ಲೇಖಕರು: ಚಂಸು ಪಾಟೀಲ, ಕೃಷಿಕರು, ವಿಶ್ಲೇಷಕರು

ಕೆಲವು ದಿನಗಳ ಹಿಂದೆ ಕೃಷಿ ಸಂಬಂಧಿತ ಮೂರು ಮಸೂದೆಗಳಿಗೆ ಅಂಗೀಕಾರ ದೊರೆಯಿತು.ಅವು ರೈತರಿಗೆ ವರವಾಗಲಿವೆ ಎಂಬಂತೆ ಪ್ರಚಾರ ಕೂಡ ನಡೆಯಿತು. ಇನ್ನೊಂದೆಡೆ ಅವು ರೈತರಿಗೆ ಅಷ್ಟೇ ಅಲ್ಲ, ಇಡೀ ಕೃಷಿವಲಯಕ್ಕೆ ಮಾರಕ ಎಂಬ ವಿರೋಧವೂ, ಪ್ರತಿಭಟನೆಗಳೂ ನಡೆದವು. ಈ ಸಂದರ್ಭದಲ್ಲಿ ನಾನು ವಾಟ್ಸಾಪಿನಲ್ಲಿ ಎರಡು ವಿಡಿಯೋ ನೋಡಿದೆ. ಒಂದು ರೈತಸಂಘದವರು ಪ್ರತಿಭಟನೆ ನಡೆಸುತ್ತ ಮಾರುಕಟ್ಟೆ ಬಂದ್ ಮಾಡುತಿದ್ದರು. ಅಲ್ಲೊಬ್ಬ ಅಜ್ಜನಿಗೆ ತಾವೇಕೆ ಹೀಗೆ ಮಾಡುತಿದ್ದೇವೆ ಎಂಬುದನ್ನು ವಿವರಿಸುತಿದ್ದರು. ಬಹುಶಃ ಆ ಅಜ್ಜ ರೈತನಾಗಿಲ್ಲದಿರಬಹುದು. ಅಥವಾ ಈ ಹಿಂದೆ ರೈತನಾಗಿರಲೂಬಹುದು. ಆದರೆ, ಆ ಸಮಯದಲ್ಲಿ ಆತ ತರಕಾರಿ ಮಾರುವನ ಹಾಗೆ ನನಗೆ ಕಂಡ.
ಅತನಿಗೆ ಆ ದಿನದ ಆದಾಯ ಮುಖ್ಯ. ಇಲ್ಲ ಅಂದ್ರೆ ಹೊಟ್ಟೆ ತುಂಬಿಸಿಕೊಳ್ಳೋದೂ ಕಷ್ಟ. ರೈತ ಮುಖಂಡರ ಮಾತಿಗೆ ಸೊಪ್ಪು ಹಾಕದ ಅಜ್ಜ “ನಾವು ಕೊಟ್ಟರೆ ಅವರು ತಗೋತಾರೆ. ನಾವ್ ಕೊಡದೇ ಯಾರೇಕೆ ಭೂಮಿ ಕೊಳ್ತಾರೆ?” ಎಂದು ಪ್ರಶ್ನಿಸುತಿದ್ದ. ಬಂದ್ ನಿಂದಾಗಿ ತನ್ನ ಒಂದು ದಿನದ ದುಡಿಮೆ ಹಾಳಾಗುವುದಲ್ಲ ಎಂಬ ಆತಂಕ ಸಹಜವಾಗಿ ಅಸಹನೆಗೆ ಕಾರಣವಾಗಿರಬೇಕು ಎಂದುಕೊಂಡೆ.
ಇನ್ನೊಂದು ದೃಶ್ಯದಲ್ಲಿ ವ್ಯಕ್ತಿಯೊಬ್ಬ ತನ್ನ ಪರಿಚಯ ಹೇಳಿಕೊಳ್ಳದೆ ರೈತ ಸಂಘದವರ ಪ್ರತಿಭಟನೆಗೆ ವಿರೋಧ ವ್ಯಕ್ತಪಡಿಸುತ್ತಿದ್ದ. “ನಿಜವಾದ ರೈತರಿಗೆ ಪ್ರತಿಭಟನೆಗೆ ಹೋಗಲು ಸಮಯ ಎಲ್ಲಿರುತ್ತದೆ? ಹೀಗೆ ಪ್ರತಿಭಟನೆ ಮಾಡುವವರು ನಿಜವಾದ ರೈತರೆ ಅಲ್ಲ, ರೈತರು ದುಡಿಯೋದು ಎಲ್ಲ ದಲಾಲರಿಗೇ ಹೋಗುತ್ತೆ” ಎಂದು ಉಗ್ರಪ್ರತಾಪಿಯಾಗಿ ಚೀರಾಡುತಿದ್ದ.
