ಬೆಂಗಳೂರು, ಮಾರ್ಚ್ 23: ವಯಸ್ಸಾದ ಗೋವುಗಳ ರಕ್ಷಣೆ ಸರ್ಕಾರ ಮತ್ತು ಸಮಾಜದ ಜವಾಬ್ದಾರಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ಇಂದು ಪುಣ್ಯಕೋಟಿ ದತ್ತು ಯೋಜನೆಗೆ ಚಾಲನೆ ನೀಡಿ ಮಾತನಾಡಿದರು.
ಗೋವನ್ನು ಬಳಸಿ, ನಂತರ ಕೈಬಿಡುವ ನಮ್ಮ ಪ್ರವೃತ್ತಿಯ ಬಗ್ಗೆ ನಾವು ನ್ಯಾಯಯುತವಾಗಿ ಅದರೊಂದಿಗೆ ನಡೆದುಕೊಳ್ಳುತ್ತೇವೆಯೇ ಎಂಬ ಬಗ್ಗೆ ನಮ್ಮನ್ನು ನಾವೇ ಪ್ರಶ್ನಿಸಿಕೊಳ್ಳಬೇಕು. ಅದಕ್ಕಾಗಿ ಗೋಹತ್ಯೆ ನಿಷೇಧ ಕಾನೂನು ಜಾರಿಗೆ ತರಲಾಗಿದೆ. ಗೋಶಾಲೆಗಳಲ್ಲಿ ಮಕ್ಕಳ ರೀತಿಯಲ್ಲಿ ಗೋವುಗಳನ್ನು ನೋಡಿಕೊಳ್ಳುತ್ತಾರೆ ಎಂದರು.
ನಮ್ಮ ಸಂಸ್ಕೃತಿ
ಹೃದಯಕ್ಕೆ ಹತ್ತಿರವಾದ, ಭಾವನಾತ್ಮಕ ಕಾರ್ಯಕ್ರಮವಿದು. ಗೋಮಾತೆ ಅಂದರೆ ಕಾಮಧೇನು ನಮ್ಮ ಬದುಕಿನ ಅವಿಭಾಜ್ಯ ಅಂಗ. ಸಾಧ್ಯವಿದ್ದರೆ ಗೋವಿನ ರೀತಿ ಬಾಳಬೇಕು. ಎಲ್ಲರಿಗೂ ಹಾಲು, ಆರೋಗ್ಯ, ನೆಮ್ಮದಿ ನೀಡುವ ಕಾಮಧೇನುವಿಗೆ. ದೇಶದಲ್ಲಿ ಗೋವಿಗೆ ಅತ್ಯಂತ ಪವಿತ್ರ ಸ್ಥಾನವಿದೆ. ಇದು ನಮ್ಮ ಸಂಸ್ಕೃತಿಯೂ ಹೌದು ಎಂದರು.
ಪ್ರಥಮ ಪ್ರಯೋಗ
ರಾಜ್ಯದ ಗೋವುಗಳ ರಕ್ಷಣೆಗೆ ಎಲ್ಲರೂ ಸಹಾಯ ಮಾಡಲಿ ಎಂದು ಪುಣ್ಯಕೋಟಿ ದತ್ತು ಯೋಜನೆಯನ್ನು ರೂಪಿಸಲಾಯಿತು. ದೇಶದಲ್ಲಿಯೇ ಇದು ಪ್ರಥಮ ಪ್ರಯೋಗ. ಇದರಿಂದ ಅವುಗಳಿಗೆ ಆಹಾರ, ಉಪಚಾರ ಒದಗಿಸಲಾಗುತ್ತದೆ ಎಂದರು.
ಸರ್ಕಾರಿ ನೌಕರರಿಂದ 40 ಕೋಟಿ ರೂ
ಸರ್ಕಾರಿ ನೌಕರರು ಕೂಡ ಇದಕ್ಕೆ 28 ಕೋಟಿ ರೂ.ಗಳನ್ನು ಪುಣ್ಯಕೋಟಿ ಯೋಜನೆಯ ಖಾತೆಗೆ ನೀಡಿದ್ದಾರೆ. ಇನ್ನೂ 12 ಕೋಟಿ ರೂ ಸೇರಿ 40 ಕೋಟಿ ರೂ.ಗಳನ್ನು ನೀಡುತ್ತಿದ್ದಾರೆ. ಇದಲ್ಲದೆ ಹಲವಾರು ಸಂಘ ಸಂಸ್ಥೆಗಳಿಂದ 100 ಕೋಟಿ ರೂ.ಗಳನ್ನು ಸಂಗ್ರಹಿಸಿ ಒಟ್ಟು 28 ಸಾವಿರ ಗೋವುಗಳಿಗೆ ನೆರವು ನೀಡಲಾಗುತ್ತಿದ್ದು, ಬರುವ ವರ್ಷ ಒಂದು ಲಕ್ಷ ಗೋವುಗಳಿಗೆ ಈ ಯೋಜನೆಯನ್ನು ವಿಸ್ತರಿಸಲಾಗುವುದು ಎಂದರು.
