ದುರ್ಬಲ ಮಣ್ಣಿಗೆ ಚೇತರಿಕೆ ಕೊಡುವ ಬೆಳೆಯುಳಿಕೆಗಳು

0
?????????
ಲೇಖಕಕರು: ಮಂಜುನಾಥ್ ಜಿ., ಅಶೋಕ ಟ್ರಸ್ಟ್ ಫಾರ್ ರಿಸರ್ಚ್ ಇನ್ ಎಕೋಲಜಿ ಅಂಡ್ ದ ಎನ್ವಿರಾರ್ಮೆಂಟ್, (ಏಟ್ರಿ) ಬೆಂಗಳೂರು

ಭಾಗ – ೧

ಇಡೀ ದಕ್ಷಿಣ ಭಾರತದಲ್ಲಿ ಅಂದಾಜು 12 ಮಿಲಿಯನ್‌ ಹೆಕ್ಟೇರ್‌ ಭೂಮಿಯಲ್ಲಿ ಅತಿಯಾದ ರಾಸಾಯನಿಕ ಗೊಬ್ಬರಗಳ ಬಳಕೆ, ಏಕಬೆಳೆ, ವ್ಯವಸ್ಥಿತವಲ್ಲದ ಅತಿಯಾದ ನೀರಾವರಿ, ಸಾಂಪ್ರದಾಯಿಕ ಕೃಷಿ ಭೂಮಿ ನಿರ್ವಹಣಾ ಪದ್ಧತಿಗಳ ನಿರ್ಲಕ್ಷ್ಯ, ಸವಳು ಮಣ್ಣು ಹೀಗೆ ಹಲವಾರು ಕಾರಣಗಳಿಂದಾಗಿ ಇಂದು ಭೂಮಿಯ ಉತ್ಪಾದನಾ ಸಾಮರ್ಥ್ಯ ಕಡಿಮೆಯಾಗಿದೆ.

ಹೀಗೇ ಫಲವತ್ತತೆ ಕಳೆದುಕೊಂಡಿರುವ ಭೂಮಿ ಹೊಂದಿರುವ ರಾಜ್ಯಗಳಲ್ಲಿ ಕರ್ನಾಟಕದ ಪಾಲು ದೊಡ್ಡದಿದೆ. ರಾಯಚೂರು ಜಿಲ್ಲೆಯಲ್ಲಿ ಜೀವ ವೈವಿಧ್ಯತೆ ಕುರಿತಾಗಿ ನಡೆದ ಒಂದು (Alliance For Reversing Ecosystem Service Threats- AREST) ಅಧ್ಯಯನದಲ್ಲಿ ಕಳೆದ 20 ವರ್ಷಗಳಲ್ಲಿ 90,000 ಹೆಕ್ಟೇರ್ ಭೂಮಿ ಬಳಕೆಯು ಗಣನೀಯವಾಗಿ ಬದಲಾಗಿರುವುದು ಈ ಅಧ್ಯಯನ ತಂಡದ ಗಮನಕ್ಕೆ ಬಂದಿತ್ತು. ಹಾಗಾಗಿ ಇಲ್ಲಿಯೇ ವೈಜ್ಞಾನಿಕ ಮಾನದಂಡ ಮತ್ತು ಸಾಂಪ್ರದಾಯಿಕ ದೇಸಿ ತಂತ್ರಗಳನ್ನು ಬಳಸಿ ಭೂಮಿಯ ಫಲವತ್ತತೆಯನ್ನು ಹೆಚ್ಚಿಸುವ ಜೊತೆಗೆ ಭೂಮಿಯ ಉತ್ಪಾದನಾ ಸಾಮರ್ಥ್ಯ ಬದಲಾಗುವುದುದನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಾ ಅಧ್ಯಯನ ಮಾಡಲು ಯೋಜನೆಯೊಂದನ್ನು ಕಳೆದ 30 ವರ್ಷಗಳಿಂದ ಸ್ಥಳೀಯ ಗ್ರಾಮೀಣ ಸಮುದಾಯಗಳೊಂದಿಗೆ ಕೆಲಸ ಮಾಡುತ್ತಿರುವ “ಪ್ರಾರಂಭ” ಸಂಸ್ಥೆಯ ಸಹಭಾಗಿತ್ವದಲ್ಲಿ ರೂಪಿಸಲಾಯಿತು.