ಈ ಎರಡೂ ವಿಡಿಯೋಗಳಲ್ಲಿ ಕಂಡವರು ಸಾಮಾನ್ಯರೆ, ಅವರು ಕೃಷಿಯೊಂದಿಗೆ ನಂಟು ಹೊಂದಿರಬಹುದು. ಆದರೆ ಅವರು ಸ್ವತಃ ಕೃಷಿಕರು ಎಂಬ ಬಗ್ಗೆ ಆ ವಿಡಿಯೋಗಳಲ್ಲಿ ಯಾವುದೇ ಖಚಿತತೆ ಖಂಡಿತ ಇರಲಿಲ್ಲ. ಸಾಮಾನ್ಯರ ತಿಳಿವಳಿಕೆಯ ಮಟ್ಟದಲ್ಲಿ ಅವರು ಮಾತನಾಡಿದ್ದು ಸರಿಯೆ ಇರಬಹುದು. ಅಥವಾ ಅದನ್ನು ಕೇಳಿದವರಿಗೂ ಅವರ ಮಾತುಗಳು ಸರಿ ಎನ್ನಿಸಬಹುದು. ಅದರಾಚೆಗೆ ಇತ್ತೀಚಿಗೆ ಅಂಗೀಕಾರಗೊಂಡ ಕಾನೂನುಗಳ ಬಗ್ಗೆ ಅವರಿಗೆ ಅರಿವಿದೆ, ಆ ಬಗ್ಗೆ ಅವರಿಗೆಲ್ಲ ಗೊತ್ತಿದೆ ಎಂದು ಹೇಗೆ ತಿಳಿಯುವುದು?
ಅವರ ಮಾತುಗಳನ್ನೇ ಆಲಿಸಿದರೂ ಹೊಸ ಕಾನೂನುಗಳ ಪೂರ್ಣ ತಿಳಿವಳಿಕೆ ಅವರಿಗಿಲ್ಲ ಎನ್ನುವುದು ಸ್ವಯಂವೇದ್ಯ. ಹೀಗಿರುವಾಗ ಇದೇ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಇಂಥ ವಿಡಿಯೋಗಳು ಅದೇಕೆ ವೈರಲ್ ಆಗುತ್ತವೆ ಎಂಬುದು ಸೋಜಿಗದ ಸಂಗತಿ. ಒಂದು ಸಂದರ್ಭದಲ್ಲಿ ಪ್ರಧಾನಮಂತ್ರಿಗಳೇ ” ರೈತರನ್ನು ದಾರಿತಪ್ಪಿಸುವ ಪ್ರಯತ್ನಗಳು ನಡೆಯುತ್ತಿವೆ. ಅಂಥ ಮಾತುಗಳಿಗೆ ರೈತರು ಕಿವಿಗೊಡಬೇಡಿ” ಎಂದು ಮನವಿ ಮಾಡಿಕೊಳ್ಳುತ್ತಾರೆ. ಅದೇ ಸಂದರ್ಭದಲ್ಲಿ ಇಂಥ ಅರೆಬರೆ ವಿಡಿಯೋಗಳು ವೈರಲ್ ಆಗುತ್ತಿರುತ್ತವೆ.
ಸಂಪೂರ್ಣ ವಿಷಯ ವಿವರಣೆಯನ್ನು ಮರೆಮಾಚುವ ಇಂಥ ವಿಡಿಯೋಗಳು ರೈತರ ದಾರಿ ತಪ್ಪಿಸಲಿಕ್ಕಾಗಿಯೆ ಸೃಷ್ಟಿಸಿದವು ಎಂಬುದು ಅವುಗಳನ್ನು ನೋಡಿದರೆ ಗೊತ್ತಾಗುತ್ತದೆ. ಇಲ್ಲಿ ಯಾರು ಯಾರನ್ನು ಏಕೆ ದಾರಿ ತಪ್ಪಿಸುತಿದ್ದಾರೆ ಎಂಬುದೇ ಅರ್ಥವಾಗುವುದಿಲ್ಲ.
