ಡಾ. ಮಿರ್ಜಾ ಬಶೀರ್, ಹಿರಿಯ ಪಶುವೈದ್ಯರು, ಖ್ಯಾತ ಸಾಹಿತಿ

ನಾನು ಯಾವಾಗಲೋ ಒಮ್ಮೆ ಬಸ್ ಬೋರ್ಡೊಂದನ್ನು ನೋಡಿ ಆಶ್ಚರ್ಯಗೊಂಡಿದ್ದೆ. ಏಕೆಂದರೆ ಅದರಲ್ಲಿ ಗುಂಗುರುಮೆಳೆ ಎಂಬ ಹೆಸರಿತ್ತು. ಹೆಸರು ಎಷ್ಟು ಚೆನ್ನಾಗಿದೆ ಎನ್ನಿಸಿತ್ತು. ನಾನು ನೊಣವಿನಕೆರೆಗೆ ಹೋದ ಮೇಲೆ ಅದು ನೊಣವಿನಕೆರೆ ಹೋಬಳಿಗೆ ಸೇರಿದ ಒಂದು ಹಳ್ಳಿ ಎಂದು ತಿಳಿಯಿತು. ಆ ಊರಿನ ಸಮೀಪ ಜಿ. ಮಲ್ಲೇನಹಳ್ಳಿ ಇತ್ತು. ಜಿ ಎಂದರೆ ಗುಂಗುರುಮೆಳೆ.

ಜಿ. ಮಲ್ಲೇನಹಳ್ಳಿಯ ಅನಂತರಾಮು ನನಗೆ ಪರಿಚಯವಾಗಲು ತಡವಾಗಲಿಲ್ಲ. ಸೀಮೆಹಸುಗಳನ್ನು ಸಾಕಿದ್ದರಿಂದ ವಾರಕ್ಕೆ ಒಂದೆರಡು ಸಲವಾದರೂ ಅವರ ಮನೆಗೆ ಹೋಗಿ ಬರುತ್ತಿದ್ದೆ. ಅನಂತರಾಮು ನನಗಿನ್ನ ನಾಲ್ಕೈದು ವರ್ಷಕ್ಕೆ ದೊಡ್ಡವನಿದ್ದರೂ ಮದುವೆಯಾಗಿ ಮಕ್ಕಳಿದ್ದರು. ಮೂರ್ನಾಲ್ಕು ವರ್ಷದ ಮಗಳು ಬೆಕ್ಕಿನ ಕಣ್ಣಿನೊಂದಿಗೆ ವಿದೇಶಿಯರಂತಿದ್ದಳು. ಅವಳನ್ನು ಪರಂಗಿ ಎಂದು ಕರೆಯುತ್ತಿದ್ದೆ. ದನಗಳನ್ನು ಎಳೆದು ಇಂಜೆಕ್ಷನ್ ಮಾಡುತ್ತಿದ್ದುದರಿಂದ ಹೆದರಿ ನನ್ನಿಂದ ದೂರದಲ್ಲೇ ಇರುತ್ತಿದ್ದಳು. ಹತ್ತಿರ ಯಾವತ್ತೂ ಬರುತ್ತಿರಲಿಲ್ಲ. ಅವಳಣ್ಣ ತೇಜನೂ ಅಷ್ಟೆ. ಅವರ ಮನೆಗೋದಾಗಲೆಲ್ಲ ಅನಂತರಾಮು ತಾಯಿಯ ಜೊತೆ ಮಾತಾಡುತ್ತ ಕಡ್ಡಾಯವಾಗಿ ಟೀ ಕುಡಿದು ಬರುತ್ತಿದ್ದೆ.