ಕೃಷಿತಜ್ಸಾಞ ಯಿಲ್‌ ವಾಸು ಅವರು ಮಣ್ಣನ್ನು ಫಲವತ್ತುಗೊಳಿಸುವ ವಿಧಾನಗಳ ಬಗ್ಗೆ ವಿವರಿಸುತ್ತಿರುವುದು

ಕಡಿಮೆ ಉತ್ಪಾದನಾ ಸಾಮರ್ಥ್ಯದ ಭೂಮಿಯ ಪುನಶ್ಚೇತನಕ್ಕಾಗಿ ಮೊದಲ ಹಂತದಲ್ಲಿ 118 ಹೆಕ್ಟೇರ್ ಪ್ರದೇಶ ಆಯ್ಕೆ

ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಸ್ಥಳೀಯ ಸಮುದಾಯಗಳೊಂದಿಗೆ ಸಮಾಲೋಚಿಸಿ ಮೊದಲಿಗೆ 118 ಹೆಕ್ಟೇರ್ ಭೂಮಿಯನ್ನು ಆಯ್ಕೆ ಮಾಡಲಾಯಿತು (27 ಹೆಕ್ಟೇರ್ ಖಾಸಗಿ ಮತ್ತು 91 ಹೆಕ್ಟೇರ್ ಗುಡ್ಡ -ಗೋಮಾಳ, ಸಾರ್ವಜನಿಕ ಜಮೀನು) ತಾಲ್ಲೂಕಿನ ಅಮರಾಪುರ ಗ್ರಾಮ ಪಂಚಾಯಿತಿಯ ಮುಕ್ಕನಾಳ್, ಪರಾಪುರ, ಮತ್ತು ಗಾಜಲದಿನ್ನೆ,ಗ್ರಾಮಗಳನ್ನು ಅಯ್ಕೆ ಮಾಡಿ ಅಲ್ಲಿನ  ನೀರು, ಮಣ್ಣು, ಪರೀಕ್ಷೆ ಮಾಡಲಾಗಿದ್ದು. ಜೀವ ವೈವಿಧ್ಯ, ಜನ ಜೀವನ, ಸಾಮಾಜಿಕ- ಆರ್ಥಿಕ ಸಮೀಕ್ಷೆ ಕೃಷಿ ಬಗ್ಗೆ ಮಾಹಿತಿ ಸಂಗ್ರಹ ಮಾಡಲಾಗಿದ್ದು, ರೈತರೊಂದಿಗೆ ಈ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ.

ಇಲ್ಲಿ ಅವೈಜ್ಞಾನಿಕವಾಗಿ ಅತಿಯಾದ ನೀರಾವರಿ ಮತ್ತು ನಿರ್ವಹಣೆಯಿಲ್ಲದೇ ಮೇಲ್ಮಣ್ಣು ಕೊಚ್ಚಿ ಹೋಗಿರುವ ಪರಿಣಾಮ ಕೃಷಿ ಭೂಮಿ ಸವಳಾಗಿದೆ, ಇಂತಹ ಭೂಮಿಯ ರೈತರ ಜೊತೆ ಕೆಲಸ ಮಾಡಲಾಗುತ್ತಿದೆ. ಈ ರೈತರ ಕೃಷಿ ಒಳಸುರಿ ಕಡಿಮೆ ಮಾಡಿಸುವ ಸಾಂಪ್ರದಾಯಿಕ ವಿಧಾನಗಳ ಜೊತೆಗೆ ತಮ್ಮ ಮಣ್ಣಿನ ಗುಣಮಟ್ಟವನ್ನು ರೈತರೇ ಪರೀಕ್ಷೆ ಮಾಡಿ ಸುಲಭವಾಗಿ ಅರ್ಥಮಾಡಿಕೊಳ್ಳುವ ಬಗ್ಗೆ, ಸಾಯಿಲ್‌ ಸಂಸ್ಥೆಯ ಸಾಯಿಲ್‌ ವಾಸು ಮತ್ತು ಮಳೆಯಾಶ್ರಿತ ಜಮೀನಿನಲ್ಲಿ 16 ಬೆಳೆ ಸಂಯೋಜನೆ ಮಾಡಿ ಸಾವಯವ ಕೃಷಿ ವಿಧಾನದಲ್ಲಿ ಅಕ್ಕಡಿಸಾಲು ಪದ್ಧತಿಯಲ್ಲಿ ಕೃಷಿ ಮಾಡುತ್ತಿರುವ ಮುಳಬಾಗಿಲು ಪ್ರಗತಿಪರ ರೈತರಾದ ಪ್ರಭಾಕರ್‌ರವರು ರೈತರೊಂದಿಗೆ ನಡೆಸಿಕೊಟ್ಟ ಪ್ರಾತ್ಯಕ್ಷಿಕ ತರಬೇತಿಯ ವರದಿ.