ನಡೆಯುವವರು ಇದ್ದ ಮೇಲೆ ದಾರಿಯೊಂದು ಇದ್ದೇ ಇರುತ್ತದೆ. ನಡೆಯುವರಿಗೆ ದಾರಿ ಗೊತ್ತಿಲ್ಲ ಎಂದರೆ ಅವರು ಇನ್ಯಾರೊ ದಾರಿಹೋಕರನ್ನು ಕೇಳಿ ತಿಳಿದುಕೊಳ್ಳಬೇಕಾಗುತ್ತದೆ. ಇಲ್ಲಿ ದಾರಿ ತೋರುವವರೆ ದಾರಿ ತಪ್ಪಿಸಿಬಿಟ್ಟರೆ. ? ಎಂಬ ಆತಂಕ ಎದುರಾಗುತ್ತದೆ.
ಇವತ್ತು ನಮ್ಮ ರೈತರ ಸ್ಥಿತಿ ಇದೇ ರೀತಿಯಾಗಿದೆ. ಕುರುಡನ ಮೇಲೆ ಹೆಳವ ಅಲ್ಲ; ಹೆಳವನ ಮೇಲೆಯೇ ಕುರುಡ ಕೂತಂತಿದೆ. ನಾವು ನೆಮ್ಮದಿಯ ಬದುಕನ್ನೂ ಅರಸುತಿದ್ದೇವೆ. ಜೊತೆಗೆ ಐಶಾರಾಮಿ ಬದುಕೂ ಬೇಕೆನ್ನುತಿದ್ದೇವೆ. ಇವೆರಡೂ ಬೆಸೆದ ಹದವಾದ ಬದುಕು ಸಾಧ್ಯವಿಲ್ಲವೇ? ಮೊದಲು ನಾವಿದನ್ನು ಸ್ಪಷ್ಟಪಡಿಸಿಕೊಳ್ಳಬೇಕಿದೆ.


ಹಸಿರುಕ್ರಾಂತಿ ಮತ್ತದರ ಸತ್ಪರಿಣಾಮ, ದುಷ್ಪರಿಣಾಮಗಳು ಕಣ್ಣೆದುರೇ ಇವೆ. ಇದರಿಂದ ದೇಶಕ್ಕೆ ಆಹಾರಭದ್ರತೆ ಸಿಕ್ಕಿತು. ರೈತರ ಜೀವನಭದ್ರತೆಯೇ ಹೋಯಿತು. ಆಧುನಿಕ ಬದುಕಿನ ವ್ಯಾಮೋಹಕ್ಕೆ ಒಳಗಾದ ರೈತ ಅತ್ತ ನೆಮ್ಮದಿಯನ್ನೂ ಕಳೆದುಕೊಂಡ. ಇತ್ತ ಐಶ್ವರ್ಯದಿಂದಲೂ ವಂಚಿತನಾಗಿ ಹತಾಶೆಯ ಹಾದಿಯಲ್ಲೆ ಆತ್ಮಹತ್ಯೆ ಎಂಬ ಶಾಪಕ್ಕೆ ಗುರಿಯಾಗತೊಡಗಿದ. ಶಾಪವಿಮೋಚನೆಯ ಈ ಹೊತ್ತಿನಲ್ಲಿ ಬೆಂಬಲ ಬೆಲೆ, ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗದಿ, ಮಧ್ಯವರ್ತಿಗಳ ನಿವಾರಣೆ, ಬೆಳೆವಿಮೆ ಮೊದಲಾದ.ಬೇಡಿಕೆಗಳೂ ಅವುಗಳ ಸುಧಾರಣೆ ಮತ್ತು ಈಡೇರಿಕೆಗೆ ಹಕ್ಕೊತ್ತಾಯಗಳೂ ನಡೆದಿದ್ದವು.
