು

ಮನುಷ್ಯರ ಆರೋಗ್ಯದ ಮೇಲೆ ನೇರ ದುಷ್ಪರಿಣಾಮ ಉಂಟಾಗುತ್ತಿವೆ. ಬರೀ ಮನುಷ್ಯರಷ್ಟೇ ಅಲ್ಲ ; ನಾವು ಸಾಕುತ್ತಿರುವ ಪಶುಪಕ್ಷಿಗಳಲ್ಲದೇ ಸ್ವತಂತ್ರವಾಗಿ ಇರುವ ಪ್ರಾಣಿಗಳು, ಪಕ್ಷಿಗಳ ಆರೋಗ್ಯದ ಮೇಲೂ ದುಷ್ಪರಿಣಾಮಗಳಾಗುತ್ತಿದೆ.

ಕೃಷಿ ಉತ್ಪನ್ನಗಳು ಸಂಪೂರ್ಣ ಕಲುಷಿತ, ಜಲಮೂಲಗಳು ಕಲುಷಿತ. ಶುದ್ದ ಕುಡಿಯುವ ನೀರೇ ಸಿಗದ ದುಸ್ಥಿತಿ. ಮನೆಯಿಂದ ಹೊರಗೆ ಹೋದಲ್ಲಿ ಬಾಟಲಿ ನೀರನ್ನು ಖರೀದಿಸಿ ಕುಡಿಯುವಂಥ ಸ್ಥಿತಿ ಉಂಟಾಗಿದೆ. ಕೀಟನಾಶಕಗಳು ಭೂಮಿಯೊಳಗೆ ಇಳಿದು ಅಂತರ್ಜಲವೂ ಕಲುಷಿತವಾಗಿದೆ. ಪರಿಸರ ಸಂಪೂರ್ಣ ಹಾಳಾಗಿದೆ. ಶುದ್ದ ಗಾಳಿಯೂ ಅಲಭ್ಯವಾಗಿದೆ. ಮಣ್ಣಿನಲ್ಲಿ ಮಾಲಿನ್ಯ ಉಂಟಾಗಿದೆ. ಇವೆಲ್ಲದರಿಂದ ಮಣ್ಣಿನ ಫಲವತ್ತತೆ ಮೇಲೂ ದುಷ್ಪರಿಣಾಮ ಉಂಟಾಗಿದೆ. ಮಣ್ಣಿನಲ್ಲಿರುವ ಉಪಯುಕ್ತ ಸೂಕ್ಷ್ಮಜೀವಿಗಳು ನಾಶವಾಗುತ್ತಿವೆ. ಇದಲ್ಲದೇ ಇತರ ಸಸ್ಯ ಸಮುದಾಯವೂ ಮಾಲಿನ್ಯದಿಂದ ತತ್ತರಿಸುತ್ತಿದೆ.

ಇವೆಲ್ಲದರ ಪರಿಣಾಮ ಆಸ್ಪತ್ರೆಗಳು ಬೃಹತ್ ಪ್ರಮಾಣದಲ್ಲಿ ಹೆಚ್ಚಿವೆ. ಇಂದಿನ ಪೀಳಿಗೆಯ ಮಕ್ಕಳಲ್ಲಿ ಆಸ್ಪತ್ರೆಯಿಂದ ಆರೋಗ್ಯ ಎಂಬ ತಪ್ಪು ತಿಳಿವಳಿಕೆ ಮೂಡಿದೆ. ಈಗ ಹೇಳಿ ರಾಸಾಯನಿಕ ಗೊಬ್ಬರ, ಕೀಟನಾಶಕಗಳನ್ನು ಬಳಸಿ ಬೆಳೆದ ಬೆಳೆಗಳನ್ನು ಸೇವಿಸಬೇಕೇ ?

LEAVE A REPLY

Please enter your comment!
Please enter your name here