ಕ್ಷೇತ್ರಬೆಳೆಗಳ ಜೊತೆಗೆ ತರಕಾರಿ ಬೆಳೆಗಳನ್ನು ಬೆಳೆಯುವುದು ಕೃಷಿಗೆ ಸುಸ್ಥಿರತೆಯನ್ನು ತಂದು ಕೊಡುತ್ತದೆ. ಇದರಿಂದ ಆಗುವ ಅನುಕೂಲಗಳು ಅಪಾರ. ಹೆಚ್ಚಿನ ತರಕಾರಿಗಳು ಅಲ್ಪಾವಧಿ ಬೆಳೆಗಳಾಗಿವೆ. ಕಡಿಮೆ ಸಮಯದಲ್ಲಿ ಮಾರುಕಟ್ಟೆಗೆ ಬೆಳೆಗಳನ್ನು ಕಳಿಸುವುದು ಸಾಧ್ಯವಾಗುತ್ತದೆ. ಇದಲ್ಲದೇ ಕ್ಷೇತ್ರಬೆಳೆ ನಂತರ ತರಕಾರಿ ಬೆಳೆ ಬೆಳೆಯುವುದರಿಂದ ಮಣ್ಣಿನ ಫಲವತ್ತತೆಯೂ ವೃದ್ಧಿಸುತ್ತದೆ. ರಾಮನಗರ ಜಿಲ್ಲೆ, ಮಾಗಡಿ ತಾಲ್ಲೂಕಿನ ಕುದೂರು ಹೋಬಳಿ ವ್ಯಾಪ್ತಿಯಲ್ಲಿದೆ ಬೆಟ್ಟಳ್ಳಿ. ಇಲ್ಲಿನ ಪ್ರಗತಿಪರ ಕೃಷಿಕ ಜಯರಾಮಯ್ಯ ಅವರು ಪ್ರಯೋಗಶೀಲ ಪ್ರವೃತ್ತಿಯವರು. ನಿರಂತರವಾಗಿ ಬೆಳೆ ಬದಲಾವಣೆ ಮಾಡುವುದರಿಂದ ಸಾಕಷ್ಟು ಅನುಕೂಲಗಳಿವೆ ಎಂದು ಕಂಡುಕೊಂಡವರು. ಏಕಬೆಳೆ ಪದ್ಧತಿಯಿಂದ ಆಗುವ ಅನಾನುಕೂಲಗಳನ್ನು ಮನಗಂಡಿದ್ದಾರೆ. ಆದ್ದರಿಂದ ವಿವಿಧ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಇವರು ಹುರುಳಿಕಾಯಿ ಅಂದರೆ ಬೀನ್ಸ್ ಅನ್ನು ಸುಸ್ಥಿರವಾಗಿ ಕೃಷಿ ಮಾಡುತ್ತಿದ್ದಾರೆ.

ನಿರಂತರವಾಗಿ ಏಕಬೆಳೆ ಪದ್ಧತಿ ಅನುಸರಿಸುತ್ತಿದ್ದರೆ ಮಣ್ಣಿನ ಮೇಲೆ ದುಷ್ಪರಿಣಾಮಗಳು ಉಂಟಾಗುತ್ತವೆ. ಆದ್ದರಿಂದ ಬೆಳೆಯನ್ನು ಬದಲಾಯಿಸುತ್ತಿರುವುದು ಅವಶ್ಯಕ. ಅಲ್ಪಾವಧಿ ಕ್ಷೇತ್ರಬೆಳೆ ಬೆಳೆದ ನಂತರ ಅದೇ ಭೂಮಿಯಲ್ಲಿ ಅಲ್ಪಾವಧಿ ತರಕಾರಿ ಬೆಳೆಗಳನ್ನು ಬೆಳೆಯಬಹುದು. ಇದರಿಂದ ಬೆಳೆಗಳನ್ನು ಕಾಡುವ ಕೀಟಬಾಧೆ ಕಡಿಮೆಯಾಗುತ್ತದೆ. ಮಣ್ಣಿನ ಫಲವತ್ತತೆಯೂ ವೃದ್ಧಿಸುತ್ತದೆ. ತರಕಾರಿ ಬೆಳೆಗಳನ್ನು ಸುಸ್ಥಿರ ರೀತಿಯಲ್ಲಿ ಬೆಳೆಯುವುದರಿಂದ ಮಾತ್ರ ಲಾಭದಾಯಕ ಪರಿಸ್ಥಿತಿ ಇರುತ್ತದೆ. ಅನಗತ್ಯವಾದ ಖರ್ಚನ್ನು ಮಾಡದೇ ಇರುವುದು ಸೂಕ್ತ. ಇದು ಕೃಷಿಕ ಜಯರಾಮಯ್ಯ ಅವರ ಅಭಿಪ್ರಾಯ. ಈ ನಿಟ್ಟಿನಲ್ಲಿ ಅವರು ತರಕಾರಿ ಬೆಳೆಗಳನ್ನು ಕೃಷಿ ಮಾಡುತ್ತಿದ್ದಾರೆ. ಕೃಷಿಯಲ್ಲಿ ವೈವಿಧ್ಯಮಯತೆ ಇರಬೇಕೆಂದು ಪ್ರತಿಪಾದಿಸುವ ಇವರು ಒಂದೇ ಅವಧಿಯಲ್ಲಿ ವಿವಿಧ ಬೆಳೆಗಳನ್ನು ಬೆಳೆಯುತ್ತಿದ್ದಾರೆ.