ಈ ಹಂತದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅಂಗೀಕರಿಸಿರುವ ಕೃಷಿಗೆ ಸಂಬಂಧಿಸಿದ ಮಸೂದೆಗಳು ರೈತರ ಈ ಮೊದಲಿನ ಬೇಡಿಕೆಗಳನ್ನೇ ಲಾಕ್ಡೌನ್ ಮಾಡಿಬಿಟ್ಟಿವೆ ಎಂದೆನಿಸುತ್ತದೆ. ಯಾರೆಲ್ಲ ಭೂಮಿ ಖರೀದಿಸಲು ಅನುಮತಿಸುವುದು, ನೇರ ವ್ಯಾಪಾರಕ್ಕೆ ಉತ್ತೇಜನ ಕೊಡುವುದು, ಆವಶ್ಯಕ ವಸ್ತುಗಳ ಖಾಸಗಿ ಸಂಗ್ರಹಕ್ಕೆ ಪರವಾನಿಗೆ ನೀಡುವುದು ಈ ಎಲ್ಲದರ ಮೇಲೆ ಕೃಷಿಗೆ ಸಂಬಂಧಿತ ವ್ಯಾಜ್ಯಗಳನ್ನು ನ್ಯಾಯಾಲಯಗಳ ವ್ಯಾಪ್ತಿಯಿಂದ ಹೊರಗಿಟ್ಟು ಕಾರ್ಯಾಂಗದ ಇತಿಮಿತಿಯಲ್ಲೆ ಅವುಗಳಿಗೆ ಪರಿಹಾರ ಕಂಡುಕೊಳ್ಳುವಂಥ ವ್ಯವಸ್ಥೆ ನಮ್ಮನ್ನು ಎಲ್ಲಿಗೆ ಒಯ್ದು ನಿಲ್ಲಿಸುತ್ತದೆ ಎಂಬುದನ್ನು ಊಹಿಸಲಸಾಧ್ಯ.
ಏಕೆಂದರೆ, ಇದು ಲಗಾಮಿಲ್ಲದ ಕುದುರೆ ಮೇಲೆ ಕೂರಿಸಿ, ಮಾತು ಕಲಿತ ಕುದುರೆ ಇದು ನೀ ಹೇಳಿದಂತೆ ಕೇಳುತ್ತದೆ ಎಂದು ಹೇಳಿದಂತಿದೆ. ಅದು ನಮ್ಮ ಮಾತು ಕೇಳದಿದ್ದರೆ…ಅಥವಾ ಅದಕ್ಕೆ ಮಾತನ್ನೇ ಕಲಿಸಿರದಿದ್ದರೆ… ಲಗಾಮಿಲ್ಲದೆ ಕುಳಿತ ಸವಾರನನ್ನು ರಕ್ಷಿಸುವವರಾರು?
ಗುತ್ತಿಗೆ ಕೃಷಿಯಿಂದ ಕೃಷಿ ಆದಾಯ ಹೆಚ್ಚಬಹುದೇ ವಿನಃ ಕೃಷಿಕರು ಹಾಗೂ ಕೃಷಿಕಾರ್ಮಿಕರ ಸಮಸ್ಯೆಗಳು ನಿವಾರಣೆ ಆಗಲಾರವು. ಇದಕ್ಕೆ ಹಸಿರುಕ್ರಾಂತಿಯನ್ನೇ ಉದಾಹರಿಸಬಹುದು. ಹಸಿರುಕ್ರಾಂತಿಯ ಪರಿಣಾಮ ಆಹಾರ ಸಮಸ್ಯೆ ಏನೋ ನೀಗಿತು. ಅದಕ್ಕೆ ಕಾರಣರಾದ ರೈತರ ಬದುಕು ಏಕೆ ಬರಡಾಯಿತು? ಈ ಪ್ರಶ್ನೆಗೆ ಉತ್ತರ ಹುಡುಕುತ್ತಲೇ ಇದ್ದೇವೆ.