ಸವಳು ಭೂಮಿಯ ಸಮಸ್ಯೆ ಎದುರಿಸುತ್ತಿರುವ ಮಣ್ಣಿನ ಪುನಶ್ಚೇತನಕ್ಕೆ ಸರಳ ಸುಸ್ಥಿರ ಹೊಸ ವಿಧಾನಗಳ ಕುರಿತ ಪ್ರಾತ್ಯಕ್ಷಿಕ ತರಬೇತಿ ಕಾರ್ಯಾಗಾರ

ರಾಯಚೂರಿನ ದೇವದುರ್ಗ ತಾಲೂಕಿನಲ್ಲಿ ನಡೆದ ಎರಡು ದಿನಗಳ ಕಾರ್ಯಾಗಾರದಲ್ಲಿ ಸುಮಾರು 35 ರೈತರು ಪಾಲ್ಗೊಂಡು ತಮ್ಮ ಮಣ್ಣಿನ ಗುಣಮಟ್ಟ ಮತ್ತು ಭೂಮಿಯ ಉತ್ಪಾದಕತೆಯನ್ನು ಸುಧಾರಿಸುವ ಸುಸ್ಥಿರ ಅಭ್ಯಾಸಗಳ ಬಗ್ಗೆ ತಿಳಿಯಲು, ಈ ಕಾರ್ಯಾಗಾರವನ್ನು ಸಿ.ಎಸ್‌.ಸಿ.ಐ–ಏಟ್ರೀ, ಪ್ರಾರಂಭ ಮತ್ತು ಸಾಯಿಲ್‌ ಟ್ರಸ್ಟ್‌ ಜೊತೆಯಾಗಿ ಆಯೋಜಿಸಲಾಗಿತ್ತು.

ರೈತ ಶಿವರಾಜ್‌ ತಂದೆ ಸಾಬುಗೌಡರವರು ಸವಳು ಮಣ್ಣಿನ ತೊಂದರೆಗೆ ಒಳಗಾಗಿರುವ ತಮ್ಮ ಜಮೀನಿನ ಮಣ್ಣಿನ ಗುಣಮಟ್ಟ ತಿಳಿಯಲು ಮಣ್ಣನ್ನು ಸರಳ “ಬಾಟಲ್‌ ವಿಧಾನ”ದಲ್ಲಿ ಪರೀಕ್ಷೆ ಮಾಡಲು ತಂದಿದ್ದರು. ಅರ್ಧ ಪಾರದರ್ಶಕ ಪ್ಲಾಸ್ಟಿಕ್ ಬಾಟಲಿಯನ್ನು ಮಣ್ಣಿನಿಂದ ತುಂಬಿಸಿ, ಉಳಿದ ಭಾಗವನ್ನು ನೀರಿನಿಂದ, ಸ್ವಲ್ಪ ಖಾಲಿ ಬಿಟ್ಟರು. ಅದನ್ನು ಬಲವಾಗಿ ಅಲ್ಲಾಡಿಸಿದ ನಂತರ, ಮಣ್ಣಿನ ಕಣಗಳು ವಿವಿಧ ಪದರಗಳಲ್ಲಿ ನೆಲೆಗೊಂಡಿರುವುದನ್ನು ನೋಡಲು ಕೆಲವು ಗಂಟೆಗಳ ಕಾಲ ಪಕ್ಕಕ್ಕೆ ಇಟ್ಟರು.

