ಮಲೆನಾಡಿನಲ್ಲಿ ಕಾಡಂಚಿನಲ್ಲಿ ಇರುವ ಕೃಷಿಬದುಕು ದಿನದಿಂದ ದಿನಕ್ಕೆ ದುಸ್ತರವಾಗುತ್ತಿದೆ. ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬಂತೆ ಆಗುತ್ತಿದೆ. ಕಷ್ಟಪಟ್ಟು ಬೆಳೆಸಿದ ಫಸಲು ಕೊಯ್ಲಿಗೆ ಮುನ್ನವೇ ವನ್ಯಪ್ರಾಣಿಗಳ ಪಾಲಾಗುತ್ತಿದೆ. ಕಾಡು ತೊರೆದ ಮಂಗಗಳು ಜನವಸತಿ ಇರುವ ಪ್ರದೇಶದೊಳಗೆ ಸೇರಿಕೊಂಡಿವೆ. ತೋಟದ ಹಣ್ಣಿನ ಫಸಲು ಭಕ್ಷಿಸುವುದಲ್ಲದೇ ಹೀಚುಗಳೂ ಕಾಯಿಗಳಾಗಲು ಬಿಡದೇ ಕಿತ್ತಾಕುತ್ತಿವೆ.
ಮಂಗಗಳ ಹಾವಳಿ ನಿಯಂತ್ರಿಸಲು ಮಲೆನಾಡಿಗರು ಮಾಡಿದ ಉಪಾಯ ಒಂದೆರಡಲ್ಲ. ಅನುಸರಿಸಿದ ಒಂದೆರಡು ದಿನಗಳಷ್ಟೆ ಇವು ಪ್ರಯೋಜನಕಾರಿಯಂತೆ ಕಂಡರೂ ಮೂರನೇ ದಿನಕ್ಕೆ ಮತ್ತೆ ಯಥಾಸ್ಥಿತಿ. ಮತ್ತೊಂದು ಪ್ರಯೋಗಕ್ಕೆ ಅಣಿಯಾಗಬೇಕು. ಅದರದು ವಿಫಲತೆಯೇ. ಹೀಗಾಗಿ ನಿಸ್ಸಾಹಯಕವಾಗಿ ತಲೆಮೇಲೆ ಕೈ ಹೊತ್ತು ಕೂರುವ ದುಸ್ಥಿತಿ.
ಕಾಡಿನಲ್ಲಿರುವ ಮಂಗಗಳು ಸಮೀಪದ ಹೊಲಗದ್ದೆ-ತೋಟಗಳಲ್ಲಿ ಬೀಡುಬಿಡುವುದು ಒಂದು ಸಮಸ್ಯೆ. ದೂರದ ಊರುಗಳಲ್ಲಿರುವ ಮಂಗಗಳನ್ನು ಅಲ್ಲಿಯ ಪಂಚಾಯತಿಯವರು, ಮುನ್ಸಿಪಾಲಿಟಿಯವರೂ ತಂದುಬಿಡುವುದು ಮತ್ತೊಂದು ಭೀಕರ ಸಮಸ್ಯೆ. ಅವರುಗಳು ಮಾಡುತ್ತಿರುವ ಕೆಲಸ ನೋಡಿದರೆ ಕಾಡಂಚಿನ ಗ್ರಾಮಸ್ಥರ ಯೋಚನೆ ಅವರಿಗಿಲ್ಲ ಎನ್ನುವುದು ತಿಳಿಯುತ್ತದೆ.