ಸ್ವಾವಲಂಬಿಯಾಗಿದ್ದ ರೈತನನ್ನು ಹಸಿರುಕ್ರಾಂತಿ ಪರಾವಲಂಬಿಯಾಗಿಸಿತು. ಬೀಜ, ಗೊಬ್ಬರ, ಕ್ರಿಮಿನಾಶಕ, ಆಧುನಿಕ ಕೃಷಿ ಪರಿಕರಗಳ ದುಬಾರಿ ಬೆಲೆ ಮೊದಲಾದವುಗಳ ಕಾರಣ ರೈತ ಸಹಜವಾಗಿ ಸಾಲಗಾರನಾಗತೊಡಗಿದ. ಋಣದ ಬದುಕು ಆತನ ನೆಮ್ಮದಿಯನ್ನು ಕಸಿಯಿತು. ಅವನು ಖಿನ್ನತೆಗೊಳಗಾದ. 1990 ರಿಂದ ನಿಧಾನವಾಗಿ ಹೆಚ್ಚುತ್ತ ಸಾಮೂಹಿಕ ಪೀಡುಗಿನಂತೆ ಹಬ್ಬಿದ ಈ ಕಾಯಿಲೆಗೆ ಅಲ್ಲಿಂದ ಇಲ್ಲಿವರೆಗೂ ನಮ್ಮ ದೇಶದಲ್ಲಿ ಪ್ರತಿವರ್ಷ ಸುಮಾರು ಹತ್ತು ಸಾವಿರ ರೈತರು ಬಲಿಯಾಗುತ್ತಲೇ ಇದ್ದಾರೆ.
ಈ ಹಿನ್ನೆಲೆಯಲ್ಲಿಯೇ ಅಲ್ಲವೇ, ಸಹಾಯಧನ ಸೌಲಭ್ಯ, ಬೆಂಬಲಬೆಲೆ, ಬೆಳೆವಿಮೆ, ವೈಜ್ಞಾನಿಕ ಬೆಲೆನಿಗದಿ ಮೊದಲಾದ ಪರಿಹಾರೋಪಾಯಗಳು ತೆರೆದುಕೊಂಡಿದ್ದು. ಇವುಗಳನ್ನು ಹಂತ ಹಂತವಾಗಿ ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕಾದ ಸರ್ಕಾರಗಳೆ ಇವೆಲ್ಲಕ್ಕೂ ತಿಲಾಂಜಲಿ ಇತ್ತು ಇಡೀ ವ್ಯವಸ್ಥೆಯನ್ನೇ ರೂಪಾಂತರಿಸಲು ಹೊರಟರೆ ಸಮಸ್ಯೆಗಳು ಪರಿಹಾರ ಕಾಣಬಲ್ಲವೇ? ಹೊಸವ್ಯವಸ್ಥೆ ಹೊಸ ಸಮಸ್ಯೆಗಳನ್ನೂ ತನ್ನ ಗರ್ಭದಲ್ಲಿರಿಸಿಕೊಂಡೇ ಬಂದಿರುತ್ತದೆ.
ಹಸಿರುಕ್ರಾಂತಿಯ ದುಷ್ಪರಿಣಾಮಗಳು ಕಣ್ಮುಂದೇ ಇರುವಾಗ ಇನ್ನೊಂದು ಬದಲಾವಣೆ ಅಂಥ ಯಾವ ಕೆಡುಕನ್ನೂ ತರಲಾರದೆಂದು ಯಾವ.ಭರವಸೆ ಇದೆ? ಈಗಾಗಲೇ ದೈನೇಸಿ ಬದುಕಿಗೆ ಗೆ ನಜ್ಜುಗುಜ್ಜಾಗಿರುವ ರೈತರು ಮತ್ತು ಕೃಷಿಕೂಲಿಕಾರ್ಮಿಕರಿಗೆ ಅದೇನು ಒಮ್ಮೆಗೆ ಲಾಟರಿ ಹೊಡೆಯುವುದೇ? ಇಲ್ಲವಾದರೆ ಅದು ಹೇಗೆ ಅವರ ಬದುಕು ಹಸನಾಗಲಿದೆ? ಇಂಥ ಪ್ರಾಥಮಿಕ ಪ್ರಶ್ನೆಗಳಿಗೆ ಉತ್ತರ ಹುಡುಕಿಕೊಳ್ಳದೇ, ದೂರಗಾಮಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳದೆ ಏಕಾಏಕಿ ನಿರ್ಧರಿಸಿದಂತೆ ವ್ಯವಸ್ಥೆಯನ್ನು ಬದಲಿಸ ಹೊರಡುವುದು ಇರುಳು ಕಂಡ ಬಾವಿಯಲ್ಲಿ ಹಗಲು ಬಿದ್ದಂತೆಯೇ ಅಲ್ಲವೇ?
