ಸಿರಿಧಾನ್ಯದಿಂದ ಬಹು ರುಚಿಕರ ಐಸ್‌ ಕ್ರೀಮ್‌

0

ಐಸ್‌ ಕ್ರೀಮ್‌ ಎಂದರೆ ಯಾರಿಗೆ ಇಷ್ಟವಾಗುವುದಿಲ್ಲ ಹೇಳಿ ? ಸಣ್ಣ ಮಕ್ಕಳಿಂದ ವೃದ್ಧರವರೆಗೂ ಎಲ್ಲರಿಗೂ ಅಚ್ಚುಮೆಚ್ಚು. ಆದರೆ ಮಾರುಕಟ್ಟೆಯಲ್ಲಿ ದೊರೆಯುವ ಬಹುತೇಕ ಐಸ್‌ ಕ್ರೀಮ್‌ ಗಳಲ್ಲಿ ಕೃತಕ ರಾಸಾಯನಿಕ ಫ್ಲೇವರ್‌ ಗಳನ್ನು ಸೇರಿಸಿರುತ್ತಾರೆ. ಇದನ್ನು ಹೆಚ್ಚು ತಿಂದಷ್ಟು ಆರೋಗ್ಯಕ್ಕೆ ಹಾನಿಕರಕ.

ಇಂಥ ಸಂದರ್ಭದಲ್ಲಿ ತಮಿಳುನಾಡಿನ ತಂಜಾವೂರು ನಗರದಲ್ಲಿರುವ ರಾಷ್ಟ್ರೀಯ ಆಹಾರ ತಂತ್ರಜ್ಞಾನ, ಉದ್ಯಮಶೀಲತೆ ಮತ್ತು ನಿರ್ವಹಣಾ ಸಂಸ್ಥೆಯ ತಜ್ಞರು ರಾಗಿಯೂ ಸೇರಿದಂತೆ ಬೇರೆಬೇರೆ ಸಿರಿಧಾನ್ಯಗಳಿಂದ ತಯಾರು ಮಾಡುವ ಐಸ್‌ ಕ್ರೀಮ್‌ ತಯಾರು ಮಾಡುವ ತಂತ್ರಜ್ಞಾನ ಅಭಿವೃದ್ಧಿಪಡಿಸಿದ್ದಾರೆ.

ನವೆಂಬರ್‌ ೧೭, ೨೦೨೩ ರಿಂದ ಆರಂಭವಾಗಿ ನಾಳೆ ಅಂದರೆ ನವೆಂಬರ್‌ ೨೦ ರಂದು ಸಮಾರೋಪ ಕಾಣಲಿರುವ ಬೆಂಗಳೂರು ಕೃಷಿಮೇಳದಲ್ಲಿ ಈ ಸಂಸ್ಥೆಯವರು ತಮ್ಮ ಮಳಿಗೆ ತೆರೆದಿದ್ದಾರೆ. ಇಲ್ಲೀಗ ನಿತ್ಯವೂ ಅಪಾರ ಸಂಖ್ಯೆಯ ಐಸ್‌ ಕ್ರೀಮ್‌ ಪ್ರಿಯರು ಸೇರಿ ಸಿರಿಧಾನ್ಯದ ಐಸ್‌ ಕ್ರೀಮ್‌ ರುಚಿ ಸವಿಯುತ್ತಿದ್ದಾರೆ.

ಈ ಸಿರಿಧಾನ್ಯ ಐಸ್ ಕ್ರೀಮ್‌ ತಯಾರಿಕೆಗೆ ಹಾಲನ್ನು ಸಹ ಬಳಸಿಲ್ಲ.  ಇದು ಕಬ್ಬಿಣ ಮತ್ತು ವಿಟಮಿನ್ ಬಿ1 ನಿಂದ ಸಮೃದ್ಧವಾದ ಐಸ್ ಕ್ರೀಮ್.  ಕೆಲವರಿಗೆಹಾಲಿನ ಅಲರ್ಜಿ ಇರುತ್ತದೆ. ಅಂಥವರು ಹಾಗೂ ಹಾಲನ್ನು ಬಳಕೆ ಮಾಡದ ವೆಗಾನ್‌ ಆಹಾರ ಪದ್ಧತಿಯವರು ಸಹ  ಸಹ ಈ ಸಿರಿಧಾನ್ಯದ ಐಸ್‌ ಕ್ರೀಮ್‌ ಅನ್ನು ಯಾವುದೇ ಆತಂಕವಿಲ್ಲದೇ ಎಷ್ಟು ಬೇಕಾದರೂ ಸವಿಯಬಹುದು.

ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಹಿರಿಯ ಕೃಷಿವಿಜ್ಞಾನಿ ಡಾ. ಕೆ. ಶಿವರಾಮು, ಸಹಾಯಕ ಪ್ರಾಧ್ಯಾಪಕ ಡಾ. ಮೂರ್ತಿ, ಹಿರಿಯ ಸಿಬ್ಬಂದಿ ಪಾಪಣ್ಣ ಮತ್ತಿತರರು ಸಿರಿಧಾನ್ಯ ಐಸ್‌ ಕ್ರೀಮ್‌ ಸವಿ ಅನುಭವಿಸಿ ಸಂತಸ ವ್ಯಕ್ತಪಡಿಸಿದರು.

ಸಿರಿಧನ್ಯ ಧಾನ್ಯದ ಐಸ್ ಕ್ರೀಮ್ ಉತ್ತಮ ಪೋಷಕಾಂಶಗಳನ್ನು ಹೊಂದಿದೆ.  ಕಬ್ಬಿಣ ಮತ್ತು ವಿಟಮಿನ್ – ಬಿ1 ಪೋಷಕಾಂಶಗಳಿವೆ. ಇದರ ಸೇವನೆಯಿಂದ  ವಿಟಮಿನ್ ಬಿ-1 ಕೊರತೆಯಿಂದ ಉಂಟಾಗುವ ಬೆರಿಬೆರಿ ರೋಗವನ್ನು ತಡೆಗಟ್ಟಬಹುದು, ವಿಟಮಿನ್ ಬಿ1 ದೇಹದಲ್ಲಿ ಶಕ್ತಿಯ ಉಪಯೋಗಕ್ಕೆ ಅತ್ಯವಶ್ಯಕ. ಕಿರುಧಾನ್ಯವು ರೋಗದ ವಿರುದ್ದ ರಕ್ಷಣೆ ಕೊಡುವ ವಿವಿಧ ಪೋಷಕಾಂಶಗಳಿಂದ ತುಂಬಿದೆ.  ಆರೋಗ್ಯ ಸ್ನೇಹಿ ಆಹಾರವಾಗಿದೆ.

ಸಾಂಪ್ರದಾಯಿಕ ಹಾಲಿನ ಐಸ್ ಕ್ರೀಮ್‌ಗೆ ಉತ್ತಮ ಬದಲಿ ಆಹಾರವಾಗಿದ್ದು ಸಕ್ಕರೆ ಅಲರ್ಜಿಯವರಿಗೂ ಒಂದು ಕ್ರಿಯಾತ್ಮಕ ಆಹಾರವಾಗಿದೆ. 100 ಗ್ರಾಂ ಐಸ್ ಕ್ರೀಮ್‌ನಲ್ಲಿ 35.7 ಗ್ರಾಂ ಸಕ್ಕರೆ ಪಿಷ್ಟ, 3.10 ಗ್ರಾಂ ಸಸಾರಜನಕ, 9.0 ಗ್ರಾಂ ಕೊಬ್ಬು, 0.6 ಗ್ರಾಂ ನಾರಿನಾಂಶವನ್ನು ಹೊಂದಿದೆ. ಒಟ್ಟು ಶಕ್ತಿಯ ಮೌಲ್ಯ 100 ಗ್ರಾಂ ಐಸ್ ಕ್ರೀಮ್ ನಿಂದ 183 ಕಿ.ಲೋ. ದೊರೆಯುತ್ತದೆ.

ಇನ್ನೇಕೆ ತಡ, ನೀವು ಬೆಂಗಳೂರು ನಗರ ನಿವಾಸಿಯಾಗಿದ್ದರೆ, ಸುತ್ತಮುಲ ಪ್ರದೇಶಗಳವರಾಗಿದ್ದರೆ ನಾಳೆಯೇ ಕೃಷಿಮೇಳಕ್ಕೆ ಬನ್ನಿ. ಸಿರಿಧಾನ್ಯದ ಐಸ್‌ ಕ್ರೀಮ್‌ ಸವಿಯಿರಿ. ಇದೊಂದೇ ಅಲ್ಲ; ಇನ್ನೂ ಹಲವು ಆಕರ್ಷಣೆಗಳು ಕೃಷಿಮೇಳದಲ್ಲಿವೆ.

LEAVE A REPLY

Please enter your comment!
Please enter your name here