” ಮಂಗ ಹರೆ ಪೂರಾ ಮುರ್ದು ಹಾಕ್ಯವೆ,ಅದನ್ನ ಬಿಡ್ಸಿ ಹಾಕ್ಬಕು ಅಂತೀರಿ. ಮಳೀಗೆ ಹಣ್ಣೂ ಉದ್ರ್ಯವೆ, ಅದನ್ನೆಲ್ಲ ಹೆರ್ಕಿ ಅಚ್ಗಟ್ ಮಾಡ್ಬಕು ಅಂತೀರಿ.ಕಾಯಿನೂ ಕುಯ್ರೀ ಅಂತೀರಿ,ಕಾಯಿ ಕುಯ್ಯದು ಕಷ್ಟ,ಅದು ಸುಲಭಕ್ಕೆ ತೊಟ್ಟು ಬಿಡಲ್ಲ, ಅದೆಲ್ಲಾ ನಮ್ಗೆ ಗೀಟಲ್ಲ. ಹಾಂಗಾಗಿ ಕೆಜಿ ಲೆಕ್ಕ ಬ್ಯಾಡ, ದಿನಾಳ್ ಲೆಕ್ದಲ್ಲೇ ಕೊಯ್ತೀವಿ ” ಅಂದಳು ಮೇಸ್ತ್ರಿಯಮ್ಮ.
” ಹೂಂ ಮಾರೇತಿ, ಯಂತಾರು ಆಗ್ಲಿ ತ್ವಾಟ ಮಾಡಿದ್ ತಪ್ಪಿಗೆ ನಂಗೇ ಶಿಕ್ಷೆ. ನೀವಾದ್ರೂ ಯಂತ ಮಾಡ್ತಿರಿ. ಗಿಡ ಉಳುದ್ರೆ ಸಾಕು. ಕಾಯಿ ಹಣ್ಣು ಎಲ್ಲಾ ಕುಯ್ದು ವಗಾಸಿ ಅತ್ಲಾಗೆ ” ಅಂದೆ.
ಅಡಿಕೆಯೇ ಮುಖ್ಯ ವಾಣಿಜ್ಯ ಬೆಳೆಯಾಗಿದ್ದ ನಮ್ಮ ತಾಲೂಕಿನಲ್ಲಿ ಕಾಫಿ ಏನಿದ್ದರೂ ಉಪಬೆಳೆಯಾಗಿ ಅಷ್ಟಿಷ್ಟು ಬೆಳೆಯುವುದಿತ್ತು. ಆದರೆ ಎರಡು ದಶಕಗಳೀಚೆಗೆ ಮದ್ದಿಲ್ಲದ ತುಂಡೆರೋಗ (YLD) ತೀವ್ರವಾಗಿ ಹರಡಿ ಅಡಿಕೆ ತೋಟಗಳು ನಾಶವಾಗತೊಡಗಿದಮೇಲೆ ಪರ್ಯಾಯ ಬೆಳೆಗಳಿಗಾಗಿ ನಡೆದ ಹುಡುಕಾಟ/ಪ್ರಯೋಗಗಳಲ್ಲಿ ಕಾಫಿಯೇ ಗೆದ್ದು ಮುಖ್ಯ ಬೆಳೆಯ ಸ್ಥಾನ ಅಲಂಕರಿಸಿತು.
ಸಾಂಪ್ರದಾಯಿಕ ಕಾಫಿ ಬೆಳೆ ಪ್ರದೇಶದ ಇಳುವರಿ ನಿರೀಕ್ಷಿಸಲಾಗದಿದ್ದರೂ ನಮ್ಮ ಬದುಕಿನ ದಾರಿ ತೋರಿಸಿತ್ತು. ಆದರೆ ಬರಬರುತ್ತಾ ಮಲೆನಾಡ ಪಟ್ಟಣಗಳ ಹಾಗೂ ಹೆದ್ದಾರಿಗಳ ವಿಸ್ತರಣೆ ಇತ್ಯಾದಿ ಅಭಿವೃದ್ಧಿ ಕಾಮಗಾರಿಗಳಿಗೆ ಕಾಡೂ ಬಲಿಯಾಗತೊಡಗಿ, ಜೊತೆಗೆ ಮಂಗಗಳ ಸಂತಾನವೂ ಹೆಚ್ಚಿದಂತೆ ಬೆಳೆ ಮಾತ್ರವಲ್ಲದೆ ಗಿಡಗಳ ರೆಂಬೆ ಕೊಂಬೆಗಳೂ ಅವುಗಳ ಕಪಿಚೇಷ್ಟೆಗೆ ಸಿಲುಕತೊಡಗಿತು.
ಮಾಗಿದ ಹಣ್ಣನ್ನಷ್ಟೇ ಕೊಯ್ಲು ಮಾಡುತ್ತಿದ್ದ ನಾವು ಈಗ ಕಾಯಿ ಬಲಿಯುವಷ್ಟರಲ್ಲೇ ಕೊಯ್ಲು ಮಾಡಬೇಕಾಗಿ ಬಂದಿದೆ. ಇದರಿಂದಾಗಿ ಕೊಯ್ಲಿನ ಮಜೂರಿ ಹೆಚ್ಚಿದ್ದು ಮಾತ್ರವಲ್ಲದೆ ತೂಕದಲ್ಲೂ ನಷ್ಟವಾಗತೊಡಗಿದೆ.ಜೊತೆಗೆ ಇತ್ತೀಚಿನ ವರ್ಷಗಳಲ್ಲಿ ಅಕಾಲಿಕ ಮಳೆಯೂ ಹೈರಾಣು ಮಾಡಿದೆ.
ಆದರೂ ಬದುಕು ನಡೆದೇ ಇದೆ. ಬದುಕಲೇಬೇಕಲ್ಲಾ?