ಬಡರೈತನಾಗಿದ್ದ ಅನಂತರಾಮು ಹತ್ತಿರದ ಕಸವನಹಳ್ಳಿಯ ಗ್ರಾಮೀಣ ಬ್ಯಾಂಕಲ್ಲಿ ಸಾಲ ಪಡೆದು ಸೀಮೆಹಸು ಕೊಂಡು ತಂದಿದ್ದ. ದನಕರುಗಳನ್ನು ಬಹಳ ನಿಗಾ ಮಾಡಿ ಸಾಕಿದ್ದರಿಂದ ಹೈನುಗಾರಿಕೆಯಲ್ಲಿ ಯಾವತ್ತೂ ನಷ್ಟ ಅನುಭವಿಸಿರಲಿಲ್ಲ. ನಾನು 1986 ರಲ್ಲಿ ನೊಣವಿನಕೆರೆಯಲ್ಲಿ ಹೋಬಳಿ ಮಟ್ಟದ ಮಿಶ್ರತಳಿ ಹಸುಗಳ ಪ್ರದರ್ಶನ ಏರ್ಪಡಿಸಿದ್ದೆ. ಅದರಲ್ಲಿ ಅನಂತರಾಮು ಸಾಕಿ ಮಾರಾಟ ಮಾಡಿದ್ದ ಹಸುವಿಗೆ ಮೊದಲ ಬಹುಮಾನ ಬಂದಿತ್ತು.

ಇಂತಹ ಅನಂತರಾಮುವಿನ ಸಾಲದ ಹಸು ಇದ್ದಕ್ಕಿದ್ದಂತೆ ಹೊಟ್ಟೆ ಉಬ್ಬರ ಬಂದು ಚಿಕಿತ್ಸೆಗೂ ಸಮಯಾವಕಾಶ ಕೊಡದೆ ಸತ್ತು ಹೋಯಿತು. ಬ್ಯಾಂಕ್ ಸಾಲದ ಹಸುವಾದ್ದರಿಂದ ವಿಮೆ ಇತ್ತು. ವಾಲೆ ಕಿವಿಯಲ್ಲಿರುವುದನ್ನು ಅನಂತರಾಮು ತಿಳಿಸಿದ. ಸುದ್ದಿ ಬಂದ ಕೂಡಲೆ ಹಿಂದೆ ಸಾಲ ವಿತರಣೆಯಾದಾಗ ಕೊಟ್ಟಿದ್ದ ಹಸುವಿನ ಆರೋಗ್ಯ ಪ್ರಮಾಣಪತ್ರದ ನಕಲನ್ನು ತೆಗೆದುಕೊಂಡು ಹೊರಟೆ. ಅದರಲ್ಲಿ ಹಸುವಿನ ಚಹರೆ ಮತ್ತು ವಿಮೆಯ ಮೊತ್ತ ಸಹ ನಮೂದಾಗಿರುತ್ತದೆ. ಚಹರೆ ಅಂದರೆ ಹಸುವಿನ ಬಣ್ಣ, ಕೊಂಬುಗಳ ವಿವರ, ಬಾಲದ ಕುಚ್ಚಿನ ಬಣ್ಣ, ಎತ್ತರ ಇತ್ಯಾದಿ ವಿವರಗಳು. ಅಂದು ಶನಿವಾರವಾಗಿತ್ತು. ಸಮಯ ಮಧ್ಯಾಹ್ನ ಒಂದು ಗಂಟೆಯಾಗಿರಬಹುದು.

ನಾನು ಮತ್ತು ಅನಂತರಾಮು ನನ್ನ ಯಜ್ಡಿ ಬೈಕ್ ಹತ್ತಿ ಹೊರಟೆವು. ಫೋಟೋಗ್ರಾಫರ್ ಜಗದೀಶನಿಗೆ ತಿಳಿಸಲಾಗಿ ಅವನೂ ತನ್ನ ಬೈಕಿನಲ್ಲಿ ಜಿ. ಮಲ್ಲೇನಹಳ್ಳಿಗೆ ಹೊರಟುಬಂದ. ಮಾರ್ಗಮಧ್ಯದಲ್ಲಿದ್ದ ಕಸವನಹಳ್ಳಿ ಗ್ರಾಮೀಣ ಬ್ಯಾಂಕಿಗೆ ಹೋಗಿ ವಿಷಯ ತಿಳಿಸಿದೆ. ಅನಂತರಾಮು ಹಸು ಸತ್ತ ಬಗ್ಗೆ ಅರ್ಜಿ ಕೊಟ್ಟನು. ಮ್ಯಾನೇಜರ್ ಕೆಲಸಕ್ಕೆ ಹೊಸಬರಿದ್ದು ವಿಮೆಯ ಹಸುಗಳು ಸತ್ತಾಗ ವಿಮೆ ಅಧಿಕಾರಿಗಳೂ ಸಹ ಬರಬೇಕು ಮತ್ತು ಅವರು ಶವವನ್ನು ನೋಡಿದ ನಂತರವೇ ಶವ ಪರೀಕ್ಷೆ ಮಾಡಬೇಕೆಂದು ತಿಳಿಸಿದರು. ಪ್ರೀತಿಯಿಂದ ಸಾಕಿದ್ದ ಹಿಂಡುವ ಹಸು ತೀರಿದ್ದರಿಂದ ಮತ್ತು ಒಂದು ತಿಂಗಳ ಎಳೆ ಕರು ತಬ್ಬಲಿಯಾಗಿದ್ದರಿಂದ ಅನಂತರಾಮು ದುಃಖದಲ್ಲಿದ್ದ.