ಪ್ರತಿ ಪದರದ ಗಾತ್ರದ ಮೇಲೆ ಅವರ ಕೃಷಿ ಜಮೀನಿನ ಮಣ್ಣಿನಲ್ಲಿ – ಮರಳು, ಹೂಳು, ಜೇಡಿಮಣ್ಣು ಮತ್ತು ಸಾವಯವ ವಸ್ತು ಎಷ್ಟಿವೆ, ಭೂಮಿಯು ಕೃಷಿಯೋಗ್ಯವಾಗಿದೆಯೇ ಎಂಬುದನ್ನು ತಿಳಿಯಲು ಈ ಸರಳ ಪ್ರಯೋಗ ಉಪಯೋಗಕ್ಕೆ ಬಂತು ಎಂದು ಶಿವರಾಜ್‌ ತಿಳಿಸಿದರು,

ಈ ಪರೀಕ್ಷೆಯನ್ನು ರೈತರು ತಾವೇ ಮಾಡಬಹುದು. ಬೇಕಾಗಿರುವುದು ಒಂದು ಪಾರದರ್ಶಕ ಪ್ಲಾಸ್ಟಿಕ್ ಬಾಟಲ್, ಮಣ್ಣು ಮತ್ತು ನೀರು. ಈ ಪ್ರಯೋಗಗಳು ಆರೋಗ್ಯಕರ ಮಣ್ಣಿನ ಲಕ್ಷಣಗಳು ಮತ್ತು ಅದರ ಪುನಶ್ಚೇತನದ ಮಹತ್ವವನ್ನು ಹೆಚ್ಚು ಅರಿತುಕೊಳ್ಳಲು ನನಗೆ ಸಹಾಯವಾಗಿದೆ’ ಎಂದು ಕಾರ್ಯಾಗಾರದಲ್ಲಿ ಮುಕ್ಕನಾಳ್ ಗ್ರಾಮದ ರೈತರಾದ ನಾಗಪ್ಪ ತಂದೆ ನರಸಪ್ಪ ಹೇಳಿದರು.

ಮಣ್ಣಿನ ಆರೋಗ್ಯವನ್ನು ಉತ್ತೇಜಿಸಲು ಪ್ರಾತ್ಯಕ್ಷಿಕ ತರಬೇತಿಗಳನ್ನು ನಡೆಸುತ್ತಿರುವ SOILನ ಸಂಸ್ಥಾಪಕರಾದ ಸಾಯಿಲ್ ವಾಸು, ಮಣ್ಣಿನ ಆರೋಗ್ಯ ಕಾಪಾಡಿಕೊಳ್ಳುವ ಸಾಂಪ್ರದಾಯಿಕ ವಿಧಾನಗಳು ಕಡಿಮೆಯಾಗಿ ಭೂಮಿಯ ಫಲವತ್ತತೆ ಕಡಿಮೆಯಾಗಿ ಹವಾಮಾನ ಬದಲಾವಣೆಯೂ ಆಗುತ್ತದೆ. ಜೊತೆಗೆ ಮಣ್ಣಿನ ಆರೋಗ್ಯವೇ ಸರಿಯಿಲ್ಲದಾಗ ಅಲ್ಲಿನ ಬೆಳೆ ಆರೋಗ್ಯವಾಗಿರಲು ಸಾಧ್ಯವೇ ಇಲ್ಲಾ, ಅನಾರೋಗ್ಯವಾಗಿರುವುದು ಮಣ್ಣಿಗೆ ಅದನ್ನು ಗಮನಿಸದೇ ನಾವು ಬೆಳೆಯುವ ಬೆಳೆಗೆ ಕೀಟಬಾಧೆಯಾಗಿದೆ ಎನ್ನುತ್ತಾ ವಿಷ ಸುರಿಯುತ್ತಿದ್ದೇವೆ. , ಆರೋಗ್ಯವಂತ ಸಜೀವಿ ಮಣ್ಣು ಮಾತ್ರವೇ ರೈತರಿಗೆ ಆರ್ಥಿಕ ಸಂಕಷ್ಟದಿಂದ ಹೊರಗೆ ತರಬಲ್ಲದು ಹಾಗಾಗಿ ಇಂದು ನಾವು ಕೆಲಸ ಮಾಡಬೇಕಿರುವುದು ಮಣ್ಣಿನ ಆರೋಗ್ಯ ಸುಧಾರಿಸಲು ಅದೂ ಸಹಜ ರೀತಿಯಲ್ಲೇ ಹೊರತು ಮತ್ತದೇ ದುಬಾರಿ ಒಳಸುರಿಯ ಆಧುನಿಕ ತಂತ್ರಜ್ಞಾನದಿಂದಲ್ಲ ಎಂದರು.