ಹುರುಳಿಕಾಯಿಯಲ್ಲಿ ಬೇರೆಬೇರೆ ಹವಾಗುಣಕ್ಕೆ ಹೊಂದಿಕೊಳ್ಳುವ ತಳಿಗಳಿವೆ. ಅದೇ ರೀತಿ ಎಲ್ಲ ಋತುಮಾನದಲ್ಲಿಯೂ ಒಂದೇ ರೀತಿಯ ತಳಿಗಳನ್ನು ಬೆಳೆಯಬಾರದು. ಹೀಗೆ ಮಾಡುವುದರಿಂದ ವ್ಯತಿರಿಕ್ತ ಪರಿಣಾಮಗಳು ಉಂಟಾಗುತ್ತವೆ. ರೋಗಬಾಧೆ, ಕೀಟಬಾಧೆ ಉಂಟಾಗುತ್ತದೆ. ಅವುಗಳ ನಿಯಂತ್ರಣಕ್ಕೆ ಅಪಾರ ವೆಚ್ಚ ಮಾಡಬೇಕಾದ ಸ್ಥಿತಿ ಉದ್ಬವಿಸುತ್ತದೆ.

ಜಮೀನಿನಲ್ಲಿ ಬೆಳೆಗಳಿಗೆ ಪೂರೈಕೆಯಾಗುವ ನೀರಿನ ಪರೀಕ್ಷೆ ಮಾಡಿಸಬೇಕು. ಇದರಿಂದ ಅದರಲ್ಲಿ ಇರುವ ರಾಸಾಯನಿಕ ಅಂಶಗಳ ಪ್ರಮಾಣ ತಿಳಿಯುತ್ತದೆ. ಆಗಾಗ ಮಣ್ಣಿನ ಪರೀಕ್ಷೆಯನ್ನು ಮಾಡಿಸುವುದು ಸೂಕ್ತ. ಇದರಿಂದ ಕೊರತೆಯಾಗಿರುವ ಪೋಷಕಾಂಶಗಳ ಪ್ರಮಾಣ ತಿಳಿಯುತ್ತದೆ. ಬಳಿಕ ಅವುಗಳನ್ನು ಸೂಕ್ತ ಪ್ರಮಾಣದಲ್ಲಿ ಪೂರೈಸುವುದು ಸಾಧ್ಯವಾಗುತ್ತದೆ.

