ಯುವಕರಿಗೆ ಕೃಷಿಯಲ್ಲಿ ಆಸಕ್ತಿ ಮೂಡಿಸುವ ಕಾರ್ಯ

ದಶಕಗಳ ಹಿಂದಿನ ವಿಸ್ತರಣಾ ಕಾರ್ಯಚಟುವಟಿಕೆಗೆ ಹೋಲಿಸಿದರೆ ಇಂದು ಕ್ರಾಂತಿಕಾರಕ ಬದಲಾವಣೆಗಳಾಗಿವೆ. ಆಧುನಿಕ ಸಂವಹನ ವ್ಯವಸ್ಥೆ ನಮ್ಮ ನೆರವಿಗೆ ಬಂದಿದೆ. ಗಮನಾರ್ಹ ವಿಚಾರ ಎಂದರೆ ಅಷ್ಟೇ ಸವಾಲುಗಳು ನಮ್ಮೆದುರು ಇವೆ. ಸಂವಹನ ಮಾಧ್ಯಮದಲ್ಲಿ ಅಂಥ ಮಹತ್ವದ ಅಭಿವೃದ್ಧಿಯಾಗದೇ ಇರುವ ದಿನಗಳಲ್ಲಿ ಗ್ರಾಮೀಣ ಪ್ರದೇಶದಲ್ಲಿ ಕೃಷಿ ಮಾಡಲು ಅಗತ್ಯ ಸಂಖ್ಯೆಗಿಂತಲೂ ಹೆಚ್ಚಿನ ಯುವಕರಿದ್ದರು. ಆದರೆ ಇಂದು ಸಂವಹನ ಮಾಧ್ಯಮ ಅಪಾರವಾಗಿ ಬೆಳೆದಿದೆ. ಆದರೆ ಕೃಷಿ ಮಾಡಲು ಗ್ರಾಮಗಳಲ್ಲಿ ಅಗತ್ಯವಾದ ಸಂಖ್ಯೆಯ ಯುವಕರೇ ಇಲ್ಲ

0

ಕೃಷಿ ವಿಶ್ವವಿದ್ಯಾಲಯಗಳ ಸ್ಥಾಪನೆ ಮೂಲ ಉದ್ದೇಶವೇ ಬೋಧನೆ –ಸಂಶೋಧನೆ – ವಿಸ್ತರಣೆ. ಪ್ರತಿಯೊಂದು ಕಾರ್ಯವೂ ಪರಸ್ಪರ ತಳಕು ಹಾಕಿಕೊಂಡಿದೆ. ಯಾವುದರೊಂದರ ಎಳೆ ತಪ್ಪಿದರೂ ಮೂಲಲಯದ ಹಳಿ ತಪ್ಪುತ್ತದೆ. ಇಂಥ ಕಾರ್ಯಗಳು ಹಳಿತಪ್ಪದಂತೆ ನೋಡಿಕೊಳ್ಳುವ ಜವಾಬ್ದಾರಿ ವಿಶ್ವವಿದ್ಯಾಲಯದ ಉನ್ನತ ಸ್ಥಾನಗಳಲ್ಲಿ ಇರುವವರ ಮೇಲಿರುತ್ತದೆ. ಇಂಥ ಒಂದು ಮಹತ್ತರ ಜವಾಬ್ದಾರಿಯಾದ ವಿಸ್ತರಣಾ ನಿರ್ದೇಶಕರ ಸ್ಥಾನದಲ್ಲಿದ್ದ ಡಾ. ಎಂ.ಎಸ್. ನಟರಾಜ್ ಅವರು ಅಕ್ಟೋಬರ್ 31, 2019ರಂದು ಸೇವೆಯಿಂದ ನಿವೃತ್ತರಾದರು.ಈ ಸಂದರ್ಭದಲ್ಲಿ “ಅಗ್ರಿಕಲ್ಚರ್ ಇಂಡಿಯಾ” ಅವರನ್ನು ಮಾತನಾಡಿಸಿತು. ತಮ್ಮ ಸುದೀರ್ಘ ಸೇವೆ ಅನುಭವಗಳನ್ನು  ಅವರು ಹಂಚಿಕೊಂಡಿದ್ದಾರೆ- ಸಂಪಾದಕರು

