ಬೆಳೆಗಾರರ ಕಣ್ಣೀರು ಒರೆಸಲು ಪೇಠಾ ತಯಾರಿಕೆ

1
ಲೇಖಕರು: ರಾಮಸ್ವಾಮಿ ಹುಲುಕೋಡು, ಹಿರಿಯ ಪತ್ರಕರ್ತರು

ವಿಶ್ವನಾಥ ಫೋನ್ ಮಾಡದೆ ಬಹಳ ದಿನವಾಗಿತ್ತು. ಲಾಕ್ಡೌನ್ ಘೋಷಣೆಯಾದ ನಾಲ್ಕು ದಿನಕ್ಕೆ ಪೋನ್ ಬಂತು. ʼಕೊರೊನಾ ವೈರಸ್ ನಿಯಂತ್ರಣಕ್ಕಾಗಿ ಸ್ಪ್ರೇ ಮಾಡಲು ಸುಲಭವಾದ ಮೆಷಿನ್ ತಯಾರಿಸಬಹುದು. ಅಂಥ ಐಡಿಯಾ ನನ್ನ ಬಳಿ ಇದೆʼ ಎಂದು ವಿವರಿಸಿದ. ‘ಈ ಸ್ಪ್ರೇ ವೆಹಿಕಲ್ ಮೂಲಕ ಇಡೀ ಪಟ್ಟಣವನ್ನು ಕೆಲವೇ ಗಂಟೆಗಳಲ್ಲಿ ಸ್ಪ್ರೇ ಮಾಡಲು ಸಾಧ್ಯ, ಅದಕ್ಕೆ ಇಷ್ಟೆಲ್ಲ ಸಾಮಗ್ರಿ ಬೇಕು ಎಂದು ಪಟ್ಟಿ ಒಪ್ಪಿಸಿದ, ಅವನ್ನೆಲ್ಲ ಸಂಗ್ರಹ ಮಾಡಲು ಯತ್ನಿಸುತ್ತಿದ್ದೀನಿʼ ಎಂದು ಅದರ ತಂತ್ರಜ್ಞಾನವನ್ನು ವಿವರಿಸಿದ, ನನಗೆ ಅರ್ಥವಾಗಿದ್ದು ಮಾತ್ರ, ಇವನ ತಲೆಯಲ್ಲಿ ಹೊಸ ಐಡಿಯಾ ಬಂದಿದೆ ಎಂದಷ್ಟೇ!


ಕೊನೆಗೆ ಬೇಕಾದ ಎಲ್ಲ ಬಿಡಿಭಾಗಗಳು ದೊರೆಯಲಿಲ್ಲ, ಲಭ್ಯವಾಗುವಂಥವು ದೂರದ ಊರುಗಳಲ್ಲಿ ಇದ್ದವು. ಅಂತವುಗಳನ್ನು ಲಾಕ್ಡೌನ್ ಕಾರಣ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಮೇಳಿಗೆ ಗ್ರಾಮ ಸಮೀಪದ ಸಮೀಪದ ಕುಂಟುವಳ್ಳಿ ಎಂಬ ಆ ಮೂಲೆ ಹಳ್ಳಿಗೆ ತರಿಸಿಕೊಳ್ಳಲು ಸಾಧ್ಯವಾಗದೆ, ಐಡಿಯಾ ಕೈಬಿಟ್ಟ ಎನಿಸುತ್ತದೆ. ಇದಾದ ಹದಿನೈದು ದಿನಕ್ಕೆ ಮತ್ತೆ ಫೋನ್ ಬಂತು. ನಂಗೆ ಆಶ್ಚರ್ಯ!
ಈ ಬಾರಿ ತಾಲ್ಲೂಕಿನ ಕುಂಬಳಕಾಯಿ ಬೆಳೆಗಾರರ ಕಷ್ಟದ ಬಗ್ಗೆ ಮಾತನಾಡಿದ. “ಬೆಳೆಗಾರರು ಸುಮಾರು 2 ಸಾವಿರ ಟನ್ ಗಿಂತಲೂ ಅಧಿಕ ಕುಂಬಳಕಾಯಿ ಬೆಳೆದಿದ್ದಾರೆ, ಅವುಗಳನ್ನು ಆಗ್ರಾಕ್ಕೆ ಕಳುಹಿಸಲಾಗದೆ ಕಂಗೆಟ್ಟಿದ್ದಾರೆ. ಅವರಿಗೆ ನೆರವಾಗಲು ಶಾಸಕರಾದ ಆರಗ ಜ್ಞಾನೇಂದ್ರ, ತಹಸೀಲ್ದಾರ್ ಡಾ. ಶ್ರೀಪಾದ್ ಕೇಳಿಕೊಂಡಿದ್ದಾರೆ. ಹೀಗಾಗಿ ಆಗ್ರಾ ಪೇಠಾ ತಯಾರಿಸುತ್ತಿದ್ದೇನೆ” ಎಂದು ತನ್ನ ಹೊಸ ʼಸಾಹಸʼದ ಬಗ್ಗೆ ಹೇಳುತ್ತಾ ಹೋದ. ಅದನ್ನು ಹೇಗೆ ತಯಾರಿಸುವುದು ಎಂದು ಕೇಳಿ ತಿಳಿದುಕೊಂಡೆ. ಪ್ರೊಸೆಸ್ ಬಹಳ ಕಷ್ಟವೆನಿಸಿತು.