ರಾಸಾಯನಿಕ ಗೊಬ್ಬರವನ್ನು ಕೃಷಿವಿಜ್ಞಾನಿಗಳು ಶಿಫಾರಸ್ಸು ಮಾಡಿದ ಪ್ರಮಾಣದಲ್ಲಿ ಮಾತ್ರ ಪೂರೈಸಬೇಕು. ಕಡಿಮೆ ಆದರೂ ಸಸ್ಯಗಳಿಗೆ ಬೇಕಾದ ಪೋಷಕಾಂಶಗಳ ಕೊರತೆ ಉಂಟಾಗುತ್ತದೆ. ಹೆಚ್ಚಾದರೂ ಸಸ್ಯಗಳು ಬಾಧಿತವಾಗುತ್ತದೆ. ಆದ್ದರಿಂದ ಸೂಕ್ತ ಪ್ರಮಾಣದ ಬಗ್ಗೆ ತಿಳಿಯುವುದು ಸೂಕ್ತ. ಈ ಹಂತದಲ್ಲಿ ಕೃಷಿವಿಜ್ಞಾನಿಗಳನ್ನು ಕಂಡು ಅವರ ಸಲಹೆ ಪಡೆಯಬೇಕು.

ಸಾಲಿನಿಂದ ಸಾಲಿಗೆ ಸೂಕ್ತ ಅಂತರ ನೀಡುವುದು ಅಗತ್ಯ. ಇದೇ ರೀತಿ ಸಸ್ಯದಿಂದ ಸಸ್ಯಕ್ಕೂ ಸೂಕ್ತ ಅಂತರ ನೀಡಬೇಕು. ಕಡಿಮೆ ಅಂತರ ನೀಡುವುದರಿಂದ ಬೇರುಗಳ ಬೆಳವಣಿಗೆ ಆಗುವುದಿಲ್ಲ. ಇದು ಇಳುವರಿ ಮೇಲೆ ಪರಿಣಾಮ ಬೀರುತ್ತದೆ. ಕೆಲವಾರು ರೈತರು ತರಕಾರಿ ಬೆಳೆಗಳನ್ನು ಬೆಳೆಯುವಾಗ ಅತೀ ಕಡಿಮೆ ಅಂತರದಲ್ಲಿ ಸಸಿಗಳನ್ನು ನಾಟಿ ಮಾಡುತ್ತಾರೆ. ಇದರಿಂದ ಇಳುವರಿ ಹೆಚ್ಚಾಗುತ್ತದೆ ಎಂಬುದು ಅವರ ಭಾವನೆಯಾಗಿರುತ್ತದೆ.

ಒಂದೆರಡು ದಶಕಗಳ ಹಿಂದೆ ಬಳ್ಳಿ ತರಕಾರಿಗಳನ್ನು ನೆಲದ ಮೇಲೆಯೇ ಹಬ್ಬಿಸುತ್ತಿದ್ದರು. ಆದರೆ ವೈಜ್ಞಾನಿಕ ಮಾದರಿಯಲ್ಲಿ ಕೃಷಿ ಮಾಡುವಾಗ ಬಳ್ಳಿ ತರಕಾರಿಗಳನ್ನು ಚಪ್ಪರ ಮಾಡಿ ಬೆಳೆಯುವುದು ರೂಢಿಯಾಗಿದೆ. ಒಮ್ಮೆ ಚಪ್ಪರ ಮಾಡಿಕೊಂಡರೆ ಅದನ್ನು ಬೇರೆಬೇರೆ ಬಳ್ಳಿ ತರಕಾರಿಗಳನ್ನು ಬೆಳೆಯಲು ಬಳಸಿಕೊಳ್ಳಬಹುದು. ಇದರಿಂದ ಚಪ್ಪರ ಮಾಡಲು ಹಾಕಿದ ಶೀಘ್ರವಾಗಿ ಪಡೆದುಕೊಳ್ಳಬಹುದು.

ಕೆಲವಾರು ಕೃಷಿಕರು ತಾತ್ಕಾಲಿಕ ಚಪ್ಪರಗಳನ್ನು ನಿರ್ಮಿಸಿಕೊಳ್ಳುತ್ತಾರೆ. ಹೀಗೆ ಮಾಡುವಾಗ ಉದ್ದನೆಯ ಬಿದಿರಿನ ಗಳಗಳನ್ನು, ಬೊಂಬುಗಳನ್ನು ಬಳಸುತ್ತಾರೆ. ಕೆಲವರು ಉದ್ದನೆಯ ಗೆಲ್ಲುಗಳನ್ನು ಬಳಸುತ್ತಾರೆ. ಮತ್ತೆ ಕೆಲವರು ಬಹು ದೀರ್ಘಕಾಲ ಬಾಳಿಕೆ ಬರುವಂತೆ ಕಬ್ಬಿಣದ ಪೈಪುಗಳನ್ನು ಬಳಸಿರುತ್ತಾರೆ. ಕಲ್ಲುಕಂಭಗಳನ್ನು ನೆಟ್ಟು ಬಳ್ಳಿ ಹಬ್ಬಿಸುವ ರೂಢಿ ಹೆಚ್ಚಾಗಿ ಇದೆ.