ಪುಣ್ಯಪ್ರಾಪ್ತಿ
ಪುಣ್ಯಕೋಟಿಗೆ ಸಹಾಯ ಮಾಡುವವರಿಗೆ ಪುಣ್ಯಪ್ರಾಪ್ತಿಯಾಗುತ್ತದೆ. ಪುಣ್ಯಕೋಟಿ ವೆಬ್ ಸೈಟಿನಲ್ಲಿ ನಿರ್ದಿಷ್ಟ ಗೋವಿಗೆ ನೆರವು ನೀಡಬಹುದು. ಆತ್ಮೀಯ ಸಂಬಂಧ ಬೆಸೆಯುತ್ತದೆ. ಇದನ್ನು ಮಾಡಿದವರಿಗೆ ಬದುಕಿನ ಸಾರ್ಥಕತೆ ಕಾಣುತ್ತದೆ ಎಂದರು. ಗೋಮಾತೆಗೆ ನೆರವು ನೀಡುವುದು ತಾಯಿಗೆ ಸೇವೆ ಮಾಡಿದಂತೆ. ಮಾತೃ ವಾತ್ಸಲ್ಯವಿರುವವರೆಲ್ಲರೂ ಇದಕ್ಕೆ ಸಹಾಯ ಮಾಡುತ್ತಾರೆ ಎಂದರು.
ಮರೆಯಲಾಗದ ಯೋಜನೆ
ಅನುದಾನ ಪಡೆದ ಗೋಶಾಲೆಗಳಲ್ಲಿ ದತ್ತು ಪಡೆದ ಗೋವುಗಳ ವೀಡಿಯೊ ಮಾಡಿ ತಿಂಗಳಿಗೊಮ್ಮೆ ಇಲಾಖೆಗೆ ಕಳಿಸಬೇಕು. ಆಗ ಇನ್ನಷ್ಟು ಜನರಿಗೆ ಪ್ರೇರಣೆ ದೊರಕಲಿದೆ ಎಂದರು. ಎಂದೂ ಮರೆಯಲಾಗದ ಯೋಜನೆಯನ್ನು ರೂಪಿಸಿದ್ದು ಸಮಾಧಾನ ತಂದಿದೆ ಎಂದರು.
ರಾಸುಗಳ ಚಿಕಿತ್ಸೆಗೆ 49 ಕೋಟಿ ರೂ.
ಚರ್ಮ ಗಂಟು ರೋಗ ಬಂದ ಸಂದರ್ಭದಲ್ಲಿ ರಾಸುಗಳ ಚಿಕಿತ್ಸೆಗೆ 49 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ. ಗೋವು ಕಳೆದುಕೊಂಡವರು 20 ಸಾವಿರ ರೂ. ಗಳ ಪರಿಹಾರ ಒದಗಿಸಲಾಗಿದೆ ನೂರು ಗೋಶಾಲೆಗಳ ನಿರ್ಮಾಣ ಕಾರ್ಯ ವಿವಿಧ ಹಂತದಲ್ಲಿದೆ. ಮೂರ್ನಾಲ್ಕು ತಿಂಗಳಲ್ಲಿ ಅವು ಪ್ರಾರಂಭವಾಗಲಿದೆ. ಗೋಶಾಲೆಗಳು ಆತ್ಮನಿರ್ಭರವಾಗುವ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸಲಾಗುವುದು ಎಂದರು.
ಪಶುಸಂಗೋಪನೆ ಸಚಿವ ಪ್ರಭು ಚೌಹಾಣ್, ಇಲಾಖೆ ಕಾರ್ಯದರ್ಶಿ ಸಲ್ಮಾ ಫಾಹಿಂ , ಆಯುಕ್ತರಾದ ಅಶ್ವತಿ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಷಡಕ್ಷರಿ, ಮೊದಲಾದವರು ಉಪಸ್ಥಿತರಿದ್ದರು.