ಇತ್ತೀಚೆಗೆ ನನಗೆ ಡಾ. ಬಿ ಆರ್. ಅಂಬೇಡ್ಕರ್ ಅವರು ಕೃಷಿಯ ಬಗೆಗೆ ಬರೆದ ಲೇಖನವೊಂದು ಅಚಾನಕವಾಗಿ ಓದಲು ಸಿಕ್ಕಿತು. ಗೆಳೆಯ ಅರುಣ್ ಜೋಳದ ಕೂಡ್ಲಗಿ ಅವರು ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಆರಂಭಿಸಿರುವ ಅಂಬೇಡ್ಕರ್ ಓದುಯಾನದಲ್ಲಿ ನನಗೂ ಪಾಲ್ಗೊಳ್ಳುವ ಅವಕಾಶವಿತ್ತರು. ಆ ಪ್ರಯುಕ್ತ ನಾನು ಅಂಬೇಡ್ಕರ್ ಅವರ ಬರಹಗಳನ್ನು ನೋಡುತ್ತಿದ್ದಾಗ ಭಾರತದಲ್ಲಿ ಸಣ್ಣ ಹಿಡುವಳಿಗಳ ಕುರಿತಾಗಿ ಅವರು ಬರೆದ ಲೇಖನ ನನ್ನಲ್ಲಿ ಕುತೂಹಲ ಮೂಡಿಸಿತು.
ಸುಮಾರು ಎಂಬತ್ತು ವರ್ಷಗಳ ಹಿಂದೆಯೆ ಅಂಬೇಡ್ಕರ್ ಅವರು ಕೃಷಿ ಹಿಡುವಳಿಗಳು ಅವುಗಳ ನಿರಂತರ ವಿಘಟನೆ, ಕ್ರೋಢೀಕರಣ ಮತ್ತು ವಿಸ್ತರಣೆ ಕುರಿತು ಆ ಲೇಖನದಲ್ಲಿ ವಿಸ್ತೃತವಾಗಿ ಚರ್ಚಿಸಿದ್ದಾರೆ. ಭೂಮಿಯ ಅತಿಯಾದ ಛಿದ್ರೀಕರಣ, ಕೃಷಿ ಸಲಕರಣೆಗಳ ಕೊರತೆ, ಪರಿಣಾಮಗಳನ್ನೂ ಕೂಡ ಆ ಲೇಖನದಲ್ಲಿ ಚರ್ಚಿಸಲಾಗಿದೆ. ಮಾದರಿ ಹಿಡುವಳಿಯ ಬಗ್ಗೆ ಹೀಗೆ ಅವಲೋಕಿಸಲಾಗಿದೆ.
“ ಪ್ರತಿಯೊಂದು ಹೊಸ ಹಿಡುವಳಿಯೂ ಮಣ್ಣು, ಸಾಗುವಳಿ ಮುಂತಾದ ಸ್ಥಳೀಯ ಪರಿಸ್ಥಿತಿಗನುಗುಣವಾಗಿ ಲಾಭದಾಯಕ ಜಮೀನಾಗುವ ಗಾತ್ರದ್ದಾಗಿರಬೇಕು, ಎಂದರೆ, ಒಂದು ಕುಟುಂಬ ಅದರಲ್ಲಿ ಪೂರ್ಣ ನಿರತವಾಗುವಂತಿದ್ದು, ಆ ಕುಟುಂಬದ ಜೀವನಾಧಾರವಾಗುವಂತಹ ಭೂಮಿಯ ಘಟಕವಾಗಿರಬೇಕು.” ಇತರ ವೆಚ್ಚಗಳನ್ನು ಪೂರೈಸಿ ತಾನು ಮತ್ತು ತನ್ನ ಕುಟುಂಬ ಸಾಕಷ್ಟು ನೆಮ್ಮದಿಯಿಂದ ಜೀವನ ಸಾಗಿಸಲು ಬೇಕಾಗುವಷ್ಟು ಉತ್ಪಾದನೆ ಮಾಡುವ ಹಿಡುವಳಿಯನ್ನು ಮಾದರಿ ಹಿಡುವಳಿ ಎಂದು ಒಪ್ಪಿಕೊಳ್ಳಬಹುದು ಎಂಬ ವಿವೇಚನೆ ಇಲ್ಲಿದೆ.
