ಲೇಖಕರು: ಲೋಕೇಶ್ ಮಕ್ಕಮ್, ಹಾನಿಕಾರಕ ಕೀಟಗಳ ನಿಯಂತ್ರಣಕ್ಕೆ ಜೈವಿಕ ವಿಧಾನಗಳ ಸಂಶೋಧನೆ – ಅಭಿವೃದ್ಧಿ ಮಾಡುವ ‘ಬ್ಯಾರಿಕ್ಸ್’ ಮುಖ್ಯಸ್ಥರು

ಮರುಭೂಮಿ ಮಿಡತೆಗಳು ಗುಂಪುಗುಂಪಾಗಿ ಚಲಿಸುತ್ತವೆ. ಪ್ರತಿಯೊಂದು ಗುಂಪಿನಲ್ಲಿಯೂ ಕೋಟ್ಯಾಂತರ ಸಂಖ್ಯೆಯಲ್ಲಿರುತ್ತವೆ. ಹಿಂಡುಗಳು ಹಾರಿ ಬಂದು ಕುಳಿತ ಪ್ರದೇಶದಲ್ಲಿದ್ದ ಹಸಿರು ಅಥವಾ ಒಣಗಿದ ಸಸ್ಯಗಳನ್ನು ತಿಂದು ಹಾಕುತ್ತವೆ. ಒಂದು ಹಿಂಡು ಹಾರಿ ಹೋದ ತಿಂಗಳು ಅಥವಾ ಎರಡು ತಿಂಗಳೊಳಗೆ ಬೇರೆಬೇರೆ ಹಿಂಡುಗಳು ಅದೇ ಪ್ರದೇಶಕ್ಕೆ ದಾಳಿ ಇಡುವ ಸಾಧ್ಯತೆ ಹೆಚ್ಚು. ಇದರಿಂದಾಗಿ ಅವುಗಳನ್ನು ರಾಸಾಯನಿಕ ಕೀಟನಾಶಕಗಳಿಂದ ನಿಯಂತ್ರಿಸಲು ಸಾಧ್ಯವಿಲ್ಲ.
ಆಫ್ರಿಕಾದಲ್ಲಿ ಮಿಡತೆ ದಾಳಿ ಹೊಸ ವಿಷಯವಲ್ಲದಿದ್ದರೂ ಕಳೆದ 23 ವರ್ಷಗಳಲ್ಲಿ ಇಂಥ ಭಾರಿ ಪ್ರಮಾಣದ ಮಿಡತೆ ಹಿಂಡುಗಳ ದಾಳಿಯನ್ನು ಅಲ್ಲಿಯವರೂ ಕಂಡಿರಲಿಲ್ಲ. ಕೀನ್ಯಾ, ಇರಾನ್ ಕೂಡ ಕಳೆದ 70 ವರ್ಷಗಳಿಂದ ಅಗಾಧ ಸಂಖ್ಯೆಯ ಮಿಡತೆ ಹಿಂಡುಗಳ ದಾಳಿ ನೋಡಿರಲಿಲ್ಲ. ಇದೇ ಮೊದಲ ಬಾರಿಗೆ ಇಷ್ಟೊಂದು ಭಾರಿ ಪ್ರಮಾಣದ ಮಿಡತೆ ಹಿಂಡುಗಳ ದಾಳಿಯಾಗಿದೆ.
ಹವಾಮಾನದಲ್ಲಾಗಿರುವ ಅಪಾರ ಪ್ರಮಾಣದ ಏರುಪೇರುಗಳು ಮಿಡತೆಗಳ ಸಂಖ್ಯೆ ಹೆಚ್ಚಳಕ್ಕೆ ಕಾರಣವಾಗುತ್ತವೆ. ಸಾಮಾನ್ಯ ಸಂದರ್ಭಕ್ಕಿಂತ ನಾನೂರು ಪಟ್ಟು ಅವುಗಳ ಸಂತಾನೋತ್ಪತ್ತಿ ಸಾಮರ್ಥ್ಯ ಹೆಚ್ಚಾಗುತ್ತದೆ. ವಲಸೆ ಹಾದಿಯ ಸಂಖ್ಯೆ ಹೆಚ್ಚಿಸಿಕೊಳ್ಳುತ್ತಾ ಸಾಗುವುದು ಕೃಷಿ ವಲಯಕ್ಕೆ ಅಪಾಯವಾಗಿ ಪರಿಣಮಿಸಿದೆ. ಈ ಬಾರಿ ವಿಶೇಷವಾಗಿ ಆಫ್ರಿಕಾ, ಏಷ್ಯಾ ಖಂಡದ ದೇಶಗಳಿಗೆ ದಾಳಿಯಿಡತೊಡಗಿವೆ.
2020ರ ಮಾರ್ಚ್ ನಲ್ಲಿ ಪಾಕಿಸ್ತಾನದ ಹಸಿರು – ಒಣ ಪ್ರದೇಶಗಳಿಗೆ ದಾಳಿ ಮಾಡಿದ ಮಿಡತೆ ಹಿಂಡುಗಳು ಏಪ್ರಿಲ್ ನಲ್ಲಿ ಭಾರತದ ರಾಜಸ್ಥಾನ ತಲುಪಿವೆ. ಕ್ರಮೇಣ ಮಧ್ಯ ಪ್ರದೇಶ, ಉತ್ತರ ಪ್ರದೇಶದವರೆಗೂ ಹಬ್ಬಿವೆ. ಗಾಳಿ ಬೀಸುವ ಕಡೆಗೆ ಹಾರುತ್ತಾ ಸಾಗುವ ಇವುಗಳು ದಿನವೊಂದಕ್ಕೆ ನೂರು ಕಿಲೋ ಮೀಟರ್ ಕ್ರಮಿಸಬಲ್ಲವು. ಈಗಾಗಲೇ ಇವುಗಳ ನಿಯಂತ್ರಣ ಕಾರ್ಯ ಶುರುವಾಗಿದೆ.
ರಾಸಾಯನಿಕ ಕೀಟನಾಶಕಗಳು ಮಿಡತೆಗಳನ್ನಷ್ಟೆ ನಾಸ ಮಾಡುವುದಿಲ್ಲ. ಉಪಯುಕ್ತ ಕೀಟಗಳು, ಮಣ್ಣಿನಲ್ಲಿರುವ ಸೂಕ್ಷ್ಮಾಣುಗಳು, ಪಕ್ಷಿಗಳ ಮೇಲೂ ದುಷ್ಪರಿಣಾಮ ಬೀರುತ್ತದೆ. ಈಗಾಗಲೇ ಮಿಡತೆ ನಿಯಂತ್ರಿಸಲು ಬೇರೆ ದೇಶಗಳಲ್ಲಿ ರಾಸಾಯನಿಕ ಕೀಟನಾಶಕ ಸಿಂಪಡಿಸಿದ ಪರಿಣಾಮ ಅಲ್ಲಿಯ ಗಿಳಿಗಳು ಅಗಾಧ ಸಂಖ್ಯೆಯಲ್ಲಿ ಸತ್ತಿವೆ. ಮಿಡತೆಗಳನ್ನು ಹೆಕ್ಕಿ ತಿನ್ನಲು ಗುಂಪುಗುಂಪಾಗಿ ಬರುತ್ತಿದ್ದ ಕಾಗೆಗಳು ದೂರ ಸರಿದಿವೆ.
ರಾಸಾಯನಿಕ ಕೀಟನಾಶಕಗಳು ಹಣ್ಣಿನ ತೋಟಗಳ ಮೇಲೆ ವಿಶೇಷವಾದ ದುಷ್ಪರಿಣಾಮ ಬೀರುತ್ತವೆ. ಇವೆಲ್ಲ ಅಲ್ಲದೇ ಅಂತರ್ಜಲ ಕಲುಷಿತವಾಗುತ್ತದೆ. ನೆಲ – ಜಲ – ವಾಯು ಕಲುಷಿತಗೊಳಿಸಿ, ಉಪಯುಕ್ತ ಕ್ರಿಮಿ – ಕೀಟಗಳಿಗೆ ಹಾನಿ ಮಾಡುವಂಥ ಕ್ರಮ ಅನುಸರಿಸುವ ಬದಲು ಜೈವಿಕ ಕ್ರಮಗಳನ್ನು ಅನುಸರಿಸುವುದು ಸೂಕ್ತ.