ರಾಯಚೂರಿನಲ್ಲಿ ಇಂತಹ ಕಾರ್ಯಾಗಾರ ನಡೆದಿದ್ದು ಮೊದಲ ಬಾರಿಗೆ.

ಸಾಯಿಲ್‌ ವಾಸುರವರು ಈ ಕಾರ್ಯಕ್ರಮ ಆಯೋಜಿಸಲು CSEI-ATREE ಸಹಾಯ ಮಾಡಿದ ಎರಡನೇ ಕಾರ್ಯಾಗಾರ ಇದು – ಮೊದಲನೆಯದು ಕೋಲಾರ ಜಿಲ್ಲೆಯ ಮುಳಬಾಗಲು ತಾಲೂಕಿನ ತೊಂಡಹಳ್ಳಿ ಗ್ರಾಮದಲ್ಲಿ. ರಾಯಚೂರಿನಲ್ಲಿ ಇದು ಮೊದಲನೆಯದು, ಜೊತೆಗೆ ರಾಯಚೂರು ಜಿಲ್ಲೆ, ನಮ್ಮ ಸಾಮಾಜಿಕ ಮತ್ತು ಪರಿಸರ-ಜವಾಬ್ದಾರಿಯೊಂದಿಗೆ ಪುನಶ್ಚೇತನ ಮಾಡುವ ಸಂಶೋಧನೆ ನಡೆಯುತ್ತಿರುವ ಜಿಲ್ಲೆಯಾಗಿದೆ.

ಅರೆ-ಶುಷ್ಕ ಕರ್ನಾಟಕದ ರೈತ ಸಮುದಾಯಗಳೊಂದಿಗೆ ಕೆಲಸ ಮಾಡಿದ ವರ್ಷಗಳ ಅನುಭವದ ಆಧಾರದ ಮೇಲೆ ಸಾಯಿಲ್‌ ವಾಸುರವರು ರಚಿಸಿದ ಪ್ರಾತ್ಯಕ್ಷಿಕ ಆಧಾರಿತ ಕಾರ್ಯಾಗಾರ ಇದಾಗಿದೆ. ಕಾರ್ಯಾಗಾರದ ವಿಷಯವೂ ಸಹ ವಿವಿಧ ಭೂ ಪ್ರದೇಶಗಳಿಗೆ ವಿವಿಧ ಹವಾಮಾನದಲ್ಲಿ ಬೇಸಾಯ ಮಾಡುತ್ತಿರುವ ಮಣ್ಣುಗಳಿಗೆ ಸೂಕ್ತವಾದ ವಿಷಯ-ವಸ್ತುಗಳನ್ನು ಒಳಗೊಂಡಿದೆ.

ಈ ಕಾರ್ಯಾಗಾರಗಳಲ್ಲಿ ಮುಖ್ಯವಾಗಿ ಸ್ಥಳೀಯ ರೈತರ ಸಮಸ್ಯೆಗಳು ಮತ್ತು ಅವರ ಅವಶ್ಯಕತೆಯನ್ನು ನಾವು ಅರಿತುಕೊಂಡಿದ್ದೇವೆ – ಹೆಚ್ಚಿನ ರೈತರು ಎರಡು ಎಕರೆಗಿಂತ ಕಡಿಮೆ ಜಮೀನು ಹೊಂದಿರುವವರು, ಮಳೆಯಾಶ್ರಿತ ಕೃಷಿಯ ಮೇಲೆ ಅವಲಂಬಿತರಾಗಿದ್ದಾರೆ ಮತ್ತು ಮಣ್ಣಿನ ಫಲವತ್ತತೆ ಕಡಿಮೆ ಇರುವ ಕಾರಣದಿಂದಾಗಿ ಕೃಷಿ ಮಾಡುವುದೇ ಕಷ್ಟವಾಗುತ್ತಿದೆ.