ಡಾ. ಎಂ.ಎಸ್. ನಟರಾಜು, ವಿಸ್ತರಣಾ ನಿರ್ದೇಶಕರು (ನಿವೃತ್ತ)

ಮೂಲತಃ ನಾನು ಚಾಮರಾಜನಗರ ಜಿಲ್ಲೆ ( ಆಗ ಅವಿಭಜಿತ ಮೈಸೂರು ಜಿಲ್ಲೆ) ಗುಂಡ್ಲುಪೇಟೆ ತಾಲ್ಲೂಕಿನ ಮೂಕರಹಳ್ಳಿ ಗ್ರಾಮದವನು. ನಿಮಗೆಲ್ಲ ಚಾಮರಾಜನಗರ ಜಿಲ್ಲೆಯ ಕೃಷಿ ಚಟುವಟಿಕೆಗಳು ತಿಳಿದಿವೆ. ಹೆಚ್ಚಿನ ಭಾಗ ಮಳೆಯಾಶ್ರಿತ ಪ್ರದೇಶ. ಇಂಥ ಪ್ರದೇಶದ ಕೃಷಿಕರ ಕುಟುಂಬದಿಂದ ನನಗೆ ಮೊದಲಿನಿಂದಲೂ ಕೃಷಿಕ್ಷೇತ್ರದಲ್ಲಿ ಸೇವೆ ಸಲ್ಲಿಸುವ ಹೆಬ್ಬಯಕೆ. ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಕೃಷಿಕಾಲೇಜಿಗೆ 1976ರಲ್ಲಿ ಸೇರ್ಪಡೆಯಾದೆ. ಬಿ.ಎಸ್ಸಿ,, ಎಂ.ಎಸ್ಸಿ ಪದವಿ ಪಡೆದೆ. ಮುಂದೆ ಕೊಯಮತ್ತೂರು ಜಿಲ್ಲೆಯಲ್ಲಿ ಇರುವ ತಮಿಳುನಾಡು ಕೃಷಿ ವಿಶ್ವವಿದ್ಯಾಲಯದಲ್ಲಿ ಪಿಎಚ್ಚ್.ಡಿ. ಮಾಡಿದೆ.
ನಾನು ವ್ಯಾಸಂಗ ಮಾಡಿದ ವಿಶ್ವವಿದ್ಯಾಲಯದಲ್ಲಿಯೇ ಕೃಷಿ ಸಂಶೋಧಕ ಕೆಲಸ ದೊರಕಿತು. 1982ರಲ್ಲಿ ಕೆಲಸಕ್ಕೆ ಸೇರ್ಪಡೆಯಾದೆ. ಮೊದಲಿಗೆ ಕೋಲಾರ ಜಿಲ್ಲೆ ಚಿಂತಾಮಣಿ ಸಂಶೋಧನಾ ಕೇಂದ್ರದಲ್ಲಿ ಕಾರ್ಯ. ಮಳೆಯಾಶ್ರಿತ ಜಿಲ್ಲೆಯಲ್ಲಿ ನಡೆಯುತ್ತಿದ್ದ ಕೃಷಿ ಸಂಶೋಧನೆ ಕಾರ್ಯಗಳಲ್ಲಿ ತೊಡಗಿಸಿಕೊಂಡೆ. ಆರಂಭದಲ್ಲಿಯೇ ಇಲ್ಲಿ ಕೆಲಸ ಮಾಡಿದ್ದು ಅಪಾರ ಅನುಭವ ಪಡೆಯುವಂತೆ ಮಾಡಿತು. ನಂತರ ತಾಂತ್ರಿ ಕ ಸಹಾಯಕ, ಸಹಾಯಕ ಪ್ರಾಧ್ಯಾಪಕ, ಪ್ರಾಧ್ಯಾಪಕ ಆಗಿ ವಿಶ್ವವಿದ್ಯಾಲಯ ವ್ಯಾಪ್ತಿಯ ವಿವಿಧ ಕಡೆಗಳಲ್ಲಿ ಕೆಲಸ ಮಾಡಿದೆ. ಇಲ್ಲಿಯ ಅನುಭವಗಳು ವಿಭಿನ್ನವಾಗಿದ್ದವು. ನನ್ನ ಅರಿವಿನ ಮಿತಿಯನ್ನು ಹೆಚ್ಚಿಸಿದವು.