ಈಗಾಗಲೇ ಪಟ್ಟಣದಲ್ಲಿದ್ದು ಚಾಣಾಕ್ಷ ವಿದ್ಯೆಗಳನ್ನು ಕಲಿತ ಮಂಗಗಳಿಂದ ಬೆಳೆ ಉಳಿಸಿಕೊಳ್ಳುವುದರ ಜೊತೆಗೆ ಮನೆಯನ್ನೂ ರಕ್ಷಿಸಬೇಕಾದ ದುಸ್ಥಿತಿ ಎದುರಾಗಿದೆ. ಮರೆತು ಕಿಟಕಿ, ಕದ ಮುಚ್ಚುವುದನ್ನು ಮರೆತರೆ ಸದ್ದಿಲ್ಲದೇ ಪ್ರವೇಶಿಸುವ ಅವುಗಳು ಅಡುಗೆಮನೆ ಹಾಳುಗೆಡುವುದಲ್ಲದೇ ಮನೆಯ ಸುಸ್ಥಿತಿಯನ್ನೂ ಹಾಳು ಮಾಡುತ್ತವೆ. ಕಾಡಿನ ಮಂಗಗಳಾದರೂ ಸದ್ದು ಮಾಡಿದರೆ, ಬೆತ್ತ ಹಿಡಿದರೆ ಕೊಂಚವಾದರೂ ಬೆದರುತ್ತವೆ. ಆದರೆ ಇವುಗಳು ಮಾತ್ರ ಬೆದರಿಸುವವರನ್ನೇ ಹೆದರಿಸಿ ಹಿಮ್ಮೆಟ್ಟಿಸುತ್ತವೆ.
ಕಾಡುಹಂದಿಗಳದ್ದು ಮತ್ತೊಂದು ಸಮಸ್ಯೆ. ಗೆಡ್ಡೆಗೆಣಸು ಹುಡುಕುವ ಅವುಗಳು ಹೊಸದಾಗಿ ನೆಟ್ಟ ಗಿಡಗಳನ್ನು ಬುಡಮೇಲು ಮಾಡುತ್ತವೆ. ಹಿಂಡುಹಿಂಡೇ ಬಂದುಬಿಟ್ಟರೆ ತೋಟಗಳ ಕಥೆ ಮುಗಿದಂತೆಯೇ. ರಾತ್ರಿಯ ವೇಳೆಯೇ ಇವುಗಳ ಕಾರ್ಯಾಚರಣೆ. ಇವುಗಳ ಬಾಧೆ ತಡೆಯುವುದು ಕೂಡ ಸಮಸ್ಯೆ.
ಇದರ ಜೊತೆಗೆ ಈಗ ಕಾಡೆಮ್ಮೆಗಳ ಕಾಟ ಬೇರೆ ಶುರುವಾಗಿದೆ. ಕುದುರೆಮುಖ ಅಭಯಾರಣ್ಯದ ಶೋಲಾ ಹುಲ್ಲುಗಾವಲುಗಳಲ್ಲಿ ಮೆಂದುಕೊಂಡಿರುತ್ತಿದ್ದ ಅವು ಇತ್ತೀಚೆಗೆ ಸಂಖ್ಯೆ ವೃದ್ಧಿಸಿಕೊಂಡು ಹುಲ್ಲುಗಾವಲೇ ಇಲ್ಲದ ನಮ್ಮ ದಟ್ಟ ಅರಣ್ಯಕ್ಕೆ ವಿಸ್ತರಿಸಿಕೊಂಡಿರುವುದು ಸಮಸ್ಯೆಯ ಮೂಲ.
ಕೊಪ್ಪ, ಶೃಂಗೇರಿ, ಜಯಪುರ ಸುತ್ತಮುತ್ತಲ ಕಾಡಂಚಿನ ತೋಟ, ಗದ್ದೆಗಳಿಗೆ ದಾಳಿ ಇಡತೊಡಗಿವೆ. ಭಯಗೊಳಿಸುವ ಸಂಗತಿಯೆಂದರೆ ಊರೆಮ್ಮೆಗಳ ಮಾದರಿಯಲ್ಲೇ ಹಳ್ಳಿಗಳಿಗೆ ನುಗ್ಗುತ್ತಿವೆ. ಇವುಗಳ ಕೊಂಬಿಗೆ, ಕಾಲ್ತುಳಿತಕ್ಕೆ ಸಿಕ್ಕರೆ ಅಪ್ಪಚ್ಚಿ. ಇದರಿಂದ ಗ್ರಾಮಸ್ಥರು ಭಯಭೀತಿಯಲ್ಲಿಯೇ ಸಂಚರಿಸುವಂತಾಗಿದೆ.