ಈ ಮಣ್ಣಿನ ಫಲವತ್ತತೆ ಹೆಚ್ಚಾಗದೇ ಬೆಳೆ ಇಳುವರಿ ಮತ್ತು ಮೇವು ಹೆಚ್ಚಾಗಿ ಸಿಗುವುದಿಲ್ಲ, ಇವೆಲ್ಲವೂ ಒಂದಕ್ಕೊಂದು ಪೂರಕವಾಗಿ ಸುಧಾರಣೆಯಾಗಲೇಬೇಕಾದ ಅಂಶಗಳಾಗಿವೆ, ಹಾಗಾಗಿಯೇ ರೈತನಿಗೆ ಆರ್ಥಿಕವಾಗಿಯೂ ಹೊರೆಯಾಗುತ್ತಿರುವ ಒಳಸುರಿಯನ್ನು ಕಡಿಮೆ ಮಾಡುತ್ತಾ ಉತ್ಪಾದನೆ ಹೆಚ್ಚು ಮಾಡುವುದು ಹೇಗೆ ಎಂಬುದರ ಕುರಿತಾಗಿ ಪ್ರಾರಂಭ ಸಂಸ್ಥೆಯು ಕಳೆದ 30 ವರ್ಷಗಳಿಂದ ಈ ಪ್ರದೇಶದಲ್ಲಿ ಗ್ರಾಮೀಣಾಭಿವೃದ್ಧಿ ಕಾರ್ಯದಲ್ಲಿ ತೊಡಗಿಸಿಕೊಂಡಿರುವುದರಿಂದ, ಅವರು ವಾಸುರವರೊಂದಿಗೆ ಈ ಹಿನ್ನೆಲೆಯ ಮಾಹಿತಿಯನ್ನು ಇಟ್ಟುಕೊಂಡೇ ಈ ಕಾರ್ಯಾಗಾರವನ್ನು ವಿನ್ಯಾಸಗೊಳಿಸಿದ್ದರು.

ಬೇಸಾಯಕ್ಕೆ ಮುಖ್ಯವಾಗಿ ಬೇಕಾದ ಫಲವತ್ತಾದ ಮೇಲ್ಮಣ್ಣಿನ ಸವಕಳಿ‌ ಒಂದು ದೊಡ್ಡ ಸಮಸ್ಯೆಯಾಗಿದೆ ಅದನ್ನು ತಡೆಗಟ್ಟುವುದು ಮತ್ತು ಬೆಳೆಯುಳಿಕೆಗಳನ್ನು ಸುಡದೇ ಅವನ್ನೇ ಗೊಬ್ಬರವಾಗಿ ಬಳಸುವ ಕುರಿತಾಗಿ ಈ ಕಾರ್ಯಾಗಾರವು ರೈತರಿಗೆ ಹೆಚ್ಚು ಮಹತ್ವವುಳ್ಳದ್ದಾಗಿತ್ತು. ಮಣ್ಣಿನ ಆರೋಗ್ಯದ ಸುಧಾರಣೆ ಎನ್ನುವುದು ಬೇಸಾಯದ ಜಮೀನುಗಳಿಗೆ ಮಾತ್ರವಲ್ಲದೆ ಆಹಾರ ಮತ್ತು ಪೌಷ್ಟಿಕಾಂಶದ ಭದ್ರತೆಗೆ ಹೇಗೆ ಭದ್ರ ಬುನಾದಿಯಾಗಿದೆ ಎಂಬುದರ ಕುರಿತು ರೈತರೊಂದಿಗೆ ಆಳವಾದ ಚರ್ಚೆಯೊಂದಿಗೆ ದೇವದುರ್ಗ ತಾಲೂಕಿನಲ್ಲಿ ಅನೇಕ ಮಕ್ಕಳ ಅಪೌಷ್ಟಿಕತೆಯ ಬಗ್ಗೆ ತಿಳಿಸಿದರು.

“ತಿನ್ನುವ ಆಹಾರ ಮತ್ತು ಜನರ ಆರೋಗ್ಯ ಬೆಳೆಯುವ ಮಣ್ಣಿನ ಮೇಲೆ ಅವಲಂಬಿಸಿದೆ” ಅತಿಯಾದ ರಸಗೊಬ್ಬರಗಳ ಬಳಕೆಯು ಮಣ್ಣಿನ ಜೀವವೈವಿಧ್ಯಕ್ಕೆ ಹಾನಿಕಾರಕವಾಗಿದೆ, ಸ್ಥಳೀಯವಾಗಿ ಲಭ್ಯವಿರುವ ಸಂಪನ್ಮೂಲಗಳನ್ನು ಹಾಗೂ ಸುಸ್ಥಿರ ವಿಧಾನಗಳನ್ನು ಬಳಸಿಕೊಂಡು ಸುಧಾರಣೆ ಮಾಡಬೇಕು