ಮೊದಲಿನಿಂದಲೂ ನನಗೆ ಕೃಷಿ ವಿಸ್ತರಣಾ ಕಾರ್ಯಗಳಲ್ಲಿ ಆಸಕ್ತಿ. ಅದರಲ್ಲಿಯೂ ಅವಕಾಶವಿರುವ ಯುವಕರು ಗ್ರಾಮೀಣ ಪರಿಸರದಲ್ಲಿಯೇ ನೆಲೆ ನಿಂತು ಯೋಜನಾಬದ್ಧವಾದ ಕೃಷಿ ಮಾಡಲು ಅಗತ್ಯವಾದ ನೆರವು-ಮಾಹಿತಿ ನೀಡುದರತ್ತ ಒಲವು. ಈ ನಡುವೆ ಸಂವಹನ ವಿಭಾಗದಲ್ಲಿಯೂ ಬೇರೆಬೇರೆ ಜರ್ನಲ್ಗಳ ಸಂಫಾದಕನಾಗಿ ಕೆಲಸ ಮಾಡಿದೆ. ರಾಷ್ಟ್ರೀಯ ಪರಿಸರ ಅರಣ್ಯ ಪ್ರಾದೇಶಿಕ ಸಂಶೋಧನಾ ಕೇಂದ್ರ ಮುಖ್ಯಸ್ಥನಾಗಿಯೂ ಕೆಲಸ ಮಾಡಿದೆ. ಇದರ ವ್ಯಾಪ್ತಿಗೆ ಕರ್ನಾಟಕವೂ ಸೇರಿದಂತೆ ಐದು ರಾಜ್ಯಗಳು ಒಳಪಡುತ್ತವೆ. ಇಲ್ಲಿಯೂ ಸಂಶೋಧನೆ – ವಿಸ್ತರಣೆ ಕೆಲಸಕ್ಕೆ ಆದ್ಯತೆ ನೀಡಿದ್ದೆ.
ವಿಸ್ತರಣಾ ನಿರ್ಧೇಶಕರ ಜವಾಬ್ದಾರಿ:
ಕೃಷಿ ವಿಶ್ವವಿದ್ಯಾಲಯದ ವಿಸ್ತರಣಾ ನಿರ್ದೇಶಕರ ಜವಾಬ್ದಾರಿ ದೊರೆಯಿತು. ಇದು ಬಹು ಮಹತ್ವದ ವಿಭಾಗ. ಕೃಷಿಕರು ಮತ್ತು ಸಂಶೋಧನಾ ಕೇಂದ್ರದ ನಡುವೆ ಕೊಂಡಿಯಂತೆ ಕೆಲಸ ಮಾಡುತ್ತದೆ. ನನ್ನ ಗುರಿ ಇದ್ದಿದ್ದು ಕೃಷಿ ವಿಶ್ವವಿದ್ಯಾಲಯದ ಸಂಶೋಧನಾಲಯ ಮಾಡಿರುವ ಕಾರ್ಯಗಳನ್ನು ಕೃಷಿಕ ಸಮುದಾಯಕ್ಕೆ ತಲುಪಿಸುವುದು,ಈ ನಿಟ್ಟಿನಲ್ಲಿ ವಿಸ್ತರಣಾ ಸಿಬ್ಬಂದಿ ಸಾಮರ್ಥ್ಯವನ್ನು ಗರಿಷ್ಠ ಮಟ್ಟದಲ್ಲಿ ಬಳಕೆಯಾಗುವಂತೆ ಮಾಡುವುದು. ಇದರ ಜೊತೆಜೊತೆಗೆ ಕೃಷಿಕ ಸಮುದಾಯದ ಆದ್ಯತೆ, ಅವಶ್ಯಕತೆಗಳನ್ನು ಸಂಶೋಧನಾ ತಂಡದವರಿಗೆ ತಲುಪಿಸುವುದು. ಈ ಎರಡನ್ನು ನಮ್ಮ ವಿಭಾಗದವರು ಸಮನ್ವಯದಿಂದ ಮಾಡಿದೆವು.
ಬಹುಮಹತ್ವದ ಬದಲಾವಣೆಗಳು:

ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ನಿಜವಾದ ಅರ್ಥದಲ್ಲಿ ಕೃಷಿಕರನ್ನು –ಆಸಕ್ತರನ್ನು ತಲುಪುತ್ತಿದೆ. ಇದರಲ್ಲಿ ವಿಸ್ತರಣಾ ನಿರ್ದೇಶನಾಲಯ, ಕೃಷಿ ಸಂಶೋಧನಾಲಯದ ಪಾತ್ರ ಅಗಾಧ. ವಿವಿಧ ವಿಷಯಗಳಲ್ಲಿ ಕೃಷಿಕರಿಗೆ – ಆಸಕ್ತರಿಗೆ ತರಬೇತಿ ಡಿಪ್ಲೊಮ ಪದವಿ ನೀಡುತ್ತಿದ್ದೇವೆ. ಕೃಷಿ ಪರಿಕರಗಳ ಸುವ್ಯಸ್ಥಿತ ಮಾರಾಟಕ್ಕಾಗಿಯೂ ತರಬೇತಿ ನೀಡಿ ಡಿಪ್ಲೊಮ ಪದವಿ ನೀಡುತ್ತಿದ್ದೇವೆ. ಬೇಕರಿ ತರಬೇತಿ ನೀಡುತ್ತಿದ್ದೇವೆ. ಇದರ ಮುಖಾಂತರ ಗ್ರಾಮೀಣ-ನಗರ ಭಾಗಗಳ ಸಾವಿರಾರು ಸಂಖ್ಯೆಯ ಯುವಜನತೆ ಸ್ವ ಉದ್ಯೋಗ ಕಂಡು ಕೊಂಡಿದ್ದಾರೆ. ರೈತ ತರಬೇತಿ, ಸಿಬ್ಬಂದಿ ತರಬೇತಿ ಘಟಕ. 12 ವಿವಿಧ ರೀತಿಯ ಔಟ್ ರೀಚ್ ತರಬೇತಿ ಕೇಂದ್ರಗಳಿವೆ. ಮತ್ತೆಮತ್ತೆ ಹೇಳುವುದಾದರೆ ಯುವಕರು ಕೃಷಿಯಲ್ಲಿಯೇ ತೊಡಗಿಸಿಕೊಳ್ಳುವ ಕಾರ್ಯಕ್ಕೆ ಹೆಚ್ಚು ಆದ್ಯತೆ ನೀಡಿದ್ದೆ. ಮುಂದಿನ ದಿನಗಳಲ್ಲಿಯೂ ಈ ಕಾರ್ಯ ಮುಂದುವರಿಸುವ ಆಸಕ್ತಿ ಇದೆ