ಸರ್, ಹಾಗೇನಿಲ್ಲ. ನಾನಿದುವರೆಗೆ ವಿಮೆ ಇರುವ ನೂರಾರು ಹಸು ಎಮ್ಮೆ ಕುರಿ ಮೇಕೆಗಳ ಶವಪರೀಕ್ಷೆ ಮಾಡಿದ್ದೇನೆ ಮತ್ತು ಎಲ್ಲವೂ ನಿಯಮಬದ್ಧವಾಗಿದ್ದರೆ ರೈತರಿಗೆ ವಿಮೆ ಹಣ ಬಂದೇ ಬರುತ್ತದೆ. ಒಂದೇ ಒಂದು ಪ್ರಕರಣದಲ್ಲಿಯೂ ವಿಮಾಧಿಕಾರಿಗಳಾಗಲೀ ಅಥವಾ ಅವರ ಸಿಬ್ಬಂದಿಯಾಗಲೀ ಸ್ಥಳ ಪರಿಶೀಲನೆಗೆ ಬಂದಿಲ್ಲ. ವಿಮೆ ಮಾಡಿಸಿದ ರಾಸುಗಳು ಆಗಿಂದಾಗ್ಗೆ ಹತ್ತಾರು ಕಡೆ ಸಾಯುತ್ತಲೇ ಇರುತ್ತವೆ. ಅಲ್ಲಿಗೆಲ್ಲ ವಿಮೆ ಕಚೇರಿಯವರು ತುಮಕೂರಿನಿಂದ ಬಂದು ಸ್ಥಳ ಪರೀಕ್ಷೆ ಮಾಡಲು ಸಾಧ್ಯವಿಲ್ಲ. ಅನುಮಾನವಿದ್ದರೆ ನೀವೇ ಬಂದು ನೋಡಿ ಎಂದು ಮ್ಯಾನೇಜರ್ಗೆ ತಿಳಿಸಿದೆ. ಬ್ಯಾಂಕಿನಲ್ಲಿ ಗ್ರಾಹಕರು ಬಹಳ ಇರಲಿಲ್ಲ. ಬ್ಯಾಂಕಿಂದ ಅನಂತರಾಮು ಮನೆ ಎರಡು ಕಿ.ಮೀ. ಇತ್ತು. ಅರ್ಧ ಗಂಟೆಯಲ್ಲಿ ಹೋಗಿ ಬರಬಹುದಿತ್ತು. ಆದರೆ ಮ್ಯಾನೇಜರ್ ಬರಲು ಒಪ್ಪಲಿಲ್ಲ. ಆತನ ವರ್ತನೆ ವಿಷಯ ಗೊತ್ತಿಲ್ಲದ ಪೆದ್ದುತನದಿಂದ ಕೂಡಿತ್ತೇ ವಿನಃ ಧೂರ್ತತನದಿಂದ ಕೂಡಿರಲಿಲ್ಲ.