ಬೀನ್ಸ್ ಕೃಷಿಗೆ ತೊಡಗುವ ಮುನ್ನ ಅದರಲ್ಲಿರುವ ಬೇರೆಬೇರೆ ತಳಿಗಳ ಬಗ್ಗೆ ತಿಳಿಯುವುದು ಸೂಕ್ತ. ಇದರಿಂದ ಯಾವ ತಳಿ ಉತ್ತಮ, ತಮ್ಮ ಪ್ರದೇಶಕ್ಕೆ ಸೂಕ್ತವಾದ ತಳಿ ಯಾವುದು, ಕೀಟ ಮತ್ತು ರೋಗ ನಿರೋಧಕ ಶಕ್ತಿ ಯಾವ ತಳಿಯಲ್ಲಿ ಹೆಚ್ಚಾಗಿ ಇರುತ್ತದೆ ಎಂಬುದು ತಿಳಿಯುತ್ತದೆ. ಈ ಬಗ್ಗೆ ಕೃಷಿ ವಿಜ್ಞಾನಿಗಳು ಹೆಚ್ಚು ಮಾಹಿತಿ ನೀಡುತ್ತಾರೆ. ನೂತನವಾಗಿ ಈ ಕೃಷಿಯಲ್ಲಿ ತೊಡಗಿಸಿಕೊಳ್ಳುವವರು ತಜ್ಞರ ಸಲಹೆ ಪಡೆಯುವುದು ಅತ್ಯಗತ್ಯ. ಈ ಮೊದಲೇ ತಿಳಿಸಿದಂತೆ ಬೇರೆಬೇರೆ ಋತುಮಾನಕ್ಕೆ ಸೂಕ್ತವಾದ ತಳಿಗಳಿವೆ. ಇದರ ಬಗ್ಗೆ ಎಲ್ಲರಿಗೂ ಮಾಹಿತಿ ಇರುವುದಿಲ್ಲ. ಆದ್ದರಿಂದ ಈಗಾಗಲೇ ಹುರುಳಿಕಾಯಿ ಕೃಷಿಯಲ್ಲಿ ಪರಿಣಿತರಾದ ಕೃಷಿಕರ ತೋಟಗಳನ್ನು ಸಂದರ್ಶಿಸಬೇಕು. ಅಲ್ಲಿನ ಬೆಳೆ ಪದ್ಧತಿಗಳನ್ನು ತಿಳಿಯಬೇಕು. ಪ್ರಗತಿಪರ ಕೃಷಿಕರ ಜೊತೆ ಚರ್ಚಿಸಬೇಕು.

ಪ್ರಸ್ತುತ ದಿನಗಳಲ್ಲಿ ಸುಧಾರಿತ ನರ್ಸರಿಗಳು ಸಾಕಷ್ಟು ಸಂಖ್ಯೆಯಲ್ಲಿ ಇವೆ. ಇಲ್ಲಿ ಪೋರ್ ಟ್ರೆಯಲ್ಲಿ ಬೆಳಸಿದ ಬೀನ್ಸ್ ಸಸಿಗಳು ದೊರೆಯುತ್ತವೆ. ಎಷ್ಟು ಸಂಖ್ಯೆಯ ಸಸಿಗಳು ಬೇಕು ಎಂಬುದನ್ನು ಮೊದಲೇ ತಿಳಿಸುವುದು ಸೂಕ್ತ. ಆಗ ಅವರು ಅವುಗಳನ್ನು ಒದಗಿಸಲು ಸಿದ್ಧತೆ ಮಾಡಿಕೊಳ್ಳುತ್ತಾರೆ. ಆದ್ದರಿಂದ ಸಾಕಷ್ಟು ಮುಂಚಿತವಾಗಿ ಹುರುಳಿಕಾಯಿ ಬೆಳೆಯಲು ಪೂರ್ವ ಸಿದ್ಧತೆ ಮಾಡಿಕೊಳ್ಳುವುದು ಅಗತ್ಯ.