ಕ್ರಾಂತಿಕಾರಕ ಬದಲಾವಣೆ:
ದಶಕಗಳ ಹಿಂದಿನ ವಿಸ್ತರಣಾ ಕಾರ್ಯಚಟುವಟಿಕೆಗೆ ಹೋಲಿಸಿದರೆ ಇಂದು ಕ್ರಾಂತಿಕಾರಕ ಬದಲಾವಣೆಗಳಾಗಿವೆ. ಆಧುನಿಕ ಸಂವಹನ ವ್ಯವಸ್ಥೆ ನಮ್ಮ ನೆರವಿಗೆ ಬಂದಿದೆ. ಗಮನಾರ್ಹ ವಿಚಾರ ಎಂದರೆ ಅಷ್ಟೇ ಸವಾಲುಗಳು ನಮ್ಮೆದುರು ಇವೆ. ಸಂವಹನ ಮಾಧ್ಯಮದಲ್ಲಿ ಅಂಥ ಮಹತ್ವದ ಅಭಿವೃದ್ಧಿಯಾಗದೇ ಇರುವ ದಿನಗಳಲ್ಲಿ ಗ್ರಾಮೀಣ ಪ್ರದೇಶದಲ್ಲಿ ಕೃಷಿ ಮಾಡಲು ಅಗತ್ಯ ಸಂಖ್ಯೆಗಿಂತಲೂ ಹೆಚ್ಚಿನ ಯುವಕರಿದ್ದರು. ಆದರೆ ಇಂದು ಸಂವಹನ ಮಾಧ್ಯಮ ಅಪಾರವಾಗಿ ಬೆಳೆದಿದೆ. ಆದರೆ ಕೃಷಿ ಮಾಡಲು ಗ್ರಾಮಗಳಲ್ಲಿ ಅಗತ್ಯವಾದ ಸಂಖ್ಯೆಯ ಯುವಕರೇ ಇಲ್ಲ.
ಈ ಸಂಗತಿಯನ್ನು ನಾವು ಸವಾಲಾಗಿ ಸ್ವೀಕರಿಸಿದೆವು. ಕೃಷಿಯಲ್ಲಿ ಇಂದು ಎಂಥೆಂತ ಅಭಿವೃದ್ಧಿಗಳಾಗಿವೆ. ರೋಗ ನಿರೋಧಕ ತಳಿಗಳು ಅಪಾರ ಸಂಖ್ಯೆಯಲ್ಲಿ ಬಂದಿವೆ. ಕೃಷಿ ಪದ್ಧತಿಗಳು ಅಭಿವೃದ್ಧಿಗೊಂಡಿವೆ. ವಿವಿಧ ಹಂತದ ಕೃಷಿಕಾರ್ಯಗಳನ್ನು ಸರಾಗವಾಗಿ ಮಾಡಲು ಯಂತ್ರೋಪಕರಣಗಳು ಬಂದಿವೆ. ಕೃಷಿಕಾರ್ಮಿಕರ ಕೊರತೆ ನೀಗಿಸುವ ಯಂತ್ರಗಳು ಬಂದಿವೆ. ವಿಶೇಷವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಇರುವ ಸಣ್ಣ, ಅತಿಸಣ್ಣ ರೈತ ಸಮುದಾಯಕ್ಕೆ ಅನುಕೂಲವಾಗುವಂಥ ಯಂತ್ರೋಪಕರಣಗಳ ಆವಿಷ್ಕಾರವಾಗಿದೆ. ಇಷ್ಟೆಲ್ಲ ಸಂಗತಿಗಳನ್ನು – ಮಾಹಿತಿಗಳನ್ನು ವಿಸ್ತರಣಾ ನಿರ್ಧೇಶನಾಲಯದ ಮುಖಾಂತರ ಗ್ರಾಮೀಣ ಯುವಕರಿಗೆ ಗರಿಷ್ಠ ಮಟ್ಟದಲ್ಲಿ ತಲುಪಿಸಿದ ತೃಪ್ತಿ ಇದೆ.
ಕೃಷಿಮೇಳ ಮತ್ತು ವಿಸ್ತರಣೆ:

ಕೃಷಿ ವಿಶ್ವವಿದ್ಯಾಲಯ ಪ್ರತಿವರ್ಷ ನಡೆಸುವ ಕೃಷಿಮೇಳಗಳು ಕೃಷಿರಂಗದಲ್ಲಿ ಆಗಿರುವ ಬದಲಾವಣೆ-ಅಭಿವೃದ್ಧಿ-ಸಂಶೋಧನೆ ಸಂಗತಿಗಳನ್ನು ಕೃಷಿಕ ಸಮುದಾಯಕ್ಕೆ ತಲುಪಿಸುತ್ತದೆ. ಕೃಷಿಮೇಳಗಳನ್ನು ಸಂಘಟಿಸುವುದರಲ್ಲಿ ವಿಶ್ವವಿದ್ಯಾಲಯದ ಎಲ್ಲ ವಿಭಾಗಗಳು ಸಮನ್ವಯದಿಂದ ಕೆಲಸ ಮಾಡುತ್ತವೆ. ವಿಶೇಷವಾಗಿ ವಿಸ್ತರಣಾ ನಿರ್ದೇಶನಾಲಯದ ಹೊಣೆಗಾರಿಕೆ ಹೆಚ್ಚಿರುತ್ತದೆ.
2019ರ ಕೃಷಿಮೇಳದ ಕುರಿತು ಹೇಳುವುದಾದರೆ ಕುಲಪತಿ ಡಾ.ಎಸ್. ರಾಜೇಂದ್ರಪ್ರಸಾದ್ ನೇತೃತ್ವದಲ್ಲಿ ಬಹಳ ಸಂಘಟನಾತ್ಮಕವಾಗಿ – ಯೋಜನಾಬದ್ಧವಾಗಿ ಕೆಲಸ ಮಾಡಿದೆವು. 750ಕ್ಕೂ ಹೆಚ್ಚು ಮಳಿಗೆಗಳಿದ್ದವು. ಕೃಷಿ ಪ್ರಾತ್ಯಕ್ಷಿಕೆ ತಾಕುಗಳು – ಕೃಷಿ ವಸ್ತು ಪ್ರದರ್ಶನ ಗ್ರಾಮೀಣ ಮತ್ತು ನಗರ ಪ್ರದೇಶದ ಆಸಕ್ತರನ್ನು ಸೆಳೆಯಿತು. ಒಟ್ಟು ನಾಲ್ಕುದಿನಗಳಲ್ಲಿ 15 ಲಕ್ಷಕ್ಕೂ ಹೆಚ್ಚು ಜನ ಭೇಟಿ ನೀಡಿದ್ದು ಮಹತ್ತರ ಸಂಗತಿ. ಎಲ್ಲಿಯೂ ಗದ್ದಲ-ಗೊಂದಲಕ್ಕೆ ಆಸ್ಪದವಿಲ್ಲದಂತೆ ಕೆಲಸ ಮಾಡಿದ್ದು ಕೂಡ ಗಮನಾರ್ಹ.

ಡಾ. ನಟರಾಜು ಅವರು ನಿವೃತ್ತರಾದ ಸಂದರ್ಭದಲ್ಲಿ ಸನ್ಮಾನಿಸುತ್ತಿರುವ ಕುಲಪತಿ ಡಾ. ಎಸ್. ರಾಜೇಂದ್ರಪ್ರಸಾದ್ ಮತ್ತು ಸಿಬ್ಬಂದಿ

ಕೃಷಿಸೇವೆ ಮುಂದುವರಿಸುವ ಹೆಬ್ಬಯಕೆ: ಪ್ರಸ್ತುತ ಕೃಷಿವಿಶ್ವವಿದ್ಯಾಲಯದ 12 ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತನಾಗಿದ್ದೇನೆ. ಆದರೆ ಕೃಷಿಕ್ಷೇತ್ರದ ಸೇವೆಯಿಂದ ನಿವೃತ್ತನಾಗುವ ಮನಸ್ಸಿಲ್ಲ. ದೇಹದಲ್ಲಿ – ಮನಸಿನಲ್ಲಿ ಶಕ್ತಿ ಇರುವವರೆಗೂ ಕೃಷಿರಂಗದಲ್ಲಿ ದುಡಿಯುವ ಹೆಬ್ಬಯಕೆ ಇದೆ. ಇದಕ್ಕೆ ಸರ್ಕಾರ –ಖಾಸಗಿಕ್ಷೇತ್ರ ಅನುವು ಮಾಡಿಕೊಟ್ಟರೂ ಗಳಿಸಿರುವ ಅನುಭವವನ್ನು ಕೃಷಿಕ ಸಮುದಾಯದ ಅಭಿವೃದ್ಧಿಗೆ ತೊಡಗಿಸುತ್ತೇನೆ.

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: ಡಾ. ಎಂ.ಎಸ್. ನಟರಾಜು, ವಿಸ್ತರಣಾ ನಿರ್ದೇಶಕರು (ನಿವೃತ್ತ), ಕೃಷಿ ವಿಶ್ವವಿದ್ಯಾಲಯ, ಬೆಂಗಳೂರು
ಸಂಚಾರಿ ದೂರವಾಣಿ: 98865 94850

LEAVE A REPLY

Please enter your comment!
Please enter your name here