ಕಾಡೆಮ್ಮೆಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ ಎನ್ನುವುದು ಸಂತಸದ ಸಂಗತಿಯೇ ಆದರೂ ಅವುಗಳು ತೋಟ- ಹೊಲ ಹಾಳು ಮಾಡುತ್ತವೆ ಎನ್ನುವುದು ದು:ಖದ ಸಂಗತಿ. ನಮ್ಮ ಭಾಗದಲ್ಲಿಯೂ ಅವುಗಳ ಸಂಖ್ಯೆ/ವೃದ್ಧಿಸುತ್ತಿದೆ. ಕತ್ತಲು ಆವರಿಸುತ್ತಿದ್ದಂತೆ ಇವುಗಳು ದಾಳಿಯಿಡಲು ಶುರು ಮಾಡುತ್ತವೆ. ರಾತ್ರಿ ಇವುಗಳದ್ದು. ಇತ್ತೀಚೆಗೆ ಹಗಲಲ್ಲೇ ತೋಟ ಗದ್ದೆಗಳಿಗೆ ದಾಳಿ ಇಡತೊಡಗಿವೆ. ಹೀಗಿರುವಾಗ ಕೃಷಿಕರಿಗೆಲ್ಲಿ ನೆಮ್ಮದಿಯ ನಿದ್ರೆ ?
ಅಡಿಕೆ ತೋಟಗಳು ತೊಂಡೆ ರೋಗಕ್ಕೆ ನಾಶವಾದ ಮೇಲೆ ಬದಲಿ ಬೆಳೆ ಬೆಳೆಯುವ ಪ್ರಯತ್ನವನ್ನು ಇವುಗಳು ತಡೆದುಬಿಟ್ಟಿವೆ. ಗೋಮಾಳಗಳೇ ಇಲ್ಲದ ನಮ್ಮಲ್ಲಿ ತೋಟದೊಳಗೆ ಬೆಳೆದ ಹಸಿರು ಹುಲ್ಲು ಅವುಗಳ ಪಾಲಾಗತೊಡಗಿವೆ. ಇದರಿಂದ ಹಸುಗಳ ಸಾಕಣೆಗೂ ಸಂಚಕಾರ ಒದಗಿದೆ.
ಕಳೆದ ಬೇಸಿಗೆಯಲ್ಲಿ ರಾತ್ರಿ ಹೊತ್ತು ತೋಟಕ್ಕೆ ನೀರು ಹಾಯಿಸಲು ಹೋದಾಗ ನನ್ನಿಂದ ಕೆಲವೇ ಮೀಟರ್ ಅಂತರದಲ್ಲಿ ನಿಂತಿದ್ದ ಅವುಗಳ ಹಿಂಡು ಏಕಾಏಕಿ ಓಡಿದಾಗ ಬೆಚ್ಚಿ ಬಿದ್ದಿದ್ದೆ. ಅವುಗಳು ರಭಸಕ್ಕೆ ಹಲವು ಕಾಫಿ ಗಿಡಗಳು ನೆಲಕ್ಕೊರಗಿದ್ದವು. ಪೈಪ್ ಲೈನುಗಳು ಪುಡಿಪುಡಿಯಾಗಿದ್ದವು. ಮತ್ತೆ ಅವುಗಳನ್ನು ಯಥಾಸ್ಥಿತಿಗೆ ತರುವಷ್ಟರಲ್ಲಿ ಕಣ್ಣೀರು ನೆಲವನ್ನು ತೋಯಿಸಿತ್ತು.
ನೆಲ ಮೂಲದ ಸೊಗಡು ಹಾಗೂ ರೈತನ ಕಷ್ಟ ಕಾರ್ಪಣ್ಯಗಳ ಕಟು ವಾಸ್ತವವನ್ನು ಸಮರ್ಥವಾಗಿ ಬರಹಕಿಳಿಸುವ ತಾದ್ಯತ್ಮಮೆ ಶ್ರೀನಿವಾಸಮೂರ್ತಿಯವರ ಲೇಖನಗಳಲಿ ಕಾಣಬಹುದು.