ಪ್ರಥಮ ಬಾರಿಗೆ ಹುರುಳಿ ಕೃಷಿಯನ್ನು ಮಾಡಲು ಮುಂದಾಗುವವರು ಅದನ್ನು ಪ್ರಾಯೋಗಿಕವಾಗಿ ಮಾಡುವುದು ಅಗತ್ಯ. ಹೆಚ್ಚು ವಿಸ್ತೀರ್ಣದಲ್ಲಿ ಬೆಳೆದಾಗ ಅದನ್ನು ಸಮರ್ಪಕವಾಗಿ ನಿರ್ವಹಣೆ ಮಾಡಲು ಸಾಧ್ಯವಾಗದೇ ನಷ್ಟ ಉಂಟಾಗುವ ಸಾಧ್ಯತೆ ಹೆಚ್ಚಿರುತ್ತದೆ. ಈ ಬಗ್ಗೆ ಹೆಚ್ಚಿನ ಗಮನ ನೀಡುವುದು ಅತ್ಯಗತ್ಯ. ಮಾರುಕಟ್ಟೆಯಲ್ಲಿ ಹೆಚ್ಚು ಬೆಲೆ ದೊರೆಯುತ್ತಿರುವಾಗ ಅಧಿಕ ವಿಸ್ತೀರ್ಣದಲ್ಲಿ ಬೆಳೆ ಬೆಳೆಯುವ ಹುರುಪು ಉಂಟಾಗುತ್ತದೆ. ಆದ್ದರಿಂದ ಮೊದಲು ಕಡಿಮೆ ವಿಸ್ತೀರ್ಣದಲ್ಲಿ ಬೆಳೆದು ಅನುಭವ ಗಳಿಸಿಕೊಳ್ಳುವುದು ಅಗತ್ಯ.

ಹುರುಳಿಕಾಯಿ ತಾಕಿನಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ನೀರು ನಿಲ್ಲುವುದಕ್ಕೆ ಅವಕಾಶ ನೀಡಿದರೆ ಬಳ್ಳಿಗಳ ಬೇರುಗಳು ಕೊಳೆಯಲು ಆರಂಭಿಸುತ್ತವೆ. ಆಗ ಬಳ್ಳಿಯ ಬೆಳವಣಿಗೆ ಸೂಕ್ತ ರೀತಿಯಲ್ಲಿ ಆಗುವುದಿಲ್ಲ. ಇದು ಬೆಳೆ ಇಳುವರಿ ಮೇಲೆಯೂ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಆದ್ದರಿಂದ ಮಳೆಗಾಲದಲ್ಲಿ ನೀರು ಸರಾಗವಾಗಿ ಹೊರಗೆ ಹರಿದು ಹೋಗುವಂಥ ವ್ಯವಸ್ಥೆ ಮಾಡಿರಬೇಕು.

ಮಳೆಗಾಲದಲ್ಲಿ ಬಳ್ಳಿಗಳಿಗೆ ಹಾನಿಯಾಗದಂತೆ ಏರುಮಡಿಗಳನ್ನು ತುಸು ಎತ್ತರಕ್ಕೆ ಮಾಡಿರುವುದು ಸೂಕ್ತ. ಇದರಿಂದ ಬೇರುಗಳು ಹಾನಿಗೆ ಒಳಗಾಗುವುದಿಲ್ಲ. ಇದಲ್ಲದೇ ನೀರು ಪೂರೈಸುವ ಪದ್ಧತಿಯೂ ಕೂಡ ಅತ್ಯವಶ್ಯಕ. ಹರಿ ನೀರಾವರಿ ಪದ್ಧತಿಗಿಂತ ತುಂತುರು ನೀರಾವರಿ, ಹನಿ ನೀರಾವರಿ ಹೆಚ್ಚು ಸೂಕ್ತ. ಹನಿ ನೀರಾವರಿ ಪದ್ಧತಿಯಲ್ಲಿಯೇ ಬೆಳೆಗೆ ಬೇಕಾದ ಪೋಷಕಾಂಶಗಳನ್ನು ದ್ರವರೂಪದಲ್ಲಿ ಪೂರೈಸಬಹುದು.