ಗುರ್ತು ಪರಿಚಯದ ಅನೇಕ ಗ್ರಾಮಸ್ಥರು ಬಂದು ನೆರೆತರು. ಎಲ್ಲರಿಗೂ ವಿಷಯ ಗೊತ್ತಾಯಿತು. ಹೋಗ್ಬರ್ರಿ ಸಾರ್, ದೇವರಿಟ್ಟಿದ್ದಾಗುತ್ತೆ. ಪಾಪ ಬಡವ ಎಂದು ಹಲವರು ಹೇಳಿದರು. ಆದರೆ ಮ್ಯಾನೇಜರ್ ಜುಪ್ ಎನ್ನಲಿಲ್ಲ. ನಿಯಮದ ಪ್ರಕಾರ ಎಂದರು. ವಿಮೆ ಕಚೇರಿಯವರು ಬರೋತನಕ ಹಸು ಊರಲ್ಲಿಟ್ಟುಕೊಳ್ಳೋಕಾಗಲ್ಲ. ನಾಳೆ ಭಾನುವಾರದ ರಜಾ ದಿನ. ಗಬ್ಬು ವಾಸನೆ ಊರಲ್ಲೆಲ್ಲ ಹಬ್ಬಲ್ವ ಸಾರ್ ಎಂದರು ಅನಂತರಾಮು ಮತ್ತು ಗ್ರಾಮಸ್ಥರು. ಉಹುಂ ಮ್ಯಾನೇಜರ್ ಒಪ್ಪಲೇ ಇಲ್ಲ.. ತಪ್ಪು ತಿಳುವಳಿಕೆ ಜೊತೆ ಈಗ ಮೊಂಡಾಟಕ್ಕೆ ಬಿದ್ದಿದ್ದರು ಮ್ಯಾನೇಜರ್.

ಸಾರ್ ಹ್ಯಾಗೂ ಅರ್ಜಿ ಕೊಟ್ಟಿದ್ದೇವೆ. ವಿಮೆ ಕಚೇರಿಗೆ ತಿಳಿಸಿ ಹಣ ಪಡೆಯಲು ಕ್ಲೈಮ್ ಫಾರಂ ತರಿಸಿಕೊಡಿ ಎಂದು ಮ್ಯಾನೇಜರ್ಗೆ ಹೇಳಿ ಜಿ. ಮಲ್ಲೇನಹಳ್ಳಿಗೆ ನಾನು, ಅನಂತರಾಮು ಮತ್ತು ಫೋಟೋಗ್ರಾಫರ್ ಜಗದೀಶ ತೆರಳಿದೆವು. ಅನಂತರಾಮುವಿನ ಹಳೆಯದಾಗಿದ್ದ ಮನೆಯ ಬಳಿ ಹೃದಯ ವಿದ್ರಾವಕ ದೃಶ್ಯವೇ ಕಂಡುಬಂದಿತು. ಹಸು ಹತ್ತಿರ ಕುಳಿತು ಅಜ್ಜಿ ದುಃಖಿಸುತ್ತಾ ಮೊಮ್ಮಕ್ಕಳನ್ನು ತಬ್ಬಿ ಹಿಡಿದುಕೊಂಡಿತ್ತು. ಮೊಮ್ಮಕ್ಕಳು ಪುಟ್ಟ ಕೈಗಳಿಂದ ಕಣ್ಣೀರು ಒರೆಸುತ್ತ ಬಿಕ್ಕುತ್ತಿದ್ದವು. ಮನೆಯಾಕೆ ಅತ್ತೂ ಅತ್ತೂ ಹಣ್ಣಾದಂತಿತ್ತು.

