ತೆಂಗು ಉದ್ಯಮ ಸರಪಳಿಗೆ ಬಂದಿದೆ ಅಪಾಯ

0
ಲೇಖಕರು: ಪಟೇಲ್‌ ರಂಗಣ್ಣ, ತೆಂಗು ಬೆಳೆಗಾರ

ನಮ್ಮ ಸರ್ಕಾರಗಳು ಜನರು ತಿನ್ನುವಷ್ಟು ಊಟ ಸಿಕ್ಕಿದರೆ ಅದು ಆಹಾರ ಭದ್ರತೆ ಅಂತ ತಿಳ್ಕೊಂಡಿವೆ. ಅದರೆ ಅದಲ್ಲ; ತಿನ್ನೊ ಊಟದ ಬೆಲೆಗಳು ಗಗನ ಕುಸುಮವಾದಾಗ,  ನೆರೆ -ಬರಗಳು ಎದುರಾದಾಗಲೂ  ಎಲ್ಲರಿಗೂ ಹೊಟ್ಟೆ ತುಂಬ ಪೌಷ್ಟಿಕ ಆಹಾರ  ಸಿಗಲು ಅವಕಾಶ ಇರಬೇಕು. ಅದನ್ನು ಆಹಾರ ಭದ್ರತೆ ಅನ್ನೊದು.

ಈ ರೀತಿಯ ಆಹಾರ ಭದ್ರತೆಗೆ ಜೀವಸೆಲೆಯಾಗಿರೋದು ನಮ್ಮ ಬಯಲು ಸೀಮೆಯ  ತೆಂಗು ಅಂದ್ರೆ ಉತ್ಪ್ರೇಕ್ಷೆಯಲ್ಲ.  ಬಯಲು ಸೀಮೆಯ ರೈತರಿಗೆ ತೆಂಗಿನ ಸತ್ವದ ಬೆಲೆ ಏನು ಅಂತ ಗೊತ್ತಿದೆ. ತೆಂಗು ಬರಿಯ ರುಚಿಯಾದ ಪದಾರ್ಥ ಮಾತ್ರವಲ್ಲ; ಅವು ಹಲವು ಥರ ಆರೋಗ್ಯ ಕಾಪಾಡುವ  ಸಂಜೀವಿನಿ ! ತೆಂಗಿನ ಎಳನೀರನಿಂದ ಹಿಡಿದು ಹಲವು ಪೋಷಕಾಂಶ ಭರಿತ,  ನಾರಿನಿಂದ ಕೂಡಿದ ಅದರ ಕಾಯಿ, ಆ ಕಾಯಿಯ ಬಹುಮುಖ ಬಳಕೆಗೆ ಉಪಯೋಗಕ್ಕೆ ಬರುವ ಅದರ ವರ್ಜಿನ್ ಎಣ್ಣೆ, ಎಲ್ಲ  ಸೇರಿ ತೆಂಗು ಪೌಷ್ಟಿಕಾಂಶದ ಶಕ್ತಿ ಕೇಂದ್ರವಾಗಿದೆ.

  • ಇತ್ತಿಚಿಗೆ ಕೇಂದ್ರ ಸರ್ಕಾರದ ಅಡುಗೆ ಎಣ್ಣೆ ಅಮದು ನೀತಿಯಿಂದಾಗಿ ತೆಂಗು ಉತ್ಪನ್ನಗಳ ಬೆಲೆ ತೀವ್ರ ಕುಸಿತವಾಗಿದೆ.  
  • ಅದು ಸುಧಾರಿಸಿಕೊಳ್ಳೊಕೆ ಬಹಳ ವರ್ಷ  ಬೇಕು ಎಂಬ ತೀರ್ಮಾನಕ್ಕೆ ಬಯಲುಸೀಮೆ ರೈತರು ಬಂದಿದ್ದಾರೆ.  
  • ಹೀಗಾಗಿ  ತೆಂಗನ್ನೆ ನಂಬಿಕೊಂಡಿರುವುದರಲ್ಲಿ ಯಾವುದೇ ರೀತಿಯಲ್ಲೂ ಲಾಭದಾಯಕವಲ್ಲ ಎಂದು ಭಾವಿಸುತ್ತಿದ್ದಾರೆ.
  • ಅವರು ಅಡಿಕೆ ಬೆಳೆಯಂತಹ ಇತರೆ ಬೆಳೆಗಳಿಗೆ ಬದಲಾಯಿಸುವ ಸಾಧ್ಯತೆಗಳನ್ನು ಪರಿಗಣಿಸುತ್ತಿದ್ದಾರೆ.
  • ಇದು ನೆರೆವೇರಿದರೆ ನಮ್ಮ ನಾಡಿನ ಆಹಾರ ಭದ್ರತೆಗೆ ತೀವ್ರ ಧಕ್ಕೆ ಉಂಟಾಗಬಹುದು !

ತೆಂಗು ಬೆಳೆಗಾರರು ತಮ್ಮ ಬದುಕಿನಲ್ಲಿ ಎದುರಾಗಿರುವ ಈ ಬೆಲೆ ಕುಸಿತದ ಬಿಕ್ಕಟ್ಟನ್ನು ಅವಕಾಶವನ್ನಾಗಿ ಪರಿವರ್ತಿಸಿ ಕೊಳ್ಳಬೇಕು!  ಈಗ ನಮ್ಮ ಗಮನವನ್ನು ದೇಶೀಯ ಮಾರುಕಟ್ಟೆಯತ್ತ ಹರಿಸಲೇಬೇಕು. ಹಾಗೇ  ಉಂಡೆ ಕೊಬ್ಬರಿಯ ಉತ್ಪದನೆ ಹಂತವನ್ನೂ ಮೀರಿ ಯೋಚಿಸಬೇಕು. ಇದನ್ನು ನನಸಾಗಿಸಲು ನಮಗೆ ಸರ್ಕಾರದ ಬೆಂಬಲ ಕೂಡ ಅಗತ್ಯ.