ಈಗಾಗಲೇ ಕೀನ್ಯಾದಲ್ಲಿ ಮಿಡತೆಗಳನ್ನು ಭಾರಿ ಸಂಖ್ಯೆಯಲ್ಲಿ ಹಿಡಿದು ಕೋಳಿ ಆಹಾರವಾಗಿ ಬಳಸಲಾಗುತ್ತಿದೆ. ಮಿಡತೆಗಳನ್ನು ಸಂಸ್ಕರಿಸಿ ದೀರ್ಘಕಾಲ ಕೆಡದಂತೆ ಸಂರಕ್ಷಿಸುವ ವಿಧಾನಗಳನ್ನು ಅವರು ಅಭಿವೃದ್ಧಿಪಡಿಸಿದ್ದಾರೆ. ಇದರಿಂದ ಕೋಳಿಗಳಿಗೆ ಪೂರೈಸುತ್ತಿದ್ದ ಒಣಮೀನು, ಮೆಕ್ಕೆಜೋಳದ ಮೇಲಿನ ಅವಲಂಬನೆ ಕಡಿಮೆಯಾಗಿದೆ. ಅರ್ಥಾತ್ ಖರ್ಚು ಕೂಡ ಭಾರಿ ಪ್ರಮಾಣದಲ್ಲಿ ತಗ್ಗಿದೆ. ಇದು ತೆರೆದ ಮಾರುಕಟ್ಟೆಯಲ್ಲಿ ಕೋಳಿಯ ಮಾಂಸದ ಬೆಲೆಯೂ ತಗ್ಗಲು ಸಹಾಯಕವಾಗುತ್ತದೆ.
ಹಸಿ ಅಥವಾ ಒಣಗಿಸಿದ ಅಥವಾ ಸಂಸ್ಕರಿಸಿದ ಮಿಡತೆ ಆಹಾರವನ್ನು ಕೋಳಿಗಳಿಗೆ, ಸಾಕು ನಾಯಿ, ಬೆಕ್ಕುಗಳಿಗೆ ನೀಡುವುದರಿಂದ ಉತ್ತಮ ಪೋಷಕಾಂಶ ಇರುವ ಆಹಾರ ಪೂರೈಸಿದಂತಾಗುತ್ತದೆ. ಸಂಸ್ಕರಿಸಿದ ಮಿಡತೆ ಆಹಾರ ಡಬ್ಬಿಗಳಲ್ಲಿ, ಪ್ಯಾಕೇಟುಗಳಲ್ಲಿ ದೊರೆಯುವಂತಾದರೆ ಹೆಚ್ಚಿನ ಸಮಯ ಇಟ್ಟು ಬಳಸಬಹುದು.
ಕೀನ್ಯಾದಲ್ಲಿ ಕೃಷಿಕರು ದೊಡ್ಡದೊಡ್ಡ ಬಲೆಗಳನ್ನು ಬಳಸಿ ಮಿಡತೆಗಳನ್ನು ಸೆರೆ ಹಿಡಿದು ಅಲ್ಲಿನ ಸಿದ್ಧ ಪಶು ಆಹಾರ ಘಟಕಗಳಿಗೆ ನೀಡುತ್ತಾರೆ. ಇದರಿಂದ ಅವರಿಗೆ ಒಂದಷ್ಟು ಆದಾಯವೂ ದೊರೆಯುತ್ತಿದೆ. ರಾಸಾಯನಿಕ ಕೀಟನಾಶಕ ಬಳಸಿ ಎಲ್ಲವನ್ನು ಕಲುಷಿತಗೊಳಿಸುವುದರ ಬದಲು ಹೀಗೆ ಮಾಡುವುದು ಅತ್ಯಂತ ಸೂಕ್ತ ಮಾರ್ಗ.
ಕೀನ್ಯಾದಲ್ಲಿ ಮಿಡತೆ ನಿಯಂತ್ರಣಕ್ಕೆ ಈಗಾಗಲೇ ಅನುಸರಿಸುತ್ತಿರುವ ವಿಧಾನಗಳನ್ನೇ ಅನುಸರಿಸಲು ಪಾಕಿಸ್ತಾನ ನಿರ್ಧರಿಸಿದೆ. ಅಲ್ಲಿನ ಒಕಾರ ಜಿಲ್ಲೆಯಲ್ಲಿ ಮೊದಲ ಬಾರಿಗೆ ಪೈಲೆಟ್ ಪ್ರಾಜೆಕ್ಟ್ ಜಾರಿಗೊಳಿಸಿದೆ. ಕೀಟನಾಶಗಳ ಬದಲು ಬಲೆ ಬಳಸಿ ಮಿಡತೆಗಳನ್ನು ಭಾರಿ ಪ್ರಮಾಣದಲ್ಲಿ ಸೆರೆ ಹಿಡಿದು ಅಲ್ಲಿನ ಕೋಳಿಗೆ ಆಹಾರ ಪೂರೈಸುವ ಪಶು ಆಹಾರ ಘಟಕಗಳಿಗೆ ಪೂರೈಕೆ ಮಾಡುವುದು. ಇದಕ್ಕಾಗಿ ಸೂಕ್ತ ಸಂಭಾವನೆಯೂ ದೊರೆಯತೊಡಗಿದೆ.