“ಏನೋ ಮಾಡಲು ಹೋಗಿ, ವಿಶ್ವನಾಥ ಲಾಸ್ ಮಾಡಿಕೊಂಡರೆ” ಎಂಬ ಎಂಬ ಭಯ ಕಾಡಿತು. ಅದನ್ನು ಅವನಿಗೆ ಹೇಳಿಯೇ ಬಿಟ್ಟಿ. ಪಾಸಿಟಿವ್ ಆಗಿ ಯೋಚಿಸದ ನನ್ನ ಬಗ್ಗೆ ನನಗೇ ನಾಚಿಕೆ ಎನಿಸಿತು. ಇರಲಿ, ಪ್ರೀತಿಯಿಂದ ತಾನೆ ನಾನು ಹೀಗೆ ಯೋಚಿಸುವುದು ಎಂದುಕೊಂಡು ಸುಮ್ಮನಾದೆ. ʼಇಲ್ಲ, ತಾಲೂಕು ಆಡಳಿತವೇ ನನ್ನ ಜತೆಗಿದೆʼ ಎಂದು ಧೈರ್ಯ ತುಂಬಿದ ವಿಶು, ತನ್ನ ಕೆಲಸ ಮುಂದುವರೆಸಿದ್ದ.


ಮೊನ್ನೆ ಗಣ್ಯರ ಸಮ್ಮುಖದಲ್ಲಿ ಕಲರ್ ಕಲರ್ ಆಗ್ರಾ ಪೇಠಾವನ್ನು ತಾಲ್ಲೂಕು ಆಡಳಿತದ ಮುಖ್ಯಸ್ಥರ, ಮಾಧ್ಯಮದವರ ಮುಂದೆ ವಿಶ್ವನಾಥ ತಂದಿಟ್ಟಾಗ ಎದೆತುಂಬಿ ಬಂತು. ಯಂತ್ರಗಳನ್ನು ಪಳಗಿಸುತ್ತಾ… ಇತ್ತೀಚೆಗಷ್ಟೇ ಕೈ ಬೆರಳನ್ನು ಬಲಿಕೊಟ್ಟಿದ್ದ ಆತ, ಹೀಗೆ ಲಾಕ್ಡೌನ್ ಕಾಲದಲ್ಲಿ ಪ್ರಯೋಗ ನಡೆಸಿ, ಎಲ್ಲಿಯದೋ ಸಿಹಿ ತಿನಿಸನ್ನು ಇಲ್ಲಿ ಮಾಡಿ, ಕುಂಬಳಕಾಯಿ ಬೆಳೆಗಾರರ ಮುಖದಲ್ಲಿ ಮಂದಹಾಸ ಮೂಡಿಸಿದ್ದು ನೋಡಿ ಖುಷಿಯಾಯಿತು. ಮೂರು ಹೊತ್ತೂ ಕೃಷಿಯ ಬಗ್ಗೆಯೇ ಯೋಚಿಸುವ ಅವರ ಅಪ್ಪ, ಅಂದರೆ ನನ್ನ ದತ್ತಾತ್ರಿ ಮಾವನಿಗೆ ಇನ್ನೆಷ್ಟು ಖುಷಿಯಾಗಿರಬೇಕು.
ಇವತ್ತು ನಾನೇ ಫೋನ್ ಮಾಡಿ ಮಾತನಾಡಿದೆ, ವಿಶ್ವನಾಥ್ ಕೆಲಸಕ್ಕೆ ಸ್ಥಳೀಯ ಮಾಧ್ಯಮಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಪ್ರಚಾರ ಸಿಕ್ಕಿದೆ. ದೂರದ ಅಮೆರಿಕದಲ್ಲಿನ ಭಾರತೀಯರೂ ಈ ಬಗ್ಗೆ ಚರ್ಚೆಸಿದ್ದಾರೆ ಎಂದು ಸ್ವತಃ ತಹಸೀಲ್ದಾರ್ ತಿಳಿಸಿದ್ದಾರೆ. ಅಡಿಕೆ ಸುಲಿಯುವ ಮಿಷನ್ ಅಭಿವೃದ್ಧಿ ಪಡಿಸಿದಾಗ ಆತನಿಗೆ ಸಿಕ್ಕ ಪ್ರೋತ್ಸಾಹ ಎಲ್ಲ ನೆನಪಿಗೆ ಬಂತು.


