ಹಾವೂ ಬದುಕಿತು,ನಾನೂ ಬದುಕಿ ಉಳಿದೆ

0
ಇಲ್ಲಿರುವುದು ಸಾಂದರ್ಭಿಕ ಚಿತ್ರ. ಹಿಂದೊಮ್ಮೆ ಮನೆಯಂಗಳಕ್ಕೆ ಬರುತ್ತಿದ್ದ ನಾಗರವನ್ನು ನಮ್ಮ ಬೆಕ್ಕುಗಳು ಅಡ್ಡಗಟ್ಟಿ ಓಡಿಸಿದ್ದವು. ಆಗಲೂ ಬೆಕ್ಕುಗಳನ್ನು ಬಚಾವು ಮಾಡಲು ಮಿಂಚಿನ ಕಾರ್ಯಾಚರಣೆ ಮಾಡಬೇಕಾಗಿ ಬಂದಿತ್ತು. ಈ ಹಿಂದೆ ವಿವರವಾಗಿ ಬರೆದಿದ್ದೆ.
ಲೇಖಕರು: ಶ್ರೀನಿವಾಸಮೂರ್ತಿ, ಕೃಷಿಕರು, ಶೃಂಗೇರಿ

ಹಳ್ಳದ ಬದಿ ತೋಟದ ಆ ಕಿರು ಕಾಲುದಾರಿಯ ಇಳುಕಲಿನಲ್ಲಿ ಇಳಿಯತೊಡಗಿದಾಗ ಏಕಾಏಕಿ ಎಡಗಾಲಿಗೆ ಏನೋ ತೊಡರಿದಂತಾಯಿತು. ಆಚೀಚೆ ನೆಲ ಮುಚ್ಚಿದ್ದ ಕಾಫಿ ಗಿಡದ ರೆಂಬೆಗಳು,ಕಲ್ಲು ಕೊಟರುಗಳು, ಜಿಗಿದೋಡುವ ಹಳ್ಳದ ಹರಿವಿನ ಶಬ್ದ.

ಬಿರು ಬಿಸಿಲಿನಲ್ಲೂ ತಣ್ಣಗಿದ್ದ ವಸ್ತು ಅದು ಎಂದು ಅರಿವಾದಾಗ ಅದು ಹಾವಲ್ಲದೇ ಮತ್ತೇನೂ ಇರಲು ಸಾಧ್ಯವಿಲ್ಲವಲ್ಲಾ. ಹಾಗೆಂದು ಯಾವ ಹಾವೆಂದು ಬಗ್ಗಿ ನೋಡುವಂತೆಯೂ ಇರಲಿಲ್ಲ ನನ್ನ ಪರಿಸ್ಥಿತಿ. ಅದನ್ನು ತುಳಿದಿಲ್ಲವಲ್ಲಾ ಎಂಬ ಸಮಾಧಾನ ಇದ್ದರೂ ನಾಗರವೇ ಆಗಿದ್ದರೆ ? ಕೈ ಕಾಲು ಸೋಕಿದ್ದಕ್ಕೂ ಅವು ಕಚ್ಚಿದ ಹಲವು ಉದಾಹರಣೆ ಉಂಟಲ್ಲಾ.

ಕ್ಷಣಾರ್ಧದಲ್ಲಿ ಪೂರ್ವ ನಿರ್ಧಾರಿತ ಚಲನೆಯನುಸಾರ ನನ್ನ ಬಲಗಾಲೂ ಎದ್ದು ಮುಂದಕ್ಕೆ ಚಲಿಸಿತ್ತು. ಅದಕ್ಕೂ ತಣ್ಣನೆಯ ಅನುಭವವಾದಾಗ ತಲ್ಲಣಿಸಿಹೋಗಿದ್ದೆ. ಕಾಲು ಕಡೆಗೆ ನೋಡಲು ತಲೆಯ ಮೇಲಿದ್ದ ಸೊಪ್ಪಿನ ಹೊರೆ ಅಡ್ಡಿಯಾಗಿತ್ತು. ಬಗ್ಗಿದರೆ ಆ ಹೊರೆ ಹಾವಿನ ಮೇಲೇ ಬಿದ್ದು ಅನಾಹುತ ಸಂಭವಿಸುವ ಸಾಧ್ಯತೆ ಇರುವುದೂ ಸೇರಿದಂತೆ ಹತ್ತು ಹಲವು ಆಲೋಚನೆ / ಉಪಾಯ ಅಪಾಯಗಳ ಗೊಂದಲದಲ್ಲಿ ಮೈ ಬಿಸಿಯೇರಿ ಕಾಲುಗಳು ಮರಗಟ್ಟತೊಡಗಿದ್ದವು.