ತೆಂಗಿನ ಕೃಷಿ ಅನೇಕ ಉಷ್ಣವಲಯ ದೇಶದ ಆರ್ಥಿಕತೆಗಳ ಅತ್ಯಗತ್ಯ ಭಾಗವಾಗಿದೆ. ಆಹಾರ ಮತ್ತು ಕೃಷಿಗಾಗಿ ಸಸ್ಯ ಆನುವಂಶಿಕ ಸಂಪನ್ಮೂಲಗಳ ಅಂತರರಾಷ್ಟ್ರೀಯ ಒಪ್ಪಂದದ ಅನೆಕ್ಸ್ 1 ರಲ್ಲಿ ಪಟ್ಟಿ ಮಾಡಲಾದ 64 ಆಹಾರ ಬೆಳೆಗಳಲ್ಲಿ ತೆಂಗಿನಕಾಯಿ ಕೂಡ ಒಂದಾಗಿದೆ.  ಜಾಗತಿಕ ಆಹಾರ ಭದ್ರತೆಗೆ ತೆಂಗಿನಕಾಯಿ ಬಹು ನಿರ್ಣಾಯಕ ಆಹಾರವೆಂದು ಪರಿಗಣಿಸಲಾಗಿದೆ.

ತೆಂಗು ಕರ್ನಾಟಕದ ಬಯಲು ಸೀಮೆಯ ರೈತರ ಬದುಕಿನ ಹೃದಯ.  ಅವರ ಬದುಕಿನ ಜೀವನೋಪಾಯಕ್ಕೆ ಸ್ಥಿರವಾದ ಸಾಮಾಜಿಕ ಮತ್ತು ಆರ್ಥಿಕ ಶಕ್ತಿಯನ್ನು ನೀಡುವ ಮಹತ್ವದ ಬೆಳೆಯಾಗಿದೆ. ತೆಂಗು ಉದ್ಯಮವು ರೈತರಿಂದ ಹಿಡಿದು ತೆಂಗು ಆಧಾರಿತ ಉತ್ಪನ್ನಗಳ ಸಂಸ್ಕರಣೆ ಮತ್ತು ಮಾರಾಟದಲ್ಲಿ ತೊಡಗಿರುವ ಲಕ್ಷಾಂತರ ಜನರಿಗೆ ಉದ್ಯೋಗಾವಕಾಶಗಳನ್ನು ಒದಗಿಸುತ್ತಿದೆ.  ಸ್ಥಳೀಯ ಆರ್ಥಿಕತೆಯನ್ನು ಕೂಡ ಗಮನಾರ್ಹವಾಗಿ ಹೆಚ್ಚಿಸಿದೆ.

ಹೀಗಾಗಿ, ನಾಡಿನ ತೆಂಗು ಮತ್ತು ಅದರ ಮೇಲೆ ಅವಲಂಬಿತರಾಗಿರುವ ಲಕ್ಷಾಂತರ ಬೆಳೆಗಾರರು, ಕಾರ್ಮಿಕರು, ವ್ಯಾಪಾರಸ್ಥರು, ಉದ್ಯಮಿಗಳನ್ನು ಉಳಿಸಿಕೊಳ್ಳುವ ಸಲುವಾಗಿ  ಸರ್ಕಾರಗಳು ದೇಶದ ತೆಂಗಿಗೆ ಒಂದು ಜಾಗತಿಕ ಮೌಲ್ಯ ಸರಪಳಿಯನ್ನು ಸಾಧ್ಯವಾಗಿಸಲು ನಮೂನೆಯೊಂದನ್ನು ಅಭಿವೃದ್ದಿಪಡಿಸಿ ಕಾರ್ಯಗತಗೊಳಿಸಬೇಕು. .

ತೆಂಗಿನಕಾಯಿಗಳು ಸಾಮಾನ್ಯ ಆಹಾರಕ್ಕಿಂತ ಮಿಗಿಲು.  ತೆಂಗು ಉತ್ಪನ್ನಗಳನ್ನು ದೇಶೀಯ ಮಾರುಕಟ್ಟೆಯ ಮೇಲೆ ವಿಶೇಷವಾಗಿ ಕೇಂದ್ರೀಕರಿಸುವುದರಿಂದ ಹಲವಾರು ಪ್ರಯೋಜನಗಳಿಗೆ ಕಾರಣವಾಗಬಹುದು. ತೆಂಗಿನಿಂದ  ಎಲ್ಲ ಆಹಾರ ಭದ್ರತೆ ಸಮಸ್ಯೆಗಳನ್ನು  ಪರಿಹರಿಸಲು ಸಾಧ್ಯವಿಲ್ಲವಾದರೂ, ಅವುಗಳು ಆ ಸಮಸ್ಯೆಗಳ ಪರಿಹಾರದಲ್ಲಿ ಪ್ರಮುಖ ವಹಿಸುತ್ತದೆ.

ತೆಂಗಿನ ಕಾಯಿಯನ್ನು  ಮರೆಯಬಾರದು! ಅವು ರುಚಿಕರ ಮಾತ್ರವಲ್ಲದೆ ಸುರಕ್ಷಿತ ಮತ್ತು ಆರೋಗ್ಯಕರ ಆಹಾರ ಭವಿಷ್ಯಕ್ಕೆ ಪ್ರಮುಖವಾಗಿವೆ.

LEAVE A REPLY

Please enter your comment!
Please enter your name here