ಸಣ ಹಿಡುವಳಿಗಳೇ ಮೂಲಭೂತ ಅನಿಷ್ಟಗಳೆಂದು ಭಾವಿಸುವವರು ಸಹಜವಾಗಿಯೇ ಅವುಗಳ ವಿಸ್ತರಣೆಯನ್ನು ಪತಿಪಾದಿಸುತ್ತಾರೆ. ಇದು ದೋಷಯುಕ್ತ ರಾಜಕೀಯ ಅರ್ಥ ವ್ಯವಸ್ಥೆ.ಥಾಮಸ್ ಅರ್ನಾಲ್ಡ್ ಒಮ್ಮೆ ಹೇಳಿದಂತೆ “ದೋಷಯುಕ್ತ ರಾಜಕೀಯ-ಅರ್ಥ ವ್ಯವಸ್ಥೆ ಅಪರಾಧದ ಜನಕ”. ಹಿಡುವಳಿಯ ವಿಸ್ತರಣೆಯಿಂದಲೇ ಅದು ಲಾಭದಾಯಕವಲ್ಲ ಎಂಬುದೂ ಸ್ಪಷ್ಟ. ಅಲ್ಲದೆ, ಈ ಕೃತಕ ವಿಸ್ತರಣೆಯ ಯೋಜನೆ ಅನೇಕ ಸಾಮಾಜಿಕ ಕೆಡಕುಗಳಿಂದ ತುಂಬಿದೆ” ಎಂಬೀ ಅಂಬೇಡ್ಕರ್ ಅವರ ಈ ಮಾತು ಗುತ್ತಿಗೆ ಕೃಷಿಯ ಅಪಾಯಗಳನ್ನೂ ಸೂಚಿಸುವಂತಿದೆ.
ಅಂಬೇಡ್ಕರ್ ಅವರ ಈ ವಿಚಾರಗಳ ಹಿನ್ನೆಲೆಯಲ್ಲಿ ನೋಡುವುದಾದರೆ, ನಮ್ಮ ಕೃಷಿರಂಗಕ್ಕೆ ಮೂಲಾಧಾರವಾಗಿರುವುದೆ ಈ ಹಿಡುವಳಿ ವ್ಯವಸ್ಥೆ, ಹಿಡುವಳಿಗಳ, ಸ್ವರೂಪ, ಹಂಚಿಕೆ, ಭಿನ್ನತೆ, ಹಕ್ಕುಬಾಧ್ಯತೆಗಳನ್ನೂ ಅಮೂಲಾಗ್ರವಾಗಿ ಅಭ್ಯಸಿಸುವ ಪ್ರಯತ್ನಗಳು ಈಗ ಯಾವದಾದರೂ ಕೃಷಿ ವಿ.ವಿ.ಯಿಂದ ನಡೆದಿವೆಯೋ ಇಲ್ಲವೋ ನನಗೆ ಗೊತ್ತಿಲ್ಲ. ಆದರೆ ಈ ಮೂಲಭೂತ ಸಮಸ್ಯೆಯನ್ನು ಸರಿಪಡಿಸದೇ ರೂಪಿಸಲ್ಪಡುವ ಕೃಷಿ ಸಂಬಂಧಿ ಯೋಜನೆಗಳು, ನೀಡುವ ಸೌಲಭ್ಯಗಳು ನಿರೀಕ್ಷಿತ ಯಶಸ್ಸು ಪಡೆಯಲಾರವು ಎಂಬುದಂತೂ ಸರ್ವವಿಧಿತ. ಸುಮಾರು ಎಂಭತ್ತು ವರ್ಷಗಳ ಹಿಂದೆಯೆ ಹೀಗೆ ಛೀದ್ರಗೊಂಡಿದ್ದ ಹಿಡುವಳಿಗಳು ಈಗ ಎಷ್ಟು ಛಿದ್ರಗೊಂಡಿರಬಹುದು? ಈ ತುಂಡು ತುಂಡು ಭೂಮಿಗಳ ಸಾಗುವಳಿಗೆ ತಗುಲುವ ಮಾನವಶಕ್ತಿ, ಖರ್ಚು ವೆಚ್ಚ ಎಷ್ಟು? ಅಪವ್ಯಯ ಎಷ್ಟು? ಇದರ ಪೂರ್ಣ ಚಿತ್ರವಿಲ್ಲದೆ ಜಾರಿಗೆ ತರಲಾಗುವ ಮಸೂದೆಗಳ ಹಣೆಬರಹವೇನು? ನಾವು ಈ ಕುರಿತು ಈ ಯೋಚಿಸಿದಂತೆಯೆ ಇಲ್ಲ.