ಮನೆಯವರ ಮತ್ತು ಅಕ್ಕಪಕ್ಕದವರ ಕಣ್ಣೀರ ಮಧ್ಯೆ ಗಾಡಿಯಲ್ಲಿ ಹಸುವನ್ನು ಊರ ಹೊರಕ್ಕೆ ಸಾಗಿಸಿದೆವು. ಹಸು ಹೂತು ಹಾಕಲು ಒಂದು ಗುಂಡಿಯನ್ನು ಈಗಾಗಲೇ ತೋಡಿಸಿದ್ದರು. ಗುಂಡಿಯ ಪಕ್ಕದಲ್ಲಿ ಮೃತ ಹಸುವನ್ನು ಮಲಗಿಸಿದೆವು. ಅಂದಿನ ಕಷ್ಟ ಪರಂಪರೆ ಅಲ್ಲಿಗೇ ಮುಗಿಯಲಿಲ್ಲ. ಹಸು ಸತ್ತಾಗ ಶವ ಕೊಯ್ದು ಪರೀಕ್ಷೆಗೆ ಸಹರಿಸುತ್ತಿದ್ದ ಹಟ್ಟಿಯ ಕೆಂಪಯ್ಯ, ಕುಂಬ ಎಲ್ಲ ತಮ್ಮ ಬಂಧುವೊಬ್ಬನ ಶವಸಂಸ್ಕಾರಕ್ಕೆ ಬೇರೆ ಊರಿಗೆ ಹೊರಟುಹೋಗಿದ್ದರು. ಯಾರೋ ಊರಲ್ಲೆಲ್ಲ ಅಲೆದು ಶವ ಕೊಯ್ಯಲು ಬೇಕಾಗಿದ್ದ ಚಾಕು ಚೂರಿಗಳನ್ನು ಹೊಂದಿಸಿಕೊಂಡು ಬಂದರು. ಶವದ ಚರ್ಮವನ್ನೇನೂ ನಾವು ಬಿಡಿಸಿಕೊಳ್ಳಲಿಲ್ಲ. ಅಸ್ಪೃಶ್ಯರೆಂದು ನಾವು ಸಮಾಜದ ತಳಕ್ಕೆ ತಳ್ಳಿರುವ ದಲಿತರು ಶವವನ್ನು ಕೊಯ್ಯುವ ಮೊದಲು ಚರ್ಮವನ್ನು ಬಿಡಿಸಿಕೊಳ್ಳುತ್ತಾರೆ.
ಆ ಚರ್ಮವನ್ನು ಮಾರಾಟ ಮಾಡಿ ಅಲ್ಪಸ್ವಲ್ಪ ದುಡ್ಡು ಮಾಡಿಕೊಳ್ಳುತ್ತಾರೆ. ಇನ್ನೊಂದು ಆಘಾತಕಾರಿ ವಿಷಯ ನಾನು ಗಮನಿಸಿದ್ದು : ಶವಪರೀಕ್ಷೆ ಆದ ನಂತರ ಅವರು ಶವದ ಅನೇಕ ಭಾಗಗಳನ್ನು ಮನೆಗೆ ಸಾಗಿಸಿ ಅಡಿಗೆ ಮಾಡಿ ತಿನ್ನುತ್ತಿದ್ದರು. ಆದರೆ ಶವಪರೀಕ್ಷೆಗೊಳಪಡುವ ಹಸು, ಎಮ್ಮೆ, ಕುರಿ, ಮೇಕೆಗಳೆಲ್ಲ ಅಪಾಯಕಾರಿ ಖಾಯಿಲೆಗಳಿಗೆ ತುತ್ತಾಗಿ ಮೃತಪಟ್ಟಿರುವುದರಿಂದ ಯಾವುದನ್ನು ತಿನ್ನಲೂ ನಾನು ಅವಕಾಶ ಕೊಡುತ್ತಿರಲಿಲ್ಲ. ವಿಮೆ ಮಾಡಿಸಿರುವ ಪ್ರಾಣಿ, ಅಪಘಾತದಿಂದ ಮೃತಪಟ್ಟ ಪ್ರಾಣಿ ಅಥವಾ ಕೋರ್ಟ್ ಮೆಟ್ಟಿಲೇರಿದ ಕೇಸುಗಳಲ್ಲಿ ಅಕಸ್ಮಾತ್ ಏನಾದರೂ ಮೇಲಾಧಿಕಾರಿಗಳು, ವಿಮಾಧಿಕಾರಿಗಳು, ಪೋಲೀಸಿನವರೇನಾದರೂ ಹೂತಿರುವ ಶವವನ್ನು ತೆಗೆದು ತೋರಿಸಲು ಕೇಳಬಹುದಾದ ಸಾಧ್ಯತೆಯನ್ನು ತೆಗೆದುಹಾಕುವ ಹಾಗಿರಲಿಲ್ಲ. ಪರೀಕ್ಷೆ ಪೂರ್ಣವಾದ ಮೇಲೆ ಶವವನ್ನು ಮಣ್ಣಲ್ಲಿ ಹೂಳಿಸಿ ಅಲ್ಲಿಂದ ಹೊರಡುತ್ತಿದ್ದೆ.