ಎರಡನೇ ದಿನದ ಪ್ರಾಯೋಗಿಕ ಕಾರ್ಯಕ್ರಮ ಸವಳು ಸಮಸ್ಯೆಗೆ ಒಳಗಾಗಿ ಫಲವತ್ತತೆ ಕೊರತೆಯಾಗಿರುವ ರೈತರ ಜಮೀನುಗಳಲ್ಲೇ ನಡೆಯಿತು. ಮಣ್ಣಿನ ಫಲವತ್ತತೆ ಹೆಚ್ಚಿಸಲು ಹಸಿರು ಎಲೆ ಗೊಬ್ಬರವನ್ನು ಹೇಗೆ ತಯಾರಿಸುವುದು. ಕೃಷಿಗೆ ಭೂಮಿಯನ್ನು ಸಿದ್ಧಪಡಿಸಲು ರೈತರು ರೂಢಿಯಂತೆ ಬೆಂಕಿ ಹಚ್ಚುವ ಕೆಲಸ ಮಾಡುತ್ತಾರೆ ಏಕೆಂದರೆ ಅವರ ಪ್ರಕಾರ ಈ “ತ್ಯಾಜ್ಯ”’ವನ್ನು ಗೊಬ್ಬರವಾಗಿ ಪರಿವರ್ತಿಸುವುದು ಕಷ್ಟವಾಗಿದೆ. ಹಾಗಾಗಿ ಬೆಳೆಯುಳಿಕೆಗಳು, ಸಗಣಿ ಮತ್ತು ಗಂಜಲ ಬಳಸಿ ಸುಲಭವಾಗಿ “ಬಿಸಿ ಕಾಂಪೋಸ್ಟ್‌” ಆಗಿ ಪರಿವರ್ತಿಸಬಹುದು ಎನ್ನುವುದನ್ನು ತೋರಿಸಿಕೊಟ್ಟರು. ಹೀಗೆ ಮಾಡುವುದರಿಂದ ಸಾವಯವ ಇಂಗಾಲ ಸೇರಿದಂತೆ ಬೆಳೆಯುಳಿಕೆಯ ಪೋಷಕಾಂಶಗಳು ಭೂಮಿಗೆ ಮರಳಿ ಸೇರುತ್ತವೆ. ವಿವಿಧ ರೀತಿಯಲ್ಲಿ ಜಮೀನಿಗೆ ಮುಚ್ಚಿಗೆ ಕೊಡುವುದರಿಂದಾಗಿ ಸೂರ್ಯನ ಬಿಸಿಲು ನೇರವಾಗಿ ಬೀಳದೇ ಮಣ್ಣಿನೊಳಗಿನ ಸೂಕ್ಷ್ಮಾಣುಜೀವಿಗಳು ಕೆಲಸ ಮಾಡುತ್ತಾ ಮಣ್ಣಿನ ಜೈವಿಕ ಮತ್ತು ರಚನಾತ್ಮಕ ಗುಣಮಟ್ಟವನ್ನು ಹೆಚ್ಚಿಸುವ ಕೆಲಸ ಮಾಡುತ್ತವೆ.

ಈ ಮಾತುಕತೆ ಕೊನೆಯಲ್ಲಿ “ನಾಲ್ವರು ರೈತರು ಸ್ವಯಂಪ್ರೇರಿತರಾಗಿ ಬೆಳೆಯುಳಿಕೆಗಳ ಸುಡುವುದನ್ನು ನಿಲ್ಲಿಸುವ ನಿರ್ಧಾರ ಮಾಡಿದ್ದರುಆ ಮಟ್ಟಿಗೆ  ಈ ಮಾತುಕತೆ ಫಲಪ್ರದವಾಗಿತ್ತು.

ಲೇಖನ ರೂಪಿಸುವುದರಲ್ಲಿ ಸಹಕಾರ ನೀಡಿದವರು: ಸಂದೀಪ್‌ ಹಂಚನಾಳೆ CSEI-ATREE, Bangalore

ಮುಂದುವರಿಯುತ್ತದೆ

LEAVE A REPLY

Please enter your comment!
Please enter your name here