ಹಸಿರುಕ್ರಾಂತಿಯ ಪರಿಣಾಮ ರಸಾಯನಿಕ ಗೊಬ್ಬರ ಮತ್ತು ಕೀಟನಾಶಕಗಳ ಬಳಕೆ ಹೆಚ್ಚಿ ಅದು ಪರಿಸರ ಮತ್ತು ಆಹಾರ ಮಾಲಿನ್ಯಕ್ಕೆ ಎಡೆ ಮಾಡಿಕೊಡುತ್ತಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಇದು ಜನಜೀವನದ ಆರೋಗ್ಯಕರ ಬದುಕಿಗೆ ಮಾರಕವಾಗಿ ಪರಿಣಮಿಸುತ್ತಿದೆ ಬಡಬಗ್ಗರು ತಮ್ಮ ಆದಾಯದ ಬಹುಪಾಲನ್ನು ಆರೋಗ್ಯಕ್ಕಾಗಿಯೆ ಬಳಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಸಾಕಷ್ಟು ಆದಾಯವಿಲ್ಲದ ಕುಟುಂಬಗಳು ಸಾಲದ ಮೊರೆ ಹೋಗಬೇಕಾಗಿದೆ. ನಿರ್ಗತಿಕರಿಗೆ ಸಾಲ ಹುಟ್ಟುವುದಾದರೂ ಹೇಗೆ ಎಂದು ಕೇಳಿಕೊಂಡರೆ ಒಂದು ಕ್ಷಣ ಎದೆ ಝಲ್ಲೆನ್ನುತ್ತದೆ. ಅಧಿಕಾರಕ್ಕೆ ಬರುವ ಮುನ್ನ ನೈಸರ್ಗಿಕ ಕೃಷಿಯ ಮಾತುಗಳನ್ನಾಡುತಿದ್ದವರು. ಈಗ ಅವೆಲ್ಲವೂಗಳಿಂದ ದೂರ ಸರಿದು ಹೊರೆ ಇಳಿಸಿಕೊಳ್ಳುವ ಭರದಲ್ಲಿ ಮತ್ಯಾರಿಗೋ ಆ ಹೊರೆ ಹೊರೆಸಿ ಹಾಳಾಗಿ ಹೋಗಿ ಎಂಬಂತಿದೆ ನಮ್ಮ ನಪುಂಸಕ ಸರ್ಕಾರಗಳ ಕಾರ್ಯವೈಖರಿ!
ಇದೇ ಸಂದರ್ಭದಲ್ಲಿ ಮಹಾತ್ಮಾ ಗಾಂಧೀಜಿ ಅವರ ‘ಭೂಮಿ ಮನುಷ್ಯನ ಅಗತ್ಯಗಳನ್ನೆಲ್ಲ ಪೂರೈಸಬಲ್ಲುದು; ಆದರೆ, ದುರಾಸೆಗಳನ್ನಲ್ಲ’ ಎಂಬ ಮಾತಾಗಲಿ, ರಾಮಮನೋಹರ ಲೋಹಿಯಾ ಅವರ ” ಆಧುನಿಕ ಜಗತ್ತು ಇಡೀ ಜಗತ್ತಿನ ಜನರಿಗೆ ಸಭ್ಯ ಜೀವನಾವಕಾಶಕ್ಕಾಗಿ ಹೋರಾಡಬೇಕು; ಸಂಪದಭಿವೃದ್ಧಿಗಿಂತ ಸಭ್ಯಜೀವನವೆ ಲೇಸೆನ್ನುವುದು ಈ ಕಾಲದ ಮುಖ್ಯ ಘೋಷಣೆ ಆಗಬೇಕು” ಎಂಬ ಮಾತುಗಳನ್ನು ನಮ್ಮನ್ನು ಆಳುವವರಿಗೆ ಮತ್ತೆ ಮತ್ತೆ ನೆನಪಿಸುತ್ತಲೇ ಇರಬೇಕೆನಿಸುತ್ತದೆ.

LEAVE A REPLY

Please enter your comment!
Please enter your name here