ಹಸು ಶವವನ್ನು ಕೊಯ್ದು ಅಭ್ಯಾಸವಿರದ ಜನ ಉರಿವ ಬಿಸಿಲಲ್ಲಿ ಚಾಕು ಚೂರಿ ಹಿಡಿದು ಹಸುವಿನ ದೇಹವ ಸೀಳುತ್ತ ಬೆವರಿ ತೊಯ್ದುಹೋಗಿದ್ದರು. ವಿವಿಧ ಹಂತಗಳಲ್ಲಿ ಫೋಟೋ ತೆಗೆದುಕೊಳ್ಳಲು ತಿಳಿಸುತ್ತ ನಾನು ವಿವಿಧ ಭಾಗಗಳನ್ನು ಪರೀಕ್ಷಿಸುತ್ತ ಬರೆದುಕೊಳ್ಳುತ್ತಿದ್ದೆ. ಸುತ್ತೂ ನಿಂತಿದ್ದ ಹಲವರು ದೊಮ್ಮೆ ನೋಡ್ಲ! ಗುಂಡಿಗೆ ನೋಡ್ಲಾ, ಬದ್ನೇಕಾಯಿಯಷ್ಟಿರೋ ಗರ್ಭಕೋಶದಲ್ಲಿ ಅಷ್ಟು ದೊಡ್ಡ ಕರು ಹೆಂಗೆ ಬೆಳೀತೈತಪ್ಪ! ಮುಂತಾಗಿ ಜನರಿಂದ ಕಾಮೆಂಟರಿ ಸಾಗಿತ್ತು. ಊರ ನಾಯಿಗಳೆಲ್ಲ ಅವಕಾಶ ಸಿಕ್ಕರೆ ಎಲ್ಲವನ್ನೂ ತಿಂದು ಹಾಕಲು ಜನರ ಕಾಲುಗಳಲ್ಲಿ ನುಸುಳುತ್ತ ಹಾತೊರೆಯುತ್ತಿದ್ದವು. ಅವುಗಳ ಬೊಗಳು, ಕಿತ್ತಾಟ ವಿಪರೀತ ಕಿರಿಕಿರಿಯಾಗುತ್ತಿತ್ತು. ಇದರ ಜೊತೆ ಆಕಾಶದಲ್ಲಿ ಹಾರುತ್ತಿರುವ, ಹತ್ತಿರದ ಮರಗಳ ತುದಿಯಲ್ಲಿ ಕುಳಿತು ಎಲ್ಲವನ್ನೂ ಗಮನಿಸುತ್ತಿರುವ ಹದ್ದುಗಳು.!
ನಾವು ಸ್ವಲ್ಪ ಯಾಮಾರಿದರೂ ಪರೀಕ್ಷೆ ಮಾಡಲು ಲಿವರ್, ಕಿಡ್ನಿ, ಹಾರ್ಟ್, ಲಂಗ್ಸ್, ಗರ್ಭಕೋಶ ಯಾವುವೂ ಇರುತ್ತಿರಲಿಲ್ಲ! ಮಾಯಣ್ಣ ಎನ್ನುವವನಂತೂ ಸರಿಯಾದ ದೊಣ್ಣೆಯಲ್ಲಿ ನಾಯಿಗೊಡೆದ ಪರಿಣಾಮ ಅದು ಕಯ್ಯಯ್ಯೋ ಎಂಬ ಶಬ್ದ ಪಕ್ಕದ ಹಳ್ಳಿಗಳಿಗೂ ಕೇಳಿಸಿರಬೇಕು. ಬಿಡ್ಲ. ಅದನ್ಯಾಕ್ ಸಾಯಿಸ್ತೀಯ? ಡಾಕ್ಟ್ರು ಹಸು ಬಿಟ್ಟು ನಾಯಿ ಪೋಸ್ಟ್ಮಾರ್ಟಂ ಮಾಡ್ಬೇಕೇನ್ಲಾ ಎಂದ ಮತ್ತೊಬ್ಬ. ಜನ ಪಕ್ಕೆ ಹಿಡಕೊಂಡು ನಗತೊಡಗಿದರು. ಅದಕ್ಕೆ ಪ್ರತಿಯಾಗಿ ಮಾಯಣ್ಣ ನಿಂಗೇನ್ ಗೊತ್ಲ! ದನೀನ್ ಡಾಕ್ಟ್ರು ಏನಂದ್ಕಂಡಿದೀಯ? ಅವರು ಹಸು, ಎಮ್ಮೆ, ಕುರಿ, ಮೇಕೆ ಅಷ್ಟೇ ಅಲ್ಲ ನಾಯಿನೂ ಕೊಯ್ಬೇಕು, ಹಂದಿನೂ ಕೊಯ್ಬೇಕು. ಮೊನ್ನೆ ಪೋಲೀಸ್ ಕೇಸಾಗಿ ಹಂದಿ ಶವಪರೀಕ್ಷೆ ಮಾಡಿ ಬಂದ್ರು ಇವ್ರು. ಹಂದಿಗೆ ವಿಷ ಹಾಕಿ ಸಾಯ್ಸಿದಾರೆ ಅಂತ ಬಜಗೂರ್ರವರೋ ಯಾರೋ ಪೋಲೀಸ್ ಕಂಪ್ಲೇಂಟು ಕೊಟ್ಟಿದ್ರಂತೆ. ನೊಣವಿನಕೆರೆ ಪೋಲೀಸ್ ಸ್ಟೇಷನ್ನಾಗೆ ಕೇಸ್ ನಡೀತೈತೆ ಅಂದ.

ಇದೆಲ್ಲ ರಾದ್ಧಾಂತದ ಮಧ್ಯೆ ಅಂತೂ ಇಂತೂ ಶವಪರೀಕ್ಷೆ ಮುಗಿಸಿ ಹೊರಟೆವು. ಮ್ಯಾನೇಜರ್ ಯಡವಟ್ಟು ಮಾಡಿದ್ದರಿಂದ ಸಾಕ್ಷ್ಯಗಳು ಅಧಿಕ ಸಂಖ್ಯೆಯಲ್ಲಿರಲಿ ಅಂತ ಜಗದೀಶ ಒಂದಿಪ್ಪತ್ತು ಫೋಟೋ ತೆಗೆದಿದ್ದ. ನಾವೆಲ್ಲರೂ ಗಲೀಜೆದ್ದು ಹೋಗಿದ್ದೆವು. ವಾಪಸ್ಸು ಅನಂತರಾಮು ನಮನೆಗೆ ಬಂದೆವು. ಒಂದು ಬಕೆಟ್ ಚಹಾ ರೆಡಿಯಾಯಿತು. ಎಲ್ಲ ಪರಿಚಯದ ರೈತರೇ. ಚಹಾ ಕುಡಿಯುತ್ತ ಎಲ್ಲರೂ ಹಗುರಾಗತೊಡಗಿದರು. ಖಂಡಿತವಾಗ್ಲೂ ವಿಮೆಯ ಹಣ ಬಂದೇ ಬರುತ್ತೆ ಅನಂತರಾಮು. ಬೇಕಿದ್ರೆ ತುಮಕೂರಿಗೂ ಹೋಗಿ ಬರೋಣ ಎಂದು ನಾನು ಹೇಳಿದ ಮೇಲೆ ಅನಂತರಾಮು ಮನೆಯವರು ನಿರಾಳರಾದಂತೆ ತೋರಿದರು.
ಇನ್ನೋಗಿ ಸಾ, ಮನೆಗೋಗಿ ಸ್ನಾನ ಗೀನ ಮಾಡ್ಕಳಿ ಜಲ್ದಿ. ಹಿಂಗೆ ಗಲೀಜಾಗಿದ್ರೆ ನಿಮಗ್ಯಾರು ಹೆಣ್ಣು ಕೊಡ್ತಾರೆ? ಎಂದು ಒಬ್ಬ ಜೋಕು ಮಾಡಿದ.