“ಆಗ್ರಾ ಪೇಠಾ ತಯಾರಿಸುವ ಕೆಲಸ ಮುಂದುವರೆದಿದೆ. ಇದಕ್ಕೆಲ್ಲಾ ಮಿಷನ್ ಮಾಡಿದರೆ ಕೆಲಸ ಶೀಘ್ರವಾಗಿ ಆಗುತ್ತದೆ. ಆದರೆ…. ಲಾಕ್ಡೌನ್ ಇದೆಯಲ್ಲಾ ಎಂದು ತನ್ನ ಚಿಂತೆ ಹೇಳಿಕೊಂಡ. “ತಾಲೂಕಿನ ಕುಂಬಳಕಾಯಿ ಬೆಳೆಗಾರರಿಗೆ ನೆರವಾಗಲು ಹೊಸ ದಾರಿಯಂತೂ ತೆರೆದುಕೊಂಡಿದೆ… ಆದಷ್ಟು ಪ್ರಯತ್ನ ಪಡ್ತಿನಿ, ಪೇಠಾಕ್ಕೆ ಮಾರುಕಟ್ಟೆ ಹುಡುಕುವುದೂ ದೊಡ್ಡ ಸವಾಲು” ಎಂದು ಮುಂದೆ ಮಾಡಬೇಕೆಂದುಕೊಂಡಿರುವ ಕುರಿತು ಮಾತನಾಡಿದ…
ವಿಶ್ವನಾಥನ ʼಇಬ್ಬನಿ ಫುಡ್ಸ್ ʼ ಈಗಷ್ಟೇ ಕಣ್ಣು ಬಿಡುತ್ತಿದೆ. ಕಳೆದ ವರ್ಷ ಅಡಿಕೆಯ ತೊಕ್ಕು ಮಾಡಿ, ನನಗೆ ಸ್ಯಾಂಪಲ್ ಕಳುಹಿಸಿದ್ದ/. ಈಗ ಇನ್ನೊಂದು ಹೊಸ ಬಗೆಯ ತಿನಿಸು ಮಾಡುವ ಪ್ರಯತ್ನ ನಡೆಸಿದ್ದಾನೆ. ಜತೆಜತೆಗೆ ವಿ-ಟೆಕ್ ಎಂಜಿನಿಯರ್ಸ್ ಸಂಸ್ಥೆಯ ಕೆಲಸವೂ ವಿಸ್ತಾರಗೊಳ್ಳುತ್ತಿದೆ. ಮಲೆನಾಡಿನ ಮೂಲೆಯಲ್ಲಿ ಕುಳಿತು, ಕಾಯಕದ ಮೂಲಕ ಜಗತ್ತನ್ನೇ ತನ್ನತ್ತ ಸೆಳೆಯುವ ಆತನ ಬಗೆಗಿನ ಹೆಮ್ಮೆ ಹೆಚ್ಚಾಗುತ್ತಲೇ ಇದೆ. ಆಲ್ ದಿ ಬೆಸ್ಟ್ ವಿಶು.

1 COMMENT

LEAVE A REPLY

Please enter your comment!
Please enter your name here