ತೀವ್ರ ಶೀತ ವಾತಾವರಣ ಉಂಟಾದರೆ ಬಳ್ಳಿ, ಎಲೆಗಳಿಂದ ಪೌಡರ್ ರೀತಿಯ ಧೂಳು ಉದುರುತ್ತದೆ. ಬುಡಭಾಗದಲ್ಲಿ ಕಂದು ಬಣ್ಣ ಉಂಟಾಗುತ್ತದೆ. ಆಗ ಅದರ ನಿಯಂತ್ರಣಕ್ಕೆ ಅನುಸರಿಸಬೇಕಾದ ಕ್ರಮಗಳ ಬಗ್ಗೆ ತಜ್ಞರ ಸಲಹೆ ಪಡೆಯುವುದು ಅತ್ಯಗತ್ಯ. ಹೀಗೆ ಮಾಡದೇ ಸೂಕ್ತವಲ್ಲದ ಔಷಧಗಳನ್ನು ಬಳಸುವುದರಿಂದ ಅನುಕೂಲಕ್ಕಿಂತ ಅನಾನುಕೂಲವೇ ಉಂಟಾಗುತ್ತದೆ.

ಹುರುಳಿಕಾಯಿಗೆ ಥ್ರಿಪ್ಸ್, ಮೈಟ್ಸ್ ಮತ್ತು ಕಾಯಿ ಕೊರಕದ ಬಾಧೆ ಉಂಟಾಗಬಹುದು. ಸೂಕ್ತವಾದ ಪೋಷಕಾಂಶಗಳನ್ನು ನೀಡಿದರೆ ಬಳ್ಳಿಗಳಲ್ಲಿ ರೋಗ ನಿರೋಧಕ ಮತ್ತು ಕೀಟ ನಿರೋಧಕ ಶಕ್ತಿ ಹೆಚ್ಚಿರುತ್ತದೆ. ಒಂದು ವೇಳೆ ಕೀಟಬಾಧೆ ಉಂಟಾದರೆ ಅದರ ನಿಯಂತ್ರಣಕ್ಕೆ ಬಳಸಬೇಕಾದ ಕೀಟನಾಶಗಳು ಯಾವುವು, ಬಳಸಬೇಕಾದ ಪ್ರಮಾಣವೆಷ್ಟು ಎಂಬುದನ್ನು ತಜ್ಞರಿಂದಲೇ ಅರಿಯುವುದು ಅಗತ್ಯ. ಹೆಚ್ಚು ಪ್ರಮಾಣದಲ್ಲಿ ಸಿಂಪಡಿಸಿದರೆ ಬೆಳೆಗೆ, ಮಣ್ಣಿಗೆ ಮತ್ತು ಕೃಷಿಕರ ಆರೋಗ್ಯಕ್ಕೂ ಹಾನಿ ಉಂಟಾಗುತ್ತದೆ.

ಉತ್ತಮ ಗುಣಮಟ್ಟದ ತಳಿ, ಪೋಷಕಾಂಶ ಬಳಸಿದರೆ, ಸೂಕ್ತ ನೀರಾವರಿ ಪದ್ಧತಿ ಅಳವಡಿಸಿಕೊಂಡರೆ ಹೆಚ್ಚು ಸಮಯ ಕಾಯಿ ಕೊಯ್ಲು ಮಾಡಬಹುದು. ಉತ್ತಮವಾಗಿ ನಿರ್ವಹಣೆ ಮಾಡಿದ್ದರೆ ಒಂದೂವರೆ ತಿಂಗಳಿಗೆ ಕೊಯ್ಲು ಆರಂಭವಾಗುತ್ತದೆ. ನಂತರ ಎರಡು ತಿಂಗಳವರೆಗೂ ನಿಯಮಿತವಾಗಿ ಕೊಯ್ಲು ಮಾಡಬಹುದು.