ಅದ್ಯಾಕ್ಲ ಅಂಗಂದೀ, ಅವರೇನು ನಾಕ್ ಮದ್ವೆ ಆಗಬೈದು ಗೊತ್ತಾ! ಡಾಕ್ಟರ್ ಸಾಹೇಬರು ಸಾಬರು ಕಣ್ಲಾ! ಎಂದ ಮತ್ತೊಬ್ಬ. ರೈತರೊಡನೆ ಸದಾ ಖುಷಿಯಿಂದಿರುತ್ತಿದ್ದುದ್ದರಿಂದ ನನ್ನನ್ನು ಎಗ್ಗಿಲ್ಲದೆ ರೇಗಿಸುತ್ತಿದ್ದರು. ಅವರೆಲ್ಲರಲ್ಲಿ ತಮಾಷೆ ಗುಣವಿತ್ತೇ ವಿನಹ ಕೋಮು ವಿಷವಿರುತ್ತಿರಲಿಲ್ಲ. ಬೇಡ ಎಂದರೂ ಅನಂತರಾಮು ಮತ್ತೆ ನನ್ನ ಜೊತೆ ನೊಣವಿನಕೆರೆಗೆ ಬಂದ. ಅದಾಗಲೇ ಕತ್ತಲಾಗುತ್ತಿತ್ತು.

ಒಂದು ವಾರದಲ್ಲಿ ಅನಂತರಾಮು ಆಸ್ಪತ್ರೆಗೆ ಬಂದು ವಿಮೆ ಹಣ ಪಡೆಯುವ ಪತ್ರಗಳನ್ನು ತಂದುಕೊಟ್ಟ. ಮ್ಯಾನೇಜರ್ರು ಒಂದಿಬ್ಬರು ಬೇರೆ ಬ್ಯಾಂಕ್ ಮ್ಯಾನೇಜರುಗಳ ಬಳಿ ಚರ್ಚಿಸಿ ವಿಷಯ ತಿಳಿದುಕೊಂಡು ಬಂದಿದ್ದರಂತೆ. ಯಾವ ತಕರಾರೂ ಮಾಡಲಿಲ್ಲವೆಂದು ಅನಂತರಾಮು ತಿಳಿಸಿದ. ಒಂದೇ ದಿನದಲ್ಲಿ ಆ ಎಲ್ಲ ಫಾರಂಗಳನ್ನೂ ಭರ್ತಿ ಮಾಡಿ ಕಿವಿ ವಾಲೆ ಮತ್ತು ಫೋಟೋಗಳ ಜೊತೆ ಬ್ಯಾಂಕಿಗೆ ಕೊಟ್ಟೆವು. ಒಂದು ತಿಂಗಳೊಳಗಾಗಿ ವಿಮೆಯ ಸಂಪೂರ್ಣ ಹಣ ಅನಂತರಾಮುವಿನ ಬ್ಯಾಂಕ್ ಅಕೌಂಟಿಗೆ ಬಂದು ಸೇರಿಕೊಂಡಿತು.

ಅನಂತರಾಮು ಮತ್ತು ನನ್ನ ಪ್ರೀತಿ ವಿಶ್ವಾಸ ಇಂದಿಗೂ ಹಾಗೇ ಇದೆ. 2011 ರಲ್ಲಿ ಒಮ್ಮೆ ಅವರ ಮನೆಗೆ ಹೋಗಿದ್ದೆ. ಅಜ್ಜಿ ಕಾಲವಾಗಿದೆ. ಮಗ, ಮಗಳು ಇಬ್ಬರೂ ಬೆಂಗಳೂರಿನಲ್ಲಿ ನೌಕರಿಯಲ್ಲಿದ್ದಾರೆ. ಊರ ಹೊರಭಾಗದಲ್ಲಿ ಅನಂತರಾಮು ಬೇರೆ ಮನೆ ಕಟ್ಟಿಸಿಕೊಂಡಿದ್ದಾನೆ. ಊಟ ಮಾಡ್ರಣ್ಣ, ಚಹಾ ಕುಡೀರಣ್ಣ ಅಂತ ಅನಂತರಾಮು ಪತ್ನಿ ಬಾಯ್ತುಂಬ ಮಾತಾಡುತ್ತಿದ್ದರೆ ನನಗೆ ಬೇಡ ಅನ್ನಲಾಗುವುದೇ ಇಲ್ಲ. ಅನಂತರಾಮುವಿನಲ್ಲಿ ಅದೇ ವಿನಯ, ಅದೇ ಸೌಮ್ಯತೆ ಮನೆ ಮಾಡಿದೆ.

LEAVE A REPLY

Please enter your comment!
Please enter your name here