ಅಷ್ಟರಲ್ಲಾಗಲೇ ಹಾವು ನನ್ನ ಬಲಗಾಲಿನ ಪಾದಗಂಟಿನ ಮೇಲೆ ಸುತ್ತು ಹಾಕಿಕೊಂಡಿರುವುದು ಅನುಭವಕ್ಕೆ ಬಂತು. ತಲೆ ಹೊರೆಯನ್ನು ಶಕ್ತಿ ಮೀರಿ ದೂರಕ್ಕೆಸೆದು ಬಗ್ಗುವಷ್ಟರಲ್ಲಿ ನನಗರಿವಿಲ್ಲದೇ ಅಯ್ಯೋ ಎಂಬ ತಾರಕ ದ್ವನಿ ಹೊರಡಿಸಿಬಿಟ್ಟಿದ್ದೆ.

ತನ್ನ ಶರೀರದ ನಡುಭಾಗವನ್ನು ನನ್ನ ಕಾಲಿಗೆ ಸುತ್ತಿದ್ದ ಹಾವು ಮುಂಭಾಗವನ್ನು ಎತ್ತರಿಸಿ ಹೆಡೆಬಿಚ್ಚುವಷ್ಟರಲ್ಲಿ ನನಗರಿವಿಲ್ಲದೆ ಸೊಂಟದ ಒಡ್ಯಾಣದಲ್ಲಿದ್ದ ಕತ್ತಿ ಕ್ಷಣಾರ್ಧದಲ್ಲಿ ಕೈಗೆ ಬಂದಿತ್ತು. ಸರಕ್ಕನೆ ಸುತ್ತು ಸಡಿಲಿಸಿದ ಹಾವು ಒಂದಡಿ ಸಾಗಿ ಹಳ್ಳಕ್ಕೆ ಬಿದ್ದು ಮರೆಯಾಯಿತು.

ಹಾಗೆಂದು ಅದು ಕತ್ತಿ ನೋಡಿ ಹೆದರಿದ್ದೇನೂ ಅಲ್ಲ ಬಿಡಿ. ಅಪಾಯ ಎದುರಾದಾಗಲೆಲ್ಲಾ ಒಡ್ಯಾಣದ ಕತ್ತಿ ಕೈಗೆ ಬರುವುದು ನಮಗೆ ಅದೊಂದು ಅನೈಶ್ಚಿಕ ಕ್ರಿಯೆ. ಹಿಂದೊಮ್ಮೆ ಕಾಟಿಯೊಂದು ಹಠಾತ್ತನೆ ಎದುರಾದಾಗಲೂ ಕತ್ತಿ ಕೈಗೆ ಬಂದಿತ್ತು. ಜೊತೆಗೆ ನಗುವೂ ಬಂದಿತ್ತು.

ದನಗಳ ಮೇವಿಗಾಗಿ ಸವರಿ ತಂದಿದ್ದ ಆ ಹಲಸಿನ ಸೊಪ್ಪಿನ ಹೊರೆಯನ್ನು ಅಲ್ಲೇ ಬಿಟ್ಟು ಎದೆಯ ಡವಡವದ ಜೊತೆಗೆ ಗರಬಡಿದ ಕಾಲುಗಳನ್ನು ಎಳೆದುಕೊಂಡು ಕೂಗಳತೆ ದೂರದಲ್ಲೇ ಇದ್ದ ಮನೆ ತಲುಪುವಷ್ಟರಲ್ಲಿ ಮೈ ಬೆವರಿ, ಬಾಯಾರಿದ್ದಷ್ಟೇ ಅಲ್ಲದೆ ತೀವ್ರ ಹಸಿವೂ ಕಾಡತೊಡಗಿತ್ತು.  ಹಿತ್ತಲಲ್ಲಿ ಬಟ್ಟೆ ತೊಳೆಯುತ್ತಿದ್ದ ನನ್ನಾಕೆಗೆ ನನ್ನ ಕೂಗೂ ಕೇಳಿಸಿರಲಿಲ್ಲವಂತೆ. ಜೊತೆಗೆ ಜಿಗಿದೋಡುವ ಹಳ್ಳದ ಶಬ್ದ ಉಳಿದ ಶಬ್ದಗಳನ್ನೂ ಇಲ್ಲಿ ಮರೆಯಾಗಿಸುವುದುಂಟು.

ಈ ಹಿಂದೆ ನಾಗರ ಕಾಳಿಂಗಗಳೂ ಸೇರಿದಂತೆ ನಮ್ಮ ಭಾಗದಲ್ಲಿರುವ ಹಾಗೂ ನನಗೆ ಮುಖಾಮುಖಿಯಾದ ಹಲವು ಘಟನೆಗಳ ಬಗ್ಗೆ ಬರೆದಿದ್ದೆನಾದರೂ ಅತಿ ಕಡಿಮೆ ಅವಧಿಯಲ್ಲಿ ಘಟಿಸಿದ, ಜೀವಮಾನದಲ್ಲಿ ಮರೆಯಲಾಗದ ಇದನ್ನು ಬರೆದು ಹಂಚಿಕೊಳ್ಳುವ ವಿಧಾನ ತಿಳಿಯದೆ ಹಾಗೇ ಉಳಿಸಿಕೊಂಡಿದ್ದೆ.

LEAVE A REPLY

Please enter your comment!
Please enter your name here