ಮಾರುಕಟ್ಟೆಯಲ್ಲಿ ಬೀನ್ಸ್ ಗೆ ಸದಾ ಬೇಡಿಕೆ ಇರುತ್ತದೆ. ಸಾಮಾನ್ಯವಾಗಿ ಚಳಿಗಾಲದ ಸಮಯದಲ್ಲಿ ತುಸು ಬೇಡಿಕೆ ಕಡಿಮೆಯಾಗುತ್ತದೆ. ಇದಕ್ಕೆ ಕಾರಣ ಈ ಅವಧಿಯಲ್ಲಿ ಅವರೆಕಾಯಿ ಲಭ್ಯವಾಗುವುದು. ಸಾಕಷ್ಟು ಬಾರಿ ಆವರೆಕಾಯಿ ಸೀಸನ್ ನಲ್ಲಿಯೂ ಹುರುಳಿಕಾಯಿಗೆ ಉತ್ತಮ ಧಾರಣೆಯೇ ದೊರಕುತ್ತದೆ ಎಂದು ಪ್ರಗತಿಪರ ಕೃಷಿಕ ಜಯರಾಮಯ್ಯ ಸಂತಸ ವ್ಯಕ್ತಪಡಿಸಿದರು.

ಬೀನ್ಸ್ ಸೇವನೆಯಿಂದ ಆಗುವ ಅನುಕೂಲ:
1. ಹುರುಳಿಕಾಯಿಯನ್ನು ನಿಯಮಿತವಾಗಿ ಸೇವಿಸುವುದರಿಂದ ಸಾಕಷ್ಟು ಅನುಕೂಲಗಳಿವೆ. ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದರಲ್ಲಿರುವ ಅಂಶಗಳು ದೇಹಕ್ಕೆ ಬೇಕಾದ ಸಾಕಷ್ಟು ಪೋಷಕಾಂಶಗಳನ್ನು ಪೂರೈಸುತ್ತದೆ. ವಿಶೇಷವಾಗಿ ಇದರಲ್ಲಿರುವ ಅಂಶಗಳು ಆ್ಯಂಟಿ ಆಕ್ಸಿಡೆಂಟುಗಳ ರೂಪದಲ್ಲಿ ಕೆಲಸ ಮಾಡುತ್ತವೆ.
2. ಹುರುಳಿಕಾಯಿ ಬೀಜಗಳಲ್ಲಿ ಬೀಟಾ ಕ್ಯಾರೋಟಿನ್, ಲ್ಯೂಟಿನ್ ಮತ್ತು ಜಿಯಾಕ್ಸಾಂಥಿನ್ ಹೆಚ್ಚು ಪ್ರಮಾಣದಲ್ಲಿವೆ. ಗಮನಾರ್ಹ ಅಂಶವೆಂದರೆ ಜೀರ್ಣಕ್ರಿಯೆ ಉತ್ತಮವಾಗಿ ಆಗಲು ಬೀಟಾ ಕ್ಯಾರೋಟಿನ್ ಸಹಾಯ ಮಾಡುತ್ತದೆ. ಇದು ವಿಟಮಿನ್ ಎ ಆಗಿ ಪರಿವರ್ತಿತವಾಗುತ್ತದೆ. ಇದು ಇರುಳಿನಲ್ಲಿ ಕಣ್ಣು ಉತ್ತಮವಾಗಿ ಕೆಲಸ ಮಾಡಲು ಪೂರಕವಾಗುತ್ತದೆ. ಲ್ಯೂಟಿನ್ ಮತ್ತು ಜಿಯಾಕ್ಸಾಂಥಿನ್ ಅಂಶಗಳು ತುಂಬ ಪ್ರಖರ ನೀಲಿ ಕಿರಣಗಳಿಂದ ಕಣ್ಣುಗಳನ್ನು ರಕ್ಷಿಸುತ್ತವೆ. ಇವೆಲ್ಲ ದೃಷ್ಟಿಯಿಂದ ಬೀನ್ಸ್ ಸೇವನೆ ಬಹುತೇಕ ಪ್ರದೇಶಗಳಲ್ಲಿ ಹೆಚ್ಚು ಪ್ರಮಾಣದಲ್ಲಿದೆ.

LEAVE A REPLY

Please enter your comment!
Please enter your name here