ಭಾರತದಲ್ಲಿಯೂ ಕೂಡ ಕೀನ್ಯಾ, ಪಾಕಿಸ್ತಾನಗಳು ಅನುಸರಿಸಿದ ಮಾರ್ಗವನ್ನೇ ಅನುಸರಿಸಬಹುದು. ಇದರಿಂದ ರಾಸಾಯನಿಕ ಕೀಟನಾಶಕಗಳ ಖರೀದಿಗೆ , ಸಿಂಪಡಣೆಗೆ ಸಾವಿರಾರು ಕೋಟಿ ಖರ್ಚು ಮಾಡುವುದು ನಿಲ್ಲುತ್ತದೆ. ಜನ – ಜಾನುವಾರು – ಪಕ್ಷಿಗಳು- ಹಾನಿಕಾರಕವಲ್ಲದ ಕೀಟಗಳು ಉಳಿಯುತ್ತವೆ. ಜೀವವೈವಿಧ್ಯತೆ ನಾಶವಾಗುವುದು ತಪ್ಪುತ್ತದೆ. ಮಿಡತೆಗಳನ್ನು ಹಿಡಿದು ತಂದವರಿಗೆ ಸಂಭಾವನೆಯೂ ದೊರಕುತ್ತದೆ.

LEAVE A REPLY

Please enter your comment!
Please enter your name here